ಸೋಮವಾರ, ಏಪ್ರಿಲ್ 19, 2021
31 °C

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ಆರಂಭಿಸಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್ ತೆರೆಮರೆಯಲ್ಲಿ ಸದ್ದುಗದ್ದಲವಿಲ್ಲದೆ ವಿಧಾನಸಭೆ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಸುತ್ತಿದೆ.

ಜುಲೈ 19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಚರ್ಚಿಸಲು ದೆಹಲಿಗೆ ಬಂದಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದಾರೆ.

 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಜತೆಗಿದ್ದಾರೆ. ಮೇಡಂ ಭೇಟಿಗೆ ಅವಕಾಶ ಸಿಕ್ಕರೆ ರಾಜ್ಯ ರಾಜಕೀಯ ಬೆಳವಣಿಗೆ ವಿವರಿಸುವ ಉದ್ದೇಶವನ್ನು ಪರಮೇಶ್ವರ್ ಹೊಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಡಿಸೆಂಬರ್ ಬಳಿಕ ಯಾವಾಗಲಾದರೂ ನಡೆಯಬಹುದಾದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಕುರಿತು ಈ ಮುಖಂಡರು ಚರ್ಚಿಸಲಿದ್ದಾರೆ. ಸೋನಿಯಾ ಕೆಪಿಸಿಸಿ ಅಧ್ಯಕ್ಷರ ಭೇಟಿಗೆ ಎಷ್ಟು ಸಮಯ ಕೊಡಲಿದ್ದಾರೆ ಎಂಬುದರ ಮೇಲೆ ಚರ್ಚೆ ಅವಲಂಬಿಸಿದೆ. ಈಗಾಗಲೇ ಕೆಲವು ಪ್ರಸ್ತಾವನೆಗಳನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ. ಈ ಬಗ್ಗೆ ಮಾತುಕತೆ ನಡೆಸಲು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ವಿಷಯ ಪ್ರಸ್ತಾಪವಾದರೆ ಮಾತ್ರ ಅಧ್ಯಕ್ಷರು ವಿವರಣೆ ನೀಡಲಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಸಂಭವನೀಯ ಹೆಸರುಗಳ ಪಟ್ಟಿ ತಯಾರಿಸಲಾಗುತ್ತಿದೆ. ಟಿಕೆಟ್ ಹಂಚಿಕೆಗೆ ಮೊದಲು  ವಿಶ್ವಾಸಾರ್ಹ ವೃತ್ತಿಪರ ಸಂಸ್ಥೆ ಮೂಲಕ ರಹಸ್ಯ ಸಮೀಕ್ಷೆ ನಡೆಸಲು ಚಿಂತಿಸಿದೆ.ಟಿಕೆಟ್ ಹಂಚಿಕೆಗೆ ಅರ್ಹತೆಯೇ ಮಾನದಂಡವಾಗಬೇಕು. ಯಾವುದೇ ಒತ್ತಡ ಮತ್ತು ಪ್ರಭಾವಗಳಿಗೆ ಮಣಿದು ಅನರ್ಹರಿಗೆ ಟಿಕೆಟ್ ಕೊಡಬಾರದು. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಕಾಂಗ್ರೆಸ್ ಗೆಲುವಿಗೆ ಅಗತ್ಯವಾದ ವಾತಾವರಣ ಸೃಷ್ಟಿಸಿದೆ. ಎಲ್ಲ ಮುಖಂಡರು ಒಗ್ಗೂಡಿ ಕೆಲಸ ಮಾಡುವ ಮೂಲಕ ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ನಿಲುವನ್ನು ಪರಮೇಶ್ವರ್ ಹೊಂದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಮತ್ತೊಂದೆಡೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ರಾಜ್ಯದ ಯುವ ಕಾಂಗ್ರೆಸ್ ಮುಖಂಡರನ್ನು ಕರೆಸಿಕೊಂಡು ಚರ್ಚೆ ಆರಂಭಿಸಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕತ್ವದ ಸಮಸ್ಯೆ, ಬಿಜೆಪಿ ಒಳಜಗಳ ಹಾಗೂ ಜಾತಿ ಸಮೀಕರಣ ಮುಂತಾದ ವಿಷಯಗಳನ್ನು ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಈಚೆಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ.ರಣತಂತ್ರ ಅನಗತ್ಯ: ಈ ಮಧ್ಯೆ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸೋಲಿಸಲು ಯಾವುದೇ `ರಣತಂತ್ರ~ ರೂಪಿಸುವ ಅಗತ್ಯ ಕಾಂಗ್ರೆಸ್‌ಗಿಲ್ಲ. ಆ ಪಕ್ಷದ ಮುಖಂಡರೇ ಕಿತ್ತಾಡಿ ನೆಲಕಚ್ಚುತ್ತಾರೆ ಎಂದು ಗೇಲಿ ಮಾಡಿದರು.ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಸುಭದ್ರ ಸರ್ಕಾರ ಕೊಡಲು ಬಿಜೆಪಿ ವಿಫಲವಾಗಿದೆ. ಭ್ರಷ್ಟಾಚಾರ- ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಿಲುಕಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದರೂ ಹೈಕಮಾಂಡ್ ಅವರಿಗೆ ಮಣಿದಿರುವುದು ವಿಪರ್ಯಾಸ ಎಂದು ಲೇವಡಿ ಮಾಡಿದರು.ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ ಮಾಜಿ ಮುಖ್ಯಮಂತ್ರಿ, ಹಿಂಬದಿ ಸೀಟಿನ ಸವಾರಿ ಮಾಡಲು ಹೊರಟಿದ್ದಾರೆ. ಇದು ಭ್ರಷ್ಟಾಚಾರ ಮುಂದುವರಿಕೆಗೆ ಕಾರಣವಾಗಲಿದೆ ಎಂದರು. ಜಾತಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ನೇಮಕ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅದು ಲಿಂಗಾಯತರು, ಒಕ್ಕಲಿಗರೇ ಅಥವಾ ಇನ್ಯಾವುದೇ ಜಾತಿ ಆಗಿರಬಹುದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.