ಸೋಮವಾರ, ಜನವರಿ 27, 2020
23 °C
ಮಳೆ ಅನಾಹುತ: ಆಯುಕ್ತ ಲಕ್ಷ್ಮಿನಾರಾಯಣ ಅವರಿಂದ ಅಧಿಕಾರಿಗಳ ಸಭೆ

ವಿಪತ್ತು ನಿರ್ವಹಣೆಗೆ ಸ್ವಯಂಸೇವಕರ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.`ಮಳೆಯಿಂದ ಉಂಟಾಗಬಹುದಾದ ಅನಾಹುತಗಳ ತುರ್ತು ನಿವಾರಣೆಗೆ ಪ್ರತಿ ವಾರ್ಡ್‌ನಲ್ಲಿ ಸ್ವಯಂಸೇವಕರ ಪಡೆಯನ್ನು ಕಟ್ಟಬೇಕು. ಅವರನ್ನು ತೊಡಗಿಸಿಕೊಂಡು, ಪರಿಹಾರ ಕಾರ್ಯ ಕೈಗೊಳ್ಳಬೇಕು' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.`ಹವಾಮಾನ ಇಲಾಖೆಯು ನಗರದಲ್ಲಿ ಹೆಚ್ಚಾಗಿ ಮಳೆಯಾಗುವ ಸಂಭವವಿದೆ ಎಂದು ಸೂಚನೆ ನೀಡಿದ್ದು ಬೃಹತ್ ನೀರುಗಾಲುವೆ ಮತ್ತು ರಸ್ತೆ ಬದಿಯ ಮೋರಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು' ಎಂದು ಆದೇಶ ನೀಡಿದರು.`ಅನಾಹುತಗಳು ಉಂಟಾಗಬಹುದಾದ ಸ್ಥಳಗಳನ್ನು ಮೊದಲೇ ಗುರುತಿಸಿ, ಅಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಅದರಂತೆ ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸಬೇಕು. ರಸ್ತೆಬದಿ ಮೋರಿಗಳಲ್ಲಿ ತುಂಬಿರುವ ಹೂಳನ್ನು ನಿರಂತರವಾಗಿ ತೆರವುಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು' ಎಂದು ಸೂಚಿಸಿದರು.`ಬೆಸ್ಕಾಂ, ಬಿ.ಡಿ.ಎ., ಜಲಮಂಡಳಿ, ಬಿ.ಎಂ.ಆರ್.ಸಿ.ಎಲ್., ಕೆ.ಎಸ್.ಆರ್. ಟಿ.ಸಿ., ಬಿ.ಎಂ.ಟಿ.ಸಿ. ಹಾಗೂ ನಗರದಲ್ಲಿರುವ ಪ್ರಮುಖ ಸರ್ಕಾರಿ ಸಂಸ್ಥೆಗಳು ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಆಗಬಹುದಾದ ಅನಾಹುತ ತಪ್ಪಿಸಲು ಕ್ರಮ ವಹಿಸುವಂತೆ ಅಲ್ಲಿಯ ಅಧಿಕಾರಿಗಳಿಗೆ ಸೂಚಿಸಬೇಕು' ಎಂದೂ ಆದೇಶಿಸಿದರು.`ಈಗಾಗಲೇ ಅಸ್ತಿತ್ವದಲ್ಲಿರುವ ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ' ಎಂದು ತಿಳಿಸಿದರು.`ಬಿಬಿಎಂಪಿಯಲ್ಲಿ ಇರುವ ಎಲ್ಲ ನಿಯಂತ್ರಣ ಕೊಠಡಿಗಳನ್ನು ಅಗತ್ಯ ಸಿಬ್ಬಂದಿ, ಸಲಕರಣೆ ಹಾಗೂ ಉಪಕರಣಗಳೊಂದಿಗೆ ಉನ್ನತೀಕರಿಸಬೇಕು ಹಾಗೂ ಮಳೆ ಪರಿಸ್ಥಿತಿ ನಿರ್ವಹಣೆಗೆ ಹೆಚ್ಚುವರಿಯಾಗಿ ಮೂರು ಪ್ರಹರಿ ವಾಹನ ಪಡೆದುಕೊಳ್ಳಬೇಕು. ಮೊಬೈಲ್ ಹಾಗೂ ಇಂಟರ್ನೆಟ್ ಸೇರಿದಂತೆ ತಂತ್ರಜ್ಞಾನದ ನೆರವು ಪಡೆದು ಸಾರ್ವಜನಿಕರಿಗೆ ಆಯಾ ಕ್ಷಣದ ಮಾಹಿತಿ ನೀಡಬೇಕು' ಎಂದು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು.`ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಲು ಕೂಡಲೇ ಅವುಗಳ ಮಾಲೀಕರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಬೇಕು. ನಿವೇಶನ ಸ್ವಚ್ಛಗೊಳಿಸದಿದ್ದಲ್ಲಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಅಂತಹ ನಿವೇಶನಗಳ ಸ್ವಚ್ಛತೆಗೆ ವ್ಯವಸ್ಥೆ ಮಾಡಿ, ಅದಕ್ಕೆ ತಗುಲಿದ ವೆಚ್ಚವನ್ನು ಮಾಲೀಕರಿಂದ ಆಸ್ತಿ ತೆರಿಗೆ ಜೊತೆ ವಸೂಲಿ ಮಾಡಬೇಕು' ಎಂದು ಆದೇಶ ನೀಡಿದರು.ಒಣ ತ್ಯಾಜ್ಯ ಘಟಕಗಳ ನಿರ್ವಹಣೆ, ಪೌರ ಕಾರ್ಮಿಕರ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನೂ ಅವರು ನಡೆಸಿದರು.ತುರ್ತು ಸಹಾಯವಾಣಿ

ಐ.ಪಿ.ಪಿ. ಕೇಂದ್ರ 22660000

ಕೇಂದ್ರ ಕಚೇರಿ 22221188

22975595

22225657

ದಕ್ಷಿಣ ವಲಯ 26566362 

22975703

ಪೂರ್ವ ವಲಯ 22975803

ಪಶ್ಚಿಮ ವಲಯ 23561692

23463366

ದಾಸರಹಳ್ಳಿ 28394909 

22975904

28393688

ಯಲಹಂಕ 22975936

23636671

ಬೊಮ್ಮನಹಳ್ಳಿ 25735642

25732447

ಮಹದೇವಪುರ 28512300

28512301

ರಾಜರಾಜೇಶ್ವರಿನಗರ 28600954

28601851

ಪ್ರತಿಕ್ರಿಯಿಸಿ (+)