ಭಾನುವಾರ, ಮೇ 22, 2022
22 °C

ವಿಮರ್ಶೆ: ಕಾಲದ ಅಸಹಾಯಕತೆಯ ಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಚ್ಛೇದನಾ ಪರಿಣಯ       

ಲೇ: ಕೆ.ಸತ್ಯನಾರಾಯಣ, ಪು:126; ಬೆ: ರೂ.70, ಪ್ರ: ವಸಂತ ಪ್ರಕಾಶನ, ನಂ.360,10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು-580 011
ಪ್ರಯೋಗಶೀಲ ಬರಹಕ್ಕೆ ಹೆಸರಾಗಿರುವ ಕೆ.ಸತ್ಯನಾರಾಯಣ ಪ್ರಸ್ತುತ ಕಾದಂಬರಿಯಲ್ಲಿ ಒಡೆಯುತ್ತಿರುವ ವಿವಾಹ ವ್ಯವಸ್ಥೆಯ ಕುರಿತು ‘ಕತೆಯನ್ನು ಹುಡುಕುತ್ತಿರುವ’ ಒಂದು ಆಕೃತಿಯನ್ನು ರೂಪಿಸಿದ್ದಾರೆ ಎನ್ನಬಹುದು.‘ಈ ಕೃತಿಯಲ್ಲಿ ನಾನು ನೂರಾರು ಕತೆಗಳನ್ನು ಹೇಳುತ್ತಿರುವಂತೆ, ಕೇಳಿಸಿಕೊಳ್ಳುತ್ತಿರುವಂತೆ ಕಂಡರೂ, ನಿಜದಲ್ಲಿ ನಾನು ಕೂಡ ನಮ್ಮ ಕಾಲಕ್ಕೆ ಸಲ್ಲುವ ಕತೆಯೊಂದನ್ನು, ಕಥಾಸಂದರ್ಭವನ್ನು ಹುಡುಕುತ್ತಾ ಇಲ್ಲಿಯ ಬರವಣಿಗೆಯನ್ನು ಮಾಡಿದ್ದೇನೆ’ ಎನ್ನುತ್ತಾರೆ ಲೇಖಕರು. ಇಂಥ ಹುಡುಕಾಟದಲ್ಲೇ ಕಥನದ ನಿರಂತರತೆ ಮತ್ತು ಶಕ್ತಿಯಿರುವುದು- ಅವರದೇ ಮಾತು. ಅದೇನೇ ಇರಲಿ, ಪ್ರಸ್ತುತ ಕತೆಗೊಂದು ಕಥೆಯೂ ಇದೆ, ಗುರಿಯೂ ಇದೆ.ಕಥೆ ನಡೆಯುವುದು ಕೋದಂಡರಾಮಪುರವೆಂಬ ಕಲ್ಪಿತ ಸಮಾನ (Virtual, Parallel) ರಾಜ್ಯದಲ್ಲಿ ಅಥವಾ ಪ್ರಾಂತ್ಯದಲ್ಲಿ. ಅದು ನಮ್ಮೀ ಜಗತ್ತಿನ ಒಂದು ಭಾಗವಾಗಿಯೇ ಕಾಣುವ ಕಲ್ಪಿತ ಲೋಕ. ಆದುದರಿಂದ ಕಾದಂಬರಿಕಾರರಿಗೆ ಅಲ್ಲಿಯ ಸಮಾಜ, ಸರ್ಕಾರ, ಸಂಸಾರಗಳ ನಿರ್ವಹಣೆಯಲ್ಲಿ ಕಲ್ಪನಾತೀತ ಅಧಿಕಾರ ಸಿಕ್ಕಿದೆ. ಮೊದಲ ವಾಕ್ಯವೇ ಹೇಳುವಂತೆ ‘...ಅದೊಂದು ದಿನ ಪ್ರಾತಃಕಾಲದಲ್ಲೇ ನಡುಹಗಲಾಯಿತು ಕೋದಂಡ ರಾಮಪುರದಲ್ಲಿ! ಜನರು ನಡೆಯಬೇಕೆಂದರೆ ಖುದ್ದು ಪಾದಗಳೇ ನೆಲದ ಮೇಲೆ ಊರದೆ ನಾಲ್ಕು ಇಂಚು, ಆರು ಇಂಚು ಮೇಲೆ ಮೇಲೆ ಜಿಗಿಯುತ್ತಿದ್ದವು. ಇದಕ್ಕೆ ಕಾರಣ ಮಂತ್ರಿಮಂಡಲದ ಒಂದು ಒಮ್ಮತದ ನಿರ್ಧಾರ: ಕೌಟುಂಬಿಕ ಕಲಹಗಳ ಕೋರ್ಟುಗಳೆಲ್ಲ ನಗರದ ಹೊರವಲಯಕ್ಕೆ ಹೊರಟು ಹೋಗಬೇಕು. ಒಬ್ಬ ಹಿರಿಯ ಹೈಕೋರ್ಟ್ ನ್ಯಾಯಾಧೀಶರು ದಾಂಪತ್ಯ ವಿಚ್ಛೇದನದ ಪ್ರಕರಣಗಳನ್ನು ಪರಿಶೀಲಿಸ ಬೇಕು’. ನಾಗಾಲೋಟದಲ್ಲಿ ವಿಚ್ಛೇದನಗಳು ಹೆಚ್ಚುತ್ತಿರುವುದೇ ಈ ನಿರ್ಣಯಕ್ಕೆ ಕಾರಣ.‘ನಾಗರಿಕತೆ ಮುಂದುವರಿದಂತೆ ಇಂಥ ಬೆಳವಣಿಗೆ ಸಹಜ. ಇಂಗ್ಲೆಂಡ್, ಡೆನ್ಮಾರ್ಕ್‌ನಲ್ಲೂ ಹೀಗಾಗಿದೆ. ವಾಸ್ತವಿಕವಾಗಿ ಇದು ಸ್ವಾಗತಾರ್ಹ’. ಇದು ಒಂದು ಬಗೆಯಲ್ಲಿ ಯೋಚಿಸುವವರು ತಳೆದ ನಿಲುವಾದರೆ, ಸಂಪ್ರದಾಯದ ಮೌಲ್ಯಗಳನ್ನು ಅಲಕ್ಷಿಸಿದ್ದರಿಂದ ಹೀಗಾಗುತ್ತಿಯೆಂದು ಧರ್ಮಭೀರುಗಳ ವಾದ. ಇದಕ್ಕೆ ಐತಿಹಾಸಿಕ, ಪೌರಾಣಿಕ ಮೂಲ ಹುಡುಕಿದವರೂ ಇದ್ದಾರೆ. ಹೊರವಲಯದಲ್ಲಿರುವ ರಾಜವಂಶಸ್ಥರ ವಾಡೆ ಈ ನ್ಯಾಯಾಲಯಕ್ಕೆ ಸೂಕ್ತವೆಂದು ನಿರ್ಧರಿಸಲಾಗುತ್ತದೆ. ಈ ಕುರಿತು ರಾಣಿಯರಿಗೆ ಅವರದೇ ಸಮಸ್ಯೆಗಳು. ಆದರೆ ರಾಜವಂಶಸ್ಥ ಪುರುಷರಿಗೆ ಸರಕಾರದ ಕೃಪೆ ಪಡೆವ ಅವಕಾಶವಿದೆಂದು ಭಾವನೆ. ರಾಣಿಯರಿಗೆ ಏಕಕಾಲದಲ್ಲಿ ಬಿದ್ದ ಕನಸು ಅವರಿಗೆ ಬಿಡುಗಡೆ ಯನ್ನು ತರುವಂಥದು: ‘ಇತಿಹಾಸದ ಬಾಗಿಲು ತೆರೆದುಬಿಡಲಿ ವಿಚ್ಛೇದನಾ ಪುರಾಣ ಕೇಳೋಣ!’.ದೀರ್ಘ ಚರ್ಚೆಯ ನಂತರ ಶ್ರೀರಂಗಧಾಮಯ್ಯ ಅವರನ್ನು ವಿಶೇಷ ನ್ಯಾಯಾಧೀಶರನ್ನಾಗಿ ನೇಮಿಸಲಾಗುತ್ತದೆ. ವಿಲೇವಾರಿ ಬೇಡುತ್ತಿರುವ ಸುಮಾರು ಹದಿಮೂರು ಸಾವಿರ ಪ್ರಕರಣಗಳು ವಿಶೇಷ ನ್ಯಾಯಾಲಯದ ಮುಂದಿವೆ. ಒಂದು ಆಯೋಗ ನ್ಯಾಯಾಲಯದ ಕಾರ್ಯದ ವಿಧಿ ವಿಧಾನಗಳನ್ನು ರೂಪಿಸಿದೆ. ನ್ಯಾಯಾಲಯದಲ್ಲಿ ಅಫಿಡವಿಟ್ ಓದಲು ಪರಿಣತ ರಂಗಕರ್ಮಿಗಳನ್ನು ನೇಮಿಸಿಕೊಳ್ಳಲಾಗಿದೆ! ಅವರು ಧ್ವನಿಪೂರ್ಣವಾಗಿ, ಸಂವೇದನಾಶೀಲವಾಗಿ ಅಭಿನಯಿಸಿ ಓದುತ್ತಾರೆ!ಲಾನ್‌ನಲ್ಲಿ ಪ್ರದರ್ಶನಕ್ಕಿಟ್ಟ ವಾಡೆಯ ವಸ್ತು ವಿಶೇಷಗಳು ತಾವಿದ್ದ ಜಾಗದಿಂದಲೇ ಕೋರ್ಟು ಕಲಾಪ ವೀಕ್ಷಿಸತೊಡಗುತ್ತವೆ, ಚರ್ಚಿಸುತ್ತವೆ, ಕೆಲವೊಮ್ಮೆ ಸಂಚರಿಸುತ್ತವೆ, ಕೂಡ! ಹಾಗೆ ನೆರಳುಗಳ ರೂಪದಲ್ಲಿ ಹೊರಟಾಗ ಮೂರು ಪ್ರಸ್ತಗಳನ್ನೂ ಅವು ಕಾಣುತ್ತವೆ. ನಾಟಕೋತ್ಸವದಲ್ಲಿ ವಿಚ್ಛೇದನಾ ಪ್ರಕರಣಗಳು ನಾಟಕ ರೂಪತಾಳಿ ಪ್ರದರ್ಶನಗೊಳ್ಳುತ್ತವೆ. ಯಾವುದು ನಿಜ, ಯಾವುದು ನಾಟಕ, ಯಾವುದು ಸಾಧ್ಯ, ಯಾವುದು ಅವಾಸ್ತವ ಎಂಬುದನ್ನು ಅರಿಯಲಾಗದಷ್ಟು (ಅದರ ಅಗತ್ಯವೂ ಇಲ್ಲದಷ್ಟು) ವೇಗ, ವಿಡಂಬನೆಯಿಂದೊಡಗೂಡಿದ ಬರವಣಿಗೆಯು ನಾವು ಬದುಕುತ್ತಿರುವ ಕಾಲದ ವಿಕ್ಷಿಪ್ತತೆ, ಅಸಂಗತಗೊಳ್ಳುತ್ತಿರುವ ಜೀವನ ವಿನ್ಯಾಸ, ಅತಂತ್ರಗೊಳ್ಳುತ್ತಿರುವ ಬದುಕಿನ ಚೌಕಟ್ಟು ಎಲ್ಲವನ್ನೂ ನಿರ್ಮಮ ದೃಷ್ಟಿಯಿಂದ ಪರಿಶೀಲಿಸಿದೆ. ‘ದಿನವೂ ನಮ್ಮನ್ನು ಮತ್ತಷ್ಟು ಕುಬ್ಜರಾಗಿಸುವ, ಮತ್ತಷ್ಟು ಪ್ರಾಣಿಗಳಾಗಿಸುವ ವಿದ್ಯಮಾನಗಳು’ ಸುತ್ತಲೂ ನಡೆಯುತ್ತಿರುವುದು ಸತೀಶನನ್ನು ಕಳವಳಕ್ಕೀಡು ಮಾಡಿದೆ. ಕೌಸಲ್ಯ ನ್ಯಾಯಾಧೀಶರೆದುರು ಕೇಳುತ್ತಾಳೆ: ‘ವಿಚ್ಛೇದನೆಗಳ ಬಯಕೆಯ ಹಿಂದಿರುವುದಾದರೂ ಏನು! ಬಿಡುಗಡೆಯ ಬಯಕೆಯೇ, ಸ್ವಾತಂತ್ರ್ಯದ ಹಂಬಲವೇ, ಆತ್ಮನಾಶಕ್ಕಾಗಿ ಹಾಹಾಕಾರವೇ!’.ನ್ಯಾಯಾಧೀಶ ಶ್ರೀರಂಗಧಾಮಯ್ಯನವರು i am helpless, We are helpless, Our time is helpless ಎಂದು ಬಡಬಡಿಸುತ್ತಾ ದಿಗ್ಭ್ರಾಂತಗೊಂಡು ಕನಸಿನಿಂದ ಹೊರಬರುವಲ್ಲಿ ಇಡೀ ಕಾದಂಬರಿಯು ವ್ಯಕ್ತಪಡಿಸುತ್ತಿರುವ ಅಸಹಾಯಕತೆಗೊಂದು ಅಭಿವ್ಯಕ್ತಿ ದೊರೆತಿದೆ. ಆದರೆ ಕೋದಂಡರಾಮಪುರದ ಜನ ಸಾವಧಾನವಾಗಿ ಪರಿಶೀಲಿಸಿದರೆ ಅವರ ಜೀವನದಲ್ಲೇ ಸುಖವಾಗಿರಲೂ ಕಾರಣಗಳಿವೆ ಎಂಬುದನ್ನು ಕಾದಂಬರಿಯ ಕೆಲ ಪುಟಗಳು ಹೇಳಲೆತ್ನಿಸಿವೆ. ಕೋದಂಡರಾಮಪುರದ ಬದುಕಿನ ಸ್ವೈರವೃತ್ತಿಯನ್ನು ಹೇಳಿದಷ್ಟು ಉತ್ಸುಕತೆಯಿಂದ ಈ ಭಾಗದ ಬರಹವಿಲ್ಲ ಅನಿಸುತ್ತದೆ.ಕಾದಂಬರಿ ಕಥೆ ಹೇಳುತ್ತಿರುವುದು ಕಲ್ಪನಾತೀತ ವೇಗದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸಂರಚನೆಗಳ ಕುರಿತು. ಅದಕ್ಕೆ ಅತೀತ ಕಲ್ಪನೆಗಳ ಬರಹದ ವಿಧಾನವನ್ನೇ ಲೇಖಕರು ಅವಲಂಬಿಸಿದ್ದಾರೆ. ಸಂಪ್ರದಾಯಬದ್ಧ ಸಮಾಜದ ವಿವಾಹವೆಂಬ ಜೀವನ ಪರ್ಯಂತದ ಬದ್ಧತೆಯೇ ಘೋರ ವಿಡಂಬನೆಗೀಡಾಗಿರುವ ಕಾಲವನ್ನು ಉದ್ವೇಗವಿಲ್ಲದೆ ಪರೀಕ್ಷಿಸುವುದು ಕೃತಿಕಾರರ ಆಶಯ. ಅದನ್ನವರು ಸಾಕಷ್ಟು ಸಮರ್ಥವಾಗಿಯೇ ಜರುಗಿಸಿ ವಿಶಿಷ್ಟ ಕೃತಿ ನೀಡಲು ಸಫಲರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.