ಸೋಮವಾರ, ಮೇ 17, 2021
31 °C

ವಿಮಾನ ನಿಲ್ದಾಣ: ರೈತರಿಂದ ಅಹವಾಲು ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತಾಲ್ಲೂಕಿನ ಸಿರಿವಾರ ಮತ್ತು ಚಾಗನೂರು ಗ್ರಾಮಗಳ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತಪಡಿಸಿ ರೈತರು ಸಲ್ಲಿಸಿರುವ ಅರ್ಜಿಯ ವಿಚಾರಣೆಗಾಗಿ ಬುಧವಾರ ಆಗಮಿಸಿರುವ ವಿಧಾನ ಪರಿಷತ್‌ನ ಅರ್ಜಿಗಳ ಸಮಿತಿ ರೈತರಿಂದ ಅಹವಾಲು ಸ್ವೀಕರಿಸಿತು.ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಧ್ಯಾಹ್ನ ಸಭೆ ನಡೆಸಿದ ಸಮಿತಿಯು, ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತರ ಅಭಿಪ್ರಾಯ ಸಂಗ್ರಹಿಸಿತಲ್ಲದೆ, ವಿಮಾನ ನಿಲ್ದಾ-ಣದ ನಿಯೋಜಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಳ್ಳಲು ಹೊರಡಿಸಲಾದ ಅಧಿಸೂಚನೆ ರದ್ದುಗೊಳಿಸಿ, ರೈತರೊಂದಿಗೆ ಮತ್ತೆ ಚರ್ಚೆ ನಡೆಸಿ, ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್ ಆದೇಶ ನೀಡಿರುವುದರಿಂದ ಅರ್ಜಿಯ ವಿಚಾರಣೆ ವಿಳಂಬವಾಗಿದೆ. ಸಮಿತಿಯು ರೈತರ ಅಭಿಪ್ರಾಯ ಸಂಗ್ರಹಿಸಿ, ವಿಧಾನ ಪರಿಷತ್‌ಗೆ ವರದಿ ಸಲ್ಲಿಸಲಿದೆ. ನಂತರ ಆ ವರದಿ ವಿಧಾನಸಭೆಗೆ ಸಲ್ಲಿಕೆಯಾಗಲಿದ್ದು, ತದನಂತರ ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷರಾಗಿರುವ ವಿಧಾನ ಪರಿಷತ್‌ನ ಉಪ ಸಭಾಪತಿ ವಿಮಲಾ ಗೌಡ ತಿಳಿಸಿದರು.ಬರಡು ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂಬ ತಪು ಮಾಹಿತಿ ನೀಡಿರುವ   ಸರ್ಕಾರ, ಅಧಿಸೂಚನೆ ಹೊರಡಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ವಿಮಾನ ನಿಲ್ದಾಣಕ್ಕೆ ಫಲವತ್ತಾದ ನೀರಾವರಿ ಭೂಮಿ ಪಡಯುತ್ತಿದೆ ಎಂದು ತಿಳಿಸಿ, ಅನೇಕ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೆಲವು ರೈತರು ಪರವಾಗಿ ಇನ್ನು ಕೆಲವು ರೈತರು ವಿರೋಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸಾಧಕ- ಬಾಧಕಗಳು ಕುರಿತು ಪರಾಮರ್ಶೆ ನಡೆಸಿ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.2010ರಲ್ಲೇ ರೈತರಿಂದ ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ ಸಮಿತಿಯು ರೈತರು ಮತ್ತು ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ 4 ಸಭೆಗಳನ್ನು ನಡೆಸಿದೆ. ಇದೀಗ ಸ್ಥಳ ಪರಿಶೀಲನೆ ನಡೆಸಿ ಅಂತಿಮ ವರದಿ ಸಲ್ಲಿಸಲೆಂದೇ ಆಗಮಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.ಸಮಿತಿ ಸದಸ್ಯರಾದ ವೀರಕುಮಾರ್ ಪಾಟೀಲ, ಕೆ.ಪ್ರತಾಪಚಂದ್ರ ಶೆಟ್ಟಿ, ಪುಟ್ಟಣ್ಣ, ಕೆ.ಬಿ. ಶಾಣಪ್ಪ, ಮರಿತಿಬ್ಬೇಗೌಡ, ವೈ.ಎ. ನಾರಾಯಣಸ್ವಾಮಿ, ಅಶ್ವತ್ಥನಾರಾಯಣ ಹಾಗೂ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.ಸಭೆಯ ನಂತರ ಸಮಿತಿಯ ಸದಸ್ಯರು ಚಾಗನೂರು ಮತ್ತು ಸಿರಿವಾರ ಗ್ರಾಮಗಳ ಬಳಿ ವಿಮಾನ ನಿಲ್ದಾಣಕ್ಕಾಗಿ ನಿಯೋಜಿಸಲಾಗಿರುವ ಸ್ಥಳಕ್ಕೆ ತೆರಳಿ, ಸ್ಥಳ ಪರಿಶೀಲನೆ ನಡೆಸಿದರಲ್ಲದೆ ಗ್ರಾಮಸ್ಥರಿಂದಲೂ ಅಭಿಪ್ರಾಯ ಸಂಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.