ಮಂಗಳವಾರ, ಮೇ 11, 2021
26 °C

ವಿಮೆ ಮಾಡಿಸುವಾಗ ಸತ್ಯ ಮುಚ್ಚಿಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವ ವಿಮೆ ಮಾಡಿಸುವುದು ಎಷ್ಟು ಮಹತ್ವ ಎಂಬುದು ಎಲ್ಲರಿಗೂ ಗೊತ್ತು. ಅದರ ಉಪಯೋಗ ನಾವು ಬದುಕಿರುವಾಗ ಸಿಗುವುದಕ್ಕಿಂತ ಸತ್ತಾಗ ಸಿಗುವುದೇ ಹೆಚ್ಚು. ಇನ್ನೂ ಪಾಲಿಸಿಯ ಅವಧಿ ಕೊನೆಗೊಂಡಿಲ್ಲ, ಆಗಲೇ ವಿಮೆ ಮಾಡಿಸಿದ ಕುಟುಂಬದ ಆಧಾರಸ್ತಂಭ ಕುಸಿದುಬಿದ್ದಾಗ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತದೆ.

 

ಭರವಸೆ ನೀಡಿದಂತೆ ವಿಮಾ ಕಂಪನಿಗಳು ವಿಮಾ ಹಣವನ್ನು ಕೊಡಲೇಬೇಕು. ಆದರೆ ಸತ್ಯ ಮರೆಮಾಚಿ ವಿಮೆ ಮಾಡಿಸಿದ್ದೇ ಆದರೆ ವಿಮಾ ಹಣ ಸಿಗುವುದು ಕಷ್ಟವಾಗುತ್ತದೆ. ಮೊದಲೇ ದುಃಖದಲ್ಲಿರುವ ಕುಟುಂಬದ ಸಂಕಟ ಇನ್ನಷ್ಟು ಹೆಚ್ಚುವಂತಾಗುತ್ತದೆ.ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ವಿಮೆ ಮಾಡಿಸಿದ ವ್ಯಕ್ತಿ ಹಠಾತ್ತನೆ ಮೃತಪಟ್ಟಾಗ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಾಗ ಸಮಸ್ಯೆ ಎದುರಾಗಿಬಿಡುತ್ತದೆ. ವಿಮೆ ಮಾಡಿಸುವ ಸಂದರ್ಭದಲ್ಲೇ ಎಲ್ಲಾ ಅಗತ್ಯ ಮಾಹಿತಿ ನೀಡಿದ್ದರೆ ಮತ್ತು ಸತ್ಯವನ್ನು ಮರೆಮಾಚಿಲ್ಲದಿದ್ದರೆ ವಿಮೆ ದೊರಕಿಸಿಕೊಳ್ಳುವುದಕ್ಕೆ ಯಾವುದೇ ಕಷ್ಟವೂ ಆಗುವುದಿಲ್ಲ.ಅದಕ್ಕಾಗಿಯೇ ವಿಮೆ ಮಾಡಿಸುವಾಗ ಭವಿಷ್ಯದ ದೃಷ್ಟಿ ಇಟ್ಟುಕೊಂಡೇ ಸಂಪೂರ್ಣ ಮಾಹಿತಿ ನೀಡಿರಬೇಕು. `ನಾನು ಸತ್ತರೆ ನನ್ನ ಕುಟುಂಬಕ್ಕೆ ಹಣ ಸಿಗುವುದಕ್ಕೆ ಕಷ್ಟವಾಗಬಾರದು, ನನ್ನನ್ನೇ ನಂಬಿಕೊಂಡ ಅವರ ಬದುಕು ಅತಂತ್ರವಾಗಬಾರದು~ ಎಂಬ ಧ್ಯೇಯ ಪ್ರತಿಯೊಬ್ಬರಲ್ಲೂ ಇರಬೇಕು.ತಕರಾರೇ ಇಲ್ಲದೆ ವಿಮಾ ಹಣ ಕ್ಲೇಮ್ ಮಾಡುವ ಸನ್ನಿವೇಶ ನಿರ್ಮಿಸಬೇಕಾದುದು ಕೊನೆಯಲ್ಲಿ ಅಲ್ಲ,  ಆರಂಭದಲ್ಲಿ. ಅಂದರೆ ಪಾಲಿಸಿ ಮಾಡಿಸುವಾಗಲೇ ಇದರ ಭದ್ರ ಬುನಾದಿ ಹಾಕಿರಬೇಕು. ನೀವು ಮಾಡಿಸುವ ವಿಮಾ ಕಂಪನಿ ಇದುವರೆಗೆ ಒದಗಿಸಿದ ವಿಮಾ ಹಣ ಪಾವತಿಯ ವಿವರವನ್ನೂ ತಿಳಿದುಕೊಂಡಿರಬೇಕು.

 

ತಕರಾರು ಮಾಡದೆ ವಿಮಾ ಹಣ ಕೊಡುವ ಕಂಪನಿಯು ವಿಮೆ ಮಾಡಿಸುವ ಹಂತದಲ್ಲೇ ಎಲ್ಲಾ ಗೊಂದಲಗಳನ್ನೂ ನಿವಾರಿಸಿಕೊಂಡು ಪರಿಪೂರ್ಣ ರೀತಿಯಲ್ಲಿ ವಿಮೆ ಮಾಡಿಸಿಕೊಂಡಿದೆ ಎಂದೇ ಅರ್ಥ. ಹೀಗಾಗಿ ಅಂತಹ ಕಂಪೆನಿಗಳನ್ನು ಆಯ್ಕೆ ಮಾಡಿಕೊಂಡು ನೀವು ವಿಮೆ ಮಾಡಿಸಿಕೊಳ್ಳುವುದು ಸೂಕ್ತ.ಸಂಪೂರ್ಣ ಮಾಹಿತಿ ಅಗತ್ಯ: ವಿಮಾ ಪಾಲಿಸಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಪ್ರಾಯ, ಆರೋಗ್ಯ ಸಮಸ್ಯೆ, ಯಾವುದೇ ಹಂತದಲ್ಲಿ ವಿಶೇಷ ವೈದ್ಯಕೀಯ ಆರೈಕೆ ಪಡೆದಿದ್ದರೆ ಅದರ ಉಲ್ಲೇಖ, ಕುಟುಂಬದ ಇತಿಹಾಸ, ಉದ್ಯೋಗ, ಆದಾಯ, ಹವ್ಯಾಸ ಇತ್ಯಾದಿಗಳನ್ನು ಯಾವುದೇ ಮಾಹಿತಿ ಮರೆಮಾಚದೆ ನೀಡಬೇಕು.ಪಾಲಿಸಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಇರುವ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು. ಸಂಶಯ ಬಂದಾಗ ಅದನ್ನು ತಕ್ಷಣ ಬಗೆಹರಿಸಿಕೊಳ್ಳಬೇಕು.ನೀವು ತಿಳಿದುಕೊಂಡ ವಿಷಯಕ್ಕಿಂತ ವಿಮಾ ಒಪ್ಪಂದ ಭಿನ್ನವಾಗಿದೆ ಎಂಬುದು ನಿಮ್ಮ ಗಮನಕ್ಕೆ ಆಮೇಲೆ ಬಂದಿದೆ ಎಂದಾದರೆ ನಿಮ್ಮ ಅರ್ಜಿಯಲ್ಲಿ ಬದಲಾವಣೆ ಮಾಡಿಸುವುದಕ್ಕೆ 15 ದಿನಗಳ ಕಾಲಾವಕಾಶ ಇರುತ್ತದೆ.ಅಂದರೆ ವಿಮಾ ಪಾಲಿಸಿ ನೀಡಿದ 15 ದಿನಗಳೊಳಗೆ ಸೂಕ್ತ ಬದಲಾವಣೆಗಳನ್ನು ಮಾಡಿಸಿಕೊಳ್ಳಬಹುದು. ಪಾಲಿಸಿಯಲ್ಲಿ ಸರಿಯಾಗಿ ನಾಮನಿರ್ದೇಶಕರ ಹೆಸರನ್ನು ನಮೂದಿಸಬೇಕು. ನಾಮನಿರ್ದೇಶಕರಿಗೆ ಸಹ ಪಾಲಿಸಿ ಮಾಡಿಸಿಕೊಂಡವರ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಮತ್ತು ಪಾಲಿಸಿ ಒಪ್ಪಂದದ ಬಗ್ಗೆ ತಿಳಿದಿರಬೇಕು.ಒಂದು ವೇಳೆ ವಿಮೆ ಮಾಡಿಸಿಕೊಂಡ ವ್ಯಕ್ತಿ ಸತ್ತರೆ ಪಾಲಿಸಿ ಕ್ಲೇಮ್ ಹೇಗೆ ಮಾಡಿಸಿಕೊಳ್ಳಬೇಕು ಎಂಬುದನ್ನು ಸಹ ಪಾಲಿಸಿ ಮಾಡಿಸುವ ಹಂತದಲ್ಲೇ ತಿಳಿದುಕೊಂಡಿರಬೇಕು. ನಾಮನಿರ್ದೇಶಕರಿಗೆ ಎಲ್ಲಾ ವಿಚಾರವೂ ಮೊದಲೇ ಗೊತ್ತಿದ್ದರೆ ಯಾವುದೇ ಗೊಂದಲವೂ ಇರುವುದಿಲ್ಲ.ವಿಮಾ ಕಂಪೆನಿಗೆ ಎಲ್ಲಾ ದಾಖಲೆಗಳನ್ನು ಸಮರ್ಪಕ ರೀತಿಯಲ್ಲಿ ಸಕಾಲದಲ್ಲಿ ಒದಗಿಸಬೇಕು. ಹೀಗೆ ಒದಗಿಸುವ ಮಾಹಿತಿಯಲ್ಲಿ ಸತ್ಯವನ್ನು ಮರೆಮಾಚಿದ್ದರೆ, ಸುಳ್ಳು ಮಾಹಿತಿ ಇದ್ದರೆ ವಿಮೆ ಕ್ಲೇಮ್ ಮಾಡುವಾಗ ಬಹಳ ದೊಡ್ಡ ತೊಡಕಾಗಿಬಿಡುತ್ತದೆ.ಇದೇ ಕಾರಣ ಮುಂದಿಟ್ಟು ವಿಮಾ ಹಣ ಕೊಡುವುದಕ್ಕೆ ವಿಮಾ ಕಂಪೆನಿ ಆಕ್ಷೇಪ ಎತ್ತಬಹುದು. ಕೊಟ್ಟ ಮಾಹಿತಿ ಸುಳ್ಳಾಗಿರುವುದರಿಂದಲೇ ವಿಮಾ ಹಣ ನೀಡುತ್ತಿಲ್ಲ ಎಂದು ಕಂಪೆನಿ ಹೇಳಿಬಿಟ್ಟರೆ ಮತ್ತು ಅದಕ್ಕೆ ಸೂಕ್ತ ಪುರಾವೆ ಒದಗಿಸಿದರೆ, ಅದನ್ನು ಪ್ರಶ್ನಿಸಿ ಜಯ ಗಳಿಸುವುದು ಸಹ ಕಷ್ಟವಾಗಿಬಿಡುತ್ತದೆ.ಸಾಮಾನ್ಯವಾಗಿ ವಿಮಾ ಕ್ಲೇಮ್ ತಿರಸ್ಕೃತವಾಗಲು ಮೂರು ಮುಖ್ಯ ಕಾರಣ ಇರುತ್ತದೆ. ಮೊದಲನೆಯದಾಗಿ ವಿಮೆ ಮಾಡಿಸುವ ಅವಧಿಯಲ್ಲೇ ಹೃದಯ, ಮೂತ್ರಪಿಂಡ, ಶ್ವಾಸಕೋಶ, ಯಕೃತ್ ಅಥವಾ ಮಿದುಳಿನ ಸಮಸ್ಯೆ, ಕ್ಯಾನ್ಸರ್, ಎಚ್‌ಐವಿಯಂತಹ ಕಾಯಿಲೆಗಳು ಇದ್ದರೆ ಅಥವಾ ದೊಡ್ಡ ಶಸ್ತ್ರಚಿಕಿತ್ಸೆ ನಡೆದಿದ್ದರೆ ಅದನ್ನು ಹೇಳದೆ ಇರುವುದು.ಎರಡನೆಯದಾಗಿ ಅತಿಯಾದ ಮಧುಮೇಹ, ಹೈಪರ್‌ಟೆನ್ಷನ್, ಉಸಿರಾಟದ ತೊಂದರೆ, ಧೂಮಪಾನ ಮತ್ತು ಮದ್ಯಪಾನ ಚಟಗಳಂತಹ ಮಾಹಿತಿಗಳನ್ನು ಒದಗಿಸದಿರುವುದು. ಮೂರನೆಯದಾಗಿ ಈಗಿರುವ ವಿಮಾ ಪಾಲಿಸಿಗಳ ಬಗ್ಗೆ, ಆದಾಯದ ಬಗ್ಗೆ, ಕೆಲಸದ ಬಗ್ಗೆ, ವಯಸ್ಸಿನ ಬಗ್ಗೆ ಸರಿಯಾದ ಮಾಹಿತಿ ನೀಡದೆ ಇರುವುದು.ಇದು ವ್ಯಕ್ತಿಯ ಸಾಮರ್ಥ್ಯಕ್ಕಿಂತ ಅಧಿಕ ವಿಮೆ ಮಾಡಿಸಿದಂತಾಗಿ ಆತ/ಆಕೆ ಜೀವಿತಾವಧಿಯಲ್ಲಿನ ಮೌಲ್ಯಕ್ಕಿಂತಲೂ ಸತ್ತ ನಂತರ ಹೆಚ್ಚು ಮೌಲ್ಯಯುತವಾಗಿ ಪರಿಣಮಿಸಬಹುದು. ಸಹಜವಾಗಿಯೇ ಇದು ನೈತಿಕ ಅಧಃಪತನಕ್ಕೆ ಕಾರಣವಾಗಬಹುದು.ಒಂದು ವೇಳೆ ವಿಮೆ ಮಾಡಿಸಿದ ನಂತರ ಪಾಲಿಸಿದಾರ ಒದಗಿಸಿದ ಮಾಹಿತಿ ಸುಳ್ಳು ಅಥವಾ ಮಾಹಿತಿಗಳಲ್ಲಿ ವಿರೋಧಾಭಾಸ ಇದೆ ಎಂಬುದು ವಿಮಾ ಕಂಪೆನಿಗೆ ಗೊತ್ತಾದರೆ ಹೊಸದಾಗಿ ವಿಮಾ ಒಪ್ಪಂದ ಮಾಡಿಕೊಳ್ಳಲು ಕಂಪೆನಿ ಮುಂದಾಗಬಹುದು. ಪಾಲಿಸಿದಾರರಿಗೆ ಅದನ್ನು ತಿಳಿಸಿ ಅವರಿಂದ ಹೊಸದಾಗಿ ಪಾಲಿಸಿ ಒಪ್ಪಂದ ಮಾಡಿಸಿಕೊಳ್ಳಬಹುದು.ಅಪರೂಪಕ್ಕೆ ಎಂಬಂತೆ ಸೂಕ್ತ ಮಾಹಿತಿ ನೀಡದ್ದಕ್ಕೆ ಮತ್ತು ಅಪಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿಮಾ ಕಂಪೆನಿಗಳು ಪಾಲಿಸಿ ಒಪ್ಪಂದವನ್ನು ರದ್ದುಪಡಿಸಿದ ನಿದರ್ಶನವೂ ಇದೆ.ಇಂತಹ ಕ್ರಮಗಳಿಂದಾಗಿ ವಿಮೆ ಮಾಡಿಸಿದ ವ್ಯಕ್ತಿಯ ಕುಟುಂಬದವರು ವಿಮೆ ಕ್ಲೇಮ್ ಮಾಡುವ ಹಂತದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಪ್ಪಿಸುವುದು ಸಾಧ್ಯವಾಗಿದೆ. ಜತೆಗೆ ವಿಮಾ ಕಂಪೆನಿಗಳು ತಮ್ಮ ಪ್ರತಿನಿಧಿಗಳನ್ನು ಈ ನಿಟ್ಟಿನಲ್ಲಿ ತರಬೇತಿಗೊಳಿಸಿ ಸಜ್ಜಗೊಳಿಸಿರುತ್ತವೆ.ವಿಮಾ ಕ್ಷೇತ್ರದಲ್ಲಿ ಕ್ಲೇಮ್ ಹಣವನ್ನು ಸಮರ್ಪಕವಾಗಿ ಸಂದಾಯ ಮಾಡುವುದೇ ಮಹತ್ವದ ಸಂಗತಿ, ಹೀಗಾಗಿ ಇದಕ್ಕೆ ಅಡ್ಡಿ ಆಗದಂತಹ ವ್ಯವಸ್ಥೆಯನ್ನು ಮೊದಲೇ ರೂಪಿಸಿಕೋಳ್ಳಲು ಸೂಕ್ತ ತರಬೇತಿ ನೀಡಲಾಗಿರುತ್ತದೆ.ವಿಮಾ ಪಾಲಿಸಿ ಮಾಡಿಸಿಕೊಳ್ಳುವುದು ಎಂದರೆ ಅದೊಂದು ಪರಮೋಚ್ಛ ನಂಬಿಕೆಯ ಮೇಲೆ ನಡೆಯುವಂತಹ ಕ್ರಿಯೆ. ಹೀಗಾಗಿ ಗ್ರಾಹಕರು ನೀಡುವ ಮಾಹಿತಿ ಸಂಪೂರ್ಣ ಸತ್ಯವಾಗಿರಬೇಕು. ಕೆಲವೊಂದು ಮಾಹಿತಿಗಳನ್ನು ಬಚ್ಚಿಟ್ಟರೆ ಅಥವಾ ಸುಳ್ಳು ಹೇಳಿದ್ದೇ ಆದರೆ ಈ ನಂಬಿಕೆಯ ವ್ಯವಹಾರದಲ್ಲಿ ಅಡಚಣೆ ಉಂಟಾಗುತ್ತದೆ.

 

ಅದನ್ನೇ ಮುಂದಿಟ್ಟುಕೊಂಡು ಕಂಪೆನಿ ವಿಮಾ ಹಣ ಕೊಡಲು ಹಿಂದೇಟು ಹಾಕಿಬಿಡಬಹುದು. ವಿಮೆ ಮಾಡಿಸಿಕೊಂಡ ವ್ಯಕ್ತಿ ತನ್ನ ಬಳಿಕ ತನ್ನ ಕುಟುಂಬದವರಿಗೆ ಯಾವುದೇ ತೊಂದರೆಯೂ ಇಲ್ಲದೆ ವಿಮಾ ಪರಿಹಾರ ಸಿಗುವಂತಾಗಬೇಕು ಎಂದು ಬಯಸಿದ್ದೇ ಆದರೆ ಪಾಲಿಸಿ ಮಾಡಿಸುವ ಹಂತದಲ್ಲೇ ಸಮರ್ಪಕ ಮಾಹಿತಿ ಒದಗಿಸಬೇಕು.

 ಸುರೇಶ್ ಅಗರ್‌ವಾಲ್

(ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚುವಲ್ ಲೈಫ್ ಇನ್ಶುರನ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.