ಬುಧವಾರ, ಮೇ 25, 2022
30 °C

ವಿವಾಹ: ಮಿತಿಗೆ ನಿಲುಕದ ಸೂಕ್ಷ್ಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಾಹ: ಮಿತಿಗೆ ನಿಲುಕದ ಸೂಕ್ಷ್ಮಗಳು

ಆ ಕೆ ಪ್ರತಿಷ್ಠಿತ ಕುಟುಂಬದ ಹೆಣ್ಣು ಮಗಳು. ಕಾಲೇಜೊಂದರಲ್ಲಿ ಉಪನ್ಯಾಸಕಿ. ಕೈ ತುಂಬಾ ಸಂಬಳ. ಆದರೆ ಸಂಬಳ ಸಿಕ್ಕಿದ ಕೂಡಲೇ ಪತಿಗೆ ಒಪ್ಪಿಸಬೇಕು. ಅದರಿಂದ ಆತ ತೆಗೆದುಕೊಡುವ ಸ್ವಲ್ಪ ಹಣದಲ್ಲಿ ತಿಂಗಳು ಪೂರ್ತಿ ಕಾಲೇಜಿಗೆ ಹೋಗಿ ಬರುವ ಖರ್ಚನ್ನು ನಿಭಾಯಿಸಬೇಕು.ಕಾಲೇಜಿನಿಂದ ಬರುವುದು 10 ನಿಮಿಷ ತಡವಾದರೂ ಗಂಡನ ಕೋಪ ತಾರಕಕ್ಕೆ! ಈಕೆ ಬಟ್ಟೆ ಬದಲಿಸುತ್ತಿದ್ದರೆ ‘ಒಳ್ಳೆ ಸೀರೆ ಉಡಬೇಡ - ಬೇರೆಯವರು ನಿನ್ನ ನೋಡುವುದನ್ನು ನನಗೆ ಸಹಿಸಿಕೊಳ್ಲಿಕ್ಕೆ ಆಗೋದಿಲ್ಲ’ ಎಂದು ಕೂಗಾಡುತ್ತಾರೆ. ಹಾಗೆಂದು ಇದು ಪೊಸೆಸಿವ್‌ನೆಸ್ ಅಲ್ಲ.  ಮನೆಯಲ್ಲಿ ಹೊರೆಗೆಲಸ ನಿರ್ವಹಿಸಬೇಕು. ಎಷ್ಟೇ ಆಯಾಸವಾಗಿದ್ದರೂ ರಾತ್ರೆ ಅಸಹನೀಯವೆನಿಸುವಂತಹ ಗಂಡನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಬೇಕಾದ ಅನಿವಾರ್ಯತೆ.ಕುಟುಂಬದ ಶಾಂತಿ ಕದಡುವ ಇಂತಹ ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಉತ್ತರ ಪತ್ರಿಕೆಗಳನ್ನು ತಿದ್ದಲು ಅಸಾಧ್ಯವಾದ ಮನಃಸ್ಥಿತಿ!ತನ್ನ ಮನಸ್ಸಿನ ದುಗುಡವನ್ನು ಹಗುರಾಗಿಸಿಕೊಳ್ಳುವುದು ಆಪ್ತ ಸ್ನೇಹಿತೆಯೊಂದಿಗೆ  ಫೋನ್‌ನಲ್ಲಿ ಮಾತನಾಡುವುದರ ಮೂಲಕ ಮಾತ್ರ! ಇತ್ತೀಚೆಗೆ ಆಕೆ ಹೇಳಿದ್ದು ‘ರೇಖಾ.. ಈ ನರಕಕ್ಕಿಂತ ನಾನು ವಿಧವೆಯಾದರೂ ಪರವಾಗಿಲ್ಲ ಅಂತ ಅನಿಸುತ್ತಿದೆ.’  ಆಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಬೇರೆ ಹೋಗದೆ ಈ ನರಕದಲ್ಲೇ ಏಕಿರುತ್ತಾರೆ ಎಂದು ನಮಗನ್ನಿಸುತ್ತದೆ. ಆದರೆ ಆಕೆಗೆ ಮನೆತನದ ಮರ್ಯಾದೆಯ ಪ್ರಶ್ನೆ ಹಾಗೂ ಹೆಣ್ಣುಮಗಳ ಭವಿಷ್ಯ ಭೂತಾಕಾರವಾಗಿ ಕಾಡುತ್ತದೆ. ಆತನಿಗೆ ಆಪ್ತ ಸಲಹೆಯ ಅವಶ್ಯಕತೆ ಇದೆ ನಿಜ. ಆದರೆ ಅದಕ್ಕೆ ಆತನನ್ನು ಒಪ್ಪಿಸುವುದು ಹೇಗೆ ಎನ್ನುವುದು ದೊಡ್ಡ ಸಮಸ್ಯೆ. ಕೋರ್ಟು ಕಚೇರಿ ಎಂದು  ಅಲೆದರೆ ವರ್ಷಗಟ್ಟಲೆ ಇತ್ಯರ್ಥವಾಗದ ವ್ಯರ್ಥ ಪ್ರಯತ್ನಗಳು.ಇಂತಹ ಸಮಸ್ಯೆಗಳಿಗೆ ಕಾನೂನು ಬದಲಾವಣೆಯ ಪರಿಹಾರವನ್ನು ನೀಡಬಹುದೇ ಹೊರತು ಪರಿಸ್ಥಿತಿಯ ಸುಧಾರಣೆಯನ್ನಲ್ಲ.ಆಡಿಸಿದಂತೆ ಆಡುವ ಗೊಂಬೆ:

  ಇನ್ನೊಂದು ಘಟನೆ. ಆಕೆ ನೋಡಲು ಸುಂದರಿ. ಪತಿ ಎಂದೂ ಆಕೆಯನ್ನು ಗೆಳತಿಯಾಗಿ ಪತ್ನಿಯಾಗಿ ಕಂಡಿಲ್ಲ. ಆಡಿಸಿದಂತೆ ಆಡುವ ಗೊಂಬೆಯಷ್ಟೇ ಸ್ಥಾನ. ಆಕೆ ತಾನು ಹೇಳಿದ್ದಲ್ಲಿಗಷ್ಟೇ ಹೋಗಬೇಕು. ತನ್ನೊಡನೆ ಮಾತ್ರ ಓಡಾಡಬೇಕು. ಹಬ್ಬ- ಹರಿದಿನಗಳಲ್ಲಿ ಅರಿಶಿನ ಕುಂಕುಮಕ್ಕೆಂದು ಸ್ನೇಹಿತೆಯರ ಮನೆಗೆ ಹೋದರೂ ಅಲ್ಲೇ ಇರುವ ಕುರಿತು ಖಚಿತ ಪಡಿಸಿಕೊಳ್ಳಲು ಕೂಡಲೇ ಫೋನು. ಆಕೆಯ ಮೊಬೈಲ್‌ನಲ್ಲಿರುವ ನಂಬರ್‌ಗಳ ತಪಾಸಣೆ. ಯಾವ ಪುರುಷನೊಂದಿಗೂ ಮಾತನಾಡುವಂತಿಲ್ಲ. ಅಕಸ್ಮಾತ್ ಆತ ಹಾಕಿದ ಗೆರೆ ದಾಟುವ ಅನಿವಾರ್ಯತೆ ಬಂದರೆ ಹೊಡೆತ ಬಡಿತ! ಹಿಂಸೆ. ದೌರ್ಜನ್ಯಕ್ಕೆ ಬೇಸತ್ತು ಪೋಲೀಸರಿಗೆ ಪುಕಾರು, ಲಾಯರ್‌ಗಳೊಂದಿಗೆ ಚರ್ಚಿಸುವುದಾಗಿ ಕೂಗಾಡಿದರೆ ಸಮಾಜದಲ್ಲಿ ಸ್ಥಾನಮಾನ ಗಿಟ್ಟಿಸಿರುವುದರಿಂದ ಆ ಎಲ್ಲರನ್ನೂ ತನ್ನ ಬಿಗಿಮುಷ್ಟಿಯೊಳಗೆ ಹಿಡಿದಿಡುವ ಚಾಕಚಕ್ಯತೆ. ದೂರು ನೀಡುತ್ತೇನೆಂದು ಹೆದರಿಸಿದ ತಪ್ಪಿಗೇ ಮತ್ತಷ್ಟು ದೈಹಿಕ ಮಾನಸಿಕ ಹಿಂಸೆ. ಪರಿಸ್ಥಿತಿ ಬಿಗಡಾಯಿಸುವಾಗ ಆಪ್ತ ಸಲಹೆಯ ಕುರಿತು ತಿಳಿಹೇಳಲು ಹೊರಟರೆ ತನಗೆ ಅದರ ಅವಶ್ಯಕತೆಯೇ ಇಲ್ಲ ಎನ್ನುವ ಮೊಂಡುವಾದ. ಈಗ ಇಬ್ಬರ ದಿಕ್ಕೂ ಬದಲಾಗಿದೆ. ವಿಚ್ಛೇದನವೂ ಇಲ್ಲ. ಪರಿಹಾರವೂ ಇಲ್ಲ. ಆಕೆಗೆ ಜೀವನ ನಿರ್ವಹಣೆಗೆ ಹೆಣಗಾಡಬೇಕಾದ ಪರಿಸ್ಥಿತಿ. ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಹಣ ನೀಡಬೇಕಾಗಿರುವ ಆತನ ಕರ್ತವ್ಯವನ್ನು ಹಕ್ಕಿನ ಮೂಲಕ ಒತ್ತಾಯಿಸಲೂ ಭಯ! ಹಿಂದೊಮ್ಮೆ ಜಗಳದ ನಡುವೆ ಸ್ವಂತ ಮನೆಯನ್ನು ಯಾರಿಗೋ ವಿಲ್ ಬರೆಯುತ್ತೇನೆಂದು ಹೆದರಿಸಿದ್ದ ನೆನಪಿನಿಂದ ಆತ ಎಲ್ಲಿ ಹೇಗೆ ಬೇಕಾದರೂ ಇರಲಿ ಸ್ವಂತ ಮನೆಯಾದರೂ ತಮಗಿರಲಿ ಎಂದು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ! ಇಲ್ಲಿ ಕಾನೂನಿನ ಮೂಲಕ ಹೋರಾಡಲು ಸಾಕ್ಷಿಯ ಕೊರತೆ. ಇಂತಹ ಮುಸುಕಿನೊಳಗಿನ ಗುದ್ದಾಟಕ್ಕೆ ಆಪ್ತ ಸಲಹಾ ಕೇಂದ್ರಗಳಾಗಲೀ, ಸ್ತ್ರೀಸಂಘಟನೆಗಳಾಗಲೀ ಮಹಿಳಾ ಸಹಾಯವಾಣಿಗಳಾಗಲೀ ಯಾವರೀತಿ ನೆರವು ನೀಡೀತು? ಇವು ಪುರುಷ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರ ಸ್ಥಿತಿಯಾದರೆ ಮಹಿಳೆಯರ ದೌರ್ಜನ್ಯಕ್ಕೆ ಒಳಗಾಗುವ ಪುರುಷರೂ ಇಲ್ಲದಿಲ್ಲ.ಆಕೆ ವಿದ್ಯಾವಂತೆ. ಉಪನ್ಯಾಸಕಿ. ಮಗುವಾದ ಮೇಲೆ ದುಡಿಯುವುದು ಬೇಡವೆನ್ನಿಸಿತು. ಮಗುವನ್ನು ನೋಡಿಕೊಳ್ಳಲು ಅತ್ತೆ ಇದ್ದರು. ಕಲಿತ ವಿದ್ಯೆಯ ಉಪಯೋಗಕ್ಕಾದರೂ ಕೆಲಸ ಮಾಡು ಎಂದ ಗಂಡನಿಗೆ ಹೆಂಡತಿ ಮಕ್ಕಳನ್ನು ಸಾಕುವುದು ನಿನ್ನ ಕರ್ತವ್ಯ ಎನ್ನುವ ಮಾತಿಗೇ ಜೋತು ಬಿದ್ದಳು.ಮಗುವಿನೊಂದಿಗೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತರೆ ಬೆಳಿಗ್ಗೆ 10 ಗಂಟೆಯಾದರೂ ಹೊರಗೆ ಬರುವುದೇ ಇಲ್ಲ. ರೋಸಿ ಹೋಗಿ ಮನೆಯವರು ಬೈದರೆ ಕುರುಕ್ಷೇತ್ರ! ಸ್ನೇಹಿತೆಯ ಸಲಹೆಯಂತೆ ಅತ್ತೆ ‘ಮಹಿಳಾ ಸಹಾಯ ವಾಣಿ’ಯ ಮೊರೆ ಹೊಕ್ಕರು.ಸಹಾಯವಾಣಿಯವರ ಪ್ರಕಾರ ಪತಿ- ಪತ್ನಿ ಇಬ್ಬರೂ ಆಪ್ತ ಸಲಹೆಗಾರರ ನೆರವು ಪಡೆಯಬೇಕು. ಅನುಭವಿಸುತ್ತಿರುವ ತೊಂದರೆಯನ್ನು ಬರವಣಿಗೆಯ ಮುಖಾಂತರ ತಿಳಿಸಬೇಕು. ಸಹಾಯವಾಣಿಯವರ ಸೌಲಭ್ಯವನ್ನು ಬಳಸಿಕೊಳ್ಳಲಿಕ್ಕೇ ಒಪ್ಪದಿದ್ದರೆ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ ಸೊಸೆಗೆ ಈ ವಿಚಾರವನ್ನು ತಿಳಿಸಲಿಕ್ಕೇ ಹಿಂಜರಿಕೆ! ಅಪಾರ್ಥ ಮಾಡಿಕೊಂಡು ನಮ್ಮ ಮೇಲೇ ತಿರುಗಿ ಪುಕಾರು ನೀಡಿದರೆ? ವರದಕ್ಷಿಣೆಯ ಕಿರುಕುಳವೆಂದು ದೂರು ದಾಖಲಿಸಿದರೆ?  ಈ ವಯಸ್ಸಿನಲ್ಲಿ ವಿನಾಕಾರಣ ಜೈಲಿನಲ್ಲಿ ಕಾಲಕಳೆಯಬೇಕಾದರೆ ನಾನೇನು ಮಾಡಲಿ ಎಂದು ಕಣ್ಣೀರು ಸುರಿಸ್ತಾರೆ ಅತ್ತೆ. ಅಥವಾ ಒಂದು ವೇಳೆ ದೂರು ನೀಡಿ ಆ ನಿಮಿಷಕ್ಕೆ ಸಮಸ್ಯೆ ಬಗೆ ಹರಿದಂತಾದರೂ ಮುಂದಿನ ದಿನಗಳಲ್ಲಿ ಮನಸ್ಸು ತಿಳಿಯಾಗಿ ಇರುತ್ತದೆ ಎಂದು ಹೇಗೆ ಹೇಳಲು ಸಾಧ್ಯ?ಹಾಗೆಂದು ಇಲ್ಲಿ ಕಾನೂನನ್ನಾಗಲೀ, ಸ್ತ್ರೀ  ಸಂಘಟನೆಗಳನ್ನಾಗಲೀ ದೂಷಿಸುತ್ತಿಲ್ಲ. ಅವುಗಳು ಕೂಡಾ ಒಂದು ಮಿತಿಗೆ ಒಳಪಡಬೇಕಾದ ಪ್ರಸ್ತುತತೆಯನ್ನಷ್ಟೇ ಗಮನಿಸಬೇಕಾಗಿದೆ.ಹಾಗಾಗಿಯೇ ಇಂದು ಇವುಗಳನ್ನೆಲ್ಲ ಮೀರುವ ಮಾನವೀಯ ಮೌಲ್ಯಗಳ ಅರಿವಿನ ಅವಶ್ಯಕತೆ ಇದೆ.  ಗಂಡು ಹೆಣ್ಣು ಎನ್ನುವುದಕ್ಕಿಂತ  ಪರಸ್ಪರರನ್ನು  ಗೌರವಿಸುವ ಪಕ್ವತೆ ಬೇಕಾಗಿದೆ. ಹುಸಿ ಪ್ರತಿಷ್ಠೆ ದುರಭಿಮಾನಗಳಿಗಿಂತ ಸ್ವಲ್ಪ ಮಟ್ಟಿಗೆ ತ್ಯಾಗ, ರಾಜಿ ಹೊಂದಾಣಿಕೆಗೆ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಇವುಗಳನ್ನೆಲ್ಲ ಕೇವಲ ಹಣ ಅಥವಾ ಪ್ರತಿಷ್ಠೆಯಿಂದ ಮಾತ್ರ ಸಂಪಾದಿಸಲು ಸಾಧ್ಯವಿಲ್ಲ.  ಆತ್ಮವಿಮರ್ಶೆಯನ್ನು ಮಾಡಿಕೊಂಡಾಗ ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡಾಗ ಮಾತ್ರ ಬದುಕಿನ ಮೂಲ ಉದ್ದೇಶವಾದ ನೆಮ್ಮದಿ ನಮ್ಮದಾಗಬಲ್ಲುದು.          

             

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.