ಬುಧವಾರ, ಜುಲೈ 28, 2021
29 °C

ವಿವಿಗಳಿಗೆ ಭೂಮಿ ಕಳೆದುಕೊಳ್ಳುವ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಸಂಶೋಧನೆ ಹಾಗೂ ಶಿಕ್ಷಣಕ್ಕಾಗಿ 1910ರ ಸುಮಾರಿಗೆ ಅಸ್ತಿತ್ವಕ್ಕೆ ಬಂದ ಇಲ್ಲಿಯ ಹೆಬ್ಬಾಳದ ಮುಖ್ಯ ಸಂಶೋಧನಾ ಸಂಸ್ಥೆ (ಎಂಆರ್‌ಎಸ್)ಗೆ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು)ದ ನಡುವೆ ಭೂಮಿ ಹಂಚಿಕೆಯ ವಿವಾದ  ಆರಂಭವಾಗಿದೆ.ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿಗೆ ವಸತಿಗೃಹಗಳನ್ನು ಕಟ್ಟಲು 30 ಎಕರೆ ಸ್ಥಳವನ್ನು ಗುರುತಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿರುವ ಕೆವಿಎಎಫ್‌ಎಸ್‌ಯುಕ್ಕೆ ಸೇರಿದ ಜಮೀನನ್ನು ಉನ್ನತ ತಂಡವೊಂದು ಕಳೆದ ತಿಂಗಳು ಸ್ಥಳ ಪರಿಶೀಲನೆ ನಡೆಸಿತ್ತು. ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಸ್ಥಳ ಗುರುತಿಸುವಂತೆ ಕೃಷಿ ವಿವಿಯ ಎಸ್ಟೇಟ್ ಅಧಿಕಾರಿ ದೇವರಾಜ್ ಅವರಿಗೆ ಸೂಚಿಸಿದ್ದಾರೆ. ಅವರು ಕೆವಿಎಎಫ್‌ಎಸ್‌ಯುನ ಗಮನಕ್ಕೆ ಬಾರದಂತೆ, ವಿವಿ ಆವರಣದ ಎರಡು ಸ್ಥಳಗಳನ್ನು ನ್ಯಾಯಾಧೀಶರ ತಂಡಕ್ಕೆ ತೋರಿಸಿದ್ದಾರೆ ಎಂಬುದು ಈ ವಿವಾದಕ್ಕೆ ಕಾರಣವಾಗಿದೆ.ಸ್ಥಳ ಪರಿಶೀಲನೆಯಿಂದ ಕೃಷಿ ವಿವಿ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರಿಗೆ, ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾದ ಜಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ಎದುರಾಗಿದೆ. ಒಂದು ಕಾಲಕ್ಕೆ ಕೃಷಿ ವಿವಿ ನಿಯಂತ್ರಣದಲ್ಲಿದ್ದ, ನಂತರ ಅಗ್ರೋ ಇಂಡಸ್ಟ್ರೀಸ್ ಸಂಸ್ಥೆಗೆ ಹಸ್ತಾಂತರವಾದ 11 ಎಕರೆ ನಿವೇಶನದಲ್ಲಿ ಸರ್ಕಾರ ಈಗ ಸಚಿವರಿಗೆ ಮನೆನಿರ್ಮಿಸುತ್ತಿದ್ದು, ಅದರ ಹಿಂಭಾಗದಲ್ಲಿ ವಿ.ವಿಗೆ ಸೇರಿದ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.ಸಂದಿಗ್ದ ಸ್ಥಿತಿ: ಸರ್ಕಾರ ಮನೆಗಳ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಡುವಂತೆ ಕೆವಿಎಎಫ್‌ಎಸ್‌ಯುಗೆ ಕೇಳಿದರೆ, ಅತ್ತ ಕೊಡುತ್ತೇವೆ ಎನ್ನಲಾಗದೇ, ಇತ್ತ ಇಲ್ಲವೂ ಎನ್ನಲಾಗದೇ ತ್ರಿಶಂಕು ಸ್ಥಿತಿಯಲ್ಲಿದೆ ಈ ಸಂಸ್ಥೆಯ ಆಡಳಿತ.ಈ ಕುರಿತು ಮಾತನಾಡಿದ ಕೆವಿಎಎಫ್‌ಎಸ್‌ಯು ಕುಲಪತಿ ಡಾ.ಸುರೇಶ್ ಎಸ್.ಹೊನ್ನಪ್ಪಗೋಳ ಅವರು, ‘ನಮ್ಮ ಗಮನಕ್ಕೆ ತರದಂತೆ ಸಂಸ್ಥೆಗೆ ಸೇರಿದ ಜಾಗವನ್ನು ತೋರಿಸಿದ್ದು ಸರಿಯಲ್ಲ. ಈಗ ಇರುವ ಜಾಗ ಸಂಶೋಧನೆಗೆ, ಪ್ರಾಯೋಗಿಕ ಚಟುವಟಿಕೆಗಳಿಗೇ ಸಾಕಾಗುವುದಿಲ್ಲ. ಇನ್ನು ಅದರಲ್ಲೇ 30 ಎಕರೆ ಜಮೀನನ್ನು ನೀಡಿ ಎಂದರೆ ಹೇಗೆ ಕೊಡಲು ಸಾಧ್ಯ. ಸರ್ಕಾರಕ್ಕೆ ನಮ್ಮ ಸಮಸ್ಯೆ ತಿಳಿಸಿದ್ದೇವೆ. ಒಂದು ವೇಳೆ ಕೊಡಲೇಬೇಕು ಎಂದು ಸೂಚಿಸಿದರೆ, ಬೆಂಗಳೂರು ಕೃಷಿ ವಿ.ವಿಯಿಂದ ನಮಗೆ ಬರಬೇಕಾದ 60 ಹೆಕ್ಟೇರ್ ಭೂಮಿ ಹಸ್ತಾಂತರವಾದರೆ, ಮಾತ್ರ ಭೂಮಿ ನೀಡಲು ಸಿದ್ಧರಿದ್ದೇವೆ’ ಎಂದರು.ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ವಿವಿ ಕುಲಪತಿ ಡಾ.ಕೆ.ನಾರಾಯಣಗೌಡ ಅವರು, ‘ಮನೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಕೇಳಿದರೂ ಸಹ ಆ ಜಾಗ ನಮ್ಮ ಸೂರ್ಯಕಾಂತಿ ಪರಾಗಸ್ಪರ್ಶಕ್ಕೆ ಅಗತ್ಯವಿರುವುದರಿಂದ ಕೊಡುವುದು ಅಸಾಧ್ಯ. ಹೀಗೆ ಕೇಳಿದ್ದಕ್ಕೆಲ್ಲ ಭೂಮಿ ಕೊಡುತ್ತಾ ಹೋದರೆ ನಮ್ಮ ಕೃಷಿ ಸಂಶೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಹಾಗೂ ಕೃಷಿ ವಿವಿಯ ಮೂಲ ಉದ್ದೇಶವನ್ನೇ ಬಲಿಕೊಟ್ಟಂತಾಗುತ್ತದೆ. ಆದ್ದರಿಂದ ನಮ್ಮ ಈ ನಿರ್ಧಾರವನ್ನು ಸರ್ಕಾರ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ಭೂಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಕೆವಿಎಎಫ್‌ಎಸ್‌ಯು ಹಾಗೂ ನಮ್ಮ ಮಧ್ಯೆ 2005ರಲ್ಲೇ ಒಪ್ಪಂದವಾಗಿದೆ. ಮತ್ತೆ ಅದನ್ನು ಕೆದುಕುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದರು.ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಎಸ್ಟೇಟ್ ಅಧಿಕಾರಿ ದೇವರಾಜ್ ಅವರು, ‘ಕಳೆದ ತಿಂಗಳು ಇಲ್ಲಿಗೆ ಆಗಮಿಸಿದ ನ್ಯಾಯಾಧೀಶರು, ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್ ಹಾಗೂ ಕೃಷಿ ಇಲಾಖೆಯ ಕಾರ್ಯದರ್ಶಿ ಅವರನ್ನೊಳಗೊಂಡ ತಂಡಕ್ಕೆ ಜಾಗ ತೋರಿಸಿದ್ದು ನಿಜ. ಆದರೆ ಕೃಷಿ ಇಲಾಖೆ ಕಾರ್ಯದರ್ಶಿ ಅವರು ಜಾಗ ತೋರಿಸುವಂತೆ ನನಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಈ ರೀತಿ ಮಾಡಿದೆ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.