ಮಂಗಳವಾರ, ಮೇ 11, 2021
27 °C
ಯುಐಡಿಎಸ್‌ಎಸ್‌ಎಂಟಿ ಯೋಜನಾ ಸಭೆಯಲ್ಲಿ ಸಚಿವ ಶಾಮನೂರು ಮಾಹಿತಿ

ವಿವಿಧೆಡೆ ಶೀಘ್ರ ಬೃಹತ್ ಚರಂಡಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ವಿವಿಧೆಡೆ ಚರಂಡಿಗಳಲ್ಲಿ ಮಳೆ ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯದೇ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಅಗತ್ಯವಿರುವ ಕಡೆಗಳಲ್ಲಿ ಬೃಹತ್ ಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಹಾಗೂ ಎಪಿಎಂಸಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ `ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ'(ಯುಐಡಿಎಸ್‌ಎಸ್‌ಎಂಟಿ)ಯ ಉಳಿಕೆ ಹಣದಲ್ಲಿ ಕೈಗೊಳ್ಳಬಹುದಾದ ಕಾಮಗಾರಿ ಕುರಿತು ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ಹಿಂದೆ ಯುಡಿಎಸ್‌ಎಸ್‌ಎಂಟಿ ಅಡಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ ಉಳಿದ ರೂ 15.81 ಕೋಟಿ ಅನುದಾನದಲ್ಲಿ ಅಗತ್ಯವಿರುವ ಕಡೆ ಕಾಮಗಾರಿ ಕೈಗೊಳ್ಳಲಾಗುವುದು. ರೂ 5.36 ಕೋಟಿಯಲ್ಲಿ ವಾರ್ಡ್ ನಂ. 8ರ ಬೂದಾಳ್ ರಸ್ತೆಯ ಚೌಡೇಶ್ವರಿ ನಗರದಿಂದ ರಿಂಗ್ ರಸ್ತೆಯ ಸೇತುವೆವರೆಗೆ ಚರಂಡಿ ನಿರ್ಮಾಣ, ರೂ 1.45 ಕೋಟಿಯಲ್ಲಿ ವಾರ್ಡ್ ನಂ.: 15ರ ಭಾರತ್ ಕಾಲೊನಿ ಮಣ್ಣು ಪರೀಕ್ಷಾ ಕೇಂದ್ರದಿಂದ ಅಣ್ಣಾ ನಗರದ ರೈಸ್ ಮಿಲ್‌ವರೆಗೆ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ರೂ 1.45 ಕೋಟಿಯಲ್ಲಿ ವಾರ್ಡ್ ನಂ.: 15ರ ಶಾರದಾ ರೈಸ್ ಮಿಲ್‌ನಿಂದ ಬಸಾಪುರ ಹಳ್ಳದವರೆಗೆ, ರೂ 1 ಕೋಟಿಯಲ್ಲಿ ವಾರ್ಡ್ ನಂ.: 16 ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಆರ್‌ಎಂಸಿ ರಸ್ತೆಯವರೆಗೆ, ರೂ 1.45 ಕೋಟಿಯಲ್ಲಿ ವಾರ್ಡ್ ನಂ.: 16ರ ಈರುಳ್ಳಿ ಮಾರುಕಟ್ಟೆ ಹತ್ತಿರದ ರೈಲ್ವೆ ಸೇತುವೆಯಿಂದ ಬಸಾಪುರ ಹಳ್ಳದವರೆಗೆ ಹಾಗೂ ರೂ 1.80 ಕೋಟಿಯಲ್ಲಿ ವಾರ್ಡ್ ನಂ.: 30ರ ಶಾಮನೂರು ರಸ್ತೆಯಿಂದ ಬಿಂದಾಸ್ ಬಾರ್ ಹಿಂಭಾಗದ ಮೂಲಕ ಶಾಮನೂರು ಗ್ರಾಮದ ರುದ್ರಭೂಮಿವರೆಗೆ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ರೂ 80 ಲಕ್ಷದಲ್ಲಿ ವಾರ್ಡ್ ನಂ.: 30ರ ಗ್ರೀನ್‌ಪಾರ್ಕ್ ಹೋಟೆಲ್ ಹತ್ತಿರದ `ಆಫೀಸರ್ಸ್‌ ಕ್ಲಬ್'ನ ಹಿಂಭಾಗದ ಎಂಬಿಎ ಕಾಲೇಜು ಕಾಂಪೌಂಡ್‌ವರೆಗೆ ಹಾಗೂ ರೂ 2.50 ಕೋಟಿಯಲ್ಲಿ ವಾಡ್ ನಂ.: 38  ಮತ್ತು 39ರಲ್ಲಿ ವಿದ್ಯಾನಗರ ಮುಖ್ಯರಸ್ತೆಯಿಂದ ಮಾರ್ಡನ್ ಸ್ಕೂಲ್ ಮೂಲಕ ಶಾಮನೂರು ರಸ್ತೆಯ ಸೇತುವೆವರೆಗೆ ಚರಂಡಿ ನಿರ್ಮಿಸಿ, ನಗರದಲ್ಲಿ ಮಳೆ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಕಾಂಕ್ರೀಟ್ ರಸ್ತೆ:

ರೂ 2.65 ಕೋಟಿಯಲ್ಲಿ ನಗರದ ಗುಂಡಿ ವೃತ್ತದಿಂದ ಕಲಾ ಕಾಲೇಜುವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಡಾಂಬರ್ ರಸ್ತೆ ನಿರ್ಮಿಸಿದರೆ ಅದು ಮೂರು ವರ್ಷಗಳಲ್ಲಿ ದುರಸ್ತಿಗೆ ಬರಲಿದೆ. ಆದ್ದರಿಂದ, ಕಾಂಕ್ರೀಟ್ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ. ನಗರದ ವಿವಿಧ ಮುಖ್ಯರಸ್ತೆಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಯುಡಿಎಸ್‌ಎಸ್‌ಎಂಟಿಯ ಉಳಿಕೆ ಅನುದಾನವನ್ನು ಸೆಪ್ಟೆಂಬರ್ ಒಳಗೆ ಬಳಕೆ ಮಾಡಬೇಕು. ಇಲ್ಲದಿದ್ದರೆ ವಾಪಸ್ ಹೋಗುತ್ತದೆ. ಆದ್ದರಿಂದ, ಅಗತ್ಯವಿರುವ ಕಡೆ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿವಶಂಕರಪ್ಪ ಹೇಳಿದರು.ಬಳ್ಳಾರಿ ಗಣಿಗಿಂತ ದೊಡ್ಡದು ಮರಳು ಮಾಫಿಯಾ!

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಸ್ಥಳೀಯರ ಮೇಲೆ ಪೊಲೀಸರ ಕಠಿಣ ಕ್ರಮದ ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾದವು.ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, `ಬಳ್ಳಾರಿ ಗಣಿಗಿಂತ ಜಿಲ್ಲೆಯಲ್ಲಿ ಮರಳು ಮಾಫಿಯಾ ದೊಡ್ಡದಾಗಿದೆ. ನದಿಪಾತ್ರದಲ್ಲಿ ಹಾವೇರಿ ಜಿಲ್ಲೆಯವರಿಗೆ ಒಂದು ನ್ಯಾಯ; ದಾವಣಗೆರೆ ಜಿಲ್ಲೆಯವರಿಗೆ ಒಂದು ನ್ಯಾಯ ಎಂಬಂತಾಗಿದೆ. ನದಿ ಪಾತ್ರದಲ್ಲಿ ಬೆಂಗಳೂರಿನ ಕುಳಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಬೆಂಗಳೂರಿಗೆ ಮರಳು ಸಾಗಣೆ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಗ್ರಾಹಕರಿಗೆ ತೊಂದರೆ ಆಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಹಳ್ಳಿಯೊಂದರಲ್ಲಿ ಗ್ರಾಮಸ್ಥರು ಒಟ್ಟಾಗಿ ಮರಳು ಸಂಗ್ರಹಿಸಿದ್ದು ಅವರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದಾಗ, ನೋಟಿಸ್ ಮಾತ್ರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿದರು.ಪೊಲೀಸರಿಂದ ಗ್ರಾಹಕರಿಗೆ ಅಡ್ಡಿ ಆಗುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಬಳಿಕ ಕರೂರು ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಭಾನುವಾರ ನಗರಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ನಿಮ್ಮ ಸಮಸ್ಯೆಯನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.ರೈತ ಮುಖಂಡರಾದ ತೇಜಸ್ವಿ ಪಟೇಲ್, ಓಂಕರಾಪ್ಪ, ಪೂಜಾರ್ ಅಂಜಿನಪ್ಪ, ಶಂಭುಲಿಂಗಪ್ಪ, ಸೈಯದ್ ನಯಾಜ್ ಇದ್ದರು.ಶೀಘ್ರದಲ್ಲಿ ಭೇಟಿ

ನಗರದ ಭಾರತ್ ಕಾಲೊನಿಯಲ್ಲಿ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ಕಟ್ಟಡ ಅನಾಥವಾಗಿರುವ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಗರದ ಹೊರಭಾಗದಲ್ಲಿ ಕಟ್ಟಡ ನಿರ್ಮಿಸಿರುವುದು ವ್ಯಾಪಾರಿಗಳಿಗೆ ತೊಂದರೆ ಆಗಬಹುದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.