ಮಂಗಳವಾರ, ಮೇ 17, 2022
27 °C

ವಿಶಿಷ್ಟ ಸಂವೇದನೆ, ಭಿನ್ನ ಶಿಲ್ಪ

ನಟರಾಜ Updated:

ಅಕ್ಷರ ಗಾತ್ರ : | |

ವಿಶಿಷ್ಟ ಸಂವೇದನೆ, ಭಿನ್ನ ಶಿಲ್ಪ

ಸಹ್ಯಾದ್ರಿ ಬೆಟ್ಟಗಳಿಗೊಂದು ಸೊಬಗಿದೆ.

ಅದು ಎದ್ದು ನಿಂತ ಭೂಮಿಯ ಭಾಗ.

ನಾವು ನಿಂತಲ್ಲೇ ಕಣ್ಣೆತ್ತಿ ನೋಡುವ ಎತ್ತರ.

ಆಕಾಶದ ತನಕ ಕಣ್ಣು ಏರಿಸುವ ಆನಂದ.

ಭೂಮಿಗೂ ಏರುವ ಹಸಿವು

ಅದರೊಳಗೆ ಒಂದು ದುಃಖವೂ ಇದೆ.

ಈಚೆ ನಿಂತವನಿಗೆ ಆಚೆ ಕಾಣದು.

ಕಾಣಬೇಕೆಂದವನು ಅದರ ಎತ್ತರಕ್ಕೆ ಏರಬೇಕು.

ಏರದವನಿಗೆ ಇದು ತಡೆಗೋಡೆ.

ಎತ್ತರಕ್ಕೆ ಬಾಗಿ ಮುಗಿವ ನಡೆಮಾತ್ರ.

ಏರುವವನಿಗೆ ತಿಳಿಯುತ್ತದೆ ಆಚೆಗೂ ಇರುವುದು

ಬಯಲೇ.

(ಸೀಮೆಯಿಲ್ಲದ ನಿಸ್ಸೀಮ)

ಮೇಲ್ನೋಟಕ್ಕೆ ಕವಿತೆಯಂತೆ, ಲಯಬದ್ಧ ಗದ್ಯದ ತುಣುಕುಗಳಂತೆ, ಹೇಳಿಕೆಗಳನ್ನು ಹಾಗೂ ಒಳನೋಟಗಳನ್ನು ಸಂಕಲಿಸಿದಂತೆ- ಹೀಗೆ, ಓದುಗರಿಗೆ ಹಲವು ರೀತಿಯಾಗಿ ಕಾಣಬಹುದಾದ ಬರಹಗಳ ಸಂಕಲನ `ಸಂತೆಯಲೊಂದು ಮನೆ~. ಇಲ್ಲಿನ ಬರಹಗಳನ್ನು ಲೇಖಕಿ ವೀಣಾ ಬನ್ನಂಜೆ ಅವರು ಆಧ್ಯಾತ್ಮಿಕ ಬರಹಗಳು ಎಂದು ಕರೆದಿದ್ದಾರೆ. ಪತ್ರಿಕೆಗಳ ಅಂಕಣಗಳಿಗೆ ಬರೆದ ಬರಹಗಳಿವು.

`ಎಚ್ಚರದ ಕನಸು~ ಎನ್ನುವ ಕಥಾಸಂಕಲನವನ್ನು, `ಅಕ್ಕನ ಹಾದಿ~ ಎನ್ನುವ ಕವನಸಂಕಲನವನ್ನು ಪ್ರಕಟಿಸಿರುವ ವೀಣಾ ಬನ್ನಂಜೆ ಅವರ ಬರಹ ವಿಶಿಷ್ಟ ಸಂವೇದನೆಗಳ ಹಾಗೂ ಬರಹದ ಭಿನ್ನ ಶಿಲ್ಪದ ಮೂಲಕ ಗಮನಸೆಳೆಯುವಂತಹದ್ದು. ಗದ್ಯಪದ್ಯ ಎರಡೂ ಆಗಬಲ್ಲ ಅವರ ಬರಹಗಳ ಸೆಲೆ ಅಧ್ಯಾತ್ಮ. ಸಂಕೀರ್ಣತೆಯಿಂದ ದೂರವಾಗಿ, ಸರಳತೆಯಿಂದ ಶೋಭಿಸುವ ಬರಹಗಳಿವು. ವಚನಗಳ ಮೂಲಕ ಶರಣರು ಕಂಡುಕೊಂಡ `ಜನಪರ ಅಧ್ಯಾತ್ಮ~ದ ದಾರಿ ವೀಣಾ ಅವರದ್ದೂ ಆಗಿದೆ. 

`ಸಂತೆಯಲೊಂದು ಮನೆ~ ಮೂವತ್ತು ಬರಹಗಳ ಸಂಕಲನ. ಕಥೆಗಳು, ಅನುಭವ ಕಥನಗಳು, ಹೇಳಿಕೆಗಳು, ವಚನದ ಸಾಲುಗಳು, ಜಿಜ್ಞಾಸೆ- ಹೀಗೆ ತಮ್ಮರಿವಿಗೆ ಬಂದುದನ್ನಷ್ಟೇ ವೀಣಾ ಅವರು ಬರಹವಾಗಿ ದಾಖಲಿಸಿದ್ದಾರೆ. ಆ ಕಾರಣದಿಂದಲೇ ಈ ಬರಹಗಳಲ್ಲಿ ನಾಟಕೀಯತೆ ಗೈರುಹಾಜರಾಗಿದ್ದು, ಲೇಖಕಿಯ ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣಿಸುತ್ತದೆ. ಬದುಕಿನ ಬಗೆಗೊಂದು ಆರೋಗ್ಯಪೂರ್ಣ ನೋಟ ಇರುವ ವೀಣಾ ಬನ್ನಂಜೆಯವರ ಬರಹಗಳು ಸಾವಧಾನದ ಓದನ್ನು ಬೇಡುವಂತಹವು.

ಲೌಕಿಕದ ಜನಪ್ರಿಯ ಸಂಗತಿಗಳ ಮೂಲಕವೇ ಹೊಸ ಹೊಳಹುಗಳನ್ನು ಕಾಣಿಸಲು ವೀಣಾ ಬನ್ನಂಜೆ ಪ್ರಯತ್ನಿಸುತ್ತಾರೆ. ಒಂದು ಉದಾಹರಣೆ:

ಸಿನೆಮಾ ಜಗತ್ತಿನೊಳಗೊಂದು ಅಪಾಯವಿದೆ. ಅಭಿನಯ

ಕ್ಕಾಗಿ ಅದನ್ನು ಇನ್ನೊಬ್ಬರೊಂದಿಗೆ ನಟಿಸುವುದು. ಅಂಥ ಅಭಿ

ನಯದ ಆಚೆಗೆ ಏಕಾಂತದಲ್ಲಿ ಅದು ಬೇಕೆನಿಸಿದರೆ.. ಅಂತಃಪುರದ

ಏಕಾಂತಕ್ಕೆ ಸಿನೆಮಾದ ನೆನಪು ಪ್ರವೇಶಿಸಬಹುದು. ಅಂತಃಪುರದ

ಅವರ ಏಕಾಂತವನ್ನು ಭಂಗವೂ ಮಾಡೀತು. ಕೂಡುವ ಹೆಂಡತಿ

ಸಿನೆಮಾದಲ್ಲಿ ಕಾಡುವ ಹೆಂಡತಿಯನ್ನು ಜರಿಯಬಹುದು.

ಬಿಡಿಬಿಡಿಯಾಗಿಯೂ ಓದಿಕೊಳ್ಳಬಹುದಾದ, ಒಟ್ಟಂದದಲ್ಲಿ ಹೊಸ ಅರ್ಥವನ್ನು ಕಾಣಬಹುದಾದ ಈ ಬರಹಗಳ ಒಡನಾಟ ಓದುಗನ ಅಂತರಂಗವನ್ನು ಬೆಳಗುವಷ್ಟು ಚೆಲುವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.