ಶುಕ್ರವಾರ, ಮಾರ್ಚ್ 5, 2021
18 °C
ವಿಶ್ವದಾಖಲೆ ಬರೆದ ಸಾನಿಯಾ–ಹಿಂಗಿಸ್‌

ವಿಶ್ವದಾಖಲೆ ಬರೆದ ಸಾನಿಯಾ–ಹಿಂಗಿಸ್‌

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಸತತ 29 ಪಂದ್ಯ ಗೆದ್ದ ಭಾರತ–ಸ್ವಿಸ್‌ ಜೋಡಿ Updated:

ಅಕ್ಷರ ಗಾತ್ರ : | |

ವಿಶ್ವದಾಖಲೆ ಬರೆದ ಸಾನಿಯಾ–ಹಿಂಗಿಸ್‌

ಸಿಡ್ನಿ (ಪಿಟಿಐ/ಐಎಎನ್‌ಎಸ್):  ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಗುರುವಾರ ಡಬಲ್ಸ್‌ ವಿಭಾಗದಲ್ಲಿ ಸತತ 29ನೇ ಪಂದ್ಯ ಗೆಲ್ಲುವ ಮೂಲಕ ವಿಶ್ವ ದಾಖಲೆ ಬರೆದರು.ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಮತ್ತು ಮಾರ್ಟಿನಾ 4–6, 6–3, 10–8ರಲ್ಲಿ ರುಮೇನಿಯಾದ ರಲುಕಾ ಒಲಾರು ಮತ್ತು ಕಜಕಸ್ತಾನದ ಯರೋಸ್ಲಾವಾ ಶ್ವೇಡೋವಾ ಅವರನ್ನು ಪರಾಭವ ಗೊಳಿಸಿದರು.ಇದರೊಂದಿಗೆ  ಪುಯೆರ್ಟೊ ರಿಕಾನ್‌ನ  ಜಿಜಿ ಫರ್ನಾಂಡೀಸ್‌ ಮತ್ತು ಬೆಲಾರಸ್‌ನ ನತಾಶಾ ಜ್ವೆರೆವಾ ಅವರ ಹೆಸರಿನಲ್ಲಿದ್ದ 22 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮೀರಿ ನಿಂತರು.ಜಿಜಿ ಮತ್ತು ಜ್ವೆರೆವಾ 1994ರಲ್ಲಿ ಸತತ 28 ಪಂದ್ಯಗಳಲ್ಲಿ ಗೆಲುವು ಗಳಿ ಸಿದ್ದು ಇದುವರೆಗಿನ ದಾಖಲೆಯಾಗಿತ್ತು. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಸಾನಿಯಾ ಮತ್ತು ಮಾರ್ಟಿನಾ ಅವರಿಂದ ಆರಂಭಿಕ ಸೆಟ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ  ಮೂಡಿಬರಲಿಲ್ಲ. ಮನಮೋಹಕ ಆಟ ಆಡಿದ ಒಲಾರು ಮತ್ತು ಶ್ವೆಡೋವಾ ಸತತವಾಗಿ ಗೇಮ್‌ ಗೆದ್ದು ಮುನ್ನಡೆ ಗಳಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಸಾನಿಯಾ ಮತ್ತು ಮಾರ್ಟಿನಾ ಸ್ವಯಂಕೃತ ತಪ್ಪುಗಳನ್ನು ಮಾಡಿ ಸೆಟ್‌ ಕೈಚೆಲ್ಲಿದರು.ಆರಂಭಿಕ ಸೆಟ್‌ನಲ್ಲಿ ಎದುರಾದ ಸೋಲಿನಿಂದ ಭಾರತ–ಸ್ವಿಸ್‌ ಜೋಡಿ ಎದೆಗುಂದಲಿಲ್ಲ. ಬದಲಾಗಿ ಎರಡನೇ ಸೆಟ್‌ನಲ್ಲಿ ಗುಣಮಟ್ಟದ ಆಟಕ್ಕೆ ಒತ್ತು ನೀಡಿತು. ಶರವೇಗದ ಸರ್ವ್‌ ಹಾಗೂ ಬಲಿಷ್ಠ ಸ್ಮ್ಯಾಷ್‌ಗಳ ಮೂಲಕ ಎರಡು ಬಾರಿ ಎದುರಾಳಿಗಳ ಸರ್ವ್‌ ಮುರಿದ ಅವರು ಸುಲಭವಾಗಿ ಸೆಟ್‌ ಜಯಿಸಿದರು.ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಸೆಟ್‌ ಕುತೂಹಲದ ಗಣಿ ಎನಿಸಿತ್ತು. ಮುಖ್ಯವಾಗಿ ಭಾರತ–ಸ್ವಿಸ್‌ ಜೋಡಿಗೆ ಈ ಸೆಟ್‌ ಮಹತ್ವದ್ದೆನಿಸಿತ್ತು.   ಹೀಗಾಗಿ ಅಲ್ಪ ಒತ್ತಡದೊಂದಿಗೆ ಕಣ ಕ್ಕಿಳಿದ ಸಾನಿಯಾ ಮತ್ತು ಹಿಂಗಿಸ್‌ ಎಚ್ಚರಿಕೆಯ ಆಟ ಆಡಿ ಜಯದ ಸಂಭ್ರಮ ಆಚರಿಸಿದರು. ಈ ಮೂಲಕ ಈ ವರ್ಷದ ಎರಡನೇ ಪ್ರಶಸ್ತಿಯತ್ತ ದಾಪುಗಾಲಿಟ್ಟರು.ಫೈನಲ್‌ಗೆ ಬೋಪಣ್ಣ 

ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ರುಮೇನಿಯಾದ ಫ್ಲೋರಿನ್‌ ಮಾರ್ಗಿಯಾ ಅವರು ಫೈನಲ್‌ ಪ್ರವೇಶಿಸಿ ದರು. ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ಮಾರ್ಗಿಯಾ 6–2, 6–4ರ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಸ್ಯಾಮ್‌ ಗ್ರೊತ್‌ ಮತ್ತು ಜಾನ್‌ ಪೀರ್ಸ್‌ ಅವರನ್ನು ಸೋಲಿಸಿದರು.ಸತತ 10 ಪ್ರಶಸ್ತಿ 

ಸಾನಿಯಾ ಮತ್ತು ಹಿಂಗಿಸ್‌ ಅವರು ಜತೆಯಾಗಿ ಆಡಲು ಶುರುಮಾಡಿದ ಬಳಿಕ ಸತತ 10 ಪ್ರಶಸ್ತಿ ಎತ್ತಿಹಿಡಿದಿದ್ದಾರೆ. 2015ರಲ್ಲಿ ಭಾರತ–ಸ್ವಿಸ್‌ ಜೋಡಿ ಇಂಡಿಯನ್‌ ವೇಲ್ಸ್‌, ಮಿಯಾಮಿ ಓಪನ್‌, ಚಾರ್ಲ್ಸ್‌ಟನ್‌ ಓಪನ್‌, ವಿಂಬಲ್ಡನ್‌, ಅಮೆರಿಕಾ ಓಪನ್‌, ಗುವಾಂಗ್‌ಜೌ, ವುಹಾನ್‌, ಬೀಜಿಂಗ್‌ ಓಪನ್‌ ಮತ್ತು ಡಬ್ಲ್ಯುಟಿ ಎ ಫೈನಲ್ಸ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ವರ್ಷದ ಆರಂಭ ದಲ್ಲಿ ನಡೆದ ಬ್ರಿಸ್ಬೇನ್‌ ಇಂಟರ್‌ ನ್ಯಾಷನಲ್‌ ಟೂರ್ನಿಯಲ್ಲಿ ಯೂ ಸಾನಿಯಾ ಮತ್ತು ಮಾರ್ಟಿನಾ ಪ್ರಶಸ್ತಿ ಗೆದ್ದಿದ್ದಾರೆ. ಸಿಡ್ನಿಯಲ್ಲಿ ಪ್ರಶಸ್ತಿ ಗೆದ್ದರೆ ಈ ಸಂಖ್ಯೆ 11ಕ್ಕೆ ಏರಲಿದೆ.ಸಾನಿಯಾ–ಮಾರ್ಟಿನಾ ವಿಶ್ವದಾಖಲೆ

* ಸತತ 29 ಪಂದ್ಯಗಳಲ್ಲಿ ಗೆದ್ದ ವಿಶ್ವದ ಮೊದಲ ಜೋಡಿ

* ಸಾನಿಯಾ ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ

* ಸಿಡ್ನಿ ಓಪನ್‌ ಟೂರ್ನಿಯ ಡಬಲ್ಸ್ ನಲ್ಲಿ ಫೈನಲ್ ಪ್ರವೇಶ

* ವರ್ಷದ ಎರಡನೇ ಪ್ರಶಸ್ತಿ ಮೇಲೆ ಕಣ್ಣು

* 2015ರಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿರುವ ಸಾನಿಯಾ–ಮಾರ್ಟಿನಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.