ಬುಧವಾರ, ಮೇ 18, 2022
23 °C

ವಿಶ್ವದ ಗಮನ ಸೆಳೆದ ಪುಟ್ಟ ದೇಶದ ಚುನಾವಣೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುದ್ದಿಯ ಹಿನ್ನೆಲೆಯೂರೋಪಿನ ಗ್ರೀಸ್ ಒಂದು ಪುಟ್ಟ ರಾಷ್ಟ್ರ. ಆದರೆ ಅಮೆರಿಕದಂತಹ ಬಲಾಢ್ಯ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆ ಕೂಡ ಸೆಳೆಯಲಾರದಷ್ಟು ಗಮನವನ್ನು ಅಲ್ಲಿ ನಡೆದ ಚುನಾವಣೆ ಸೆಳೆದಿತ್ತು. ಒಂದು ಕೋಟಿಗಿಂತ ಕಡಿಮೆ ಮತದಾರರಿರುವ ಸಣ್ಣ ರಾಷ್ಟ್ರವೊಂದರ ರಾಜಕೀಯ ಫಲಿತಾಂಶವನ್ನು ಇಡೀ ಜಗತ್ತು ಹೋದ ವಾರ ಆತಂಕದಿಂದ ಎದುರು ನೋಡುತ್ತಿತ್ತು.ಐರೋಪ್ಯ ಒಕ್ಕೂಟದಲ್ಲಿಯೇ ಉಳಿಯುವ ಭರವಸೆ ನೀಡಿದ್ದ ಪಕ್ಷವೇ ಅಲ್ಲಿ ಈಗ ಅಧಿಕಾರಕ್ಕೆ ಬಂದಿರುವುದರಿಂದ ಒಕ್ಕೂಟದ ಸದಸ್ಯ ದೇಶಗಳೆಲ್ಲ ನಿಟ್ಟುಸಿರು ಬಿಟ್ಟಿವೆ.ಒಂದೊಮ್ಮೆ  ಗ್ರೀಸ್ ಸುಸ್ತಿದಾರ ರಾಷ್ಟ್ರವಾದರೆ, ಅದು ಜಗತ್ತಿನ ವಿವಿಧೆಡೆ ಇರುವ ಹಲವಾರು ಬ್ಯಾಂಕುಗಳಿಗೆ ನಷ್ಟ ತಂದೊಡ್ಡುವ ಸಾಧ್ಯತೆ ಇದ್ದೇ ಇತ್ತು. ಸ್ಪೇನ್, ಫ್ರಾನ್ಸ್, ಜರ್ಮನಿಯ ಬ್ಯಾಂಕುಗಳಿಗಾಗುವ ನಷ್ಟವು ಜಗತ್ತಿನೆಲ್ಲೆಡೆಗೆ ವ್ಯಾಪಿಸುವ ಸಾಧ್ಯತೆಯೂ ಇತ್ತು. 2008ರಲ್ಲಿ ಅಮೆರಿಕದಲ್ಲಿ ಸಂಭವಿಸಿದ ಹಣಕಾಸು ಬಿಕ್ಕಟ್ಟು ಬ್ಯಾಂಕುಗಳಿಗೆ ಹಾಗೂ ದೂರದ ಆಸ್ಟ್ರೇಲಿಯಾದಲ್ಲಿರುವ ವ್ಯಕ್ತಿಗೆ ಕೂಡ ನಷ್ಟ ತಂದೊಡಿತ್ತು. ಈಗ ಸರಿಸುಮಾರು ಅದನ್ನೇ ಹೋಲುವ, ಅಂದರೆ ಇಡೀ ಗ್ರೀಸ್‌ನ್ನು ಅಡಮಾನ ಇಟ್ಟಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಉದ್ಭವಿಸಿದೆ.ಇದು ಇಷ್ಟಕ್ಕೇ ಕೊನೆಯಾಗಲಿದೆಯೇ?- ಇಲ್ಲ. ಇದು ಸಾಂಕ್ರಾಮಿಕದಂತೆ ಬೇರೆಡೆಗೆ ಹರಡಬಹುದು. ಗ್ರೀಸ್ ಮಾತ್ರವಲ್ಲದೆ, ಐರ‌್ಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್‌ಗಳು ಕೂಡ ಈಗ ಸಂಕಷ್ಟ ಪರಿಹಾರ ನೆರವು  ಪಡೆದಿದ್ದು, ಗ್ರೀಸ್‌ನಂತೆ ಆ  ರಾಷ್ಟ್ರಗಳು ಕೂಡ ಸುಸ್ತಿದಾರ ರಾಷ್ಟ್ರಗಳಾಗಬಹುದೆಂಬ ಭೀತಿ ಎದುರಾಗಿದೆ.ಹೀಗಾಗಿ ಹೂಡಿಕೆದಾರರು ಈ ರಾಷ್ಟ್ರಗಳ ಬ್ಯಾಂಕುಗಳಲ್ಲಿರುವ ತಮ್ಮ ಠೇವಣಿಯನ್ನು ಹಿಂದೆಗೆಯಲು ಮುಗಿಬೀಳಬಹುದು. ಇದೇ ಪ್ರವೃತ್ತಿಯಿಂದಾಗಿ ಈಗಾಗಲೇ ಗ್ರೀಸ್‌ನಲ್ಲಿ ಠೇವಣಿದಾರರು ಬ್ಯಾಂಕುಗಳಿಗೆ ಮುಗಿಬಿದ್ದು ಸಾಕಷ್ಟು ಪ್ರಮಾಣದಲ್ಲಿ ತಮ್ಮ ಹಣ ವಾಪಸು ತೆಗೆದಿದ್ದಾರೆ.ಒಂದೊಮ್ಮೆ ಇದು ಇತರ ರಾಷ್ಟ್ರಗಳಿಗೂ ವ್ಯಾಪಿಸಿದರೆ, 18ನೇ ಶತಮಾನದಲ್ಲಿ ಜಾನ್ ಲಾ ಅಧಿಕಾರಾವಧಿಯಲ್ಲಿ ಫ್ರಾನ್ಸ್‌ನಲ್ಲಿ ಆದಂತೆ, ಜನರು ಬ್ಯಾಂಕುಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಬಹುದು. ಅದನ್ನು ಮರಳಿ ಗಳಿಸಿಕೊಳ್ಳಲು ಬ್ಯಾಂಕುಗಳಿಗೆ ಒಂದು ಶತಮಾನದಷ್ಟು ದೀರ್ಘ ಕಾಲವೂ ಹಿಡಿಯಬಹುದು.ಒಟ್ಟಾರೆ ಜಾಗತಿಕ ವಹಿವಾಟಿನಲ್ಲಿ, ಮೂರನೇ ಒಂದರಷ್ಟು ಪಾಲು ಹೊಂದಿರುವ ಯೂರೊ ಕರೆನ್ಸಿಯ ಹಾಗೂ ಐರೋಪ್ಯ ಸಮುದಾಯದ ಹಣೆಬರಹ ಈ ಚುನಾವಣೆಯ ಮೇಲೆ ನಿಂತಿತ್ತು.ಒಂದೊಮ್ಮೆ ಚುನಾಯಿತ ಹೊಸ ಸರ್ಕಾರವು ಸಂಕಷ್ಟ ಪರಿಹಾರ ಪ್ಯಾಕೇಜನ್ನು ಒಪ್ಪಿಕೊಳ್ಳದಿದ್ದರೆ, ಐರೋಪ್ಯ ಒಕ್ಕೂಟದ ಏಕರೂಪ ಕರೆನ್ಸಿಯಾದ `ಯೂರೊ~ ಎಂಬುದು ಚರಿತ್ರೆಯ ಪುಟ ಸೇರುವ ಸಾಧ್ಯತೆ ಎದುರಾಗಿತ್ತು. 2008ರಲ್ಲಿ ಲೀಮನ್ ಬ್ರದರ್ಸ್‌ ಕುಸಿದಾಗ ಆದಂತೆ, ಈಗಲೂ ಹಣಕಾಸು ಮಾರುಕಟ್ಟೆಗಳು ತಲ್ಲಣಗೊಳ್ಳಬಹುದಾಗಿತ್ತು.ಗ್ರೀಸ್ ಆರ್ಥಿಕ ಸಂಕಷ್ಟದಿಂದ ಪಾರಾದರೆ, ಜಗತ್ತಿನ ನಾಯಕರು ತಮ್ಮ ರಾಷ್ಟ್ರಗಳ ಬ್ಯಾಂಕುಗಳನ್ನು, ತಮ್ಮ ನಾಗರಿಕರ ಉಳಿತಾಯ ಹಾಗೂ ತಮ್ಮ ವ್ಯಾಪಾರ ವಹಿವಾಟು ಸಂರಕ್ಷಿಸಿಕೊಳ್ಳಬಹುದು.  ಆಂಟೊನಿಸ್ ಸಮರಾಸ್ ನೇತೃತ್ವದ ಕನ್ಸರ್ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷವು, ಪರಿಹಾರ ಪ್ಯಾಕೇಜಿಗೆ ವಿರುದ್ಧವಿರುವ ರ‌್ಯಾಡಿಕಲ್ ಸಿರಿಝಾ ಪಕ್ಷದ ವಿರುದ್ಧ ಮುನ್ನಡೆ ಸಾಧಿಸಿದೆ. ಪಸೊಕ್ ಸೋಷಿಯಲಿಸ್ಟ್ ಪಕ್ಷದ ಬೆಂಬಲ ಪಡೆದಿರುವ ಆಂಟೊನಿಸ್ ರಾಷ್ಟ್ರದ ಪ್ರಧಾನಿ ಆಗಿ ಹೊರಹೊಮ್ಮಿದ್ದು, `ನಾವೀಗ ಒಂದು ಕ್ಷಣದಷ್ಟೂ ತಡಮಾಡದೆ, ರಾಷ್ಟ್ರದ ಆರ್ಥಿಕ ಬೆಳವಣಿಗೆಗಾಗಿ ಶ್ರಮಿಸುವ ಅಗತ್ಯವಿದೆ~ ಎಂದಿದ್ದಾರೆ.ಚುನಾವಣೆಯಲ್ಲಿ ನ್ಯೂ ಡೆಮಾಕ್ರಸಿ ಶೇ 29.7ರಷ್ಟು ಮತಗಳನ್ನು ಪಡೆದಿದ್ದರೆ, ಸಿರಿಝಾ ಶೇ 27ರಷ್ಟು ಮತಗಳನ್ನು ಗಳಿಸಿದೆ. ನಿಯಮದ ಪ್ರಕಾರ, ಪ್ರಬಲ ಪಕ್ಷಕ್ಕೆ 50 ಸ್ಥಾನಗಳು ಬೋನಸ್ ಆಗಿ ಲಭಿಸಲಿವೆ. ಹೀಗಾಗಿ ನ್ಯೂ ಡೆಮಾಕ್ರಸಿ ಮತ್ತು ಪಸೊಕ್ ಕೂಡಿ ಒಟ್ಟು ಬಲಗಳ ಸಂಖ್ಯೆ 162 ಆಗಲಿದೆ. ಸರ್ಕಾರ ರಚನೆಗೆ ಅಗತ್ಯವಿರುವ ಸದಸ್ಯ ಬಲದ ಸಂಖ್ಯೆ 151.ಸದ್ಯಕ್ಕೆ ಈಗಿನ ಫಲಿತಾಂಶವು ಪ್ಯಾಕೇಜ್ ನೀಡಿದ್ದ ಐರೋಪ್ಯ ಒಕ್ಕೂಟ, ಐಎಂಎಫ್ ಮತ್ತು ಬಲಾಢ್ಯ ರಾಷ್ಟ್ರವಾದ ಅಮೆರಿಕೆಗೆ ಸಮಾಧಾನ ತಂದಿದೆ. ಆದರೆ, ಹೊಸ ಮೈತ್ರಿಕೂಟದ ಒಟ್ಟಾರೆ ಮತ ಸಾಧನೆ ಶೇ 40ಕ್ಕಿಂತ ಕಡಿಮೆ ಇರುವುದರಿಂದ, ಆ ಕೂಟ ಎಷ್ಟು ದಿನ ಬಾಳುತ್ತದೆಂಬ ಅಭದ್ರತೆಯೂ ಇಣುಕಿ ಹಾಕುತ್ತಿದೆ.ಮತ್ತೊಂದೆಡೆ, ಹಲವು ವರ್ಷಗಳಿಂದ ನೆಪಮಾತ್ರಕ್ಕೆ ಇದ್ದ ಎಡಪಂಥೀಯ ಸಿರಿಝಾ ಪಕ್ಷ ಈ ಬಾರಿ ಶೇ 27ರಷ್ಟು ಮತಗಳನ್ನು ಬಾಚಿಕೊಂಡಿದೆ. ಹೀಗಾಗಿ ಆ ಪಕ್ಷ, ಈಗ ತಾನೇ ಗೆದ್ದಿರುವಷ್ಟು ಸಂಭ್ರಮದಲ್ಲಿದೆ. ಅಲ್ಲದೇ, ಅತಿ ದೊಡ್ಡ ಪ್ರತಿಪಕ್ಷವಾಗಿ ಹೊರಹೊಮ್ಮಿರುವ ಪಕ್ಷವು, ಗ್ರೀಕರ ಜನಸಾಮಾನ್ಯರ ಜೀವನವನ್ನು ದುರ್ಬರಗೊಳಿಸುವ ಪರಿಹಾರ ಪ್ಯಾಕೇಜನ್ನು ತಿರಸ್ಕರಿಸಲು ಸರ್ಕಾರವನ್ನು ಸಂಸತ್ತಿನಲ್ಲಿ ಒತ್ತಾಯಿಸಲಿದೆ ಎಂದು ಸ್ಪಷ್ಟಪಡಿಸಿದೆ.ಒಂದೊಮ್ಮೆ ಪರಿಹಾರ ಕೊಡುಗೆ ಅಂಗೀಕರಿಸಿದರೂ, ಅದನ್ನು ಈಗಿನ ಸ್ವರೂಪದಲ್ಲಿ ಒಪ್ಪಿಕೊಳ್ಳಲು ಬಿಡುವುದಿಲ್ಲ. ವೆಚ್ಚ ಕಡಿತ, ಪಿಂಚಣಿ ಕಡಿತ ಮತ್ತಿತರ ಹೊರೆಗಳು ಜನರ ಬದುಕನ್ನು ದುರ್ಬರ ಮಾಡಲು ಅವಕಾಶ ನೀಡುವುದಿಲ್ಲ. ಈ ಕುರಿತ ನಿಬಂಧನೆಗಳನ್ನು ಬದಲಾಯಿಸಲು ಪಟ್ಟು ಹಿಡಿಯುವುದಾಗಿ ಆ ಪಕ್ಷದ ನಾಯಕರು ಹೇಳಿದ್ದಾರೆ. ಇದೇ ವೇಳೆ ರಾಷ್ಟ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಶೇ 22ಕ್ಕೆ ಏರಿದ್ದು, ಬೀದಿಪಾಲಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿರುವುದು ಸಿರಿಝಾ ವಾದಕ್ಕೆ ಬಲತುಂಬುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.