ಗುರುವಾರ , ಮೇ 19, 2022
23 °C

ವಿಶ್ವವಿದ್ಯಾಲಯದ (ಅ)ಗೌರವ ಡಾಕ್ಟರೇಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಿಸಿದೆ. ಒಂದೇ ವರ್ಷ ಎಂಟು ಮಂದಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವ ರಾಜ್ಯದ ಏಕೈಕ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಬಾರಿ ಏಳು ಮಂದಿಗೆ ಗೌರವ ಸಲ್ಲಿಸಿದ್ದ ತನ್ನದೇ ದಾಖಲೆಯನ್ನು ವಿವಿ ಮುರಿದಿದೆ.

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿಯವರಿಗೆ ಡಾಕ್ಟರೇಟ್ ನೀಡುವ ಬೆಂಗಳೂರು ವಿವಿ ನಿರ್ಧಾರಕ್ಕೆ ರಾಜ್ಯಪಾಲರು ಅಸಮ್ಮತಿ ಸೂಚಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಕೊನೆಗೆ ಇಡೀ ಕನ್ನಡನಾಡು ಅವರ ಬೆಂಬಲಕ್ಕೆ ನಿಂತಿದ್ದನ್ನು ಗಮನಿಸಿ ರಾಜ್ಯಪಾಲರು ತಮ್ಮ ನಿರ್ಧಾರ ಬದಲಿಸಿದರು. ಆದರೆ ಗುಲ್ಬರ್ಗ ವಿವಿ ಶಿಫಾರಸು ಮಾಡಿದ್ದ ‘ಗಜಗಾತ್ರ’ದ ಪಟ್ಟಿಗೆ ಯಾವ ಚಕಾರವೂ ಎತ್ತದೇ ಅಂಕಿತ ಹಾಕುವ ಜತೆಗೆ ಮತ್ತೊಂದು ಹೆಸರು ಸೇರ್ಪಡೆಯಾಗಿ ರಾಜಭವನದಿಂದ ಹೊರಬಿದ್ದಿದೆ.ಎರಡು ವರ್ಷದ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಶಿಫಾರಸು ಆಗಿದ್ದ ಒಬ್ಬರ ಹೆಸರನ್ನು ತಿರಸ್ಕರಿಸಿದ್ದ ರಾಜ್ಯಪಾಲರು ಈಗ ಅದೇ ವ್ಯಕ್ತಿಯ ಹೆಸರನ್ನು ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಪಟ್ಟಿಗೆ ಸೇರಿಸಿರುವುದು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಉಪಸಮಿತಿ ಅಂತಿಮಪಡಿಸಿ ಕಳುಹಿಸಿದ್ದ ಐದು ಹೆಸರಿನ ಜತೆಗೆ ಕುಲಪತಿಗಳು ಇಬ್ಬರು ಹಾಗೂ ಕುಲಾಧಿಪತಿಗಳು ತಮಗೆ ಬೇಕಾದ ಇಬ್ಬರು ವ್ಯಕ್ತಿಗಳ ಹೆಸರು ಸೇರಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸಿಂಡಿಕೇಟ್ ಸಭೆಯಲ್ಲಿ ತಿರಸ್ಕೃತವಾಗಿದ್ದ ಎರಡು ಹೆಸರುಗಳೇ ರಾಜ್ಯಪಾಲರ ಅಂಕಿತದೊಂದಿಗೆ ಹೊರಬಂದಿರುವುದು ಕುತೂಹಲದ ಅಂಶ. ಇದು ಸಿಂಡಿಕೇಟ್‌ಗೆ ಮಾಡಿದ ಅಗೌರವ ಎಂಬ ಅಸಮಾಧಾನವೂ ಸಿಂಡಿಕೇಟ್ ಸದಸ್ಯರಲ್ಲಿದೆ.ವಿಶ್ವವಿದ್ಯಾನಿಲಯ ಕಾಯ್ದೆ ಅನ್ವಯ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುವ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಗೌರವ ಡಾಕ್ಟರೇಟ್‌ಗೆ ಹೆಸರು ಸೂಚಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಎರಡು ವರ್ಷದ ಹಿಂದೆ ತಾವೇ ತಿರಸ್ಕರಿಸಿದ್ದ ಹೆಸರನ್ನು ಬೇರೊಂದು ವಿಶ್ವವಿದ್ಯಾಲಯದ ಪಟ್ಟಿಗೆ ಸೇರಿಸಿರುವ ಕ್ರಮ ಪ್ರಶ್ನಾರ್ಹ ಎನ್ನುವುದು ಸಿಂಡಿಕೇಟ್ ಸದಸ್ಯರೊಬ್ಬರ ಅಭಿಪ್ರಾಯ.

ವಿಶ್ವವಿದ್ಯಾಲಯ ಸುಧಾರಣೆ ಕುರಿತು ಅಧ್ಯಯನ ನಡೆಸಲು ರಚಿಸಿದ್ದ ಎನ್.ಆರ್. ಶೆಟ್ಟಿ ಸಮಿತಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸಂಖ್ಯೆಯಲ್ಲಿ ಮೂರಕ್ಕೆ ಮಿತಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಈ ವರದಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರೂ 2000ದಲ್ಲಿ ಜಾರಿಗೆ ಬಂದ ವಿಶ್ವವಿದ್ಯಾಲಯ ಕಾಯ್ದೆಗೆ ಈ ಸಂಬಂಧ ತಿದ್ದುಪಡಿ ತಂದಿಲ್ಲ. ಆದ್ದರಿಂದಲೇ ರಾಜ್ಯೋತ್ಸವ ಪಟ್ಟಿಯಂತೆ ಗೌರವ ಡಾಕ್ಟರೇಟ್ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ.ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲಿ ಅತಿಯಾದ ಉದಾರತೆ ಎಷ್ಟು ಸರಿ ಎಂಬ ಜಿಜ್ಞಾಸೆಯನ್ನೂ ಶಿಕ್ಷಣಪ್ರೇಮಿಗಳು ಮುಂದಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಗೌರವ ಡಾಕ್ಟರೇಟ್ ನೀಡಲು ಅನುಸರಿಸುತ್ತಿರುವ ಮಾನದಂಡವೂ ಚರ್ಚಾಸ್ಪದ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಹೆಚ್ಚು ಅನುದಾನ ಪಡೆಯುವ ಸಲುವಾಗಿ ಯುಜಿಸಿ ಸದಸ್ಯರಿಗೆ, ಕುಲಪತಿ ಹುದ್ದೆಗೆ ತರಲು ಸಹಾಯಹಸ್ತ ಚಾಚಿದ ‘ಗಾಡ್‌ಫಾದರ್’ಗಳನ್ನು ಮೆಚ್ಚಿಸಲು ಅವರಿಗೊಂದು, ಜಾತಿ, ಧರ್ಮ, ಕುಲ, ಸಾಮಾಜಿಕ ನ್ಯಾಯ, ಸಿಂಡಿಕೇಟ್ ಸದಸ್ಯರ ಮರ್ಜಿ ಹೀಗೆ ವಿವಿಧ ಅಂಶಗಳು ಗೌರವ ಡಾಕ್ಟರೇಟ್‌ನ ಹಿಂದೆ ಕೆಲಸ ಮಾಡುತ್ತವೆ. ಇದರಿಂದ ಅರ್ಹರಿಗೆ ಡಾಕ್ಟರೇಟ್ ಪಡೆಯಲು ಮುಜುಗರ ಆಗುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಮಾಜಿ ಸಿಂಡಿಕೇಟ್ ಸದಸ್ಯ ಉಮಾಕಾಂತ ನಿಗ್ಗುಡಗಿ ಅಭಿಪ್ರಾಯಪಡುತ್ತಾರೆ.ಉದಾಹರಣೆಗೆ ರಾಜ್ಯದ ವಿಶ್ವವಿದ್ಯಾಲಯಗಳು ಈ ಬಾರಿ ಕೇಂದ್ರ ಸಚಿವರಿಗೆ ಪೈಪೋಟಿಯಂತೆ ಗೌರವ ಡಾಕ್ಟರೇಟ್ ನೀಡಿವೆ. ಮೈಸೂರು ವಿವಿ ವೀರಪ್ಪ ಮೊಯಿಲಿಯವರನ್ನು ಆಯ್ಕೆ ಮಾಡಿದರೆ, ಮಹಿಳಾ ವಿವಿ ಮಾನವ ಸಂಪನ್ಮೂಲ ಖಾತೆ ಸಚಿವೆ ಪುರಂದರೇಶ್ವರಿಯವರಿಗೆ, ಗುಲ್ಬರ್ಗ ವಿವಿ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗೆ, ಧಾರವಾಡದ ಕರ್ನಾಟಕ ವಿವಿ ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲರಿಗೆ ಗೌರವ ಸಮರ್ಪಿಸಿವೆ. ಸಮಾಜದ ವಿವಿಧ ರಂಗಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಬೇಕಾದ ಜನಪ್ರತಿನಿಧಿಗಳೇ ವಿವಿಗಳ ‘ಗೌರವ’ ಪಡೆಯಲು ಹಾತೊರೆಯುವುದು ವಿಪರ್ಯಾಸ.ಹಿಂದೆ ಈ ಗೌರವಕ್ಕೆ ಆಯ್ಕೆ ಮಾಡುತ್ತಿದ್ದ ಎಷ್ಟೋ ಹೆಸರುಗಳು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸುವಂತಿದ್ದವು. ಆದರೆ ಇಂದು ಪರಿಸ್ಥಿತಿ ತದ್ವಿರುದ್ಧವಾಗಿದೆ. ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡುವ ಹೆಸರುಗಳ ಪರಿಚಯವೂ ಜನಸಾಮಾನ್ಯರಿಗೆ ಇರುವುದಿಲ್ಲ. ಅಂಥವರನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಸಂಪ್ರದಾಯ ಮುಂದುವರಿದರೆ ಗೌರವ ಡಾಕ್ಟರೇಟ್ ಎಂಬ ಪದವೇ ಅರ್ಥ ಕಳೆದುಕೊಳ್ಳಬೇಕಾಗುತ್ತದೆ.  ಇನ್ನಾದರೂ ಗೌರವ ಡಾಕ್ಟರೇಟ್‌ಗಳು ಹೆಸರಿಗೆ ಅನ್ವರ್ಥವಾಗಿ ಉಳಿಯುತ್ತದೆಯೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.