ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಸೋಲಾದರೆ, ಶರಣಾಗತಿ ಚಿಂತನೆ: ಅಸಾಂಜೆ

Last Updated 4 ಫೆಬ್ರುವರಿ 2016, 12:13 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಸ್ಫೋಟಕ ಮಾಹಿತಿಗಳ ಬಹಿರಂಗದ ಮೂಲಕ ಸಂಚಲನ ಸೃಷ್ಟಿಸಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಗುರುವಾರ "ಷರತ್ತು ಬದ್ಧ" ಶರಣಾಗತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಇಲ್ಲಿನ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿರುವುದು ‘ಅಕ್ರಮ ವಶ’ ಅಲ್ಲ ಎಂದು ವಿಶ್ವಸಂಸ್ಥೆಯ ಸಮಿತಿಯು ಘೋಷಿಸಿದರೆ, ಶುಕ್ರವಾರ ಮಧ್ಯಾಹ್ನವೇ ಬ್ರಿಟನ್‌ ಪೊಲೀಸರಿಗೆ ಶರಣಾಗುವೆ ಎಂದು ಪ್ರಕಟಿಸಿದ್ದಾರೆ.

‘ಇಂಗ್ಲೆಂಡ್‌ ಹಾಗೂ ಸ್ವಿಡನ್‌ ವಿರುದ್ಧದ ಪ್ರಕರಣಗಳಲ್ಲಿ ಸೋಲು ಕಂಡಿರುವುದಾಗಿ ವಿಶ್ವಸಂಸ್ಥೆ ನಾಳೆ ಪ್ರಕಟಿಸಿದರೆ, ನಾನು ಶುಕ್ರವಾರ ಮಧ್ಯಾಹ್ನವೇ ರಾಜತಾಂತ್ರಿಕ ಕಚೇರಿಯಿಂದ ಹೊರಬಂದು ಬ್ರಿಟಿಷ್ ಪೊಲೀಸರಿಗೆ ಶರಣಾಗುವೆ. ಇದಕ್ಕಿಂತಲೂ  ಅರ್ಥಪೂರ್ಣವಾದ ಭರವಸೆಯಲ್ಲಿ ಹುರುಳಿಲ್ಲ’ ಎಂದಿದ್ದಾರೆ.

‘ಆದರೆ, ವಿಶ್ವಸಂಸ್ಥೆ ನನ್ನ ಪರವಾಗಿ ತೀರ್ಪು ನೀಡಿ, ನಾನು ಜಯಿಸಿದರೆ, ಕೂಡಲೇ ನನ್ಮ ಪಾಸ್‌ಪೋರ್ಟ್‌ ಅನ್ನು ಮರಳಿಸಬೇಕು. ಭವಿಷ್ಯದಲ್ಲಿ ಬಂಧನ ಯತ್ನಗಳನ್ನು ಕೈಬಿಡಬೇಕು ಎಂದು ನಾನು ನಿರೀಕ್ಷಿಸುವೆ’ ಎಂದು ವಿಕಿಲೀಕ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

44 ವರ್ಷದ ಅಸಾಂಜೆ 2012ರಿಂದಲೂ ಸೆಂಟ್ರಲ್ ಲಂಡನ್ನಿನಲ್ಲಿರುವ ಈಕ್ವೇಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ನೆಲೆಸಿದ್ದಾರೆ. ಅಂದಿನಿಂದಲೂ ಆ ಕಟ್ಟದ ಸುತ್ತಲೂ ಬ್ರಿಟಿಷ್ ಸರ್ಕಾರವು ಪೊಲೀಸರನ್ನು ನಿಯೋಜಿಸಿ, ತೀವ್ರತರ ನಿಗಾ ಇಟ್ಟಿದೆ.

ಸ್ವಿಡನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಅಸಾಂಜೆ, ಈಕ್ವೇಡಾರ್ ರಾಜತಾಂತ್ರಿಕ ಕಚೇರಿಯ ರಕ್ಷಣೆಗೆ ಮೊರೆಹೋಗಿದ್ದರು. ಸ್ವಿಡನ್‌ನಲ್ಲಿ ಅಸಾಂಜೆ ಅವರು ಇಬ್ಬರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಆರೋಪಗಳನ್ನು ಅಸಾಂಜೆ ಅಲ್ಲಗಳೆದಿದ್ದಾರೆ.

ತನ್ನನ್ನು ‘ನಿರಂಕುಶ ವಶ’ದಲ್ಲಿ ಇಡಲಾಗಿದೆ ಎಂದು ಆರೋಪಿಸಿ ಅಸಾಂಜೆ ಅವರು ವಿಶ್ವಸಂಸ್ಥೆಯ ‘ನಿರಂಕುಶ ವಶ’ ಮೇಲಿನ ಸಮಿತಿಗೆ 2014ರಲ್ಲಿ ದೂರು ನೀಡಿದ್ದರು.

ಈ ಸಮಿತಿಯು ಶುಕ್ರವಾರ, ಫೆಬ್ರುವರಿ 5ರಂದು ತನ್ನ ಆದೇಶ ಪ್ರಕಟಿಸಲಿದೆ.

2006ರಲ್ಲಿ ವಿಕಿಲೀಕ್ಸ್ ಸಂಸ್ಥೆ ಹುಟ್ಟುಹಾಕಿದ ಅಸಾಂಜೆ, ಆಫ್ಘಾನಿಸ್ತಾನ ಹಾಗೂ ಇರಾಕ್‌ ವಿರುದ್ಧದ ಅಮೆರಿಕ ಯುದ್ಧಗಳಿಗೆ ಸಂಬಂಧಿಸಿದ ಐದು ಲಕ್ಷದಷ್ಟು ರಹಸ್ಯ ಸೇನಾ ಕಡತಗಳನ್ನು ಬಹಿರಂಗಪಡಿಸಿದ್ದರು. ಅಲ್ಲದೇ, 2.5 ಲಕ್ಷದಷ್ಟು ರಾಜತಾಂತ್ರಿಕ ತಂತಿ ಸಂದೇಶಗಳನ್ನು ಬಹಿರಂಗಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT