ಗುರುವಾರ , ಮೇ 6, 2021
27 °C

`ವಿಶ್ವಾಸವೇ ಲಾಭ, ಅವಿಶ್ವಾಸವೇ ಹಾನಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್: ಪ್ರಾಮಾಣಿಕತೆ, ವಿಶ್ವಾಸ ವೃದ್ಧಿ, ಸಮರ್ಪಕ ಲೆಕ್ಕಪತ್ರಗಳ ನಿರ್ವಹಣೆ ಹಾಗೂ ಕೆಲಸಗಾರರೊಂದಿಗೆ ಉತ್ತಮ ಸಂಬಂಧ ಹೊಂದಿರುವ ವ್ಯಾಪಾರಿಗಳು ಮಾತ್ರ ಯಶಸ್ವಿನತ್ತ ದಾಪುಗಾಲು ಹಾಕುತ್ತಾರೆ. ವಿಶ್ವಾಸವೇ ಲಾಭ, ವಿಶ್ವಾಸಹೀನವೇ ನಷ್ಟ ಎಂಬುದನ್ನು ಎಲ್ಲ ವ್ಯಾಪಾರಸ್ಥರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಧಾರವಾಡದ ನಟರಾಜ ಮುರುಶಿಳ್ಳಿನ ಹೇಳಿದರು.ಅವರು ಭಾನುವಾರ ನಗರದ ಅಮ್ಮ ಸೇವಾ ಸಂಸ್ಥೆಯ ಸಭಾಭವನದಲ್ಲಿ ಇಳಕಲ್ ವಾಣಿಜ್ಯೋದ್ಯಮ ಸಂಸ್ಥೆ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಯಶಸ್ವಿ ವ್ಯಾಪಾರದ ಹೆಜ್ಜೆಗಳು ಕುರಿತು ಮಾತನಾಡಿದರು.ಬಿಗ್‌ಬಜಾರ್‌ನಂತಹ ವ್ಯಾಪಾರಿಗಳಿಗೆ ಹೆದರುವ ಅಗತ್ಯ ಇಲ್ಲ. ನಮ್ಮ ಶೆಟ್ರ ಅಂಗಡಿ, ಶೇಡಜಿ ಅಂಗಡಿಯಲ್ಲಿ ಇರುವ ಉದ್ರಿ ವ್ಯವಹಾರ, ಪರಸ್ಪರ ವಿಶ್ವಾಸ, ಸಂಬಂಧಗಳು ಬಿಗ್ ಬಜಾರ್‌ಗಳಲ್ಲಿ ಇರುವುದಿಲ್ಲ. ನೂರು ವರ್ಷಗಳ ಹಿಂದೆಯೇ ರ‌್ಯಾಲಿ ಬ್ರದರ್ಸ್ ಎಂಬ ಇಂಗ್ಲೆಡ್‌ನ ಹೋಲ್‌ಸೇಲ್ ಕಂಪೆನಿಯು ಭಾರತಕ್ಕೆ ಬಂದಾಗ ಸೊಲ್ಲಾಪುರದ ವಾರದ ಮಲ್ಲಪ್ಪನವರು ಎಲ್ಲ ವ್ಯಾಪಾರಿಗಳನ್ನು ಒಟ್ಟಾಗಿಸಿ, ಹೋಲ್‌ಸೇಲ್ ಖರೀದಿ, ವ್ಯಾಪಾರ ಮಾಡಿ ಆ ಕಂಪೆನಿಯನ್ನು ಸೋಲಿಸಿದ್ದರು. ನಷ್ಟಕ್ಕೊಳಗಾದ ಕಂಪೆನಿ ಇಂಗ್ಲೆಂಡ್‌ಗೆ ಮರಳಿತು. ವಾರದ ಮಲ್ಲಪ್ಪನವರ ಬದುಕು, ವ್ಯಾಪಾರ, ದಾಸೋಹ ಎಲ್ಲರಿಗೂ ಅನುಕರಣೀಯ ಎಂದರು.ಸರಕಾರದ ನಿಯಾಮಾವಳಿಯ ಚೌಕಟ್ಟಿನಲ್ಲಿ ತೆರಿಗೆ ಉಳಿಸಲು ಯೋಜನೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ತೆರಿಗೆ ಪಾವತಿ ಮಾಡದೇ ಇರುವುದು ತಪ್ಪು. ವ್ಯಾಪಾರಿಗಳು ಅನೇಕ ಕಾನೂನು ಹಾಗೂ ತೆರಿಗೆ ಸಂಬಂಧಿಸಿದ ಸಂಗತಿಗಳನ್ನು ತಿಳಿದುಕೊಂಡಿದ್ದರೇ ಉತ್ತಮ. ಇದರಿಂದ ಸೂಕ್ತ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಾಗುವುದು. ಆಯಾ ದಿನದ ವ್ಯವಹಾರಗಳನ್ನು ಆಯಾ ದಿನವೇ ಬರೆದರೇ ನೆಮ್ಮದಿಯಿಂದ ವ್ಯವಹಾರ ಮಾಡಬಹುದು. ಶ್ರಮವಹಿಸಿ ದುಡಿಯುವ ತಾವು ಸರಕಾರಿ ಅಧಿಕಾರಿಗಳ ಮುಂದೆ ತಲೆ ತಗ್ಗಿಸಬಾರದು. ಯಾವತ್ತೂ ಹೊಂದಾಣಿಕೆಯ ಲೆಕ್ಕ ಇಡಬಾರದು ಎಂದು ಸಲಹೆ ನೀಡಿದರು.ಸನ್ಮಾನಗೊಂಡ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಕ್ಷಭೇದ ಮರೆತು ಯಾವುದೇ ಕಾರ್ಯವಿದ್ದರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ತಾವು ಬದ್ಧ. ವಾಣಿಜ್ಯೋದ್ಯಮ ಸಂಘಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ನಿವೇಶನ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ನಟರಾಜ ಮೂರಶಿಳ್ಳಿನ ದಂಪತಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ, ಹಜ್ ಯಾತ್ರೆ ಪೂರೈಸಿದ ಗೂಡುಸಾಬ್ ವೆಂಕಟಾಪುರ ಅವರನ್ನು ಸಂಸ್ಥೆಯ ಪರವಾಗಿ ಗುರುಮಹಾಂತ ಶ್ರಿಗಳು ಸನ್ಮಾನಿಸಿದರು. ವೀರಣ್ಣ ಬೆಳವಣಕಿ ಕಾರ್ಯಕ್ರಮ ನಿರೂಪಿಸಿದರು. ಗೋವಿಂದಪ್ಪ ಬಿಜ್ಜಲ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.