ಸೋಮವಾರ, ಮೇ 17, 2021
25 °C

ವಿಶ್ವೇಶ್ವರಯ್ಯ ಗುಣ ಅನುಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೆಲವು ಗುಣಗಳನ್ನಾದರೂ ಎಲ್ಲರೂ ಅಳವಡಿಸಿಕೊಳ್ಳಬೇಕು. ಆಗ ಯಾವುದೇ ಕಾರ್ಯವನ್ನು ಮಾಡುವುದು ಕಷ್ಟ ಎನಿಸುವುದಿಲ್ಲ~ ಎಂದು ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ ತಿಳಿಸಿದರು.ವಿಶ್ವೇಶ್ವರಯ್ಯನವರ 151ನೇ ಜಯಂತಿ ಪ್ರಯುಕ್ತ ಕರ್ನಾಟಕ ವಿದ್ಯುತ್ ನಿಗಮದ ಪದವೀಧರ ಎಂಜಿನಿಯರ್‌ಗಳ ಸಂಘ, ಮೆಕಾನಿಕಲ್ ಎಂಜಿನಿಯರ್‌ಗಳ ಸಂಘ ಹಾಗೂ ಡಿಪ್ಲೊಮಾ ಎಂಜಿನಿಯರ್‌ಗಳ ಸಂಘ ಸಂಯುಕ್ತವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಎಂಜಿನಿಯರ್‌ಗಳ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ವಿಶ್ವೇಶ್ವರಯ್ಯ ಕೇವಲ ಎಂಜಿನಿಯರ್‌ಗಳಿಗಷ್ಟೇ ಮಾದರಿಯಾಗಿಲ್ಲ. ಅವರ ಅನೇಕ ಗುಣಗಳು ಅನುಕರಣೀಯ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರು ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಅಂತಹ ಮಹನೀಯರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕಿದೆ. ಅವರ ಗುಣಗಳು ನಮ್ಮನ್ನು ದೊಡ್ಡವರನ್ನಾಗಿಸುತ್ತವೆ~ ಎಂದರು.`ಸೂರ್ಯ ಚಂದ್ರರು ಇರುವವರೆಗೂ ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಶಾಶ್ವತವಾಗಿರುತ್ತವೆ. ಅದೇ ರೀತಿ ವಿಶ್ವೇಶ್ವರಯ್ಯನವರ ವ್ಯಕ್ತಿತ್ವ ಕೂಡ ಶಾಶ್ವತವಾದುದು. ಸಮಯಪಾಲನೆ, ಶೀಲ, ಚಾರಿತ್ರ್ಯ, ಸತ್ಯ ನಿಷ್ಠೆ, ಸಂಯಮ, ಯೋಗ ಮುಂತಾದ 12 ಮಹತ್ವದ ಗುಣಗಳನ್ನು ಹೊಂದಿದ್ದರು~ ಎಂದರು.ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ, `ಎಲ್ಲಾ ಸಂದರ್ಭಗಳು ಎಂಜಿನಿಯರ್‌ಗಳು ಕನ್ಸಲ್ಟೆಂಟ್‌ಗಳ ಮೊರೆ ಹೋಗುವುದು ಸೂಕ್ತವಲ್ಲ. ಯೋಜನೆಯನ್ನು ಕನ್ಸಲ್ಟೆನ್ಸಿಗೆ ಯಾಕೆ ಒಪ್ಪಿಸಬೇಕು ಎನ್ನುವುದನ್ನಾದರೂ ಕನಿಷ್ಠ ಅರಿತಿರಬೇಕು. ಇಲ್ಲದೇ ಹೋದರೆ ಅವರು ತಂತ್ರಜ್ಞರು ಎನ್ನಿಸಿಕೊಳ್ಳುವುದಿಲ್ಲ. ಯೋಜನೆ ವಹಿಸಿದರೂ ಅದರ ಜವಾಬ್ದಾರಿ ಎಂಜಿನಿಯರ್‌ಗಳ ಮೇಲೆ ಇದ್ದು ಆ ಹೊಣೆ ಹೊರುವುದು ಗೊತ್ತಿರಬೇಕು~ ಎಂದರು.`ವಿಶ್ವೇಶ್ವರಯ್ಯ ಆರ್ಥಿಕ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಅಂದಿನ ಕಾಲದಲ್ಲಿಯೇ ರಾಜ್ಯವನ್ನು ಮುಂಚೂಣಿಗೆ ತಂದರು. ನಾವು ನಿರ್ವಹಿಸುವ ಕರ್ತವ್ಯ ಕೇವಲ ನಮಗಷ್ಟೇ ಸೀಮಿತವಾಗಿರುವುದಿಲ್ಲ. ಅದರಿಂದ ಒಂದು ಸಂಸ್ಥೆ, ರಾಜ್ಯ ಹಾಗೂ ಇಡೀ ವ್ಯವಸ್ಥೆಗೆ ಉಪಯೋಗವಾಗುತ್ತದೆ ಎಂಬುದನ್ನು ಅರಿಯಬೇಕು~ ಎಂದು ತಿಳಿಸಿದರು.ನಿಗಮದ ತಾಂತ್ರಿಕ ನಿರ್ದೇಶಕ ನಾರಾಯಣ ಪ್ರಸಾದ್, `ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದಿಂದ ನಿಗಮ ಪ್ರೇರಿತವಾಗಿದೆ. ಸಂವಹನ ಸಾಧನಗಳೇ ಇಲ್ಲದ ಕಾಲದಲ್ಲಿಯೂ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಅಂತಹ ಯೋಜನೆಗಳು ಕಿರಿಯರು ಅರಿಯಬೇಕಿದೆ~ ಎಂದು ಅಭಿಪ್ರಾಯಟ್ಟರು.`ಕೆಲವರು ಯೋಜನೆಗಳ ಬಗ್ಗೆ ತಿಳಿಯದೆ ಅಥವಾ ಅಪಾಯದ ಭೀತಿಯಿಂದ ಕನ್ಸಲ್ಟೆನ್ಸಿ ಮೊರೆ ಹೋಗುತ್ತಾರೆ.  ಕೈಗೆಟಕುವ ಯೋಜನೆಗಳನ್ನು ಎಂಜಿನಿಯರ್‌ಗಳೇ ನಿರ್ವಹಿಸಬೇಕು. ದೂರದೃಷ್ಟಿಯ ಎಂಜಿನಿಯರ್‌ಗಳಿಂದ ಇದು ಕಷ್ಟದ ಕೆಲಸವಲ್ಲ~ ಎಂದರು.ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಆರ್.ಶ್ರೀನಿವಾಸಮೂರ್ತಿ `ನಿರ್ಮಾಣ ಉದ್ಯಮದಲ್ಲಿ ಹೊಸ ಪರಿಕಲ್ಪನೆ ಹಾಗೂ ತಂತ್ರಜ್ಞಾನ~ ವಿಷಯ ಕುರಿತು ಉಪನ್ಯಾಸ ನೀಡಿದರು. ಪದವೀಧರ ಎಂಜಿನಿಯರ್‌ಗಳ ಸಂಘದ ಕೇಂದ್ರೀಯ ಸಮಿತಿ ಅಧ್ಯಕ್ಷ ಶಿವಮಲ್ಲು, ಸಂಘದ ಅಧ್ಯಕ್ಷ ಪ್ರಕಾಶ್ ಸಿ.ಬೇವೂರು ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.