ಸೋಮವಾರ, ಏಪ್ರಿಲ್ 19, 2021
28 °C

ವಿಶ್ವ ಕನ್ನಡ ಸಮ್ಮೇಳನಕ್ಕೆ ಕನ್ನಡ ತೇರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮಾರ್ಚ್ 11 ರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಜಿಲ್ಲೆಯಿಂದ ಕನ್ನಡದ ತೇರು ಮಾರ್ಚ್ 7 ರಂದು ಹೊರಡಲಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.ವಿಶ್ವ ಕನ್ನಡ ಸಮ್ಮೇಳನಕ್ಕೆ ಸ್ವಾಗತ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡದ ತೇರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಿ ಮಾರ್ಚ್ 10 ರಂದು ಬೆಳಗಾವಿಗೆ ತಲುಪಲಿದೆ. ಇದರ ಜತೆಯಲ್ಲಿ ಜಿಲ್ಲೆಯ ಕಲಾವಿದರ ತಂಡ ತೆರಳಲಿದ್ದು, ಕನ್ನಡದ ಕುರಿತು ಜಾಗೃತಿ ಮೂಡಿಸುವ ಹಾಡುಗಳನ್ನು ಪ್ರಸ್ತುತಪಡಿಸಲಿದೆ. ಸಮ್ಮೇಳನದ ಮೆರವಣಿಗೆಯಲ್ಲಿ ಜಿಲ್ಲೆಯ ಎರಡು ಕಲಾ ತಂಡಗಳು ನೇರವಾಗಿ ಬೆಳಗಾವಿಗೆ ತೆರಳಲಿವೆ ಎಂದು ಹೇಳಿದರು.ಉತ್ಸವದ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರಮುಖ ವೃತ್ತಗಳಲ್ಲಿ ಬ್ಯಾನರ್, ಕರಪತ್ರಗಳನ್ನು ಹಂಚುವ ಮೂಲಕ ಸಮ್ಮೇಳನದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಕನ್ನಡದ ಗೀತೆಗಳ ಕುರಿತು ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಬೇಕು. ವಿಶ್ವ ಕನ್ನಡ ಸಮ್ಮೇಳನದ ದಿನದಂದು ನಗರದ ಎಲ್ಲ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಿದರು.ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯ ವತಿಯಿಂದ ಆಕರ್ಷಕ ಸ್ತಬ್ಧ ಚಿತ್ರವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಸಿದ್ಧಪಡಿಸಲಾಗುವುದು. ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳು ತಮ್ಮ ನಾಮಫಲಕವನ್ನು ಪ್ರಮುಖವಾಗಿ ಕನ್ನಡದಲ್ಲಿ ಬರೆಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕಲಾವಿದರು, ಸಾಹಿತಿಗಳು, ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.