ವಿಷ್ಣುವರ್ಧನ್ ಸ್ಮಾರಕ: ಶೀಘ್ರ ಕಾಮಗಾರಿ ಆರಂಭ

ಬೆಂಗಳೂರು: ‘ಜನವರಿಯಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಟ ವಿಷ್ಣುವರ್ಧನ್ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಾಮಗಾರಿಗೆ ಈಗಾಗಲೇ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಸ್ಮಾರಕವನ್ನು ಧ್ಯಾನ, ಯೋಗ ಮತ್ತಿತರ ಚಟುವಟಿಕೆಗಳಿಂದ ಕೂಡಿದ ತಾಣವಾಗಿ ರೂಪಿಸಲು ಚಿಂತಿಸಲಾಗಿದೆ’ ಎಂದು ಅವರು ಹೇಳಿದರು.‘ಡಾ. ರಾಜ್‌ಕುಮಾರ್ ಅವರ ನಂತರ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ನಟ ವಿಷ್ಣುವರ್ಧನ್ ಆಗಿದ್ದು, ಅವರೊಬ್ಬ ಮಹಾನ್ ಕಲಾವಿದ’ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ಸಮಾಧಿ ಸ್ಥಳಕ್ಕೆ ಆಗಮಿಸಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ‘ಸ್ಮಾರಕ ನಿರ್ಮಾಣಕ್ಕೆ ಅಗತ್ಯ ವಿರುವ ಭೂಮಿ ಖರೀದಿಗೆ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 3 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದರು.ವಿಷ್ಣು ರಸ್ತೆ: ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಅನಂತಕುಮಾರ್ ಮಾತನಾಡಿ ‘ಕೆಂಗೇರಿಯಿಂದ ಸರ್ಜಾಪುರವರೆಗಿನ ಸುಮಾರು 30 ಕಿ.ಮೀ ಉದ್ದದ ರಸ್ತೆಗೆ ಡಾ. ವಿಷ್ಣುವರ್ಧನ್ ಅವರ ಹೆಸರಿಡಲು ತೀರ್ಮಾನಿ ಸಲಾಗಿದೆ. ಈ ಸಂಬಂಧ ಸಲ್ಲಿಸಲಾದ ಪ್ರಸ್ತಾವನೆಗೆ ಸರ್ಕಾರದಿಂದ ಅಂಗೀಕಾರ ದೊರೆತಿದೆ’ ಎಂದು ಹೇಳಿದರು.
ಚಲನಚಿತ್ರ ಸಂಸ್ಥೆ: ವಿಷ್ಣು ಅಳಿಯ ನಟ ಅನಿರುದ್ಧ ಮಾತನಾಡಿ ‘ವಿಷ್ಣು ನೆನಪಿನಲ್ಲಿ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ತರಬೇತಿ ಸಂಸ್ಥೆ (ಎಫ್‌ಟಿಐಐ) ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಪ್ಪಿದ್ದು ಅದು ಕಾರ್ಯಗತಗೊಂಡರೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಅಪಾರ ಅನುಕೂಲವಾಗಲಿದೆ. ಅಭಿಮಾನಿಗಳು ಸಮಾಜಕ್ಕೆ ಒಳಿತಾಗುವಂತಹ ಕಾರ್ಯಕ್ರಮದಲ್ಲಿ ತೊಡಗಬೇಕು’ ಎಂದು ಹೇಳಿದರು.
ನಟ ದೊಡ್ಡಣ್ಣ ಮಾತನಾಡಿ ‘ವಿಷ್ಣು ಅಗಲಿದ ದಿನ ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನವಾಗಿದೆ. ಅವರ ಸ್ಥಾನವನ್ನು ಮತ್ತೊಬ್ಬ ನಟ ತುಂಬಲು ಸಾಧ್ಯವಿಲ್ಲ. ಕನ್ನಡ ಕುಲಕೋಟಿಯ ಹೃದಯ ಸಿಂಹಾಸನದಲ್ಲಿ ಸಾಹಸ ಸಿಂಹ ಸದಾ ರಾರಾಜಿಸುತ್ತಾರೆ’ ಎಂದರು.ಗೃಹ ಸಚಿವ ಆರ್. ಅಶೋಕ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷೆ ಜಯಮಾಲಾ, ನಟರಾದ ಶಿವರಾಂ, ರಮೇಶ್ ಭಟ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಮತ್ತಿತರರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.