ಗುರುವಾರ , ಜುಲೈ 29, 2021
26 °C

`ವೀರಶೈವರಲ್ಲಿ ಪಂಕ್ತಿಭೇದ ತಾರತಮ್ಯ ಇಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಪಂಕ್ತಿಭೇದ, ತಾರತಮ್ಯ ವೀರಶೈವ ಧರ್ಮದಲ್ಲಿಲ್ಲ ಎಂದು ಬಾಳೆಹೊನ್ನೂರು ಮಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ `ಮಾಧ್ಯಮ ಮತ್ತು ಧರ್ಮ' ವಿಷಯ ಕುರಿತ  ಸಂವಾದ ಕಾರ್ಯಕ್ರಮದಲ್ಲಿ ಕೆಲವು ಮಠಗಳಲ್ಲಿರುವ ಪಂಕ್ತಿಬೇಧ ಕುರಿತು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಕೆಲವು ಮಾಧ್ಯಮಗಳಲ್ಲಿ ಸ್ವಾಮೀಜಿ ಭಕ್ತರಿಗೆ ನೋವುಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿವೆ ಎಂದಾಗ, ಮಠದ ಹೆಸರಿನಲ್ಲಿ ಆಶ್ರಮಗಳು ತಲೆಎತ್ತಿವೆ. ಸ್ವಾಮೀಜಿ ಹೆಸರಿನಲ್ಲಿ ವೇಷಧಾರಿಗಳು ಹುಟ್ಟಿಕೊಂಡಿದ್ದಾರೆ. ಈ ರೀತಿಯ ಖಾವಿ ವೇಷಧಾರಿಗಳು ತೋರುವ ಕೈಚಳಕ, ಮೋಡಿಗೆ ಭಕ್ತವರ್ಗ ಮರುಳಾಗಬಾರದು ಎಂದರು.ಇಂತಹ ವೇಷಧಾರಿಗಳ ಬಗ್ಗೆ ಮಠಗಳಿಂದ ಕಡಿವಾಣ ಹಾಕುವುದು ಅಸಾಧ್ಯ. ಕೆಲವರು ಏಳಿಗೆ ಸಹಿಸಿಕೊಳ್ಳದೆ ಈ ರೀತಿ ಮಾತನಾಡುತ್ತಿದ್ದಾರೆ ಎಂಬ ಮಾತುಗಳನ್ನು ಕೇಳಬೇಕಾಗುತ್ತದೆ. ಭಕ್ತರೇ ಇಂತಹವರನ್ನು ನಿರ್ಲಕ್ಷಿಸುವುದು ಸೂಕ್ತ ಎಂದರು. ಖಾವಿ ಧರಿಸಿದಾಕ್ಷಣ ಧರ್ಮಾಧಿಕಾರಿಗಳಾಗಲು ಸಾಧ್ಯವಿಲ್ಲ. ಸತ್ಯ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಮಠಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿಲ್ಲ. ಜನಪ್ರಿಯತೆ ಗಳಿಸಲು ಕೆಲವು ವೇಷಧಾರಿಗಳು ಮಾಧ್ಯಮದ ಮುಂದೆ ಕಾಣಿಸಿಕೊಂಡು ಹೇಳಿಕೆಗಳನ್ನು ನೀಡಲು ಹೋಗಿ ಎಡವಿ ಪಶ್ಚಾತ್ತಾಪ ಪಟ್ಟಿರುವ ನಿದರ್ಶನಗಳು ಇವೆ ಎಂದರು.ಹಿಂದೂ ದೇವತೆಗಳನ್ನು ವಿಕೃತವಾಗಿ ಕೆಲವರು ಚಿತ್ರಿಸುತ್ತಿರುವ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಇಂತಹ ಘಟನೆಗಳು ನಡೆದಾಗ, ಹಿಂದೂ ಧರ್ಮದವರು ಒಗ್ಗಟ್ಟನ್ನು ಪ್ರದರ್ಶಿಸಿ ಪ್ರತಿಭಟಿಸಬೇಕಾಗಿದೆ ಎಂದು ತಿಳಿಸಿದರು. ಉತ್ತರ ಖಂಡದಲ್ಲಿ ಮಳೆಯ ಪ್ರವಾಹಕ್ಕೆ ಸಿಲುಕಿ ಜನರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಆ ಸ್ಥಳಗಳಿಗೆ ಕೇದಾರನಾಥ ಸ್ವಾಮೀಜಿ ಭೇಟಿ ನೀಡಿದ್ದಾರೆ. ಬಾಳೆಹೊನ್ನೂರು ಮಠದಿಂದ ಅಗತ್ಯ ಸಾಮಗ್ರಿಗಳು ಮತ್ತು ಆರ್ಥಿಕ ನೆರವು ನೀಡುವ ಸಂದೇಶವನ್ನು ಈಗಾಗಲೇ ರವಾನಿಸಲಾಗಿದೆ ಎಂದು ತಿಳಿಸಿದರು.ಅಧಿಕಾರ ಮತ್ತು ಹಣದ ಬೆನ್ನು ಹತ್ತಿದ ಕೆಲವರು ಆಧ್ಯಾತ್ಮ ಮತ್ತು ಧರ್ಮಪರಿ ಪಾಲನೆಯಲ್ಲಿ ಒಲವು ತೋರದಿರುವುದು ಕಂಡು ಬರುತ್ತಿದೆ. ಈ ಕುರಿತು ಮಠಗಳು ಮತ್ತು ಧರ್ಮಪೀಠಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಕೆಲವು ಕ್ಷೇತ್ರಗಳಲ್ಲಿ ಧರ್ಮದ ಅಗತ್ಯತೆ ಇದೆ ಎಂದು ಹೇಳಿದರು. ಯಡಿಯೂರು ಮಠದ ರೇಣುಕಾ ಸ್ವಾಮೀಜಿ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭು ಲಿಂಗಶಾಸ್ತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.