ಶುಕ್ರವಾರ, ಜನವರಿ 17, 2020
24 °C

ವೇಗಿಗಳಿಗೆ ಹೀಗೇಕೆ ಬೆದರಿದರು...?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಗ್ರ ರ್‍ಯಾಂಕ್‌ನ ತಂಡ ಅಕ್ಷರಶಃ ನಡುಗಿ ಹೋಗಿದೆ... ಭಾರತ ಕ್ರಿಕೆಟ್‌ ತಂಡ ಈ ವರ್ಷ ತೋರಿದ ಆಟ ಕಂಡು ಕೆಲದಿನಗಳ ಹಿಂದಷ್ಟೇ ಎದುರಾಳಿಗಳು ತತ್ತರಿಸಿ ಹೋಗಿದ್ದರು. ಸತತ ಆರು ಏಕದಿನ ಸರಣಿ ಗೆದ್ದ ತಂಡವಿದು. ಕೊಹ್ಲಿ, ಶಿಖರ್‌, ರೋಹಿತ್‌ ಸಾವಿರ ರನ್‌ಗಳ ಗೋಪುರ ಕಟ್ಟಿದ್ದಾರೆ.

ಶಿಖರ್‌ ಈ ವರ್ಷ ವೊಂದರಲ್ಲೇ ಐದು ಶತಕ ಗಳಿಸಿದ್ದಾರೆ. ಕೊಹ್ಲಿ ನಾಲ್ಕು ಶತಕ ಪೇರಿಸಿದ್ದಾರೆ. ರೋಹಿತ್‌ ದ್ವಿಶತಕ ಬಾರಿಸಿದ್ದಾರೆ. ಈ ವರ್ಷ ಇಂಥ ಸಾಧನೆಯನ್ನು ಬೇರೆ ದೇಶದ ಯಾವ ಆಟಗಾರನೂ ಮಾಡಿಲ್ಲ. ಆದರೆ ಇಷ್ಟೆಲ್ಲಾ ಸಾಧನೆ ಮೂಲಕ ಅದ್ಭುತ ಫಾರ್ಮ್‌ನಲ್ಲಿದ್ದ ಈ ಆಟಗಾರರೆಲ್ಲಾ ಹರಿಣಗಳ ನಾಡಿನಲ್ಲಿ ವೇಗಿಗಳ ಎದುರು ತತ್ತರಿಸಿ ಹೋಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಈ ಆಟಗಾರರ ಸಾಧನೆ ಶೂನ್ಯ!

ಏಕೆ ಹೀಗಾಯಿತು...?

‘ಈ ಪ್ರವಾಸದಲ್ಲಿ ಸಚಿನ್‌ ತೆಂಡೂಲ್ಕರ್‌ ಅನುಪಸ್ಥಿತಿ ಕಾರಣ ಭಾರತ ತಂಡದ ಆಟಗಾರರ ಮನೋಸ್ಥೈರ್ಯ ಕುಗ್ಗಿದೆ. ತಂಡದ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ತೆಂಡೂಲ್ಕರ್‌ ಇದ್ದಿದ್ದರೆ ಭಾರತದ ಆಟಗಾರರಿಗೆ ಖಂಡಿತ  ಧೈರ್ಯ ಬರುತಿತ್ತು. ಸಚಿನ್‌ ಇಲ್ಲದ ಕಾರಣ ಉತ್ತಮ ಯೋಜನೆ ರೂಪಿಸಿ ಸರಣಿ   ಗೆಲ್ಲಲು ನಮಗೆ ಸಾಧ್ಯವಾಯಿತು’ ಎಂದು ದಕ್ಷಿಣ ಆಫ್ರಿಕಾ ತಂಡದ ಕೋಚ್‌ ರಸೆಲ್‌ ಡೊಮಿಂಗೊ ಹೇಳಿದ್ದಾರೆ.ಆದರೆ ಅವರ ಈ ಹೇಳಿಕೆ ಭಾರತ ತಂಡದ ಮನೋಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸುವಂತಿದೆಯೇ ಹೊರತು ನಿಜ ಸಂಗತಿಯಲ್ಲ. ಏಕೆಂದರೆ ಸಚಿನ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ವರ್ಷವೇ ಕಳೆದಿದೆ. ಆ ಅವಧಿಯಲ್ಲಿ ದೋನಿ ಬಳಗ ಅಮೋಘ ಪ್ರದರ್ಶನವನ್ನೇ ತೋರಿದೆ. ಇಂಗ್ಲೆಂಡ್‌ನಲ್ಲಿ ನಡೆದ ಮಿನಿ ವಿಶ್ವಕಪ್‌ (ಐಸಿಸಿ ಚಾಂಪಿಯನ್ಸ್‌ ಟ್ರೋಫಿ) ಜಯಿಸಿದೆ. ಕೆರಿಬಿಯನ್‌ ನಾಡಿನಲ್ಲಿ ತ್ರಿಕೋನ ಸರಣಿ ಗೆದ್ದಿದೆ. ಸ್ವದೇಶದಲ್ಲಿ ಆಸ್ಟ್ರೇಲಿಯಾ ಹಾಗೂ ವಿಂಡೀಸ್‌ ಎದುರಿನ ಏಕದಿನ ಸರಣಿಯಲ್ಲಿ ಜಯಭೇರಿ ಮೊಳಗಿಸಿದೆ. ಇದೆಲ್ಲಾ ಆಗಿದ್ದು ಸಚಿನ್‌ ಅನುಪಸ್ಥಿತಿಯಲ್ಲಿ.ನಿಜ ಹೇಳಬೇಕೆಂದರೆ 2011ರ ವಿಶ್ವಕಪ್‌ ಬಳಿಕ ಸಚಿನ್‌ ಹೇಳಿಕೊಳ್ಳುವಂಥ ಫಾರ್ಮ್‌ನಲ್ಲಿರಲಿಲ್ಲ. ಅದಕ್ಕೆ ಬದಲಾಗಿ ಕೊಹ್ಲಿ, ರೈನಾ, ನಾಯಕ ದೋನಿ ಅವರೇ ತಂಡದ ಆಧಾರಸ್ತಂಭವಾಗಿದ್ದರು. ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ್ದು ಈ ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಡುತ್ತದೆ. ಇನ್ನೊಂದು ಪ್ರಮುಖ ವಿಷಯವನ್ನು ಇಲ್ಲಿ ಹೇಳಲೇಬೇಕು.

ಅದೆಂದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ತೆಂಡೂಲ್ಕರ್‌ ಕೂಡ ಈ ಹಿಂದೆ ಹೇಳಿಕೊಳ್ಳುವಂಥ ಪ್ರದರ್ಶನವನ್ನೇನೂ ನೀಡಿಲ್ಲ. ಉಳಿದ ದೇಶಗಳಿಗೆ ಹೋಲಿಸಿದರೆ ಹರಿಣಗಳ ನಾಡಿನಲ್ಲಿ ಸಚಿನ್‌ ಸರಾಸರಿ ಕಡಿಮೆ. ಹಾಗಾಗಿ ಸಚಿನ್‌ ತಂಡದಲ್ಲಿದ್ದರೂ ಅಂಥ ಬದಲಾವಣೆ ಆಗುತ್ತಿರಲಿಲ್ಲ. ಈಗ ದಕ್ಷಿಣ ಆಫ್ರಿಕಾದ ಡೊಮಿಂಗೊ ನೀಡಿರುವ ಹೇಳಿಕೆ ‘ಮೈಂಡ್‌ ಗೇಮ್‌’ ಅಷ್ಟೇ. ಅವರ ಮಾತಿನಲ್ಲಿರುವ ಒಂದು ನಿಜಾಂಶ ಏನೆಂದರೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಸಚಿನ್‌ ಅವರ ಉಪಸ್ಥಿತಿ ಖಂಡಿತ ಆಟಗಾರರ ಮನೋಸ್ಥೈರ್ಯ ಹೆಚ್ಚಿಸುತಿತ್ತು ಎಂಬುದು. ಅದು ನಿಜ ಎನಿಸಿದರೂ ಕೊನೆಯಲ್ಲಿ ವೇಗದ ಪಿಚ್‌ ಹಾಗೂ ವೇಗದ ಬೌಲಿಂಗ್‌ಗೆ ಎದೆಕೊಡುವುದು ಆಟಗಾರರಲ್ಲವೇ?ಆದರೆ ಈ ಸರಣಿಯಲ್ಲಿ ಭಾರತ ತಂಡದವರು ಕಣಕ್ಕಿಳಿಯುವ ಮುನ್ನವೇ ಆತಿಥೇಯ ವೇಗಿಗಳ ಎದುರು ಮಾನಸಿಕವಾಗಿ ಅರ್ಧ ಕುಗ್ಗಿ ಹೋಗಿದ್ದರು. ಅವರಾಟದ ಶೈಲಿಯಲ್ಲಿಯೇ ಅದು ನಿಜವಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 141 ರನ್‌ಗಳ ಸೋಲು ಕಂಡರು. ವೇಗಿಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಶಾರ್ಟ್‌ ಪಿಚ್‌ ಎಸೆತ ಹಾಗೂ ಬೌನ್ಸರ್‌ಗಳಿಗೆ ಭಾರತದ ಯುವ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು. ಡೇಲ್‌ ಸ್ಟೇನ್‌, ವೆರ್ನಾನ್ ಫಿಲ್ಯಾಂಡರ್‌, ಮಾರ್ನ್‌ ಮಾರ್ಕೆಲ್‌ ಹಾಗೂ ಲೊನ್ವಾಬೊ ಸೊಸೊಬೆ ಎದುರು ಕೊಹ್ಲಿ, ಶಿಖರ್‌ ಆಟ ನಡೆಯಲಿಲ್ಲ.

ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿ ಪ್ರವಾಸಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಡರ್ಬನ್‌ನ ಪಿಚ್‌ ವೇಗಿಗಳಿಗೆ ಅಷ್ಟೇನು ನೆರವು ನೀಡುತ್ತಿರಲಿಲ್ಲ. ಆದರೂ ಭಾರತದ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲಿಲ್ಲ. ಮಹಿ ಪಡೆಯ ಬೌಲರ್‌ಗಳು ಕೂಡ ವಿಫಲರಾದರು. ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಸತತ ಮೂರು ಶತಕ, ನಾಯಕ ಎಬಿ ಡಿವಿಲಿಯರ್ಸ್‌, ಹಾಶಿಮ್‌ ಆಮ್ಲಾ ತಲಾ ಒಂದು ಶತಕ ಗಳಿಸಿದ್ದೇ ಅದಕ್ಕೆ ಸಾಕ್ಷಿ. ಮೂರನೇ ಪಂದ್ಯ ಮಳೆಗೆ ಆಹುತಿಯಾಗದಿದ್ದರೆ ಅದರಲ್ಲೂ ದೋನಿ ಬಳಗ ಸೋಲುತಿತ್ತೇನೋ?ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡದವರು 21 ವರ್ಷಗಳಿಂದ ಏಕದಿನ ಸರಣಿ ಗೆದ್ದಿರಲಿಲ್ಲ. ಈ ಬಾರಿಯೂ ಅವರ ಆಸೆ ಈಡೇರಲಿಲ್ಲ. ಮುಂದಿದೆ ಅಗ್ನಿಪರೀಕ್ಷೆ: ಭಾರತದ ತಳಮಳ ಇಲ್ಲಿಗೆ ನಿಂತಿಲ್ಲ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಬುಧವಾರ ಶುರುವಾಗಲಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಈ ವೇಗಿಗಳನ್ನು ಯಾವ ರೀತಿ ಎದುರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಕಾಮನಬಿಲ್ಲಿನ ನಾಡಿನಲ್ಲಿ ಭಾರತ ಇದುವರೆಗೆ ಟೆಸ್ಟ್‌ ಸರಣಿ ಕೂಡ ಗೆದ್ದಿಲ್ಲ. 1996ರಲ್ಲಿ ತೆಂಡೂಲ್ಕರ್‌ ಸಾರಥ್ಯದಲ್ಲಿ ಇಲ್ಲಿಗೆ ಪ್ರವಾಸ ಬಂದಿದ್ದಾಗ ಭಾರತ ತಂಡದವರು ಕೇವಲ ಮೂರು ದಿನಗಳೊಳಗೆ ಟೆಸ್ಟ್‌ ಪಂದ್ಯಗಳನ್ನು ಸೋತಿದ್ದ ನಿದರ್ಶನಗಳಿವೆ.

100 ರನ್‌ ಗಳಿಸಲೂ ಪರದಾಡಿದ್ದ ಸಂದರ್ಭವದು. ಡೊನಾಲ್ಡ್‌ ಹಾಗೂ ಪೊಲಾಕ್‌ ದಾಳಿಗೆ ಸಿಲುಕಿ ಡರ್ಬನ್‌ ಟೆಸ್ಟ್‌ನಲ್ಲಿ 66 ರನ್‌ಗಳಿಗೆ ಆಲೌಟ್‌ ಆಗಿದ್ದರು. ಈಗಲೂ ಪರಿಸ್ಥಿತಿ ಅದಕ್ಕಿಂತ ಭಿನ್ನವೇನಾಗಿಲ್ಲ. ಏಕದಿನ ಸರಣಿಯಲ್ಲಿ ಸೋತ ಆ ಅಂತರವೇ ಎಲ್ಲವನ್ನೂ ಬಿಚ್ಚಿಡುತ್ತದೆ. ಏಕದಿನ ಸರಣಿಯಲ್ಲಿ ಈ ರೀತಿ ಆಡಿದವರು ಟೆಸ್ಟ್‌ನಲ್ಲಿ ಏನು ಮಾಡುತ್ತಾರೆ ಎಂಬ ಆತಂಕ ಇದ್ದೇ ಇದೆ. ಸಚಿನ್‌ ವಿದಾಯದ ಬಳಿಕ ನಡೆಯುತ್ತಿರುವ ಮೊದಲ ಟೆಸ್ಟ್‌ ಸರಣಿ ಇದು.

ಈ ಸರಣಿಯಲ್ಲಿ ತೆಂಡೂಲ್ಕರ್‌ ಅನುಪಸ್ಥಿತಿ ಕಾಡಲಿದೆಯೇ ಎಂಬುದನ್ನು ಕಾದು ನೋಡಬೇಕು. ಏಕೆಂದರೆ ಟೆಸ್ಟ್‌ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸಚಿನ್‌ ಬ್ಯಾಟಿಂಗ್‌ಗೆ ಬರುತ್ತಾರೆ ಎಂಬ ಧೈರ್ಯ ಹಾಗೂ ಭರವಸೆಯಲ್ಲಿ ಉಳಿದ ಆಟಗಾರರು ಇರುತ್ತಿದ್ದರು. ಸಚಿನ್‌ ಉತ್ತಮ ಫಾರ್ಮ್‌ನಲ್ಲಿರಲಿ, ಬಿಡಲಿ. ಅವರ ಉಪಸ್ಥಿತಿಯೊಂದೇ ಎದುರಾಳಿ ಬೌಲರ್‌ಗಳಲ್ಲಿ ಆತಂಕ ಉಂಟು ಮಾಡುತಿತ್ತು. ಅದೆಲ್ಲಾ ಈಗ ಇತಿಹಾಸ.

ಹೇಗಿದ್ದಾರೆ ದಕ್ಷಿಣ ಆಫ್ರಿಕಾ ವೇಗಿಗಳು...?

ಡೇಲ್ ಸ್ಟೇನ್‌: ಸ್ಟೇನ್‌ ಸದ್ಯದ ನಂಬರ್‌ ಒನ್‌ ವೇಗಿ. ಅಮೋಘ ಫಾರ್ಮ್‌ ಎನ್ನುವುದಕ್ಕಿಂತ ಶರವೇಗ ದಲ್ಲಿ ಬೌಲ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಎಸೆತಗಳನ್ನು ಆಡುವುದು ಯಾವುದೇ ಬ್ಯಾಟ್ಸ್‌ ಮನ್‌ಗೆ ಕಷ್ಟ. ಈ ಬೌಲರ್‌ಗೆ ಸರಣಿಗೂ ಮುನ್ನ ಕೊಹ್ಲಿ ಸವಾಲು ಹಾಕಿದ್ದರು. ಆದರೆ ಆ ಸವಾಲಿನಲ್ಲಿ ಗೆದ್ದಿದ್ದು ಸ್ಟೇನ್‌. ಈ ವೇಗಿ ಈ ವರ್ಷ ಟೆಸ್ಟ್‌ನಲ್ಲಿ 41 ವಿಕೆಟ್‌ ಕಬಳಿಸಿದ್ದಾರೆ.ಹಾಗೇ, ಮಾರ್ನ್‌ ಮಾರ್ಕೆಲ್‌, ವೆರ್ನಾನ್‌ ಫಿಲ್ಯಾಂಡರ್‌, ಲೊನ್ವಾಬೊ ಸೊಸೊಬೆ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಯಶಸ್ಸಿಗೆ ಈ ವೇಗಿಗಳೇ ಕಾರಣ. ಸದ್ಯ ಈ ತಂಡದವರು ಟೆಸ್ಟ್‌ನಲ್ಲಿ ಅಗ್ರರ್‍ಯಾಂಕ್‌ ಹೊಂದಿದ್ದಾರೆ. ಸ್ವದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್‌ ಸರಣಿ ಸೋತಿಲ್ಲ. ಈ ಬೌಲರ್‌ಗಳು ಏಕದಿನ ಸರಣಿ ಯಲ್ಲಿ ಶಾರ್ಟ್‌ ಪಿಚ್‌ ಎಸೆತ ಹಾಗೂ ಬೌನ್ಸರ್‌ಗಳ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಯಶಸ್ಸು ಸಾಧಿಸಿದ್ದಾರೆ. ಈಗ ಟೆಸ್ಟ್‌ ಸರಣಿಗಾಗಿ ಕಾದಿದ್ದಾರೆ. ಈ ಬೌಲರ್‌ಗಳು ಏಕದಿನಕ್ಕಿಂತ ಟೆಸ್ಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಏಕದಿನ ಸರಣಿಯಲ್ಲಿ ಯಶಸ್ವಿಯಾಗಿದ್ದ ಸೊಸೊಬೆ ಟೆಸ್ಟ್‌ನಲ್ಲಿ ಆಡುತ್ತಿಲ್ಲ.

ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಸದ್ಯದ ವೇಗಿಗಳ ಸಾಧನೆ

ವೇಗಿಗಳು ಪ್ರಕಾರ ಪಂದ್ಯ ವಿಕೆಟ್‌ ಸರಾಸರಿ

ಡೇಲ್‌ ಸ್ಟೇನ್‌ ಟೆಸ್ಟ್‌ 67 340 22.65

ಏಕದಿನ 79 123 25.49

ಮಾರ್ಕೆಲ್‌ ಟೆಸ್ಟ್‌ 51 177 30.23

ಏಕದಿನ 73 124 23.54

ಫಿಲ್ಯಾಂಡರ್‌ ಟೆಸ್ಟ್‌ 18 95 17.50

ಏಕದಿನ 13 14 25.28

ಸೊಸೊಬೆ ಟೆಸ್ಟ್‌ 5 9 49.77

ಏಕದಿನ 61 94 24.96

ಪ್ರತಿಕ್ರಿಯಿಸಿ (+)