ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ನಿವಾರಣೆಗೆ ಆಗ್ರಹ

Last Updated 2 ಫೆಬ್ರುವರಿ 2011, 17:35 IST
ಅಕ್ಷರ ಗಾತ್ರ

ಶಿವಮೊಗ್ಗ:  ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಶುಶ್ರೂಷಕಿಯರ ಸಂಘದ ನೇತೃತ್ವದಲ್ಲಿ ಶುಶ್ರೂಷಕಿಯರು ಬುಧವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಆಸ್ಪತ್ರೆಯ ಆಧಾರಸ್ತಂಭವಾಗಿರುವ ಶುಶ್ರೂಷಕಿಯರು ದಿನದ 24ಗಂಟೆ ಕಾರ್ಯ ನಿರ್ವಹಿಸಿದರೂ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಜೀವನ ನಿರ್ವಹಣೆಗೂ ಪರದಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 6ಸಾವಿರ ಶುಶ್ರೂಷಕಿಯರಿದ್ದು, ಜಿಲ್ಲೆಯಲ್ಲಿ 300 ಜನ ಶುಶ್ರೂಷಕಿಯರಿದ್ದಾರೆ. ಇವರಿಗೆ ವೇತನದಲ್ಲಿ ತಾರತಮ್ಯ ಮಾಡಲಾಗಿದೆ. ಗಂಡಾಂತರ ಭತ್ಯೆ ಹೆಚ್ಚಿಸಿಲ್ಲ. ಸಾವಿರಾರು ಹುದ್ದೆಗಳು ಖಾಲಿ ಇವೆ. ಈವರೆಗೂ ಈ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಶುಶ್ರೂಷಕಿಯರು, ಈ ಎಲ್ಲ ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತ್ಯೇಕ ಶುಶ್ರೂಷಕ ನಿರ್ದೇಶನಾಲಯ ಹಾಗೂ ಸರ್ಕಾರಿ ವಸತಿ ಗೃಹಗಳ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು. ಗುತ್ತಿಗೆ ಆಧಾರಿತ ನೇಮಕಾತಿಯನ್ನು ರದ್ದುಗೊಳಿಸಿ, ಕಾಯಂ ಶುಶ್ರೂಷಕಿಯರನ್ನು ನೇಮಕಾತಿ ಮಾಡಿಕೊಳ್ಳಬೇಕು. ಸರ್ಕಾರಿ ಶುಶ್ರೂಷಕ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿರುವವರಿಗೆ ವಿದ್ಯಾರ್ಥಿವೇತನವನ್ನು 1ಸಾವಿರದಿಂದ 5ಸಾವಿರ ರೂಗೆ ಹೆಚ್ಚಿಸಬೇಕು. ಶುಶ್ರೂಕಿಯರಿಗೆ ರಾಜ್ಯ ಪ್ರಶಸ್ತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಶುಶ್ರೂಷಕಿಯರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ನವೀಕರಿಸಬೇಕು. ಸಮವಸ್ತ್ರಭತ್ಯೆ ಮತ್ತು ರಾತ್ರಿಪಾಳಿಯ ಭತ್ಯೆ ಹೆಚ್ಚಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. 

ಫೆ. 20ರ ಒಳಗೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷೆ ಚಂದ್ರಕಲಾ ಹೆಗ್ಡೆ, ಪದಾಧಿಕಾರಿಗಳಾದ ವಂದನಾ, ಹೊನ್ನಮ್ಮ, ಸಿ.ಎನ್. ಅನುಸೂಯಾ, ಯಶೋಧಾ ಮತ್ತಿತರರು ಅಪರ ಜಿಲ್ಲಾಧಿಕಾರಿ ಕೆ. ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT