ಗುರುವಾರ , ಜನವರಿ 23, 2020
27 °C

ವೇತನ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಇತ್ತೀಚೆಗೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ ನಡೆಸಿದ್ದ ಪಿಯು ಕಾಲೇಜು ಪ್ರಾಂಶುಪಾಲರ - ಉಪನ್ಯಾಸಕರ ವೇತನವನ್ನು ಸರ್ಕಾರ ತಡೆಹಿಡಿದಿದ್ದು, ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಧರಣಿ ಅವಧಿಯ ವೇತನ ತಡೆಹಿಡಿಯುವ ಅಧಿಕಾರ ಅಧಿಕಾರಿಗಳಿಗಿಲ್ಲ. ಪಿಯು ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂದೆ ಪಡೆಯಬೇಕು. ವೇತನ ಬಿಡುಗಡೆ ಮಾಡುವ ಮೂಲಕ ಉಪನ್ಯಾಸಕರ ನೋವು ನಿವಾರಣೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.ಮುಖ್ಯಮಂತ್ರಿಗಳು ಪ್ರಾಂಶುಪಾಲರು -ಉಪನ್ಯಾಸಕರ ಬೇಡಿಕೆಗಳನ್ನು 6ನೇ ವೇತನ ಆಯೋಗದಲ್ಲಿ ಈಡೇರಿಸುವ ಭರವಸೆ ನೀಡಿದ್ದು, ಅವರು ತಮ್ಮ ಮಾತಿಗೆ ತಕ್ಕಂತೆ ನಡೆಯಬೇಕು. ಇದೇ ಫೆ. ಅಂತ್ಯದೊಳಗೆ ವೇತನ ಆಯೋಗದ ವರದಿ ತರಿಸಿಕೊಂಡು, ಮಾರ್ಚ್‌ನಲ್ಲಿ ಮಂಡಿಸುವ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಅದಕ್ಕೂ ಮುಂಚೆ ವಿಧಾನ ಪರಿಷತ್ ಸದಸ್ಯರು, ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ವೇತನ ತಾರತಮ್ಯ ನಿವಾರಣೆಗೆ ಮುಂದಾಗಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.6ನೇ ವೇತನ ಆಯೋಗದ ವರದಿಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ ನಿವಾರಣೆಯಾಗಬೇಕು. ಸಹಶಿಕ್ಷಕರಿಂದ ಮುಖ್ಯ ಶಿಕ್ಷಕ ಹುದ್ದೆಗೆ ಭರ್ತಿಗಾಗಿ ಕಾದಿರುವ 1,366 ಶಿಕ್ಷಕರಿಗೆ ಬಡ್ತಿ ನೀಡಬೇಕು. 1 ಸಾವಿರ ಅರ್ಹ ಸಹ ಶಿಕ್ಷಕರಿಗೆ ಪಿಯು ಕಾಲೇಜು ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡಬೇಕು.ಅದೇ ರೀತಿ 300 ಅರ್ಹ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಭರ್ತಿ ನೀಡಬೇಕು. ಅನುದಾನಿತ ಶಿಕ್ಷಣ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರಿ ಶಾಲೆ ಸಿಬ್ಬಂದಿಗೆ ಸಿಗುವ ಎಲ್ಲ ಸವಲತ್ತು ಅನುದಾನಿತ ಸಂಸ್ಥೆ ಸಿಬ್ಬಂದಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಹೆಲ್ತ್‌ಕಾರ್ಡ್ ಸೌಲಭ್ಯ ಕಲ್ಪಿಸಬೇಕು. ತಾವು ಶಾಸಕರಾದ ನಂತರ ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿದ್ದೇನೆ. ತಮ್ಮ ಅನುದಾನದಲ್ಲಿ ಹಿರಿಯೂರು ತಾಲ್ಲೂಕಿಗೆ ರೂ. 25.25 ಲಕ್ಷ ನೀಡಿದ್ದೇನೆ. ಜಿಲ್ಲೆಗೆ ರೂ. 123.50 ಲಕ್ಷ ನೀಡಲಾಗಿದೆ.

 

ಜತೆಗೆ, ತಾಲ್ಲೂಕಿನಲ್ಲಿ ಅಕಾಲಿಕ ಸಾವು, ಅನಾರೋಗ್ಯಕ್ಕೆ ಒಳಗಾದವರಿಗೆ ರೂ.2 ಲಕ್ಷ ನೆರವು ನೀಡಿದ್ದೇನೆ. ಜಿಲ್ಲೆಗೆ ರೂ. 6 ಲಕ್ಷ ಕೊಟ್ಟಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ. 1.50 ಲಕ್ಷ ನೆರವು ಕೊಡಿಸಿದ್ದೇನೆ. 12 ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಸಹಾಯ ಮಾಡಿದ್ದೇನೆ. ಕಪ್ಪುಚುಕ್ಕೆಯ ರಾಜಕಾರಣ ಮಾಡಿಲ್ಲ. ಟೀಕೆ ಮಾಡುವವರಿಗೆ ತಮ್ಮ ಸಾಧನೆಗಳೇ ಉತ್ತರ ನೀಡುತ್ತವೆ ಎಂದು ನಾರಾಯಣಸ್ವಾಮಿ ತಿಳಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ಯಾದವ್, ಎಚ್. ತಿಪ್ಪೇಸ್ವಾಮಿ, ಸಿ. ಶಿವಾನಂದ, ರಾಮಚಂದ್ರಪ್ಪ, ಆರ್. ಗುರುಸ್ವಾಮಿ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)