ಮಂಗಳವಾರ, ಮೇ 24, 2022
27 °C

ವೈದ್ಯಕೀಯ ಪ್ರಮಾಣ ಪತ್ರ ನೀಡಲು ರೂ.5000 ಬೇಡಿಕೆ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ವೈದ್ಯಕೀಯ ಪ್ರಮಾಣಪತ್ರ ನೀಡಲು ರೋಗಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ನಗರದ ಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ, ಡಾ. ಸಿ.ಮಂಜುನಾಥ್ ಹಾಗೂ ಸಹಾಯಕ ನಾಗೇಶ್‌ಅವರನ್ನು ಬುಧವಾರ ಬೆಳಿಗ್ಗೆ ಲೋಕಾಯುಕ್ತ ಎಸ್ಪಿ ಎ.ಎನ್. ಸ್ವಾಮಿ ನೇತೃತ್ವದ ತಂಡ ಬಂಧಿಸಿದೆ.ತಾಲ್ಲೂಕಿನ ಇಗ್ಗಲೂರು ಗ್ರಾಮದ ಸೋಮಶೇಖರ್ 7 ತಿಂಗಳ ಹಿಂದೆ ಅಪಘಾತಕ್ಕೀಡಾಗಿ ಇದೇ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಲು ಅಗತ್ಯವಿದ್ದ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ವೈದ್ಯರನ್ನು ವಿನಂತಿಸಿದ್ದಾರೆ. ಪ್ರಮಾಣ ಪತ್ರ ಕೊಡಲು 5 ಸಾವಿರ ರೂಪಾಯಿ ನೀಡುವಂತೆ ವೈದ್ಯರು ಒತ್ತಾಯಿಸಿದ್ದರು.ಈ ಸಂಬಂಧ ಸೋಮಶೇಖರನ ತಾಯಿ ದುಂಡಮ್ಮ, ಲೋಕಾಯುಕ್ತ ಎಸ್ಪಿ ಅವರಿಗೆ ದೂರು ನೀಡಿದ್ದರು. ಬುಧವಾರ ಬೆಳಿಗ್ಗೆ ಸಹಾಯಕ ನಾಗೇಶ್‌ನ ಮುಖಾಂತರ 3ಸಾವಿರ ರೂಪಾಯಿ ಲಂಚ ಪಡೆದು ಇನ್ನುಳಿದ 2 ಸಾವಿರ ರೂಪಾಯಿಗಾಗಿ ಡಾ.ಮಂಜುನಾಥ್ ಒತ್ತಾಯಿಸುತ್ತಿದ್ದಾಗ ಲೋಕಾಯುಕ್ತ ಡಿಎಸ್ಪಿ ಮಂಜಪ್ಪ, ಇನ್ಸ್‌ಪೆಕ್ಟರ್ ಗೌತಮ್ ಮತ್ತು ತಂಡದವರು ದಾಳಿ ನಡೆಸಿ ದಾಖಲೆ ಸಹಿತ ಬಂಧಿಸಿದ್ದಾರೆ.ಡಾ. ಮಂಜುನಾಥ್ ಮೇಲೆ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದೂರುಗಳು ಈ ಹಿಂದೆಯೂ ಕೇಳಿ ಬಂದಿದ್ದವು. ದುಂಡಮ್ಮ ನೀಡಿದ ದೂರಿನನ್ವಯ ದಾಳಿ ನಡೆಸಿದ್ದಾಗಿ ಲೋಕಾಯುಕ್ತ ಎಸ್ಪಿ ಎ.ಎನ್.ಸ್ವಾಮಿ ತಿಳಿಸಿದರು. ವೈದ್ಯ ಹಾಗೂ ಸಹಾಯಕ ಇಬ್ಬರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.ಲಂಚದ ಆಗರ:
ಇಡೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ವಿರುದ್ಧ ರೈತ ಸಂಘ ಹಾಗೂ ಇನ್ನಿತರ ಜನಪರ ಸಂಘಟನೆಗಳು ಈಗಾಗಲೇ ಹಲವಾರು ಬಾರಿ ಪ್ರತಿಭಟನೆ ನಡೆಸಿವೆ. ವೈದ್ಯರು, ಸಿಬ್ಬಂದಿಗೆ ಎಚ್ಚರಿಕೆ ನೀಡಿವೆ. ಆದರೂ ಆಸ್ಪತ್ರೆಯ ಲಂಚಾವತಾರ ನಿಲ್ಲಲಿಲ್ಲ.ಮಕ್ಕಳ ತಜ್ಞರಿಗೆ ಹಣ ನೀಡದಿದ್ದರೆ, ಮಕ್ಕಳನ್ನು ಮುಟ್ಟಿಯೂ ನೋಡುವುದಿಲ್ಲ. ಕೆಲವು ದಾದಿಯರು ಹೆರಿಗೆಗೆ ಬರುವ ಗರ್ಭಿಣಿಯರಿಂದ ಬಲವಂತವಾಗಿ ಹಣ ವಸೂಲು ಮಾಡುತ್ತಾರೆ. ಅನಧಿಕೃತ ನೌಕರರ ದರ್ಬಾರು ಆಸ್ಪತ್ರೆಯಲ್ಲಿ ತೀವ್ರಗೊಂಡಿದೆ. ಆಡಳಿತಾಧಿಕಾರಿಗಳು ಇದರತ್ತ ಗಮನ ಹರಿಸುತ್ತಿಲ್ಲ.

ಆಸ್ಪತ್ರೆಗೆ ಬರುತ್ತಿರುವ ಬಡರೋಗಿಗಳಿಗೆ ಸ್ಪಂದಿಸುವುದಿಲ್ಲ ಎಂದು ಬುಧವಾರ ಲೋಕಾಯುಕ್ತರು ಆಸ್ಪತ್ರೆ ಮೇಲೆ ದಾಳಿ ಮಾಡಿದ ವೇಳೆ ಸಾರ್ವಜನಿಕರು ಟೀಕೆಗಳ ಸುರಿಮಳೆಗೈದರು.

‘ತಮ್ಮ ಬಾಕಿ ಇರುವ ಬಿಲ್‌ಗಳನ್ನು ಮಾಡಿಕೊಡುವುದಕ್ಕೆ ಅನಗತ್ಯ ಕಿರುಕುಳ ನೀಡುತ್ತಾರೆ’ ಎಂದು ಸಹಾಯಕ ಆಡಳಿತಾಧಿಕಾರಿ ವಿರುದ್ಧ ದಾದಿಯೊಬ್ಬರು ಬುಧವಾರ ಲೋಕಾಯುಕ್ತ ಎಸ್ಪಿ ಅವರಿಗೆ ದೂರು ನೀಡಿದ್ದು ಈ ಆಸ್ಪತ್ರೆಯಲ್ಲಿರುವ ದುರಾಡಳಿತಕ್ಕೆ ಸಾಕ್ಷಿಯಾಯಿತು.ಒಂದೆಡೆ ಲಂಚಾವತಾರ, ಇನ್ನೊಂದೆಡೆ ಕೆಟ್ಟಿರುವ ಸ್ಕ್ಯಾನರ್ 8 ತಿಂಗಳಿಂದ ದುರಸ್ಥಿಯಾಗಿಲ್ಲ. ಇದರಿಂದಾಗಿ ಬಡರೋಗಿಗಳು ವಿಧಿ ಇಲ್ಲದೆ ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್ ಮಾಡಿಸುವ ಸ್ಥಿತಿ ಬಂದೊದಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.