ಗುರುವಾರ , ಮಾರ್ಚ್ 4, 2021
18 °C
ಚಿನ್ನಾಭರಣ ಪ್ರದರ್ಶನ ಮೇಳಗಳಲ್ಲಿ ಕೈಚಳಕ

ವೈದ್ಯೆ ಬಂಧನ: ರೂ. 32 ಲಕ್ಷದ ಒಡವೆ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯೆ ಬಂಧನ: ರೂ. 32 ಲಕ್ಷದ ಒಡವೆ ಜಪ್ತಿ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾ­ಭರಣ ಪ್ರದರ್ಶನ ಮೇಳಗಳಿಗೆ ಹೋಗಿ ಆಭರಣ ಕಳವು ಮಾಡುತ್ತಿದ್ದ ಕಲ್ಪನಾ (51) ಎಂಬ ವೈದ್ಯೆ ಪೊಲೀಸ್‌ ಬಲೆಗೆ ಬಿದ್ದಿದ್ದಾಳೆ.ಎಂಬಿಬಿಎಸ್ ಪದವೀಧರೆಯಾದ ಕಲ್ಪನಾ, ಬಸವೇಶ್ವರನಗರದಲ್ಲಿ ವಾಸ­ವಾಗಿ­ದ್ದಾರೆ. ಮನೆ ಸಮೀಪವೇ ಸ್ವಂತ ಕ್ಲಿನಿಕ್‌ ನಡೆಸುತ್ತಿದ್ದ ಅವರು, ಕೆಲ ತಿಂಗ­ಳಿಂದ ವೈದ್ಯ ವೃತ್ತಿಯಿಂದ ಹಿಂದೆ ಸರಿ­ದಿದ್ದರು. ಅವರ ಪತಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ವ್ಯವಸ್ಥಾಪಕ­ರಾಗಿದ್ದಾರೆ.ದಂಪತಿಗೆ ಇಬ್ಬರು ಮಕ್ಕ­ಳಿದ್ದು, ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.ಇತ್ತೀಚೆಗೆ ಸುಬ್ರಹ್ಮಣ್ಯನಗರದ ಶೆರ­ಟನ್‌ ಹೋಟೆಲ್‌ನಲ್ಲಿ ಆಯೋಜಿಸಿದ್ದ ಚಿನ್ನಾ­­ಭರಣ ಪ್ರದ­ರ್ಶನ ಮೇಳದಲ್ಲಿ ಕಲ್ಪನಾ ತನ್ನ ಕೈ­ಚಳಕ ತೋರಲೆ­ತ್ನಿ­ಸಿ­ದ್ದಳು. ಆಗ ಮಫ್ತಿ­­ಯಲ್ಲಿದ್ದ ಪೊಲೀಸರು ಆಕೆ­ಯನ್ನು ಬಂಧಿಸಿ, ₨ 32 ಲಕ್ಷ ಮೌಲ್ಯದ ಆಭರಣಗಳನ್ನು  ವಶಪಡಿಸಿ­ಕೊಂಡಿ­ದ್ದಾರೆ.2008ರಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿ­ಯಾಗಿದ್ದ ಆಕೆಯನ್ನು ಸುಬ್ರಹ್ಮಣ್ಯ­ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ­ದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಕಲ್ಪನಾ, ಪುನಃ ತನ್ನ ಕೃತ್ಯವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.ಇದೇ ಫೆಬ್ರುವರಿ ತಿಂಗಳಲ್ಲಿ ಜಯ­ಮಹಲ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಚಿನ್ನಾ­ಭ­ರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆದಿತ್ತು. ಅಲ್ಲಿಗೆ ಹೋಗಿದ್ದ ಕಲ್ಪನಾ, ವ್ಯಾಪಾರಿಯ ಗಮನ ಬೇರೆಡೆ ಸೆಳೆದು 75 ಗ್ರಾಂ  ತೂಕದ ಚಿನ್ನದ ಸರ ಕದ್ದು ಪರಾರಿ­ಯಾಗಿದ್ದಳು. ಈ ಸಂಬಂಧ ವ್ಯಾಪಾರಿ ಜೆ.ಸಿ.ನಗರ ಠಾಣೆಗೆ ದೂರು ಕೊಟ್ಟಿದ್ದರು.ತನಿಖೆ ಕೈಗೆತ್ತಿಕೊಂಡ ಉತ್ತರ ವಿಭಾಗದ ಪೊಲೀಸರು, ಹೋಟೆಲ್‌­ನಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾ­ಗಳನ್ನು ಪರಿಶೀಲಿಸಿದಾಗ ಆರೋಪಿ ಮಹಿಳೆ ಎಂದು ತಿಳಿದಿತ್ತು. ಆದರೆ, ಚಹರೆ ಸ್ಪಷ್ಟವಾಗಿ  ಕಾಣದ ಕಾರಣ ಆಕೆ ಕಲ್ಪನಾ ಎಂದು ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ.ಈ ಪ್ರಕರಣ ದಾಖಲಾದ ಕೆಲವೇ ದಿನ­ಗಳಲ್ಲಿ ಶೆರಟನ್‌ ಹೋಟೆಲ್‌ನಲ್ಲಿ ಮತ್ತೊಂದು ಮೇಳ ನಡೆಯಿತು. ಈ ಮಾಹಿತಿ ಪಡೆದ ತನಿಖಾಧಿಕಾರಿಗಳು, ಆಕೆ ಕಳವು ಮಾಡಲು ಅಲ್ಲಿಗೂ ಹೋಗ­ಬಹುದು ಎಂದು ಶಂಕಿಸಿದ್ದಾರೆ. ನಂತರ ಮಫ್ತಿಯಲ್ಲಿ ಮೇಳಕ್ಕೆ ಹೋದಾಗ ಕಲ್ಪನಾ ಅಲ್ಲಿಗೆ ಬಂದಿ­ದ್ದಾಳೆ. ಕೂಡಲೇ ಪೊಲೀಸ್‌ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ­ದೊಯ್ದಿದ್ದಾರೆ.

‘ಆಭರಣ ಕಳವು ಮಾಡುವ ಉದ್ದೇಶ­ದಿಂದ ಮೇಳಕ್ಕೆ ಬಂದಿದ್ದಾಗಿ ಆಕೆ ಹೇಳಿಕೆ ಕೊಟ್ಟಿದ್ದಾಳೆ.ಅಲ್ಲದೆ,   ಜೆ.ಸಿ.­ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆಕೆ ಒಪ್ಪಿಕೊಂಡಿ­ದ್ದಾಳೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ವಿನ್ಯಾಸದ ಒಡವೆ ತೊಡುವ ಖಯಾಲಿ

‘ಬಳೆ, ನಕ್ಲೆಸ್‌ ಸೇರಿದಂತೆ ಹೊಸ ವಿನ್ಯಾಸದ ಆಭರಣಗಳನ್ನು ತೊಟ್ಟು ಶೋಕಿ ಮಾಡುವುದು ಕಲ್ಪನಾಳ ಖಯಾಲಿ. ಹೀಗಾಗಿ ಮನೆಯಲ್ಲಿ ಸಾಕಷ್ಟು ಆಭರಣ ಇದ್ದರೂ, ನಗರ­ದಲ್ಲಿ ನಡೆಯುವ ಚಿನ್ನಾಭರಣ ಪ್ರದ­­ರ್ಶನ ಮೇಳಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗುತ್ತಿದ್ದಳು. ನಂತರ ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ತನಗೆ ಬೇಕೆನಿಸಿದ ಆಭರಣವನ್ನು ಮಾತ್ರ ದೋಚುತ್ತಿ­ದ್ದಳು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.