ಬುಧವಾರ, ಮೇ 25, 2022
22 °C

ವೈಭವದ ಪುಣ್ಯಾರಾಧನೆ, ಕಳಸಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಸುಕ್ಷೇತ್ರ ಐರಾವತ ಐರಣಿ ಹೊಳೆಮಠದಲ್ಲಿ ಗುರವಾರ ಮುಪ್ಪಿನಾರ್ಯ ಸ್ವಾಮೀಜಿ ಅವರ ಪುಣ್ಯಾರಾಧನೆ ಅಂಗವಾಗಿ ಸಹಸ್ರ ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವಯುತವಾಗಿ ನಡೆದವು.ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಧರ್ಮಸಭೆ, ಸಾಮೂಹಿಕ ವಿವಾಹ ಹಾಗೂ ಮಾಕನೂರು ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ನೂತನವಾಗಿ ನಿರ್ಮಿಸಿದ ಬೃಹತ್ ಮಹಾದ್ವಾರದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ನಡೆದವು. ಐರಣಿ ಮಠದಿಂದ 9 ಕಳಶಗಳನ್ನು ಸಾಧು ಸದ್ಭಕ್ತರು ಸಕಲ ವಾದ್ಯಗಳೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಮಾಕನೂರು ಕ್ರಾಸ್‌ನ ಮಹಾದ್ವಾರಕ್ಕೆ ತರಲಾಯಿತು.25 ಸಾವಿರ ರೂಪಾಯಿ ಬೆಲೆಯ ಕಳಶಗಳು ಹಾಗೂ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರವ ಮಹಾದ್ವಾರವನ್ನು ಲೋಕಾರ್ಪಣೆ ಮಾಡಲಾಯಿತು. ಮಹಾದ್ವಾರಕ್ಕೆ ಬುಧವಾರ ಪೀಠಾಧಿಪತಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಕಳಸಾರೋಹಣ ನೆರವೇರಿಸಿದರು.ಸಾಣೆಹಳ್ಳಿ ತರಳಬಾಳು ಜಗದ್ಗುರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸಾಮೀಜಿ ಅವರು ಸಂಜೆ ನೂತನ ಮಹಾದ್ವಾರವನ್ನು ಉದ್ಘಾಟಿಸಿದರು.ಶಾಸಕ ರುದ್ರಪ್ಪ ಲಮಾಣಿ, ಬಾಬು ಐರಣಿ, ನಾಗಪ್ಪ ಪು.ಶೆಟ್ಟರ, ಎಂಎಂಪಿ ಕುಮಾರ, ಮುದ್ಲಿಂಗಪ್ಪ ಧೂಳೆಹೊಳೆ, ಸತೀಶಗೌಡ ಮಲ್ಲನಗೌಡ್ರ, ಜ್ಯೋತಿ ಸತೀಶಗೌಡ, ಶ್ರುತಿ, ಶಿವಯ್ಯ ದಾವಣಗೆರೆ, ಮಂಜುನಾಥ ರಡ್ಡಿ,  ಶಿವಾನಂದ ದಾವಣಗೆರೆ, ನಾಗರಾಜ ದಾವಣಗೆರೆ, ಮಂಜುನಾಥ, ನಾಗಪ್ಪ ಕೆಂಚನಹಳ್ಳಿ, ದಾನಪ್ಪಗೌಡ್ರ, ಶಿವಾಜೆಪ್ಪ ದಾವಣಗೆರೆ, ರುದ್ರಪ್ಪ ಐರಣಿ, ಅಣ್ಣಪ್ಪ ಸಪ್ಪಾಳಿ, ಪರಮೇಶ  ಮುಂತಾದವರು ಹಾಜರಿದ್ದರು.ಸುಕ್ಷೇತ್ರ ಐರಾವತ ಐರಣಿ ಹೊಳೆಮಠದ ಗುರು ಮುಪ್ಪಿನಾರ್ಯ ಸ್ವಾಮೀಜಿ, ಪುಣ್ಯಾರಾಧನೆ, ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅವರ ಅಂಬಾರಿ ಉತ್ಸವ, ತುಲಾಭಾರ, ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಮಹಾದ್ವಾರದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಹೊಳೆಮಠದ ಬಸವರಾಜದೇಶಿಕೇಂದ್ರ ಸ್ವಾಮೀಜಿ ಹಾಗೂ ಭಕ್ತರು ಸನ್ಮಾನಿಸಿದರು.

`ಯಾತ್ರಿ ನಿವಾಸ, ಶೌಚಾಲಯ ನಿರ್ಮಾಣಕ್ಕೆ ಯತ್ನ'

ರಾಣೆಬೆನ್ನೂರು:`ಸುಕ್ಷೇತ್ರ ಐರಣಿ ಮಠದಲ್ಲಿ ಯಾತ್ರಿ ನಿವಾಸ, ಶೌಚಾಲಯ ನಿರ್ಮಾಣ ಮಾಡಲು  ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.ಪುಣ್ಯಾರಾಧನೆ ಅಂಗವಾಗಿ ಭಕ್ತಾದಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರ, ಹಿಂದಿನ ಲೊಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಎಂದು ಕೊಂಡಿದ್ದೆ. ಇಲ್ಲಿ ನೋಡಿದರೆ ಸಮಸ್ಯೆಗಳ ಆಗರವೇ ತುಂಬಿದೆ. ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸುತ್ತೇನೆ ಎಂದರು.ಸಚಿವರು ಧರ್ಮಸಭೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ನೇರವಾಗಿ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದು ತೆರಳಿದರು. ಇದರಿಂದ ಸಾರ್ವಜನಿಕರು ಬೇಸರಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.