ಭಾನುವಾರ, ಮಾರ್ಚ್ 7, 2021
22 °C
ಹಾಸನ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌

ವೈಯಕ್ತಿಕ ನಿಲುವಿಗಿಂತ ಪಕ್ಷದ ಆದೇಶಕ್ಕೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಯಕ್ತಿಕ ನಿಲುವಿಗಿಂತ ಪಕ್ಷದ ಆದೇಶಕ್ಕೆ ಶರಣು

ಕಡೂರು: ಆರಂಭದಿಂದಲೂ ಶಿಸ್ತು ಮತ್ತು ಸಂಯಮದ ಪಕ್ಷದ ಪದಾತಿಯಾಗಿರುವ ತಾವು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ಆದೇಶಕ್ಕೆ ಮನ್ನಣೆ ನೀಡಿ ಹಾಸನ ಲೋಕಸಭಾ ಕ್ಷೇತ್ರದ ಹುರಿಯಾಳಾಗಿ ಕಣದಲ್ಲಿದ್ದೇನೆ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.ಪಟ್ಟಣದ ನಂದಿ ಕ್ರೀಡಾಭವನದಲ್ಲಿ ಭಾನುವಾರ ಕಡೂರು ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.‘ಮೂಲತಃ ಮೈಸೂರು ಜಿಲ್ಲೆಯಲ್ಲಿ ನೆಲೆ ಕಂಡುಕೊಂಡ ನನಗೆ ಪಕ್ಷ ಸಂಸದ, ಸಚಿವ, ಶಾಸಕ ಹುದ್ದೆಗಳನ್ನು ನೀಡಿ ಗೌರವಿಸಿದೆ. ಈ ಕಾರಣದಿಂದ ಮೈಸೂರು ಕ್ಷೇತ್ರದ ಅಭ್ಯರ್ಥಿಯಾಗಲು ಮೊದಲು ಇಚ್ಛಿಸಿದ್ದು ಹೌದು. ಆದರೆ ಪಕ್ಷ ನೀಡಿದ ನಿರ್ದೇಶನದಂತೆ ಆತ್ಮಸಂತೋಷದಿಂದ ಕಣಕ್ಕಿಳಿದಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪರಿಶ್ರಮ ಮತ್ತು ಮೋದಿ ವರ್ಚಸ್ಸಿನ ಮೂಲಕ ಗೆಲುವುಸಾಧಿಸಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರದ ಯುಪಿಎ ಸರ್ಕಾರ ಅನುಕೂಲ ಸಿಂಧು ರಾಜಕಾರಣ ಅನುಸರಿಸುತ್ತಿದ್ದು, ಈ ಸರ್ಕಾರವನ್ನು ಕಿತ್ತೆಸೆಯಬೇಕಾದ ಅಗತ್ಯವಿದೆ. ತೃತೀಯರಂಗ ಅಧಿಕಾರ ಹಿಡಿದಾಗ ಮಧ್ಯಂತರ ಚುನಾವಣೆಗಳು ನಡೆದು ದೇಶದ ಬೊಕ್ಕಸಕ್ಕೆ ಹೊರೆಯಷ್ಟೇ ಇದರ ಸಾಧನೆಯಾಗಿದೆ. ದೇಶಕ್ಕೆ ಸುಭದ್ರ ಮತ್ತು ದಕ್ಷ ಆಡಳಿತದ ನಿರೀಕ್ಷೆ ಇದ್ದು ನರೇಂದ್ರಮೋದಿ ಈ ಎಲ್ಲ ಭರವಸೆಗಳನ್ನ ಈಡೇರಿಸಬಲ್ಲರು ಎಂಬ ಭರವಸೆ ಇದೆ.ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು ಕಾರ್ಯಕರ್ತರ ಶ್ರಮದ ಮೇಲೆ ಗೆಲುವು ಸಾಧ್ಯವಿದೆ. ಇದೇ 24 ಸೋಮವಾರ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿಯೂ ಮತದಾರರು ಬಿಜೆಪಿ ಬೆಂಬಲಿಸಬೇಕಾಗಿಯೂ ಅವರು ಮತದಾರರಲ್ಲಿ ಮನವಿ ಮಾಡಿದರು.ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್‌ ಮಾತನಾಡಿ, ‘ನಾನು ಯಾವುದೇ ಆಕಾಂಕ್ಷೆ ಇಟ್ಟುಕೊಂಡು ಬಿಜೆಪಿ ಸೇರ್ಪಡೆಯಾಗಿಲ್ಲ. ಅಭಿವೃದ್ಧಿಗಾಗಿ ಕಾಂಗ್ರೆಸ್‌ ಮತ್ತು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಬಿಂಬಿಸಿ 122 ಕ್ಷೇತ್ರಗಳಲ್ಲಿ ಹಗಲಿರುಳೂ ದುಡಿದರೂ ಭ್ರಮ ನಿರಸನವಾಗಿದೆ.ಮುಂಬರುವ ಚುನಾವಣೆಯಲ್ಲಿಯೂ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ ದೇಶಕ್ಕೇ ಕ್ಯಾನ್ಸರ್‌ ಖಚಿತವಾದ ಕಾರಣ ಬಿಜೆಪಿ ಬೆಂಬಲಿಸಿ ಸೇರ್ಪಡೆ ಆಗಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾ ಅತಿಕ್ರಮಣ, ಪಾಕಿಸ್ತಾನೀಯರಿಂದ ಸೈನಿಕರ ಮೇಲೆ ಆಕ್ರಮಣ, ಅಮೆರಿಕದ ಆರ್ಥಿಕ ನೀತಿಗೆ ಸೋತು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ ಮುತಾದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ವಿಫಲವಾಗಿದೆ.ದೇಶದ ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯವಾಗದೆ ಹಣಕಾಸು ಸಚಿವ ಪಿ.ಚಿದಂಬರಂ  ಚುನಾವಣಾ ಕಣಕ್ಕಿಳಿಯದೆ ಪಲಾಯನ ವಾದ ಅನುಸರಿಸಿರುವುದು ಆತ್ಮ ವಿಶ್ವಾಸದ ಕೊರತೆಯ ಪ್ರತೀಕವಾಗಿದ್ದು, ಮೋದಿ ಅವರು ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲ ದೂರದೃಷ್ಟಿ ಹೊಂದಿರುವ ಕಾರಣ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪಿಸಬೇಕು’ ಎಂದು ಕರೆ ನೀಡಿದರು.ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎ.ಮಂಜು ಅವರು ಅಹಂಕಾರಿ, ಜಾತಿ, ಧನ, ಅಧಿಕಾರ ಮದದ ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯಾಗಿದ್ದು ಅವರನ್ನು ಹೀನಾಯವಾಗಿ ಸೋಲಿಸಲು ಮತದಾರರು ಮುಂದಾಗಬೇಕು ಎಂದು ಹರಿಹಾಯ್ದರು.ಮಾಜಿ ಸಚಿವ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾತನಾಡಿ, ಹಳೆಯ ಹುಲಿ ಕಣದಲ್ಲಿದೆ, ಆದರೆ ಬೇಟೆಯಾಡಲು ಸಾಧ್ಯವಿಲ್ಲದ ಕಾರಣ ಕೇವಲ ಗುಟುರು ಹಾಕಿ ನರಿಯಂತಹ ಸಣ್ಣಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದೆ ಎಂದು ಪರೋಕ್ಷವಾಗಿ ಪಕ್ಷಾಂತರಿಗಳನ್ನು ಕಾಯುತ್ತಿರುವವರು ಎಂದು ದೇವೇಗೌಡರನ್ನು ಟೀಕಿಸಿ ಕಾರ್ಯಕರ್ತರು ಹಳೆಯ ಹುಲಿಗೆ ಹೆದರುವ ಅಗತ್ಯವಿಲ್ಲ , ಅಪ್ಪ–ಮಕ್ಕಳ ಕಣ್ಣೀರಿಗೆ ಮತದಾರರು ಮೋಸಹೋಗಬಾರದು ಎಂದು ವ್ಯಂಗ್ಯವಾಡಿದರು.ಹಾಸನ ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಚ್‌.ಶಂಕರ್‌, ಜಿ.ಪಂ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್‌ ಮಾತನಾಡಿದರು. ಬಿಜೆಪಿ ಹಾಸನ ಉಸ್ತುವಾರಿ ಎಂ.ಕೆ.ಪ್ರಾಣೇಶ್‌, ರೇಣುಕ, ಗುರುಪ್ರಸಾದ್‌, ನಗರ ಘಟಕದ ಅಧ್ಯಕ್ಷ ಎ.ಮಣಿ, ಜಿಲ್ಲಾ ಉಪಾಧ್ಯಕ್ಷ ಅರೆಕಲ್‌ಪ್ರಕಾಶ್‌, ಕಾಮನಕೆರೆ ಶಶಿಧರ್‌,ತಾ.ಪಂ ಅಧ್ಯಕ್ಷ ಕೆ.ಎಂ.ಬಸವರಾಜ್‌, ಸದಸ್ಯರಾದ ರತ್ನ, ಶಿವಕುಮಾರ್‌, ಪುರಸಭೆ ಸದಸ್ಯ ರಾಜೇಶ್‌, ಮಂಜು ಇನ್ನಿತರರು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.