ಭಾನುವಾರ, ಮೇ 22, 2022
27 °C

ವ್ಯರ್ಥ ಕಸರತ್ತಾಗಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರಸಂಪರ್ಕದ 2ಜಿ ತರಂಗಾಂತರ ಹಂಚಿಕೆ ಹಗರಣದ ಬಗ್ಗೆ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲು ಒಪ್ಪುವುದರೊಂದಿಗೆ ವಿರೋಧಪಕ್ಷಗಳು ಒಡ್ಡಿರುವ ಸವಾಲನ್ನು ಪ್ರಧಾನಿ ಮನಮೋಹನ್‌ಸಿಂಗ್ ಸ್ವೀಕರಿಸಿದ್ದಾರೆ. ಜೆಪಿಸಿ ರಚನೆ ವಿವಾದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದ ಕಾರಣ 21 ದಿನಗಳ ಚಳಿಗಾಲದ ಅಧಿವೇಶನ ಆರೋಪ-ಪ್ರತ್ಯಾರೋಪಗಳ ಗದ್ದಲದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಸುಮಾರು 146 ಕೋಟಿ ರೂಪಾಯಿ. ವ್ಯರ್ಥವಾದ ಸಮಯದ ಬೆಲೆ ಇನ್ನೂ  ಹೆಚ್ಚಿನದು. ಈ ಹಿನ್ನೆಲೆಯಲ್ಲಿ ಮಹತ್ವದ ಬಜೆಟ್ ಅಧಿವೇಶನ ಸುಗಮವಾಗಿ ನಡೆಯುವಂತಾಗಬೇಕಾದರೆ ಜೆಪಿಸಿ ರಚನೆಗೆ ಒಪ್ಪಿಕೊಳ್ಳದೆ ಆಡಳಿತಾರೂಢ ಪಕ್ಷಕ್ಕೆ ಬೇರೆ ದಾರಿಯೂ ಇರಲಿಲ್ಲ.  ಮಹಾಲೇಖಪಾಲರ (ಸಿಎಜಿ) ವರದಿಯಿಂದ ಬಯಲಾದ 2ಜಿ ತರಂಗಾಂತರ ಹಂಚಿಕೆ ಹಗರಣದ ಬಗ್ಗೆ ಸಿಬಿಐ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸುತ್ತಿರುವ ಕಾರಣ ಜೆಪಿಸಿ ರಚನೆ ಅಗತ್ಯ ಇಲ್ಲ ಎನ್ನುವುದು ಯುಪಿಎ ಸರ್ಕಾರದ ವಾದವಾಗಿತ್ತು. ಆದರೆ ಈ ಹಗರಣ ಲೆಕ್ಕಪತ್ರದಲ್ಲಿನ ಮೋಸವನ್ನು ಮೀರಿದ್ದಾಗಿದ್ದರಿಂದ ಮತ್ತು ಹಗರಣದ ಹಿಂದಿನ ಎಲ್ಲ ಪಾತ್ರಧಾರಿಗಳ ಬಗ್ಗೆ ಸಮಗ್ರರೂಪದ ತನಿಖೆ ನಡೆಯಬೇಕಾಗಿರುವುದರಿಂದ ಜೆಪಿಸಿ ರಚಿಸಲೇಬೇಕೆಂದು ವಿರೋಧಪಕ್ಷಗಳು ಪಟ್ಟು ಹಿಡಿದಿದ್ದವು. ಕೊನೆಗೂ ವಿರೋಧಪಕ್ಷಗಳ ಸಂಘಟಿತ ಒತ್ತಡಕ್ಕೆ ಆಡಳಿತ ಪಕ್ಷ ಮಣಿದಿದೆ. ಆದರೆ ಜೆಪಿಸಿ ತನಿಖೆಯಿಂದ 2ಜಿ ತರಂಗಾಂತರ ಹಗರಣದ ಹಿಂದಿನ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ಸಾಧ್ಯವಾಗಬಹುದೇ? ಹಿಂದಿನ ಜೆಪಿಸಿಗಳ ಇತಿಹಾಸವನ್ನು ನೋಡಿದರೆ ಅಂತಹ ಭರವಸೆಯೇನೂ ಮೂಡುವುದಿಲ್ಲ. ಈವರೆಗೆ ನಾಲ್ಕು ಜೆಪಿಸಿಗಳು ರಚನೆಯಾಗಿವೆ, ಬೊಫೋರ್ಸ್  ಮತ್ತು ಹರ್ಷದ್ ಮೆಹ್ತಾ ಹಗರಣಗಳ ತನಿಖೆಗೆ ಕಾಂಗ್ರೆಸ್ ಜೆಪಿಸಿ ರಚಿಸಿದ್ದರೆ, ಷೇರುಮಾರುಕಟ್ಟೆ ಮತ್ತು ತಂಪುಪಾನೀಯದಲ್ಲಿನ ಕ್ರಿಮಿನಾಶಕ ಕಲಬೆರಕೆ ಹಗರಣಗಳ ಬಗ್ಗೆ ಎನ್‌ಡಿಎ ಜೆಪಿಸಿ ರಚಿಸಿತ್ತು. ಬೊಫೋರ್ಸ್ ಹಗರಣದ ತನಿಖೆಗೆ ರಚನೆಗೊಂಡ ಜೆಪಿಸಿಯನ್ನು ಬಹಿಷ್ಕರಿಸಿದ್ದ ವಿರೋಧಪಕ್ಷಗಳು ಅದು ಸಲ್ಲಿಸಿದ್ದ ವರದಿಯನ್ನು  ತಿರಸ್ಕರಿಸಿದ್ದವು. ಉಳಿದ ಮೂರು ಜೆಪಿಸಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಅವುಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲಾಗಿಲ್ಲ. ಇಂತಹದ್ದೊಂದು ನಿರಾಶದಾಯಕ ಪರಂಪರೆ ಇರುವ ಹಿನ್ನೆಲೆಯಲ್ಲಿ ಹೊಸ ಜೆಪಿಸಿಗೆ ಹೆಚ್ಚಿನ ಜವಾಬ್ದಾರಿ ಇದೆ. ಜೆಪಿಸಿಯನ್ನು ರಚಿಸಿದರಷ್ಟೇ ಸಾಲದು, ಅದು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಅರ್ಹ ಸಂಸದರೇ ಅದಕ್ಕೆ ಸದಸ್ಯರಾಗುವಂತೆ ರಾಜಕೀಯ ಪಕ್ಷಗಳು ನೋಡಿಕೊಳ್ಳಬೇಕು. ಕಾಲಮಿತಿಯೊಳಗೆ ತನಿಖೆ ನಡೆಸಿ ಅದು ವರದಿ ನೀಡಬೇಕು. ಸರ್ಕಾರ ಆ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಜೆಪಿಸಿ ರಚನೆಗಾಗಿ ನಿರಂತರವಾಗಿ ಒತ್ತಡ ಹೇರುತ್ತಾ ಬಂದ ಬಿಜೆಪಿ ಕೂಡಾ ತನ್ನ ನೈತಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಕಾಲ ಈಗ ಕೂಡಿ ಬಂದಿದೆ. ಹಗರಣಗಳ ಸುಳಿಯೊಳಗೆ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸಮರ್ಥಿಸಿಕೊಳ್ಳುವ ಯಾವ ಕಾರಣವೂ ಆ ಪಕ್ಷದ ಬಳಿ ಈಗ ಇಲ್ಲ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.