ಸೋಮವಾರ, ಮೇ 17, 2021
21 °C

ವ್ಯಾಪಿಸುತ್ತಿರುವ ಡೆಂಗೆ; ತಡೆಗೆ ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೂ 119 ಡೆಂಗೆ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಉಲ್ಬಣಗೊಳ್ಳುವ ಶಂಕೆಯನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ನಡೆದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಜನವರಿಯಿಂದ ಜಿಲ್ಲೆಯಲ್ಲಿ ಒಟ್ಟು 271 ಶಂಕಿತ ಡೆಂಗೆ ರಕ್ತ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಖಚಿತ ಡೆಂಗೆ ಪ್ರಕರಣಗಳು 119. ಮೃತಪಟ್ಟ ಪ್ರಕರಣ ಒಂದು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜ್ವರ ವ್ಯಾಪಿಸುತ್ತಿದ್ದು, ಜ್ವರ ನಿಯಂತ್ರಣಕ್ಕೆ ತ್ವರಿತ ಕ್ರಮಗಳನ್ನು ಆರೋಗ್ಯ ಇಲಾಖೆ ಅನುಸರಿಸಬೇಕು ಎಂದು ಸೂಚಿಸಿದರು.ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು 24 ಡೆಂಗೆ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ಗ್ರಾಮಾಂತರದಲ್ಲಿ 17, ಭದ್ರಾವತಿ ನಗರ 8, ಭದ್ರಾವತಿ ಗ್ರಾಮಾಂತರ 23, ಸಾಗರ 7, ಹೊಸನಗರ 3, ತೀರ್ಥಹಳ್ಳಿ 3, ಸೊರಬ 11 ಹಾಗೂ ಶಿಕಾರಿಪುರದಲ್ಲಿ 23 ಪ್ರಕರಣಗಳು ಕಾಣಿಸಿಕೊಂಡಿವೆ ಎಂದರು.ಶಿವಮೊಗ್ಗ ನಗರದಲ್ಲಿ 74ಮನೆಗಳಿವೆ. ಇದುವರೆಗೂ ಕೇವಲ 20 ಸಾವಿರ ಮನೆಗಳಿಗೆ ಭೇಟಿ ನೀಡಲಾಗಿದೆ. ಅಲ್ಲದೇ, ವಾತಾವರಣವೂ ಜ್ವರ ಹರಡುವುದಕ್ಕೆ ಪೂರಕವಾಗಿರುವುದರಿಂದ ತ್ವರಿತ ಗತಿಯಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.ಯಾವುದೇ ಜ್ವರದ ಸಂಬಂಧ ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳುವ ಪ್ರಕರಣಗಳನ್ನು ಕಡ್ಡಾಯವಾಗಿ ಪ್ರತಿದಿನವೂ ವರದಿ ಕಳುಹಿಸಬೇಕು. ಉದಾಸೀನ ತೋರುವವರಿಗೆ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಅವರು ಸೂಚಿಸಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಘುನಂದನ್ ಮಾತನಾಡಿ, ಡೆಂಗೆ ಪ್ರಕರಣ ವರದಿಯಾದ ಗ್ರಾಮಗಳಿಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿ ಭೇಟಿ ನೀಡಿ ಎಲ್ಲಾ ಮನೆ ಲಾರ್ವ ಸಮೀಕ್ಷೆ ನಡೆಸಿ, ಲಾರ್ವ ನಿರ್ಮೂಲನೆಗಾಗಿ ಟೆಮೆಪಾಸ್ ಕ್ರಿಮಿನಾಶಕ ಬಳಸಿ ಲಾರ್ವಾ ನಾಶಪಡಿಸಿದ್ದಾರೆ ಎಂದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ ಉಪಸ್ಥಿತರಿದ್ದರು.`ಮುಂಜಾಗ್ರತಾ ಕ್ರಮ'

ಶಿರಾಳಕೊಪ್ಪ: ಡೆಂಗೆ, ಚಿಕುನ್‌ಗುನ್ಯ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಪೌರಕಾರ್ಮಿಕರ  ಹೆಚ್ಚಿನ ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಪತ್ತಿಜಾಫರ್ ಸಲಹೆ ನೀಡಿದರು.ಪಟ್ಟಣದಲ್ಲಿ ಮಂಗಳವಾರ ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಾಧಿಕಾರಿಗಳು, ಸಾರ್ವಜನಿಕರ ಸ್ವಚ್ಛತೆ ಕಾರ್ಯಕ್ಕಾಗಿ ನಿತ್ಯ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು. ನೇಕಾರ ಸಮಾಜದ ಅಧ್ಯಕ್ಷ ರುದ್ರಮುನಿ ಮಾತನಾಡಿ, ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ಮುಖ್ಯಾಧಿಕಾರಿಗಳು ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.  ಮುಖ್ಯಾಧಿಕಾರಿ ಎಸ್.ಎ.ರಾಜ್‌ಕುಮಾರ್, ಯೋಜನಾಧಿಕಾರಿ ಬಾಲಾಜಿರಾವ್ ಉಪಸ್ಥಿತರಿದ್ದರು.`ಸಾರ್ವಜನಿಕರಲ್ಲಿ ಜಾಗೃತಿ'

ಸೊರಬ: ಆತಂಕಕಾರಿ ಡೆಂಗೆ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ರೋಗವನ್ನು ಹರಡುವ ಸೊಳ್ಳೆಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಭಾರಂಗಿ ಮತ್ತು ತತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಕರೆ ನೀಡಿದರು.

ಭಾರಂಗಿಯ ಹುಚ್ಚೇಶ್ವರ ಪ್ರೌಢ ಶಾಲೆಯಲ್ಲಿ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾ ಗಾರ ಉದ್ದೇಶಿಸಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.