ಸೋಮವಾರ, ಜೂನ್ 14, 2021
26 °C

ಶಫಿ ಎಲೆಕ್ಟ್ರಿಕಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

“ನಿಮ್ಮಪ್ಪನ ಹಂಗ ಆಗಬ್ಯಾಡೋ... ಸ್ವಲ್ಪ ಇಚಾರ ಮಾಡು... ಹೊಡದು ಬುದ್ಧಿ ಹೇಳಾಕ ನೀ ಏನಿನ್ನೂ ಸಣ್ಣಾವಲ್ಲ... ಕಯ್ಯಾಗಿನ ರೊಕ್ಕ ಕೊಟ್ಟು ಮಂಗ್ಯ ಆಗಬಾರದು... ಜೀವನದಾಗ ಮುಂದ ಮುಂದ ಬರಬಕು... ಅದು ಬಿಟುಗೊಟ್ಟು ಹಿಂದ ಹಿಂದ ಹೋಗಬಾರದು...”ಎಂದು ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡಂತೆ ಸೆರಗಿನ ಅಂಚಿನಲ್ಲಿ ಮೂಗನ್ನು ಸೊರಸೊರ ತಿಕ್ಕಿಕೊಳ್ಳುತ್ತಾ ಎದ್ದು ಅಡುಗೆಮನೆ ಕಡೆ ಹೋದಳು. ಎದುರು ಮೂಲೆಯಲ್ಲಿ ಸಿಂಹಾಸನದಂತಿದ್ದ ಟೇಬಲ್ಲು ಬಣಬಣ ಅನ್ನುತ್ತಿತ್ತು.ಇಷ್ಟು ದಿನ ಇಂತಹ ಅದೆಷ್ಟೋ ಭಾವಸಂವಾದಗಳಿಗೆ ಸಾಕ್ಷಿಯಾಗಿದ್ದ ಮನೆಯ ಒಬ್ಬ ಮುಖ್ಯ ಪ್ರತಿನಿಧಿಯಂತಿದ್ದ ಟೀವೀ ಮಹಾರಾಜರನ್ನು ಒಂದು ವಾರದ ಹಿಂದೆಯಷ್ಟೇ ಅವರ ಮಿತಿಮೀರಿದ ಬೀಪಿ, ಶುಗರ‌್ರುಗಳ ಕಾರಣ ಮೇಯ್ನರೋಡಿನ `ಶಫಿ ಎಲೆಕ್ಟ್ರಿಕಲ್ಸ್~ನ ತುರ್ತುಘಟಕದಲ್ಲಿ ಇಡಲಾಗಿತ್ತು.ಅವರ ಆಪರೇಶನ್ ಖರ್ಚು, ಮೆಡಿಸನ್ ಖರ್ಚು ಅದೂ ಇದು ಎಂದು ಹೇಳಿ ಡಾ. ಶಫಿ ಅವರು ಸಾವಿರಾರು ರುಪಾಯಿಗಳನ್ನು ಕೆತ್ತಿದ್ದರು.

 

ಇಲ್ಲದಿದ್ದರೆ ಇಷ್ಟುಹೊತ್ತಿಗೆ ಅಮ್ಮನ ಈ ಉಪದೇಶಗಳಿಗೆ ಸರಿಹೊಂದುವಂತೆ ತನ್ನ ಡಯಲಾಗಿನ ಮೂಲಕವೋ, ಜಾಹೀರಾತಿನ ಮೂಲಕವೋ, ಹಾಡಿನ ಮೂಲಕವೋ, ಫೈಟಿಂಗಿನ ಮೂಲಕವೋ, ಬ್ರೇಕಿಂಗ್‌ನ್ಯೂಸಿನ ಮೂಲಕವೋ ಒಟ್ಟಿನಲ್ಲಿ ತನ್ನದೇ ಹಿಮ್ಮೇಳವನ್ನು ಒದಗಿಸಿ ಕೊಡುವುದರ ಮೂಲಕ ಇಡೀ ದೃಶ್ಯಕ್ಕೆ ಒಂದು ಘನತೆಯನ್ನು ಒದಗಿಸಿಕೊಡುತ್ತಿದ್ದರು...ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಅಮ್ಮನ ಈ ಉಪದೇಶವನ್ನು ಕೇಳಲು ನನಗಿರಲಿ ಉಪದೇಶ ಮಾಡುವ ಸ್ವತಃ ಅಮ್ಮನಿಗೇ ಯಾಕೋ ತಾನು ಆಡಿದ ಮಾತು ಪೂರ್ಣವಾಗಲಿಲ್ಲವೇನೋ ಎಂಬ ಗುಮಾನಿ ಬಂದದ್ದಲ್ಲದೆ ತನ್ನ ಮಾತಿಗೆ ಪ್ರತಿಕ್ರಿಯಿಸುವ ಒಂದು ಜೀವವಿಲ್ಲದೇ ತಡಕಾಡಿದ್ದು ನನಗೆ ಸ್ಪಷ್ಟವಾಗಿ ಕಂಡಿತು.ವಿಚಿತ್ರ ಎಂದರೆ ಏಕಕಾಲದಲ್ಲಿ ನಮ್ಮ ಟೀವೀ ಮಹಾರಾಜರು ಉಪದೇಶ ಪಡೆಯುವ ಅರ್ಥಾತ್ ಬೈಸಿಕೊಳ್ಳುವ ನನಗೂ ಸಾಂತ್ವನ ನೀಡುತ್ತಿದ್ದರು. ಹಾಗೇ ಉಪದೇಶ ನೀಡುವ ಅರ್ಥಾತ್ ಬೈಯುವ ಅಮ್ಮನಿಗೂ ಹುರುಪು ನೀಡುತ್ತಿದ್ದರು!ನಾನು `ಟೀವೀ ಮಹರಾಜರು~ ಎಂದು ಸುಮ್ಮನೆ ಖಾಲೀಪೀಲೀ ಸಂಬೋಧಿಸುತ್ತಿಲ್ಲ. ನಮ್ಮ ಮನೆಯಲ್ಲಿ ನಾವು ಮನುಷ್ಯರು ಕೂಡಲಿಕ್ಕೆ ಎಂದು ಇರೋದು ಅದೇ ನಮ್ಮಪ್ಪನ ಕಾಲದ ಕಬ್ಬಿಣದ ಎರಡು ಮುರುಕಲು ಕುರ್ಚಿಗಳು...ನಾನು ಅಂಬೆಗಾಲಿನಿಂದೆದ್ದು ನಡೆಯಲು ಕಲಿತದ್ದು, ಎದ್ದು ಬಿದ್ದದ್ದು, ಬೆಳದದ್ದು, ಆಡಿದ್ದು, ಅಮ್ಮ ಸಜ್ಜಾದ ಮೇಲಿನ ಹಿಟ್ಟಿನ ಡಬ್ಬಿ ತೆಗೆಯಲು, ಮನೆಯ ಗೋಡೆಯ ಮೇಲಿದ್ದ ಅಪ್ಪನ ಫೋಟೋ, ದೇವರುಗಳ ಫೋಟೋಗಳಿಗೆ ಹೂ ಮುಡಿಸಲು ಹತ್ತೀ ಇಳಿದು ಬಳಸಿದ್ದು, ಗಣೇಶನನ್ನು ಕೂರಿಸಿದ್ದು ಹಾಗೂ ಹೊರಗಿನಿಂದ ಬಂದ ಅತಿಥಿಗಳಿಗೆ ಕೂಡಲಿಕ್ಕೆ ಸರಕ್ಕನೆ ಎಳೆದು ಕೊಡುತ್ತಿದ್ದದ್ದು, ಹೀಗೆ ಎಲ್ಲವೂ ಇದರಲ್ಲೇ.

 

ಆದರೆ ಅವೀಗ ಕೂರುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಮಗೆ ಚಾಪೆಯೇ ಖಾಯಮ್ ಆಗಿದೆ. ಆದರೆ ಕೇವಲ ಎಂಟು ವರ್ಷಗಳ ಹಿಂದೆಯಷ್ಟೇ ಮನೆಗೆ ಬಂದ ಈ ಟೀವೀ ಮಹಾರಾಜರಿಗೆ ಮಾತ್ರ ಅಮ್ಮನ ಆಜ್ಞೆಯಂತೆ ಸಾವಿರಾರು ರೂಪಾಯಿ ಸುರಿದು ಮಾಡಿಸಿಕೊಂಡು ಬಂದ ಸಿಂಹಾಸನದಂಥ ಚಚ್ಚೌಕದ ಟೇಬಲ್ಲು! ಅವರ ಮುಖಕ್ಕೆ ಘಾಸಿಯಾಗಬಾರದು ಎಂದು ಟೇಬಲ್ಲಿಗೊಂದು ಗಾಜಿನ ಬಾಗಿಲು.

 

ನಮ್ಮ ಮನೆಯ, ಸೋರುವ ಸಿಮೆಂಟಿನ ಶೀಟಿಗಿಂತ ಚಂದದ ಗಟ್ಟಿಮುಟ್ಟಾದ ಫಾರ್ಮುಕಾ ಶೀಟನ್ನು ಅಂಟಿಸಿದ ಅದರ ಮೇಲ್ಮೈ... ಹೊರಮೈ... ಅದರ ಸಪಾಟಿನ ಮೇಲೆ ಎರಡು ಬಣ್ಣಬಣ್ಣದ ಹೂಗಳಿರುವ ಪ್ಲಾಸ್ಟಿಕ್ಕಿನ ವಾಝುಗಳು.

 

ನಡುವಿಗೆ ಅಜಾತ ನಾಗಲಿಂಗನ ಭಾವಚಿತ್ರ. ಅದರ ಮುಂದೆ ಪರಿಮಳವನ್ನು ಬೀರುವ ಊದಿನಕಡ್ಡಿ ಸಿಕ್ಕಿಸುವ ಸ್ಟ್ಯಾಂಡು. ಅದರ ಅಕ್ಕಪಕ್ಕಗಳಲ್ಲಿ ಇಟ್ಟಿದ್ದ ಕೀಲಿಕೈಗಳ ಬಂಚಲು, ಹಳೆಯ ಪಾಸ್ಪೋರ್ಟ್ ಸೈಜ್ ಫೋಟೋಗಳು, ಬೆಂಕಿಪೊಟ್ಟಣ, ಮೇಣದಬತ್ತಿ, ಟಾರ್ಚು, ಚಾರ್ಜರು, ರೇಶನ್‌ಕಾರ್ಡು, ಕರೆಂಟುಬಿಲ್ಲುಗಳು, ಫೋನುಬಿಲ್ಲುಗಳು, ದೇವರ ಪ್ರಸಾದಗಳು, ಹೂವುಗಳು, ದಿನಸೀ ಅಂಗಡಿಯ ಲಿಸ್ಟುಗಳು... ಹೀಗೆ ಇವೆಲ್ಲವುಗಳ ಅಸಂಗತ ಸಂಯೋಜನೆಯಲ್ಲಿಯೇ ಒಂದು ಸೌಂದರ್ಯದ ಸಾಂಗತ್ಯವು ಪ್ರಾಪ್ತವಾಗಿ ಇವೆಲ್ಲವೂ ಟೀವೀ ಮಹಾರಾಜರಿಗೆ ಕಿರೀಟವೇ ಇಟ್ಟಂತೆ ಶೋಭಿಸುತ್ತಿದ್ದವು.ಒಮ್ಮಮ್ಮೆ ಅಮ್ಮ ಹಬ್ಬಹುಣುಮಿಗೆ ಎಲ್ಲವನ್ನೂ ಕಿತ್ತು ತೆಗೆದು ಸಾಫು ಮಾಡಿ ನೀಟಾಗಿ ಜೋಡಿಸಿದಾಗಂತೂ ಟೀವೀ ಮಹಾರಾಜರ ಮುಕುಟವೇ ಮುಕ್ಕಾದಂತೆ ಮನೆಯ ತುಂಬ ಏನೋ ಕಳಕೊಂಡ ಭಾವನೆ ಮೂಡುತ್ತಿತ್ತು.ಮಹಾರಾಜರ ಕಿರೀಟ ಪಲ್ಲಟವೇ ಮನಸ್ಸಿಗೆ ಇಷ್ಟೊಂದು ಕಸಿವಿಸಿ ಮೂಡಿಸಿಬಿಡುವಾಗ ಇನ್ನು ಮಹಾರಾಜರೇ ಇಲ್ಲದ ಸಿಂಹಾಸನವನ್ನು, ನಮ್ಮ ಮನೆಯೆಂಬ ಅರಮನೆಯಲ್ಲಿ ಊಹಿಸಿಕೊಳ್ಳಿ! ಅವರಿಲ್ಲದ ಟೇಬಲ್ಲಿನ ಮೇಲೆ ಎಲ್ಲ ವಸ್ತುಗಳೂ ಶೃತಿ ತಪ್ಪಿದ ಪ್ರಜೆಗಳಂತೆ ಎಲ್ಲೆಂದರಲ್ಲಿ ಅನಾಥವಾಗಿ ಚೆಲ್ಲಿಕೊಂಡಿದ್ದವು.

 

ಈ ದೃಶ್ಯವನ್ನ ನೋಡಲು ನನಗೇ ಸುಮಾರನಿಸುವಾಗ ಇನ್ನು ಅಮ್ಮನ ಕರುಳು ಚುರ‌್ರೆಂದದ್ದರಲ್ಲಿ ಆಶ್ಚರ್ಯವಿರಲಿಲ್ಲ.ಹಾಗೆಂದು ನಾನೇನೂ ಸುಮ್ಮನೆ ಕೈಕಟ್ಟಿ ಕುಳಿತಿದ್ದಿಲ್ಲ. ಆಫೀಸಿನಿಂದ ಹೋಗುವಾಗಲೊಮ್ಮೆ ಬರುವಾಗಲೊಮ್ಮೆ ಶಫಿಯ ಅಂಗಡಿಗೆ ಹೋಗಿ ವಿಚಾರಿಸುತ್ತಲೇ ಇದ್ದೆ.ಅವನೂ ಒಂದೊಂದು ದಿನವೂ ಒಂದೊಂದು ಕಾರಣ ಕೊಟ್ಟು ಮಾರನೆ ದಿನ ಕೊಡುವುದಾಗಿ ಆಶ್ವಾಸನೆ ಕೊಡುತ್ತಲೇ ಇದ್ದ. ಈ ನಡುವೆ ಇನ್ನೊಂದು ಐನೂರುಗಳನ್ನು ನನ್ನಿಂದ ಕಿತ್ತಿದ್ದ.

 

ಹದಿನೈದಿಪ್ಪತ್ತು ದಿನಗಳಾಗ ಬಂದರೂ ಶಫಿ ಟೀವಿಯನ್ನು ರಿಪೇರಿ ಮಾಡಿಕೊಡುವ ಮನಸ್ಸೇ ಮಾಡಲಿಲ್ಲ. ಪ್ರತೀಸಾರಿ ನಾನು ಅಂಗಡಿಗೆ ಹೋದಾಗಲೂ ಸಾಲು ಸಾಲು ಕೆಟ್ಟು ಕೈಕೊಟ್ಟ ರೇಡಿಯೋ, ಟೀವೀ, ಮಿಕ್ಸಿ, ಗ್ರೈಂಡರುಗಳನ್ನು ಅಂಗಡಿಯ ತುಂಬೆಲ್ಲಾ ಹಲಸಿನಹಣ್ಣಿನ ತೊಳೆಗಳನ್ನು ಬಿಡಿಸಿಟ್ಟ ಹಾಗೆ ಹರಡಿಕೊಂಡು ಯಾವುದೋ ಒಂದು ಬಿಡಿಸಿಟ್ಟ ಟೀವಿಯ ಮುಂದೆ ದಪ್ಪಗಾಜಿನ ಕನ್ನಡಕ ಹಾಕಿಕೊಂಡು ಅದರೊಳಗಿನ ಮೂಳೆ-ಮಾಂಸಗಳನ್ನು, ನರ-ನಾಡಿಗಳನ್ನು ಬೆಸೆಯುವ ಕೆಲಸದಲ್ಲಿ ತಲ್ಲೆನನಾಗಿರುತ್ತಿದ್ದನು ಶಫಿ.ಪ್ರತಿಸಾರಿ ಹೋದಾಗಲೂ `ಬನ್ನಿ ಸಾ.. ನಿಮ್ಮ ಕೆಲಸಾನೆ ಮಾಡ್ತಾ ಇದೀನಿ...~ ಎಂದು ಶುಷ್ಕವಾಗಿ ನಗಾಡುತ್ತಿದ್ದನು. ಬಿಡಿಸಿಟ್ಟ ಹತ್ತಾರು ಟೀವಿಗಳ ನಡುವೆ ಅವನು ನಮ್ಮ ಟೀವಿಯದ್ದೇ ಕೆಲಸ ಮಾಡುತ್ತಿದ್ದಾನೆ ಎಂದು ನನಗಂತೂ ನಂಬಿಕೆ ಬರುತ್ತಿರಲಿಲ್ಲ.

 

ನನಗೆ ನಂಬಿಕೆ ಬರಲಿ ಎಂಬ ಕಾರಣಕ್ಕೋ ಏನೊ ಟೇಬಲ್ಲಿನ ಮೇಲೆ ನಮ್ಮ ಟೀವಿಯ ಹೊರಮಯ್ಯನ್ನು ಇಟ್ಟಿದ್ದನು. ಆನ್ ಬಟನ್ ಪಕ್ಕದಲ್ಲಿ ಅಮ್ಮ ಅಂಟಿಸಿದ್ದ ಸಿದ್ಧಾರೂಢರ ದುಂಡನೆಯ ಸ್ಟಿಕ್ಕರಿನಿಂದ ಅದು ನಮ್ಮದೇ ಮನೆ ಟೀವಿ ಎಂದು ತಿಳಿದು ಅವನು ನಮ್ಮ ಕೆಲಸವನ್ನೇ ಮಾಡುತ್ತಿದ್ದಾನೆಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.

 

ಜೊತೆಗೆ ಎಂದೂ ನೋಡದ ನಮ್ಮ ಮನೆಯ ಮಹಾರಾಜರ ದೇಹದ ಒಳಭಾಗಗಳನ್ನು ನಿಬ್ಬೆರಗಿನಿಂದ ನೋಡುತ್ತಾ ಕುಳಿತುಬಿಡುತ್ತಿದ್ದೆ. ಇಂತಹ ಸಂಕೀರ್ಣವಾದ, ಜಟಿಲವಾದ ವೈರು, ತಂತಿ, ಸರ್ಕ್ಯೂಟುಗಳನ್ನು ಒಡಲೊಳಗೆ ಇಟ್ಟುಕೊಂಡು ಹೊರಗೆ ಬಣ್ಣಬಣ್ಣದ ಚಿತ್ರ ತೋರಿಸುವ ಮಾಯಾಪೆಟ್ಟಿಗೆಯನ್ನು ಕುರಿತು ಥೇಟು ಹಳ್ಳಿಗುಗ್ಗುವಿನ ಹಾಗೆ ವಿಸ್ಮಯಪಡುತ್ತಿದ್ದೆ. ಮೊದಮೊದಲು `ಪಾಪ ಇವ ನಮ್ಮದೇ ಕೆಲಸವನ್ನು ಮಾಡುತ್ತಿದ್ದಾನೆ~ ಎನಿಸುತ್ತಿತ್ತಾದರೂ ಪ್ರತೀಸಾರಿಯೂ ಹೀಗೆಯೇ ಮಾಡತೊಡಗಿದಾಗ ನನಗೆ ಅನುಮಾನ ಶುರುವಾಯಿತು.ಸತತವಾಗಿ ಹದಿನೈದು ದಿನಗಳು ರಿಪೇರಿ ಮಾಡಿದರೂ ರಿಪೇರಿಯಾಗದ ಸ್ಥಿತಿಯಲ್ಲಿದೆಯೇ ನಮ್ಮ ಟೀವೀ? ಎಂದು ಒಂದುಕಡೆ, ಕೆಲವೊಮ್ಮೆ ಮಿಕ್ಸಿಯದೋ, ರೇಡಿಯೋದೋ ಒಳಭಾಗಗಳನ್ನು ಹರವಿಕೊಂಡು ಕೂತು `ಬನ್ನಿ ಸಾ... ನಿಮ್ಮದೇ ಕೆಲಸ ಮಾಡ್ತಾ ಇದೀನಿ ...

 

ಮಗುಂದು ಸಿಕ್ಕಾಪಟ್ಟೆ ನಕರಾ ಮಾಡ್ತಾ ಐತೆ ಸಾ... ನೋಡಿ ಸ್ಟೆಬ್ಲೈಸರ್ ಹಾಕದೇ ಟೀವೀ ನೋಡುದ್ರೆ ಹಿಂಗೇ ಆಗೋದು ಸಾ... ನೋಡಿ ಹೆಂಗೆ ಬರ್ನ್‌ ಆಗೈತೆ...~ ಎಂದು ಯಾವುದೋ ಸುಟ್ಟ ಬಿಡಿಭಾಗವನ್ನು ನನಗೆ ತೋರಿಸುತ್ತಿದ್ದನು.ನನಗೆ ಇವ ರಿಪೇರಿ ಮಾಡುತ್ತಿರುವುದು ನಮ್ಮ ಟೀವಿಯ ಭಾಗ ಹೌದೋ ಅಲ್ಲವೋ ಎಂದೇ ಸಂದೇಹವಿರುವಾಗ ಇನ್ನಿದು ಸುಟ್ಟಿದ್ದು ಬಿಟ್ಟಿದ್ದನ್ನು ಹೇಗೆ ನಂಬುವುದು... ಎಂದು ಮತ್ತೊಂದು ಕಡೆ. ಆದರೂ ಶಫಿ ನನಗೆ ಏಸೀ ಕರೆಂಟು, ಡೀಸೀ ಕರೆಂಟು, ಶಾರ್ಟ್ ಸರ್ಕ್ಯೂಟು ಅದೂ ಇದೂ ಎಂದು ಹೇಳಿ ಸುಡಗಾಡು ಎಲೆಕ್ಟ್ರಾನಿಕ್ಸ್‌ನ ಪಾಠಗಳನ್ನೇ ಶುರುಹಚ್ಚಿಕೊಂಡು ಅದರ ಗಂಧಗಾಳಿಯಿಲ್ಲದ ನನ್ನನ್ನು ನಂಬಿಸಿಬಿಡುತ್ತಿದ್ದನು.

 ಹೀಗೆ ನಂಬಿಸಿ ಕೊನೆಗೆ ಒಂದು ಸ್ಟೆಬಿಲೈಸರ್ ಕೊಳ್ಳಲೇಬೇಕೆಂದು ನನ್ನ ಮೈಂಡ್ವಾಶ್ ಮಾಡಿ ಇನ್ನೊಂದೈದು ನೂರು ರೂಪಾಯಿಗಳನ್ನು ಕಿತ್ತಿದ್ದನು. ಇಷ್ಟೆಲ್ಲ ಕೇಶಮುಂಡನದ ಕಾರ್ಯಕ್ರಮವಿದೆ ಎಂದು ಮೊದಲೇ ತಿಳಿದಿರುತ್ತಿದ್ದರೆ ಯಾವುದಾದರೂ ಹಬ್ಬದ ಆಫರಿನಲ್ಲಿ ಸಿಗುವ ರಿಯಾಯಿತಿ ದರದ ಹೊಸ ಟೀವಿಯನ್ನೇ ಕೊಳ್ಳಬಹುದಿತ್ತಲ್ಲ ಎಂದು ಅನ್ನಿಸದೇ ಇರಲಿಲ್ಲ.ಶಫಿಯ ಅಂಗಡಿಯಲ್ಲಿ ಅವನ ಮಾತುಗಳಿಗೆ ಹೂಂಗುಟ್ಟಲು ಒಬ್ಬರಲ್ಲಾ ಒಬ್ಬ ಭಾರತೀಯ ಪ್ರಜೆ ಇದ್ದೇ ಇರುತ್ತಿದ್ದರು. ಸದಾ ಗಿಜಿಗುಡುವ ಮುಖ್ಯರಸ್ತೆಯಲ್ಲಿರುವ ಶಫಿಯ ಅಂಗಡಿ ಪ್ರವೇಶಿಸುತ್ತಿದ್ದಂತೆಯೇ ನಮ್ಮನ್ನು ಎದುರಾಗುವುದು ಒಂದು ದೊಡ್ಡ ಟೇಬಲ್ಲು. ಅದರ ಮೇಲೆ ಒಂದು ಝಗಮಗಿಸುವ ಟೀವಿ ಯಾವಾಗಲೂ ಚಾಲೂ ಆಗೇ ಇರುತ್ತಿತ್ತು.ಅವಸರವಸರವಾಗಿ ಕೆಂಡದ ಮೇಲೆ ಓಡುವಂತೆ ನಡೆದಾಡುವ ಜನಗಳ ನಡುವೆಯೂ ಕೂಲಿ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಗಾರೆ ಕೆಲಸದವರೂ, ಕಾಂಕ್ರೀಟ್ ಹಾಕುವ ಗುಲಬರ್ಗಾ ಮಂದಿ, ರಸ್ತೆ ಕೆಲಸಗಳನ್ನು ಮಾಡುವ ಉತ್ತರಭಾರತದ ಮಂದಿ ಒಂದೆರಡು ಚಣ ಶಫಿಯ ಅಂಗಡಿಯ ಮುಂದೆ ನಿಂತು ಟೀವೀ ನೋಡಿ ಮುಂದೆ ಹೋಗುತ್ತಿದ್ದರು.

 

ಕ್ರಿಕೆಟ್ಟು ಮ್ಯಾಚಿರುತ್ತಿದ್ದ ದಿನಗಳಲ್ಲಂತೂ ಶಫಿಯ ಅಂಗಡಿಯ ಮುಂದೆ ಸಾಕ್ಷಾತ್ ಶಫಿಯೇ `ಟಿಕೀಟು~ ತೊಗೊಂಡನೇನೋ ಎನ್ನುವಂತೆ ಮಂದಿ ಅಂಗಡಿಯ ಸುತ್ತುಗಟ್ಟಿ ಜಮಾಯಿಸುತ್ತಿದ್ದರು.ಆಗೆಲ್ಲ ಶಫಿಯೂ ಅಂದಿನ ಕೆಲಸಗಳನ್ನೆಲ್ಲಾ ಮರೆತು ಅವರೊಂದಿಗೆ ಸೇರಿ ಆಟ ನೋಡುತ್ತಾ, ಪಂದ್ಯ ಕಟ್ಟುತ್ತಾ ಮಜಾ ಮಾಡುತ್ತಿದ್ದನು.

ನನಗೆ ಪ್ರತಿಸಾರಿ ಶಫಿಯ ಅಂಗಡಿಯಿಂದ ಹಾದು ಹೋಗುವಾಗಲೂ ಅನ್ನಿಸುತ್ತಿದ್ದ ಸೋಜಿಗದ ವಿಷಯವೆಂದರೆ, ಎಷ್ಟೋ ವರ್ಷಗಳಿಂದಲೂ ಜೋಡಿಸಿದಲ್ಲೇ ಜೋಡಿಸಿಟ್ಟಿದ್ದ ಟೀವೀ, ರೇಡಿಯೋ, ಮಿಕ್ಸಿ, ಗ್ರೈಂಡರುಗಳು ಯಾರವು? ರಿಪೇರಿಗೆಂದು ಕೊಟ್ಟ ಜನ ಯಾಕೆ ಅವನ್ನು ವಾಪಾಸು ಕೊಂಡುಹೋಗಿಲ್ಲ? ನಾನು ನೋಡಿದಾಗಿನಿಂದ ಅವು ಹೆಚ್ಚೂ ಆಗಿಲ್ಲ, ಕಡಿಮೆಯೂ ಆಗಿಲ್ಲ.ನಿಜಕ್ಕೂ ಶಫಿಯ ಅಂಗಡಿಗೆ ರಿಪೇರಿಗೆ ಹೋದ ಸಾಮಾನು ವಾಪಸ್ಸು ಬರುವ ಅಭ್ಯಾಸವನ್ನೇ ಇಟ್ಟುಕೊಂಡಿಲ್ಲವೇ? ಅಥವಾ ಗ್ರಾಹಕರು ನೋಡಿದಾಕ್ಷಣ ಗುರುತು ಹತ್ತಲು ನೆರವಾಗುವಂತೆ ಪಂಕ್ಚರ್ ಅಂಗಡಿಯಲ್ಲಿ ಹರಿದ ಟಯರು ಟ್ಯೂಬುಗಳನ್ನು ಹೊರಗೆ ಪ್ರದರ್ಶಿಸುವ ಹಾಗೋ, ಇಲ್ಲ ಈ ಜ್ಯೂಸಿನ ಅಂಗಡಿಗಳ ಶೆಲ್ಫುಗಳಲ್ಲಿ ಹಣ್ಣುಗಳ ಪೋಸ್ಟರುಗಳನ್ನು ಓರಣವಾಗಿ ಮೆತ್ತಿ ಅದಕ್ಕೆ ಕನ್ನಡಿಯನ್ನು ಅಳವಡಿಸಿ ಅವು ದುಪ್ಪಟ್ಟು ಕಾಣುವ ಹಾಗೆ ಮಾಡಿರುತ್ತಾರಲ್ಲ...ಹಾಗೆ ಶಫಿ ಈ ಸಾಮಾನುಗಳ ಚಿತ್ರವಿಚಿತ್ರ ಒಳಭಾಗಗಳನ್ನು ಅಂಗಡಿಯ ತುಂಬೆಲ್ಲಾ ಹರಡಿ ತನ್ನ ಗ್ರಾಹಕರನ್ನು ಸೆಳೆಯುತ್ತಿದ್ದಾನೋ?... ನನಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಶಫಿಯಂತೂ ದಪ್ಪ ಗಾಜಿನ ಕನ್ನಡಕ ಹಾಕಿಕೊಂಡು ಕೆಲಸ ಮಾಡೇ ಮಾಡುತ್ತಿದ್ದನು. ಟೇಬಲ್ಲಿನ ಮೇಲಿದ್ದ ಟೀವಿ ಚಾಲೂ ಆಗೇ ಇರುತ್ತಿತ್ತು.ಇಂತಹ ಅಲೋಚನೆ ಬಂದದ್ದೇ ನನಗೆ ರಸ್ತೆಯಲ್ಲಿನ ಥರಾವರೀ ಅಂಗಡಿಗಳು, ಅವರು ತಾವು ಇಂತಹದ್ದೇ ವ್ಯಾಪಾರ ಮಾಡುತ್ತೇವೆ ಎಂದು ಗ್ರಾಹಕರಿಗೆ ಮುಟ್ಟಿಸಲು ಹೆಣಗಾಡುತ್ತಿದ್ದ ರೀತಿ, ಎಲ್ಲವೂ ನಿಚ್ಚಳವಾಗಿ ಕಾಣತೊಡಗಿತು.

 

ಚರ್ಮ ಸುಲಿದು ಹೊರಗೆ ಸಾಲಾಗಿ ನೇತುಹಾಕಿದ ಮಟನ್‌ಶಾಪಿನವನು, ಹೆಂಗಸರ ಮೇಲುಡುಪು, ಕೆಳ ಉಡುಪು, ಒಳ ಉಡುಪು ಎಲ್ಲವನ್ನೂ ಅಂಗಡಿಯ ಎರಡೂ ಮಗ್ಗುಲುಗಳಲ್ಲಿ ಪ್ರದರ್ಶನಕ್ಕಿಟ್ಟು ಜೊತೆಗೆ ಅವನ್ನು ತೊಟ್ಟು ನಿರ್ವಿಕಾರದ ನಗೆಬೀರುತ್ತಿದ್ದ ಸಿನಿಮಾತಾರೆಯ ಪೋಸ್ಟರನ್ನು ಹೊತ್ತ ಬಟ್ಟೆ ಅಂಗಡಿಗಳು, ಬಗೆಬಗೆ ತಿಂಡಿತಿನಿಸುಗಳ ಚಿತ್ರಗಳನ್ನು ಮೆತ್ತಿಕೊಂಡ ಹೊಟೇಲುಗಳು, ಗಾಜಿನ ಪೆಟ್ಟಿಗೆಯೊಳಗೆ ಥರಾವರೀ ಸ್ವೀಟು, ಕೇಕು, ಬಿಸಕತ್ತುಗಳನ್ನು ಪ್ರದರ್ಶಿಸುತ್ತಾ ವ್ಯಾಪಾರ ಮಾಡುವ ಬೇಕರಿಗಳು.

 

ಪೈಪು, ಪೇಂಟು, ಕಂಬಿ, ನಳ, ಸಿಮೆಂಟು ಮುಂತಾದ ಮನೆಕಟ್ಟುವ ನೂರಾನಲವತ್ತೆಂಟು ಸಾಮಗ್ರಿಗಳನ್ನು ಸಿಂಗರಿಸಿಕೊಂಡ ಹಾರ್ಡ್‌ವೇರು ಶಾಪುಗಳು, ಬೇರೆಬೇರೆ ಶೈಲಿಯ ತಲೆಗಳ ಚಿತ್ರಗಳನ್ನು ಮೆತ್ತಿಕೊಂಡ ಹೇರ್‌ಸಲೂನಿನವನು, ಯಾರೋ ಆರ್ಡರ್ ಕೊಟ್ಟು ಬಿಟ್ಟುಹೋದ, ಮನುಷ್ಯರ, ದೇವರ ಫೋಟೋಗಳನ್ನು ತೂಗುಬಿಟ್ಟ ಫೋಟೋ ಅಂಗಡಿಗಳು.

 

ಗುಟುಕಾದ ಸರವನ್ನು ಮೇಲಿಂದ ಕೆಳಗೆ ಇಳೇಬಿಟ್ಟುಕೊಂಡು ಪುಟ್ಟ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದ ಬೀಡಾಶಾಪುಗಳು, ತರಕಾರಿಗಳನ್ನು ಹೊತ್ತು ರಸ್ತೆಬದಿಯಲ್ಲಿ ನಿಂತ ಸಾಲು ಸಾಲು ತಳ್ಳುಗಾಡಿಗಳು, ಕೆಂಪುಬಣ್ಣದ ದೊಡ್ಡ + ಚಿಹ್ನೆಯನ್ನು ಹೊಂದಿದ ಆಸ್ಪತ್ರೆಗಳು, ಮೆಡಿಕಲ್ ಶಾಪುಗಳು, ಗಾಜಿನ ಕಟ್ಟಡಗಳಲ್ಲಿ ಝಗಮಗಿಸುವ ಬೆಳಕಿನ ಮಿಣಕಾಟಗಳಲ್ಲಿ ಕುಳಿತಿರುತ್ತಿದ್ದ ಎಲೆಕ್ಟ್ರಾನಿಕ್ ವಸ್ತುಗಳ ದೊಡ್ಡದೊಡ್ಡ ಮಾಲುಗಳು.

 

ಹವಾನಿಯಂತ್ರಿತ ಗಾಜಿನರಮನೆಯಲ್ಲಿ ನುಣುಪಾಗಿ ಜೋಡಿಸಿರುತ್ತಿದ್ದ ತಣ್ಣನೆಯ ಮೆಟ್ಟುಗಳು, ದಿನಸಿ ಅಂಗಡಿಯ ಲಿಸ್ಟುಗಳಂತೆ ದೊಡ್ಡ ಫ್ಲೆಕ್ಸಿನ ಮೇಲೆ ಬರೆಯಲಾದ ಕಾಲೇಜಿನ ಕೋರ‌್ಸುಗಳು, ಸಾಲ ಪಡೆಯಲು ಆಕರ್ಷಿಸುವ ಬ್ಯಾಂಕುಗಳು, ಏಟೀಯಮ್ಮುಗಳು, ಸಿನಿಮಾ ಮಂದಿರಕ್ಕೆ ಬರಲೊಲ್ಲದ ಪ್ರೇಕ್ಷಕರನ್ನು ಸೆಳೆಯಲು ಚಿತ್ರವಿಚಿತ್ರವಾದ ಭಾವ-ಭಂಗಿ-ಬಣ್ಣಗಳಲ್ಲಿ ಗೋಡೆಗೋಡೆಗೆ ಮೆತ್ತಲ್ಪಟ್ಟ ಪೋಸ್ಟರುಗಳು, ಸರಕಾರದ ಪ್ರಗತಿಯನ್ನು ತೋರಿಸಲೆತ್ನಿಸುವ ಕಟೌಟುಗಳು, ಸಿಗ್ನಲ್ಲುಗಳು, ಬಣ್ಣಗಳು, ಆಕಾರಗಳು, ಹಾರಾಟಗಳು, ಚೀರಾಟಗಳು, ದೊಂಬರಾಟಗಳು ಒಂದೆರಡಲ್ಲ...

 

ರಸ್ತೆಯ ಪೂರ ಎಲ್ಲವೂ ಎಲ್ಲರನ್ನೂ ತಲುಪಲೇಬೇಕಾದ ಅನಿವಾರ್ಯತೆಯನ್ನು ಹೊತ್ತಂತೆ ದಬರಿಯಿಂದ ಹಾಲು ಉಕ್ಕಿ ಸೋರುವ ಹಾಗೆ ರಸ್ತೆಯ ತುಂಬ ಸೋರುತ್ತಿದ್ದವು.ದಿನನಿತ್ಯದ ಧಾವಂತದ ಬದುಕಿನಲ್ಲಿ ರಸ್ತೆಯ ಮೇಲಿನ ಈ ಜಗನ್ನಾಟಕವನ್ನು ನಾನು ಗಮನಿಸದೇ ಹೋದರೂ ನಮ್ಮ ಮನೆಯ ನಾಕು ಗೋಡೆಯ ಒಳಗೇ ಇವುಗಳ ಮಿಣುಕು ದರ್ಶನ ಮಾಡಿಸಿ ನಮ್ಮಳಗಿನ ಆಸೆ, ಕನಸುಗಳಿಗೆ ಕುಮ್ಮಕ್ಕು ಕೊಡುತ್ತಿದ್ದ ಈ ಟೀವಿಯೆಂಬ ಕನಸಿನ ಕಿಂಡಿಯನ್ನು ನೆನಸಿಕೊಂಡು ಒಂದು ಕ್ಷಣ ನಾನು ಕನಕದಾಸನೇ ಆಗಿಬಿಟ್ಟೆನು!ನನ್ನ ಆಫೀಸಿಗೆ ಹೊಳ್ಳುವ ದಾರಿಯ ಬದಿಗೇ ಯಾಂತ್ರಿಕವಾಗಿ ನನ್ನ ಮೋಟಾರುಬೈಕು ನಿಂತಿತು. ನಾನು ನನ್ನ ದಿನಚರಿಯೆಂಬಂತೆ ಚಪ್ಪಲಿಯನ್ನು ಹೊರಗೆ ಬಿಚ್ಚಿಟ್ಟು ತಿಮ್ಮಪ್ಪನ ಗುಡಿಯ ಮೆಟ್ಟಿಲು ಹತ್ತತೊಡಗಿದೆ. ಚಿಕ್ಕಂದಿನಿಂದಲೂ ಇದೊಂದು ಅಮ್ಮ ರೂಢಿಸಿದ ಅಭ್ಯಾಸವಾಗಿತ್ತು.ಅಷ್ಟೊತ್ತಿಗಾಗಲೇ ವಿದ್ಯುಚ್ಚಾಲಿತ ನಗಾರಿ, ತಾಳ, ಜಾಗಟೆಗಳ ವಾದ್ಯಗೋಷ್ಠಿ ಶುರುವಾಗಿತ್ತು. ಸಾಮಾನ್ಯವಾಗಿ ನಾನು ದೇವಸ್ಥಾನಕ್ಕೆ ಹೋಗುವುದು ನನ್ನ ಬದುಕಿನಲ್ಲಿ ಹಲ್ಲು ಉಜ್ಜಿದಷ್ಟೇ ಸಹಜವಾದ ನನ್ನ ದೈನಂದಿನ ಕ್ರಿಯೆಯಾಗಿತ್ತು ಬಿಟ್ಟರೆ ಅದನ್ನು ಮೀರಿದ ಭಕ್ತಿಯಾಗಲಿ, ಶ್ರದ್ಧೆಯಾಗಲೀ ಇದ್ದಿದ್ದಿಲ್ಲ.ಮುಖ್ಯವಾಗಿ ನಮ್ಮಂಥ ಮಧ್ಯಮವರ್ಗದ ಮಂದಿಗೆ ದೇವರನ್ನು ಕುರಿತು ಭಕ್ತಿಗಿಂತ ಮಿಗಿಲಾಗಿ ಆ ಅಗೋಚರವಾದ ಶಕ್ತಿಯು ನಮ್ಮಂಥವರ ಕ್ಷುಲ್ಲಕ ಭವಿಷ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತ ಭಯವೇ ಹೆಚ್ಚು. ಕಿವಿ ಗುಮ್ ಎನ್ನುವ ವಾದ್ಯಗೋಷ್ಠಿ ಮುಗಿಯುತ್ತಿದ್ದಂತೆ ಸಾಲಿನಲ್ಲಿ ನಿಂತು ದೇವರನ್ನು ನೋಡತೊಡಗಿದೆ.ತಲೆಯ ಮೇಲೆ ವಜ್ರದ ಕಿರೀಟ, ಕೊರಳ ತುಂಬ ಬಗೆಬಗೆಯ ಆಭರಣ, ಪೀತಾಂಬರಗಳನ್ನು ತೊಟ್ಟು ರಾರಾಜಿಸುತ್ತಿದ್ದ ತಿಮ್ಮಪ್ಪನನ್ನು ಎಲ್ಲರೂ ಬಗ್ಗಿಬಗ್ಗಿ ದರ್ಶನ ಮಾಡಿ ಕೈಕೈ ಮುಗಿಯುತ್ತಿದ್ದೆವು.

 

ಪೂಜಾರಿ ಮಂಗಳಾರತಿ ಮಾಡಿ ಅದೇನೇನೋ ಗುನುಗುನು ಮಾಡುತ್ತಿರುವಾಗ ಬಾಗಿಲ ಪಕ್ಕದಲ್ಲಿನ ಬೋರ್ಡೊಂದು ನನ್ನನ್ನು ಸೆಳೆಯಿತು. ದಿನವೂ ಇದ್ದಿರಬಹುದಾದ ಬೋರ್ಡೇ ಆಗಿದ್ದರೂ ಈಗ ಅದು ನನ್ನ ವಿಶೇಷ ಗಮನವನ್ನು ತೆಗೆದುಕೊಂಡಿತು.

 

ಕಿರೀಟದ ದಾನಿಗಳು: ಶ್ರೀ ಶ್ರೀನಿವಾಸರಾಯರು, ಬೆಂಗಳೂರು ಇವರ ಕೊಡುಗೆ ಎಂದು ಬರೆದಿತ್ತು. ಹಾಗೇ ಕೆಳಗೆ ದೇವಸ್ಥಾನದ ಹತ್ತು ಹಲವು ವಸ್ತು, ಪರಿಕರಗಳನ್ನು ಕೊಟ್ಟ ದಾನಿಗಳ ಹೆಸರುಗಳನ್ನು ಸಾಲುಸಾಲಾಗಿ ಕೊಡಲಾಗಿತ್ತು.

 

ಪಕ್ಕದಲ್ಲೇ ಇದ್ದ ಇನ್ನೊಂದು ಬೋರ್ಡು ವಿಶೇಷ ಸೂಚನೆಯ ಅಡಿಯಲ್ಲಿ ಹಾಲು, ಗಂಧ, ಪುಷ್ಪ, ಜೇನು, ತುಪ್ಪ, ಮುಂತಾದ ದ್ರವ್ಯಗಳ ಅರ್ಚನೆ, ಅಭಿಷೇಕಗಳ ಬದಲಾದ ದರಗಳ ಪಟ್ಟಿಕೊಡಲಾಗಿತ್ತು. ಆರತಿ, ತೀರ್ಥ ತೊಗೊಂಡು ಹೊರಬಂದು ನನ್ನ ಗಾಡಿ ಹತ್ತಿ ಆಫೀಸಿಗೆ ಹೊರಟವನಿಗೆ ಇನ್ನೊಂದು ಆಲೋಚನೆ ಹೊಳೆದು ಒಳಗೊಳಗೇ ಉಮೇದುಗೊಂಡೆ.`ಅರೆ! ಸಾಕ್ಷಾತ್ ಆ ದೇವರೆಂಬ ದೇವರೇ ನಮ್ಮನ್ನು ತಲುಪಲು ಅದೆಷ್ಟು ಹರಸಾಹಸ ಮಾಡುತ್ತಿದ್ದಾನಲ್ಲಾ... ದೇವರನ್ನೂ ಸಹ ಪ್ರದರ್ಶಿಸದೇ ನಾವು ನೋಡಲು ಸಾಧ್ಯವೇ ಇಲ್ಲವಲ್ಲ~ ಎನ್ನಿಸಿತು. ಅಲ್ಲಿ ಮೊಳಗುತ್ತಿದ್ದ ವಾದ್ಯಗೋಷ್ಠಿ, ಘಂಟಾನಾದಗಳು, ಮಂಗಳಾರತಿ, ಅರ್ಚನೆಗಳು, ಅಭಿಷೇಕಗಳು ಎಲ್ಲವೂ ದೇವರ ಇರುವಿಕೆಯನ್ನು ಸಾಬೀತುಮಾಡಲು, ಭಕ್ತರ ವಹಿವಾಟನ್ನು ಅಧಿಕಗೊಳಿಸಲು ಇರುವ ವ್ಯಾಪಾರೀ ತಂತ್ರವಲ್ಲವೇ...ಎಂದು ಅಂದುಕೊಳ್ಳುತ್ತಿರುವಾಗಲೇ ನನಗೆ ಶಫಿಯ ನೆನಪಾಯಿತು. ಶಫಿ ತನ್ನ ಅಂಗಡಿಯ ಟೇಬಲ್ಲಿನ ಮೇಲೆ ಇಟ್ಟಿದ್ದ ನಮ್ಮ ಟೀವಿಯ ಹೊರಭಾಗ ನೆನಪಾಯಿತು. ಹಾಗಾದರೆ ಶಫಿ ನಮ್ಮ ಟೀವಿಯನ್ನೂ ತನ್ನ ವ್ಯಾಪಾರದ ಜಾಹೀರಾತಿಗೆ ಬಳಸುತ್ತಿರಬಹುದೇ ಎಂಬ ನನ್ನ ಗುಮಾನಿಗೆ ಇನ್ನೂ ಇಂಬು ಸಿಕ್ಕಿತು.ಇಷ್ಟಕ್ಕೂ ಶಫಿಯೂ ಕೂಡ ತನ್ನ ಅಂಗಡಿಯಲ್ಲಿ ಮುರುಕಲು ಯಂತ್ರಗಳನ್ನು ಪ್ರದರ್ಶಿಸದೇ ಹೋಗಿದ್ದರೆ ನಾನಾದರೂ ನನ್ನ ಟೀವಿಯನ್ನು ಅವನ ಬಳಿ ಹೋಗಿ ಕೊಡಲು ಹೇಗೆ ಸಾಧ್ಯವಾಗುತ್ತಿತ್ತು?ಹೀಗೆ ದಿಕ್ಕು ದಿಸೆಯಿಲ್ಲದ ಅಲೆಮಾರಿ ಆಲೋಚನೆಗಳೊಂದಿಗೆ ಆಫೀಸು ಸೇರಿದೆ. ಹಿಂದಿನ ದಿನ ಕಳಿಸಬೇಕಾಗಿದ್ದ ಪ್ರಪೋಸಲನ್ನು ತುರ್ತಾಗಿ ಕಳಿಸಬೇಕು ಎಂದು ಮೇಲಿನಿಂದ ಹುಕುಮ್ ಬಂತು. ಆ ಹುಕುಮ್ಮಿಗೆ ಹೂಂಗುಟ್ಟಿ ಕಂಪ್ಯೂಟರಿನ ಗುಂಡಿ ಒತ್ತಿ ಅಂತರ್ಜಾಲಕ್ಕೆ ನೆಗೆದೆ.ನಮ್ಮ ಎನ್‌ಜಿಓದ ವೆಬ್‌ಸೈಟನ್ನು ತೆರೆದು ವಿದೇಶದ ಶ್ರೀಮಂತ ಸಂಸ್ಥೆಯೊಂದರ ಮುಖ್ಯಸ್ಥನಿಗೆ ನಿನ್ನೆಯೇ ಕಳಿಸಬೇಕಾಗಿದ್ದ ಪ್ರಪೋಸಲನ್ನು ನೋಡುತ್ತಾ ಕುಳಿತವನಿಗೆ, ಇಷ್ಟು ಹೊತ್ತು ನನ್ನ ಮನಸ್ಸು ಹಾದು ಬಂದ ವಿಚಾರಗಳೆಲ್ಲವೂ ಹಠಾತ್ ದಾಂಗುಡಿಯಿಟ್ಟುಬಿಟ್ಟವು.ಅದ್ಯಾವುದೋ ದೇಶದಲ್ಲಿ ಕುಳಿತವನಿಗೆ ನಾನು ನಮ್ಮೂರ ಸ್ಲಮ್ಮಿನ ಮಕ್ಕಳ ಆರೋಗ್ಯ, ಶಿಕ್ಷಣ, ಸಂಸ್ಕೃತಿಯ ಬಗ್ಗೆ, ನೆರೆಹಾವಳಿಯಲ್ಲಿ ತುತ್ತಾದ ಜನರ ಬಗ್ಗೆ ಅವರನ್ನು ಸಾಧ್ಯವಾದಷ್ಟು ಅಧೋಗತಿಗಿಳಿಸಿ, ನಮ್ಮ ದುಬಾರಿ ಕ್ಯಾಮರಾಗಳಲ್ಲಿ ಸೆರೆಹಿಡಿದ ಅವರ ಹಸಿವು-ಬಡತನದ ಕಡು ಖಾಸಗಿ ದಾರಿದ್ರ್ಯ ಕ್ಷಣಗಳನ್ನು ಲಗತ್ತಿಸಿ, ಅತ್ಯಾಕರ್ಷಕವಾದ ಶೀರ್ಷಿಕೆ-ಸಂಯೋಜನೆಯೊಂದಿಗೆ ರವಾನಿಸಿ, ಎಷ್ಟು ಸಾಧ್ಯವೋ ಅಷ್ಟು ಅವನಲ್ಲಿ ಕರುಣೆ ಹುಟ್ಟಿಸಿ, ಅವನು ತನ್ನ ಕಿಸೆಗೆ ಕೈಹಚ್ಚುವಂತೆ ಮಾಡುವುದು ನನ್ನ ಕೆಲಸವಾಗಿತ್ತು.

 

ಪ್ರಾಜೆಕ್ಟು, ಪ್ರಪೋಸಲ್ಲು, ಬಣ್ಣಬಣ್ಣದ ಮಾತುಗಳನ್ನು ಪೋಣಿಸಿ ಬರೆಯುತ್ತಾ ಬರೆಯುತ್ತಾ, ಅರೆ! ನಾನು ಇಷ್ಟು ಹೊತ್ತು ರಸ್ತೆಯಲ್ಲಿ ನೋಡಿಕೊಂಡು ಬಂದ ಚಿತ್ರಗಳು, ಅವರು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಮಾಡುತ್ತಿದ್ದ ಸಾಹಸಗಳು, ಸರ್ಕಸ್ಸುಗಳು, ಮತ್ತು ನಾನಿಲ್ಲಿ ತಣ್ಣನೆಯ ರೂಮಿನಲ್ಲಿ ಕುಳಿತು ದೂರದೇಶದ ಆಗಂತುಕನನ್ನು ಸೆಳೆಯಲು ಮಾಡುತ್ತಿರುವ ಸರ್ಕಸ್ಸು ಒಂದೇ ಅಲ್ಲವೇ ಅನ್ನಿಸತೊಡಗಿತು.

 

ನಮ್ಮಂಥ ದೊಡ್ಡದೊಡ್ಡ ಸಂಸ್ಥೆಗಳು ನಡೆಸುವ ತಿಮಿಂಗಲ ಸರ್ಕಸ್ಸುಗಳ ಮುಂದೆ ಹತ್ತು ಅಡಿಯ ಪುಟ್ಟ ಅಂಗಡಿಯಲ್ಲಿ ಕೆಲಸಕ್ಕೆ ಬಾರದ ಹಳೇಟೀವೀ, ರೇಡಿಯೋ, ಮಿಕ್ಸಿ, ಫ್ಯಾನು, ಗ್ರೈಂಡರುಗಳನ್ನು ಹರವಿಕೊಂಡು ಗ್ರಾಹಕರನ್ನು ಆಕರ್ಷಿಸಲು ಸಣ್ಣಸಣ್ಣ ದೊಂಬರಾಟ ಮಾಡುತ್ತಾ ಬದುಕುವ ಶಫಿಯು ಸೆಗಣಿ ಉಂಡೆಯನ್ನು ಉರುಳಿಸಿಕೊಂಡು ಬೆಟ್ಟಹತ್ತುವ ಹುಳುವಿನಂತೆ ಕಂಡನು.ಶಫಿಯ ಮೇಲಿದ್ದ ನನ್ನ ಅಸಮಾಧಾನವೆಲ್ಲವೂ ಏಕಾಏಕಿ ಶಮನಗೊಳ್ಳತೊಡಗಿತು. ಅವನು ನಮ್ಮ ಟೀವಿಯನ್ನು ಒಂದು ವಾರ ಬಿಟ್ಟು ರಿಪೇರಿ ಮಾಡಿಕೊಟ್ಟರೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದೆ. ಅವನ ಬಗ್ಗೆ ವಿಚಿತ್ರವಾದೊಂದು ರಕ್ಷಣಾ ಮನೋಭಾವವು ಮೂಡಿ ದೇಶಪ್ರೇಮಿಯಂತೆ ಅವನನ್ನು ಕಾಪಿಟ್ಟುಕೊಳ್ಳುವ ಉದ್ವೇಗದಲ್ಲಿ ಪ್ರಪೋಸಲ್ಲು ಬರೆಯತೊಡಗಿದೆ.ಶಫಿಯ ಬಗೆಗೆ ತಳೆದ ಒಲವಿನ ಪ್ರಫುಲ್ಲತೆಯಲ್ಲಿ ನನ್ನ ಪ್ರಪೋಸಲ್ಲು ಬರೆಯುವ ಶೈಲಿಯೇ ಬದಲಾಗಿ ಬೆರಗಾದೆ. ಸಾಮಾನ್ಯವಾಗಿ ಪೂಸೀ ಬಿಡುತ್ತಾ ಬರೆಯುತ್ತಿದ್ದ ಮಾರ್ಗವನ್ನು ತ್ಯಜಿಸಿ ಆದಷ್ಟು ವಸ್ತುನಿಷ್ಠವಾಗಿ ಬರೆಯತೊಡಗಿದೆ. ನಿಜಕ್ಕೂ ನಾನು ಬರೆದು ಕಳುಹಿಸಿದ ರೀತಿ ನೋಡಿದರೆ ಅದಕ್ಕವ ಸ್ಪಂದಿಸುವುದಿರಲಿ ಎಲ್ಲಿ ನನ್ನ ಕೆಲಸಕ್ಕೇ ಸಂಚಕಾರ ಬರಲಿದೆಯೋ ಎಂದೊಮ್ಮೆ ಅನಿಸದೇ ಇರಲಿಲ್ಲ.ಅಷ್ಟು ಬಿಡುಬೀಸಾಗಿ ಬರೆದು ಕಳಿಸಿಬಿಟ್ಟಿದ್ದೆ. ಹಾಲು ಕುಡಿವ ಉಮೇದಿನಲ್ಲಿ ಬಾಯಿ ಸುಡಿಸಿಕೊಂಡ ಬೆಕ್ಕಿನಂತಾಗಿತ್ತು ನನ್ನ ಸ್ಥಿತಿ. ನಿಜಕ್ಕೂ ಇದು ನನ್ನ ಕೆಲಸಕ್ಕೇ ಸಂಚಕಾರ ತಂದರೂ ಆಶ್ಚರ್ಯವಿರಲಿಲ್ಲ!ಸಂಜೆಯಾಗಬಂದಿತ್ತು. ಎಲ್ಲರೂ ಹೊರಡಲು ಅಣಿಯಾಗುತ್ತಿದ್ದರು. ಅಮ್ಮ ಬೆಳಗ್ಗೆ ಹೊರಡುವಾಗಲೇ ಹೇಳಿಕಳಿಸಿದ್ದಳು. `ಅವ ಏನ್ ಟೀವೀ ರಿಪೇರಿ ಮಾಡಿ ಕೊಡ್ತಾನೋ ಇಲ್ಲೋ ಬರೋಬ್ಬರಿ ಕೇಳಿ ಬಾ~. ಗಾಡಿ ಹತ್ತಿದವನೇ ಸೀದಾ ಶಫಿಯ ಅಂಗಡಿ ಮುಂದೆ ಹೋಗಿ ನಿಲ್ಲಿಸಿ ನೋಡಿದರೆ ಅಂಗಡಿ ಬಾಗಲಾ ಹಾಕಿತ್ತು!ದಿನವೂ ರಾತ್ರಿ ಹತ್ತುಹತ್ತೂವರೆಯ ತನಕಾ ತೆರೆದಿರುತ್ತಿದ್ದ ಶಫಿ ಇವತ್ತು ಸಂಜೆ ಏಳಕ್ಕೇ ಬಾಗಿಲು ಹಾಕಿದ್ದಾದರೂ ಯಾಕೆಂದು ಪಕ್ಕದಲ್ಲಿ ವಿಚಾರಿಸಿದ್ದಕ್ಕೆ ಮಧ್ಯಾಹ್ನವೇ ಶಫಿಗೆ ಅರ್ಜಂಟ್ ಫೋನು ಬಂದು ಊರಿಗೆ ಹೋದನೆಂಬ ಸುದ್ದಿ ಸಿಕ್ಕಿತು. ಇವತ್ತೂ ಟೀವಿಯಿಲ್ಲದ ನನ್ನ ಸಂಜೆಯ ಬದುಕನ್ನು ನೆನೆಸಿಕೊಂಡು ನಿರಾಶನಾದೆ. ಮಧ್ಯಾಹ್ನದಷ್ಟೊತ್ತಿಗೆ ರೆಡಿಯಾಗಲಿದೆ ಎಂದು ಬೆಳಗ್ಗೆಯಷ್ಟೇ ಹೇಳಿದ್ದ ಶಫಿ.

 

ಟೀವಿ ಕೊಟ್ಟಾದರೂ ಹೋಗಬಾರದಿತ್ತೇ ದರಿದ್ರದವನು ಎಂದುಕೊಂಡೆ. ಈಗ ಅಮ್ಮನಿಗೆ ಏನು ಹೇಳುವುದು. ಮನೆಯಲ್ಲಿ ಅಮ್ಮ ಸುಮತಿ ಇಬ್ಬರೂ ಸಂಪರ್ಕಿಸಲಾಗದ ಎರಡು ಗ್ರಹಗಳಂತೆ ಅತ್ತೆ-ಸೊಸೆಯರೆಂಬ ಎರಡು ಕಕ್ಷೆಗಳಲ್ಲಿ ಸುತ್ತುತ್ತಿರುವಾಗ ಇಬ್ಬರನ್ನೂ ಬೆಸೆದು ತನ್ನ ಗುರುತ್ವದ ಶಕ್ತಿಯಿಂದ ಹಿಡಿದಿಟ್ಟುಕೊಂಡದ್ದೇ ಈ ನಮ್ಮ ಟೀವೀ ಮಹಾರಾಜರು.ಈಗ ಮಹಾರಾಜರೇ ಇಲ್ಲದ ನಮ್ಮ ಮನೆಯೆಂಬ ರಾಜ್ಯದ ಸ್ಥಿತಿ ಸ್ಮಶಾನದಂತೆ ಆಗಿದೆ. ಒಳಗೊಳಗೇ ನಡೆಯುವ ಅಮ್ಮ ಸುಮತಿಯರ ತಿಕ್ಕಾಟಗಳು ಟೀವಿಯಿಲ್ಲದ ಈ ಹದಿನೈದಿಪ್ಪತ್ತು ದಿನಗಳಲ್ಲಿ ನನಗೆ ಚೆನ್ನಾಗಿ ತಟ್ಟಿದೆ. ಹಗಲು ಅದೂಇದೂ ಕೆಲಸಗಳಲ್ಲಿ ತೊಡಗಿ ಹೇಗೋ ಸಮಯ ಹೋಗಬಹುದು.

 

ಆದರೆ ಸಂಜೆಯಾಗುತ್ತಿದ್ದಂತೆ ಟೀವಿಯಿಲ್ಲದ ಮನೆ ಸ್ಮಶಾನದಂತೆ ಒಂದು ದೊಡ್ಡ ಜೀವಂತ ಅಸ್ತಿತ್ವವೊಂದರ ಗೈರುಹಾಜರು ನಮ್ಮನ್ನು ಬಿಡದೆ ಕಾಡುತ್ತದೆ. ಒಂದು ಮಾತಿಲ್ಲದೆ, ಧಾರಾವಾಹಿಯಿಲ್ಲದೆ, ಜಾಹೀರಾತುಗಳಿಲ್ಲದೆ, ಗದ್ದಲವಿಲ್ಲದೆ, ಒಟ್ಟಿನಲ್ಲಿ ಮನುಷ್ಯಭಾವಗಳ, ಅಸ್ತಿತ್ವಗಳ ಕುರುಹೇ ಇಲ್ಲದಂತೆ ಅಮ್ಮ ಒಂದು ಕಡೆ, ಸುಮತಿ ಒಂದು ಕಡೆ ಮುಗುಮ್ಮೋಗಿ ಕುಳಿತುಬಿಡುತ್ತಾರೆ.ನಾನು ಮನೆಗೆ ಹೋಗುತ್ತಿದ್ದಂತೆ ಈ ಮೌನದ ಮೋಡ ಹರ್ಕೊಂಡು ನನ್ನ ಮೇಲೆ ಬೀಳುತ್ತದೆ. ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಡುತ್ತಿದ್ದದ್ದು ನಿಚ್ಚಳವಾಗಿ ಕಾಣತೊಡಗಿದೆ. ನಿನ್ನೆಯಷ್ಟೇ ಮಧ್ಯಾಹ್ನ ಊಟವನ್ನೂ ಮಾಡದೇ ಪಕ್ಕದ ಮನೆಗೆ ಹೋಗಿ ಕುಳಿತವಳು ನಾನು ಮನೆಗೆ ಬಂದ ಎಷ್ಟೋ ಹೊತ್ತಿನ ಮೇಲೆ ಎದ್ದುಬಂದಿದ್ದಳು ಅಮ್ಮ.ಒಬ್ಬೊಬ್ಬರ ಆರೋಪ ಪ್ರತ್ಯಾರೋಪಗಳನ್ನು ಕೇಳುತ್ತಿದ್ದಂತೆ ನನಗೆ ರೋಸಿಹೋಗುತ್ತದೆ. ಇಬ್ಬರ ಮೇಲೂ ಚೀರಾಡಿ ಹಾರ‌್ಯಾಡಿ ಕಡೆಗೆ ಸುಮತಿಗೆ ನಾಕು ಬಡ್ತ ಬಡಿದು ನನ್ನ ಉದ್ವೇಗವನ್ನು ತಣಿಸಿಕೊಳ್ಳುತ್ತೇನೆ.ಉಪಸಂಹಾರವೆಂಬಂತೆ ಇಬ್ಬರೂ ಅತ್ತುಕೊಂಡು ಮೂಲೆ ಹಿಡಿದುಬಿಡುತ್ತಾರೆ. ಅಲ್ಲಿಗೆ ಆ ದಿನ ಮುಗಿಯಿತು ಎಂದು ಅರ್ಥ. ಅತ್ತೆ-ಸೊಸೆಯ ಜಗಳಕ್ಕೆ ಇಂಥದ್ದೇ ಕಾರಣ ಬೇಕು ಎಂದೇನೂ ಇರಲಿಲ್ಲ. ನಾಯಿ ಬೊಗಳಿದರೂ ಆಗಬಹುದು, ಕಾಗೆ ಕೂಗಿದರೂ ಆಗಬಹುದು. ಇಬ್ಬರನ್ನೂ ಸಂಭಾಳಿಸುವಷ್ಟರಲ್ಲಿ ನನಗೆ ಸಾಕು ಸಾಕಾಗುತ್ತದೆ.ಒಟ್ಟಿನಲ್ಲಿ ಟೀವಿಯಿಲ್ಲದ ಈ ಇಪ್ಪತ್ತು ದಿನಗಳು ನನ್ನ ಬದುಕಿನಲ್ಲಿ ಹಲವು ಪಾಠಗಳನ್ನು ಕಲಿಸುತ್ತಾ ಬಂದಿವೆ. ಆದರೆ ಆಶ್ಚರ್ಯವೆಂದು ನನಗೆ ಈಗಲೂ ಅನ್ನಿಸುವುದು ಟೀವಿಯೆಂಬ ಒಬ್ಬ ನಿರ್ಜೀವ ಮಾಂತ್ರಿಕ ಮಹಾರಾಜನು ಅದು ಹೇಗೆ ಇವರನ್ನು, ಇವರ ಜೀವಂತ ಭಾವನೆಗಳನ್ನು ಗ್ರಹಿಸಿ, ತಲುಪಿ ತನ್ನ ಗ್ರಾಹಕನನ್ನಾಗಿ ಮಾಡಿಕೊಂಡಿದ್ದ ಎಂದು!ನಡುನೀರಿನಲ್ಲಿ ಅಂಗಡಿ ಬಾಗಿಲು ಜಡಿದುಕೊಂಡು ಹೋದ ಶಫಿಯ ಬಗ್ಗೆ ಶಪಿಸಿಕೊಳ್ಳುತ್ತಾ ಅಮ್ಮನಿಗೆ ಹೇಗೆ ಹೇಳುವುದು ಎಂದು ಆಲೋಚಿಸುತ್ತಾ ಮನೆ ಕಡೆಗೆ ಹೊರಟೆ. ಮತ್ತೊಮ್ಮೆ ರಸ್ತೆಯ ತುಂಬ ಉಕ್ಕಿ ಸೋರುತ್ತಿದ್ದ ಅದೇ ದೃಶ್ಯಗಳು, ದೃಶ್ಯವೆಲ್ಲ ಬೆಳಗ್ಗೆ ಕಂಡ್ದ್ದದೇ, ಆದರೆ ತೊಟ್ಟಿರುವುದು ಮಾತ್ರ ರಾತ್ರಿವೇಷ.

 

ಅವವೇ ಅಂಗಡಿಗಳು, ದೇವಸ್ಥಾನಗಳು, ಅವವೇ ಚರ್ಚುಗಳು, ಮಸೀದಿಗಳು, ಆಸ್ಪತ್ರೆಗಳು... ಇಡೀ ಜಗತ್ತೇ, ಅಷ್ಟೇ ಏಕೆ ದೇವರೇ ತನ್ನನ್ನು ತಾನು ಹೇಗೆಲ್ಲಾ ತಲುಪಬಹುದು ಎಂದು ಹಪಹಪಿಸುತ್ತಿರುವಾಗ ಉಸಿರು ತಾಗುವಷ್ಟು ಹತ್ತಿರಹತ್ತಿರ ಬದುಕುತ್ತಿರುವ ಅಮ್ಮ ಮತ್ತು ಸುಮತಿ ಮಾತ್ರ ಯಾಕೆ ಪರಸ್ಪರ ತಲುಪುತ್ತಿಲ್ಲ? ಟೀವಿ ಎಂಬ ಯಂತ್ರವನ್ನು ದುಡ್ಡುಕೊಟ್ಟಾದರೂ ರಿಪೇರಿ ಮಾಡಿಸಬಹುದು. ಆದರೆ ಮನುಷ್ಯ ಸಂಬಂಧಗಳನ್ನು ಎಲ್ಲಿ ರಿಪೇರಿ ಮಾಡಿಸುವುದು? ಅದನ್ನು ರಿಪೇರಿ ಮಾಡಿಕೊಡುವ ಶಫಿ ಎಲ್ಲಿದ್ದಾನೆ?ಟೀವಿಯಿಲ್ಲದೆ ಬರಿಗೈಯ್ಯಲ್ಲಿ ಮನೆಗೆ ಬಂದದ್ದು ಕಂಡು ಅಮ್ಮ ಮತ್ತೆ ಯಥಾವತ್ ಕಿಟಿಪಿಟಿ ಶುರುಹಚ್ಚಿಕೊಂಡಳು. ಸುಮತಿಯೂ ಬಂದು ನನ್ನ ಬರಿಗೈಯನ್ನು ದುರುದುರು ನೋಡುತ್ತಾ ಒಳಗೆ ಹೋದಳು. ಅಂತರಂಗದಲ್ಲಿ ನಾವು ಮೂರೂ ಮಂದಿ ಎಲ್ಲಿಂದಲೋ ನಮ್ಮನ್ನು ಉದ್ಧರಿಸಲು ಬರುವ ಅವಧೂತನನ್ನು ನಿರೀಕ್ಷಿಸುತ್ತಿರುವಂತೆ ಶಫಿಯ ಅಂಗಡಿಯಿಂದ ಬರುವ ನಮ್ಮ ಟೀವಿ ಮಹಾರಾಜರ ದಾರಿ ಕಾಯುತ್ತಿದ್ದೆವು!ನಾನು ಎಲ್ಲವನ್ನೂ ಅಮ್ಮನಿಗೆ ಬಿಡಿಸಿ ಹೇಳಿದೆ. ಶಫಿ ನನ್ನಿಂದ ಎರಡು ಮೂರು ಸಲ ದುಡ್ಡು ಕಿತ್ತಿದ್ದು, ಇವತ್ತು ಕೊಟ್ಟೇಕೊಡುತ್ತೇನೆ ಎಂದು ಹೇಳಿದ್ದದ್ದು, ಅಂಗಡಿ ಬಾಗಿಲು ಹಾಕಿಕೊಂಡು ಊರಿಗೆ ಹೊರಟುಹೋದದ್ದು ಎಲ್ಲವನ್ನೂ ಹೇಳಿದೆ.

 

ಅಮ್ಮ ಆಘಾತವಾದವಳಂತೆ ರಿಪೇರಿಯಾದ ಮೇಲೆ ದುಡ್ಡುಕೊಡುವುದು ಬಿಟ್ಟು ಮೊದಲೇ ಕೊಟ್ಟಿದ್ದಕ್ಕೆ ನನ್ನ ಮೇಲೆ ಉಪದೇಶಗಳ ಸುರಿಮಳೆಗೈದಳು. ಅಪ್ಪ ಸತ್ತ ನಂತರ ಕಾಸಿಗೆ ಕಾಸು ಕೂಡಿಹಾಕಿ ನನ್ನನ್ನು ಬೆಳೆಸಿದ್ದು ಅದೂಇದೂ ಎಂದು ಮಾಮೂಲೀ ವರಸೆಗಳನ್ನು ಶುರುಹಚ್ಚಿಕೊಂಡಳು.ಬೆಳಗ್ಗೆಯಿಂದಲೂ ನನ್ನ ತಲೆ ಚಿಟ್ಟುಹಿಡಿದು ಹೋಗಿರುವಾಗ ಮತ್ತೆ ನಾನು ಇದನ್ನು ಸಹಿಸಿಕೊಳ್ಳಲು ತಯ್ಯಾರಿಲ್ಲದೆ ರೂಮು ಹೊಕ್ಕು ಬಿದ್ದುಕೊಂಡೆ. ಅಮ್ಮನ ಉಪದೇಶಗಳ ಜೋಗುಳಕ್ಕೆ ನನಗೆ ಜೊಂಪುನಿದ್ದೆ ಹತ್ತಿತು. ಹತ್ತೂವರೆಯ ಸುಮಾರು ಸುಮತಿ ಬಂದು ಊಟಕ್ಕೆ ಎಬ್ಬಿಸಿದಾಗಲೇ ಎಚ್ಚರಾಗಿದ್ದು.

 

ಅದು, ನಾನು `ಕ್ರೈಮ್‌ಡೈರಿ~ ನೋಡುವ ಸಮಯ. ಈಗ ಟೀವಿ ಇಲ್ಲದೆ, ಊಟ ಮಾಡುವ ಮೂಡೂ ಇಲ್ಲದೆ ನಿದ್ದೆಯ ಜೊಂಪಿನಲ್ಲೇ ಊಟದ ಶಾಸ್ತ್ರ ಮುಗಿಸಿ ಮತ್ತೆ ಬಂದು ಬಿದ್ದುಕೊಂಡೆ. ಆದರೆ ಹಾಸಿಗೆಯಲ್ಲಿ ಉರುಳಾಡಿದ್ದಷ್ಟು ಬಂತೇ ಹೊರತು ಕಣ್ಣಿಗೆ ಬಿಡಿಗಾಸೂ ನಿದ್ದೆ ಹತ್ತಲಿಲ್ಲ. ಈ ನಡುವೆ ಸುಮತಿಯೂ ರಾತ್ರಿಯ ಉರುಳುಸೇವೆಯನ್ನು ನಿಲ್ಲಿಸಿಬಿಟ್ಟಿದ್ದಳು.ಎಷ್ಟೇ ಒತ್ತಾಯಿಸಿದರೂ ನಿರಾಕರಿಸುತ್ತಿದ್ದಳು. ಟೀವಿಯಿಲ್ಲದ ಮನೆಯಲ್ಲಿ ಕಾಮವಿರಲಿ ಹಲವು ಬಾರಿ ಬೆಳಗಿನ ಸಂಡಾಸೂ ಬರದೆ ಬಿಗಡಾಯಿಸುತ್ತಿತ್ತು ಎಂದರೆ ನೀವು ನಂಬಲಿಕ್ಕಿಲ್ಲ! ತುಣುಕು ತುಣುಕು ನಿದ್ದೆಯಲ್ಲಿ ತುಣುಕು ತುಣುಕು ಕನಸುಗಳು.

ಕನಸುಗಳು ಎನ್ನುವುದಕ್ಕಿಂತ ಚಿತ್ರಿಕೆಗಳು ಎಂದು ಹೇಳುವುದೇ ಒಳಿತು.

ಫೋಟೋ ಫ್ಲಾಶು ಹೊಡೆದಂತೆ ಚಿತ್ರಿಕೆಗಳು ತುಣುಕು ತುಣುಕಾಗಿ ಬಂದು ಕ್ಷಣಕಾಲ ಮಿಣುಕಿ ಮಿಣುಕಿ ಹೋಗುತ್ತಿದ್ದವು.ಆ ಭಗವಂತನೆಂಬ ಆಗಂತುಕನು ಈ ಭೂಮಿಯನ್ನೇ ತನ್ನ ಟೀವಿಯನ್ನಾಗಿ ಮಾಡಿಕೊಂಡು ತನ್ನ ಕಯ್ಯಲ್ಲಿನ ಬೃಹತ್ ಗಾತ್ರದ ರಿಮೋಟು ಒತ್ತುತ್ತಾ ಲೀಲಾಜಾಲವಾಗಿ ಪವಡಿಸಿರುವಂತೆ!ಅವನು ನೋಡುತ್ತಿದ್ದ ಚಾನಲ್ಲುಗಳಿಗೆ ಲೆಕ್ಕವೇ ಇಲ್ಲ.

ಕ್ಷಣ ಕ್ಷಣಕ್ಕೂ ಚಾನಲ್ಲು ಬದಲಿಸುತ್ತಿದ್ದಾನೆ. ಒಮ್ಮೆ ನೋಡಿದ ಚಾನಲ್ಲನ್ನು ಮತ್ತೆಂದೂ ನೋಡಲೊಲ್ಲ.ಅವನು ನೋಡುವ ಒಂದುಕ್ಷಣ ಭೂಮಂಡಲದ ಸಾವಿರ ಸಾವಿರ ವರ್ಷಗಳಿಗೆ ಸಮ!

ಒಮ್ಮೆ ಅವನು ರಿಮೋಟು ಒತ್ತಿದರೆ ಭೂಮಿಯೇ ಕಂಪಿಸುತ್ತಾ ಒಮ್ಮೆ ಭರ‌್ರನೆ ತಿರುಗಿ ದೊಡ್ಡ ಸ್ಫೋಟದೊಂದಿಗೆ ಕಾಲವು ಕಲ್ಪ, ಮನ್ವಂತರ, ಯುಗ ಯುಗವೇ ಆಗಿ ಬದಲಾಗುತ್ತಿದೆ.ಕಾಲದ ಜೊತೆಗೆ ಪಾತ್ರಗಳೂ, ಪಾತ್ರದ ಜೋಡಿ ವೇಷ, ವೇಷದೊಂದಿಗೆ ಭಾಷೆ, ಭಾಷೆಯೊಂದಿಗೆ ಬಂಧ ಎಲ್ಲವೂ ಚಕಾಚಕ್ಕನೆ ಬದಲಾಗುತ್ತಿದೆ.

ರಿಮೋಟು ಒತ್ತಿದ ಒಂದು ಸಣ್ಣ ಶಬ್ದದೊಂದಿಗೆ ಕೃತಯುಗ ಬಂದಿತು.

ಕ್ಷಣಾರ್ಧದಲ್ಲೇ ತ್ರೇತಾಯುಗ ಬಂದಿತು.ಅರೆ! ರಾಮ ಬಂದ ಎನ್ನುವಷ್ಟರಲ್ಲಿ ಭಗವಂತನು ರಿಮೋಟು ಒತ್ತಿದ.

ಧಡಾರೆನ್ನುವ ಶಬ್ದದೊಂದಿಗೆ ದ್ವಾಪರಯುಗ ಬಂದಿತು.

ಕೃಷ್ಣನ ಕಣ್ತುಂಬ ನೋಡನೋಡುತ್ತಿದ್ದಂತೆ ಭಗವಂತನು ಒತ್ತಿದ ರಿಮೋಟಿನ ಶಬ್ದವೇ ದೊಡ್ಡದಾಗಿ ಮರುಗಳಿಗೆಯೇ ಭೂಮಿಯ ತಿರುಗುವ ಶಬ್ದಗಳೊಂದಿಗೆ ಕಲಿಯುಗ ಬಂದಿತು.ನಿರಂತರ ಕರ್ಕಶ ವಿಕರಾಳವಾದ ಮನುಷ್ಯರ, ವಾಹನಗಳ, ಯಂತ್ರಗಳ ಶಬ್ದಗಳೊಂದಿಗೆ ಭಗವಂತನ ರಿಮೋಟಿನ ಶಬ್ದವಿರಲಿ ನಾವಾಡುವ ನಮ್ಮನಮ್ಮ ಮಾತುಗಳೇ ನಮಗೆ ಕೇಳದಂಥ ಆರ್ಭಟ, ಸಿಡಿತ, ಸ್ಫೋಟ, ಹಾಹಾಕಾರ...ಭಗವಂತನ ರಿಮೋಟೇ ಕೆಟ್ಟಿದೆಯೇನೋ ಎಂಬುವಂತೆ ಅಥವಾ ಅವನ ರಿಮೋಟಿನ ಪವರ‌್ರೇ ಕಡಿಮೆಯಾದಂತೆ, ಅದರಿಂದ ಅರ್ಧರ್ಧ ಸಂಕೇತಗಳು ತಲುಪಿ ಸ್ಫೋಟದ ಮೇಲೆ ಸ್ಫೋಟ, ಸ್ಫೋಟದ ಮೇಲೆ ಸ್ಫೋಟ ಸಂಭವಿಸುತ್ತಿರುವಾಲೇ ನನ್ನ ದಿಂಬಿನ ಅಡಿಯಲ್ಲೇ ದಿಢೀರನೆ ಏನೋ ಸಿಡಿಯೇತೇನೋ ಎನ್ನುವಂಥ ಮಹಾಸ್ಫೋಟದೊಂದಿಗೆ ಧಿಗ್ಗನೆ ಎಚ್ಚರಾಯಿತು.ಎದ್ದು ಹಾಸಿಗೆಯಲ್ಲಿ ಕಣ್ಣು ತಿಕ್ಕಿಕೊಳ್ಳುತ್ತಾ ಕುಳಿತಿದ್ದವಗೆ ಒಳಮನೆಯವರೆಗೂ ಬೀದಿಯ ಜನರ ಕಚಪಚ ಮಾತುಕತೆಗಳು ಜಡಿಮಳೆಯಂತೆ ಎರಚುತ್ತಿದ್ದವು. ಎದ್ದು ಹೊರಬಂದು ಏನಾಯ್ತೆಂದು ವಿಚಾರಿಸಿದರೆ, ನನ್ನನ್ನು ಕರುಣಾಜನಕವಾಗಿ ಅನಕ್ಷರಸ್ಥರನ್ನು ನೋಡುವಂತೆ ನೋಡಿ, `ಅಯ್ಯೋ ಏನ್ರೀ ರೀ... ನಿಮಗಿನ್ನೂ ಗೊತ್ತಿಲ್ವಾ... ನಿನ್ನೆ ರಾತ್ರಿ ಒಂದು ಗಂಟೆ ಸುಮಾರಿಗೆ ಮಡಿವಾಳ ಮೇಯ್ನರೋಡಿನಲ್ಲಿ ಟೆರ‌್ರರಿಸ್ಟುಗಳು ಬಾಂಬ್ ಬ್ಲಾಸ್ಟ್ ಮಾಡಿದ್ದಾರಂತೆ!ಐದಾರ‌್ಕಡೆ ಬ್ಲಾಸ್ಟ್ ಮಾಡಿದ್ದಾರಂತೆ. ಇವತ್ತು ಪೂರ್ತಿ ಬೆಂಗ್ಳೂರ್ ಬಂದ್ ಅಂತೆ~ ಎಂದು ಹೇಳಿ ತಾವು ಓದುತ್ತಿದ್ದ ಪೇಪರನ್ನೇ ನನಗೂ ಕೊಟ್ಟರು. ಟೀವಿ ಇಲ್ಲದ್ದರಿಂದ ಇಡೀ ಜಗತ್ತೇ ನಮಗೆ ಎಷ್ಟು ತಡವಾಗಿ ತಲುಪುತ್ತಿದೆಯಲ್ಲಾ ಎನ್ನಿಸಿ ಪೇಪರು ನೋಡಿದೆ. ನಮ್ಮ ಏರಿಯಾದಲ್ಲೇ ಎರಡು ಕಡೆ ಬಾಂಬು ಸಿಡಿದಿದೆ.ಅರೆ! ಒಂದಂತೂ ನನಗೆ ತೀರಾ ಪರಿಚಿತವಾದ ಜಾಗ ಅನ್ನಿಸಿ ನೋಡಿದರೆ ಅದು ಶಫಿಯ ಅಂಗಡಿಯ ಮುಂಭಾಗದ ಮೋರಿ! ತಕ್ಷಣ ಪಕ್ಕದ ಮನೆಗೆ ಹೋದವನೇ ಟೀವಿ ನೋಡಲು ಕುಳಿತೆ. ಶಫಿಯ ಅಂಗಡಿಯ ಮುಂದೆಯೇ ಬಾಂಬು ಸಿಡಿದಿತ್ತು. ಸಿಡಿದ ರಭಸಕ್ಕೆ ಅಂಗಡಿಯ ಶಟರ‌್ರೇ ತಗ್ಗು ಬಿದ್ದಿತ್ತು.ಪೋಲೀಸಿನವರು, ಬಾಂಬು ನಿಷ್ಕ್ರಿಯದಳದವರು ಜಮಾಯಿಸಿದ್ದರು. ಅಷ್ಟು ಹೊತ್ತಿಗೆ ಅಮ್ಮನೂ ಬಂದುನಿಂತು ಟೀವಿ ನೋಡತೊಡಗಿದಳು. ಪದೇಪದೇ ಟೀವಿಯವರು `ಶಫಿ ಎಲೆಕ್ರ್ಟಿಕಲ್ಸ್~ ಎಂಬ ಬೋರ್ಡನ್ನು ತೋರಿಸುತ್ತಲೇ ಇದ್ದರು.ನೋಡನೋಡುತ್ತಲೇ ಪೋಲೀಸಿನವರು ಶಫಿಯ ಅಂಗಡಿಯ ಬಾಗಿಲನ್ನು ಒಡೆದು ಒಳಹೊಕ್ಕು ಪರಿಶೀಲಿಸತೊಡಗಿದರು. ನಮ್ಮ ಟೀವಿ ಶಫಿಯ ಅಂಗಡಿಯ ಟೇಬಲ್ಲಿನ ಮೇಲೆಯೇ ಕುಳಿತಿತ್ತು, ಇನ್ನೇನು ನಮ್ಮ ಮನೆ ಸೇರಲು! ಅಮ್ಮನಿಗೆ ನಮ್ಮ ಟೀವಿ ತೋರಿಸಿದೆ.ಪಕ್ಕದ ಮನೆಯವರ ಟೀವಿಯಲ್ಲಿ ನಮ್ಮ ಮನೆಯ ಟೀವಿಯನ್ನು ನೋಡಿ ಅಮ್ಮ ಅದೇನು ಆಶ್ಚರ್ಯಪಡುತ್ತಿದ್ದಾಳೋ... ಅಥವಾ ಸಂಕಟಪಡುತ್ತಿದ್ದಾಳೋ ನೋಡಹೋಗಲಿಲ್ಲ. ಕಡೆಗೆ ಅಲ್ಲೆಲ್ಲಾ ಶೋಧ ನಡೆಸಿದ ಬಾಂಬು ನಿಷ್ಕ್ರಿಯದಳದವರು ಅಲ್ಲಿಂದ ಹೊರಬಂದರು. ಅಷ್ಟೊತ್ತಿಗಾಗಲೇ ಹಿಂದೂಪರ ಸಂಘಟನೆಗಳು ಶಫಿ ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿರುವುದಕ್ಕೂ ಈ ಕೃತ್ಯಕ್ಕೂ ಸಂಬಂಧ ಕಲ್ಪಿಸಿ, ಅವನ ಅಂಗಡಿಯ ಮೇಲೆ ಕಲ್ಲುತೂರಾಟ ನಡೆಸಿ ಕ್ಯಾಮೆರಾದ ಕಣ್ಣೆದುರಿಗೇ ದಾಳಿ ನಡೆಸಿ ಕ್ಷಣಾರ್ಧದಲ್ಲಿ ಎಲ್ಲವನ್ನು ನುಚ್ಚುನೂರು ಮಾಡಿದರು.

 

ಒಂದಿಬ್ಬರು ಅವನ ಅಂಗಡಿಯ ಬೋರ್ಡು ಕಿತ್ತರು. ಯಾವನೋ ಕೇಸರಿಪಟ್ಟಿ ಕಟ್ಟಿಕೊಂಡವನೊಬ್ಬ ಬಂದವನೇ ಭಗವಂತನ ಹೆಸರುಹೇಳಿ ನಮ್ಮ ಟೀವಿಯನ್ನು ಎತ್ತಿ ರಸ್ತೆಗೆ ಎಸೆದನು. ಅವನು ಎಸೆದ ರಭಸಕ್ಕೆ ನಮ್ಮ ಟೀವಿಯು ಸಹಸ್ರ ಚೂರುಗಳಾಗಿ ಚೆಲಾಪಿಲ್ಲಿಯಾಯಿತು.

 

ಇದನ್ನು ನೊಡುತ್ತಿದ್ದ ಅಮ್ಮನ ಹೃದಯವು ಚೂರಾಯಿತೇ? ನಾನು ನೋಡಲಿಲ್ಲ. ಎಸೆದವನಿಗೆ ನಮ್ಮ ಟೀವಿಯ ಆನ್ ಬಟನ್ನಿನ ಪಕ್ಕ ಅಮ್ಮ ಅಂಟಿಸಿದ್ದ ಸಿದ್ಧಾರೂಢರ ಸ್ಟಿಕ್ಕರು ಕಾಣಲೇ ಇಲ್ಲ! ನಾವೆಲ್ಲರೂ ಇಂಡಿಯಾ ಪಾಕಿಸ್ತಾನದ ಮ್ಯಾಚು ನೋಡುವಂತೆ ಬಿಟ್ಟಕಣ್ಣು ಬಿಟ್ಟಹಾಗೆ ಕೂತು ಟೀವಿಯಲ್ಲಿ ಐಕ್ಯರಾಗಿದ್ದೆವು. ಯಾರು ಗೆಲ್ಲಬೇಕು, ಯಾರು ಸೋಲಬೇಕು ಏನೂ ನಿರ್ಣಯಿಸಲಾರದಂಥ ಧಾವಂತ ಸ್ಥಿತಿಯಲ್ಲಿ.ಅಲ್ಲ, ನನ್ನ ಕನಸಿನಲ್ಲಿ ಭಗವಂತನ ರಿಮೋಟು ಕೆಟ್ಟಿದ್ದಕ್ಕೂ, ಶಫಿ ನಿನ್ನೆಯಿಂದ ಕಾಣೆಯಾಗಿರುವುದಕ್ಕೂ ಏನಾದರೂ ಸಂಬಂಧವಿದೆಯೇ? ಅಥವಾ ಆ ಭಗವಂತನೇ ಶಫಿಯನ್ನು ತನ್ನ ರಿಮೋಟು ರಿಪೇರಿಗೆಂದು ಕರೆಸಿಕೊಂಡನೇ?

ಗೊತ್ತಿಲ್ಲ.ಮುಂದೆರಡು ವಾರ ದೇಶದ ಪೂರ ಇದೇ ಸುದ್ದಿ. ಸಣ್ಣ ಬೆಳವಣಿಗೆಯೂ ವ್ಯಾಪಕ ಪ್ರಚಾರವನ್ನು ಪಡೆದುಕೊಳ್ಳುತ್ತಿತ್ತು. ಈ ನಡುವೆ ಶಫಿಯನ್ನು ಬಂಧಿಸಿದ ಪೋಲಿಸರು ಅವನನ್ನು ವಿಚಾರಣೆಗೆ ಒಳಪಡಿಸಿದರು. ದಪ್ಪ ಗಾಜಿನ ಕನ್ನಡಕದ ಶಫಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸುತ್ತಾ, ಅರಸೀಕೆರೆಗೆ ಬಂದಿದ್ದ ಫ್ರೀಕ್ಯಾಂಪಿನಲ್ಲಿ ತನ್ನ ತಾಯಿಗೆ ಕಣ್ಣಿನ ಆಪರೇಶನ್ ಮಾಡಿಸಲು ಹೋಗಿದ್ದಾಗಿಯೂ ತಾನು ನಿರಪರಾಧಿ ಎಂದು ಹೇಳಿಕೊಳ್ಳುತ್ತಿದ್ದ ರೀತಿ ಮಾರ್ಮಿಕವಾಗಿತ್ತು.ದಿನವೂ, `ನಾಳೆ ಕೊಡ್ತೀನಿ, ನಾಡಿದ್ದು ಕೊಡ್ತೀನಿ~ ಎಂದು ನನ್ನನ್ನು ಸತಾಯಿಸುತ್ತಿದ್ದ ಶಫಿ ಇವನೇನಾ ಎಂದು ಒಂದು ಕ್ಷಣ ಅನ್ನಿಸದೇ ಇರಲಿಲ್ಲ. ಮೂರ‌್ನಾಕು ದಿನಗಳಲ್ಲಿ ಜನಜೀವನ ಹಾದಿಗೆ ಬಂದು ನಾನು ಮತ್ತೆ ಆಫೀಸಿಗೆ ಹೋಗತೊಡಗಿದೆ.ಹೋಗುವಾಗೊಮ್ಮೆ ಬರುವಾಗೊಮ್ಮೆ ಶಫಿಯ ಅಂಗಡಿಯ ಕಡೆ ನೋಡದೆ ಹೋಗಲಾಗುತ್ತಲೇ ಇರಲಿಲ್ಲ. ತಿಂಗಳಾಗ ಬಂದರೂ ಮುಚ್ಚಿದ ಅಂಗಡಿ ಬಾಗಿಲು ತರೆಯಲೇ ಇಲ್ಲ.ಈ ನಡುವೆ ನಾನು ತಿಂಗಳ ಹಿಂದೆ ಕಳುಹಿಸಿದ್ದ ಪ್ರಪೋಸಲ್ಲು ಅದೃಷ್ಟವಶಾತ್ ದೂರದ ಶ್ರೀಮಂತ ಗ್ರಾಹಕನನ್ನು ಸೆಳೆದು ಓಕೆ ಆಗಿ ಲಕ್ಷಾಂತರ ರೂಪಾಯಿಗಳ ಸಹಾಯಧನ ನಮ್ಮ ಸಂಸ್ಥೆಗೆ ಬರುವಂತಾಯಿತು.ಅದರ ಸದ್ವಿನಿಯೋಗದ ಕುರಿತು ಸಮಾಲೋಚನೆ ನಡೆಸುವ ಸಲುವಾಗಿಯೇ ದೂರದ ಆ ದಾನಿಯು ಬೆಂಗಳೂರಿಗೆ ಬಂದನು. ನಾವೆಲ್ಲರೂ ಪಂಚತಾರಾ ಹೋಟೇಲೊಂದರಲ್ಲಿ ಸೇರಿ ತಿಂದು, ಕುಡಿದು, ಬಡತನದ ಬಗ್ಗೆ ಮಾತನಾಡಿದೆವು, ಉದ್ಧಾರದ ಬಗ್ಗೆ ಮಾತನಾಡಿದೆವು.

 

ಆ ಸಭೆಗೆ ನನ್ನನ್ನೂ ಆಮಂತ್ರಿಸಿದ್ದು ನನ್ನ ವೃತ್ತಿಬದುಕಿನಲ್ಲಿ ತುಂಬ ಪ್ರಮುಖವಾದ ಘಟ್ಟವೇ ಎಂದು ಹೇಳಬಹುದು. ನನ್ನ ಹನ್ನೆರಡು ವರ್ಷಗಳ ವೃತ್ತಿಜೀವನದಲ್ಲೇ ನಮ್ಮ ಸಂಸ್ಥೆಯ ಮಾಲಕಿಯನ್ನು ಐದಾರು ಸರತಿ ನೋಡಿರಬಹುದು, ಅದೂ ದೂರದಿಂದ.ಆದರೆ ಇಂದು ಅವರು ಸ್ವತಃ ನನ್ನ ಬಳಿ ಬಂದು ಒಂದು ಕೈಯಲ್ಲಿ ವಿಸ್ಕಿಯ ಗ್ಲಾಸನ್ನು ಹಿಡಿದು, ಮತ್ತೊಂದು ಕೈಯನ್ನು ನನ್ನ ಹೆಗಲ ಮೇಲೆ ಹಾಕಿಕೊಂಡು ಅವರೆಲ್ಲರಿಗೂ ನನ್ನನ್ನು ಪರಿಚಯಿಸುತ್ತಾ ನನ್ನ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಅಂದಿನಿಂದ ನನಗೆ ಒಂದು ಗ್ರೇಡು ಮೇಲೆ ಹೋಗಿ ಹದಿನಾಕು ಸಾವಿರದಿಂದ ಇಪ್ಪತ್ತು ಸಾವಿರಕ್ಕೆ ನನ್ನನ್ನು ಏರಿಸಿದರು.

 

ಇದೇ ಖುಷಿಯಲ್ಲಿ ಮನೆಗೆ ಒಂದು ಅತ್ಯಾಧುನಿಕ ಎಲ್ಸೀಡೀ ಟೀವಿಯನ್ನು ಕೊಂಡುತಂದೆ. ಅಮ್ಮ ಸುಮತಿ ಇಬ್ಬರೂ ಒಂದು ಕ್ಷಣ ದಂಗಾಗಿ ಅಷ್ಟು ದೊಡ್ಡ ತಟ್ಟೆಯಂತಹ ಟೀವಿಯನ್ನು ನೋಡುತ್ತಿದ್ದರು. ಹಳೆಯ ಟೀವಿಯ ಟೇಬಲ್ಲನ್ನು ಪಕ್ಕಕ್ಕೆ ಸರಿಸಿ, ಅದೇ ಜಾಗದಲ್ಲಿ ಹೊಸ ಟೀವಿಯನ್ನು ಗೋಡೆಗೆ ಫಿಟ್ ಮಾಡಿಸಿ ಕೇಬಲ್ ಕನೆಕ್ಷನ್ ಕೊಡಿಸಿ ಟೀವಿ ಚಾಲೂ ಮಾಡಿದೆ.

 

ಆಕಸ್ಮಿಕವೆಂಬಂತೆ ತಿಂಗಳ ಹಿಂದೆಯಷ್ಟೇ ಬಾಂಬಿನ ದಾಳಿಯಲ್ಲಿ ನುಜ್ಜುಗುಜ್ಜಾದ ಶಫಿಯ ಅಂಗಡಿಯನ್ನು ಜಾಲಾಡುತ್ತಿರುವ ಪೋಲೀಸರ ಚಿತ್ರಿಕೆಗಳು ಪ್ರಸಾರಗೊಳ್ಳುತಿದ್ದವು.ಅಮ್ಮ `ಅಯ್ಯ ಅಲ್ನೋಡು ನಮ್ಮ ಟೀವೀ...~ ಎಂದು ಸಿದ್ಧಾರೂಢರ ಸ್ಟಿಕ್ಕರು ಅಂಟಿಸಿದ್ದ ಗುರ್ತು ಹಿಡಿದು ಹೇಳುತ್ತಿದ್ದಂತೆ ಕೇಸರಿ ಪಟ್ಟಿಕಟ್ಟಿದ್ದ ದಾಳಿಕೋರನು ಬಂದು ಭಗವಂತನ ಹೆಸರು ಹೇಳುತ್ತಾ ಕ್ಷಣಮಾತ್ರದಲ್ಲೇ ಅದನ್ನು ಪುಡಿಪುಡಿ ಮಾಡಿಬಿಟ್ಟನು. ಅಮ್ಮ ಇಲ್ಲಿಂದಲೇ ತನ್ನ ಹಳೇ ಟೀವಿಗೆ ಮರುಗುತ್ತಾ ಅವನಿಗೆ ಸಹಸ್ರ ನಾಮಾವಳಿ ಮಾಡಿದಳು.ಹೊಸದಾದ ಟೀವಿಯಲ್ಲಿ ತನ್ನ ಹಳೇಟೀವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.