ಶನಿವಾರ, ಫೆಬ್ರವರಿ 27, 2021
20 °C

ಶಬ್ದವಿಲ್ಲದ ಭಾವ ಶಿವ: ರಾಘವೇಶ್ವರಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಬ್ದವಿಲ್ಲದ ಭಾವ ಶಿವ: ರಾಘವೇಶ್ವರಶ್ರೀ

ಸಿದ್ದಾಪುರ: ‘ಭಾವವಿಲ್ಲದ ಶಬ್ದ ಶವ. ಶಬ್ದವಿಲ್ಲದ ಭಾವ ಶಿವ. ಶಬ್ದಕ್ಕೆ ಭಾವದ ಅಗತ್ಯವಿದೆ’  ಎಂದು  ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. 

 

ತಾಲ್ಲೂಕಿನ ಭಾನ್ಕುಳಿಮಠದ ಶಂಕರಗಿರಿಯಲ್ಲಿ  ನಡೆಯುತ್ತಿರುವ ಶಂಕರ ಪಂಚಮಿ ಉತ್ಸವದ ಎರಡನೆ ದಿನವಾದ ಭಾನುವಾರ ‘ಭಜಗೋವಿಂದಂ’ ಕುರಿತು ಅವರು ಪ್ರವಚನ ನೀಡಿದರು.‘ಶಬ್ದಕ್ಕೆ ನಿಲ್ಲಬೇಡ, ಭಾವಕ್ಕೆ ಹೋಗಿ ಸಲ್ಲು, ಭಾವದಲ್ಲೇ ನಿಲ್ಲು’ ಎಂದು ಆದಿಗುರು ಶಂಕರಾಚಾರ್ಯರು ‘ಭಜ ಗೋವಿಂದಂ’ ಸ್ತೋತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ದೂರದಲ್ಲಿರುವ ಗೋವಿಂದ ಔಷಧದಂತೆ ನಮ್ಮ ಅಂತರಂಗ ವನ್ನು ವ್ಯಾಪಿಸಿದರೆ ನಮ್ಮ ಕಷ್ಟವನ್ನು ದೂರವಾಗಿಸುತ್ತಾನೆ’ ಎಂದರು.‘ಗೋವಿಂದ ವೇದಗಳಿಂದ ಲಭ್ಯವಾಗುವವನು. ಗೋವಿಂದನೊಟ್ಟಿಗೆ ಒಂದಾದರೆ ಮೃತ್ಯು ಭಯ ಕಾಡದು. ಮೃತ್ಯುವೆಂಬ ಗುಮ್ಮನಿಂದ ದೂರವಿರಲು ನಾವು ಗೋವಿಂದನನ್ನು ತಬ್ಬಿಕೊಳ್ಳಬೇಕು’ ಎಂದರು.‘ನಮ್ಮ ಅಂತರಂಗದಲ್ಲಿ ಮೂಡಿಬರುವ ಅರಿವು ಪ್ರಥಮ ಜ್ಞಾನವೆನಿಸಿಕೊಳ್ಳುತ್ತದೆ. ಪುಸ್ತಕಗಳಲ್ಲಿರುವ ಮಾಹಿತಿ ಎಂದಿಗೂ ಪ್ರಥಮವಾಗುವುದಿಲ್ಲ. ಹತ್ತಾರು ಕೈಗಳನ್ನು ದಾಟಿ ನಾವು ಪುಸ್ತಕಗಳಿಂದ ಮಾಹಿತಿ ಪಡೆಯುವುದರಿಂದ ಅದು ವಿರೂಪಗೊಳ್ಳುವ ಸಾಧ್ಯತೆ ಇದೆ. ಸ್ವಾನುಭವದ ಪಾಂಡಿತ್ಯವಿದ್ದಲ್ಲಿ ಅದು ನಮ್ಮ ಕೊನೆಯ ಕಾಲಕ್ಕೆ ಪ್ರಯೋಜನಕ್ಕೆ ಬರುತ್ತದೆ’ ಎಂದರು. ಈಶ್ವರಿ ಬೇರ್ಕಡವು ಹಾಗೂ ಸಂಗಡಿಗರು ‘ಭಜಗೋವಿಂದಂ’ ಸ್ತೋತ್ರಗಳನ್ನು  ಪ್ರಸ್ತುತಪಡಿಸಿದರು.ಶಂಕರ ಪಂಚಮಿಯಲ್ಲಿ ಇಂದು: ತಾಲ್ಲೂಕಿನ ಭಾನ್ಕುಳಿಮಠದ ಶಂಕರಗಿರಿಯಲ್ಲಿ ನಡೆಯುತ್ತಿರುವ ಶಂಕರ ಪಂಚಮಿ ಉತ್ಸವದ ನಾಲ್ಕನೇ ದಿನವಾದ ಮಂಗಳವಾರ ಬೆಳಿಗ್ಗೆ 9ಕ್ಕೆ ಶ್ರೀಕರಾರ್ಚಿತ ಸನ್ನಿಧಿಯಲ್ಲಿ ಮಹಾರುದ್ರಪಾರಾಯಣ, ಕಾಮಧೇನು ಹವನ, ಅತಿರುದ್ರ ಮಹಾಯಾಗದ ಪೂರ್ವಾಂಗ, ಬೆಳಿಗ್ಗೆ 11.30ಕ್ಕೆ ಶತಕಂಠ ಘೋಷ, ಉದಕಶಾಂತಿ–ಪ್ರತಿಸರಬಂಧ ಪಾರಾಯಣ, ಮಧ್ಯಾಹ್ನ 3ಕ್ಕೆ ಶಂಕರಾರ್ಪಿತ, ಸಂಜೆ 6.45ಕ್ಕೆ ಧ್ವನಿಶಂಕರ (ವಿದ್ವಾನ್ ಕುಳಲ್ಮಂದನ್ ರಾಮಕೃಷ್ಣನ್ ಅವರ ಮೃದಂಗವಾದನ), ರಾತ್ರಿ 8.15ಕ್ಕೆ  ನೃತ್ಯ ಶಂಕರ(ಹಲವು ನೃತ್ಯ ಗುರುಗಳಿಂದ ಕಾರ್ಯಕ್ರಮ) ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.