ಶನಿವಾರ, ಮೇ 15, 2021
22 °C

ಶಹಾಪುರ ಕೃಷಿ ಕಚೇರಿಗೆ ರೈತರಿಂದ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಸಾಕಷ್ಟು ರಸಗೊಬ್ಬರ ಪೂರೈಕೆಯಿದ್ದರು ಸಹ ಪಟ್ಟಣದಲ್ಲಿ ರಸಗೊಬ್ಬರದ ಮಾರಾಟಗಾರರು ಕೃತಕ ಅಭಾವ ಉಂಟು ಮಾಡಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಹಾಯಕ ಕೃಷಿ ನಿರ್ದೆಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ತಾಲ್ಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಮಿತಿಯೂ ಸಹ ಅಕ್ರಮವಾಗಿ ರಸಗೊಬ್ಬರ ಮಾರಾಟದ ಜಾಲದಲ್ಲಿದೆ. ರೈತರು ತಮ್ಮ ಕೃಷಿ ಕಾರ್ಯಗಳನ್ನು ಬದಿಗೊತ್ತಿ ದಿನಾಲು ಕಚೇರಿಯ ಮುಂದೆ ರಸಗೊಬ್ಬರಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಕೆಲ ಗಂಟೆಯವರೆಗೆ ವಿತರಿಸಿದಂತೆ ಮಾಡಿ ಬಾಗಲು ಹಾಕುತ್ತಾರೆ.

 

ಪೆಚ್ಚು ಮೊರೆ ಹಾಕಿಕೊಂಡು ರೈತರು ಮನೆಗೆ ಮರಳ ಬೇಕು. ಅಲ್ಲದೆ ನಿಗದಿಪಡಿಸಿದ ಬೆಲೆಗಿಂತ ದುಬಾರಿ ಹಣವನ್ನು ಸಮಿತಿಯವರು ಪಡೆದುಕೊಂಡು ಸರಿಯಾದ ರಸೀದಿಯನ್ನು ಸಹ ನೀಡುತ್ತಿಲ್ಲ. ಇದರ ಹಿಂದೆ ವ್ಯವಸ್ಥಿತವಾದ ಜಾಲವಿದೆ ತಕ್ಷಣ ಅದರ ಬಗ್ಗೆ ತನಿಖೆ ನಡೆಸಬೇಕೆಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಎಸ್.ಎಂ.ಸಾಗರ ಹಾಗೂ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.ಪ್ರಭಾರ ಹುದ್ದೆಯಲ್ಲಿರುವ ಸಹಾಯಕ ಕೃಷಿ ನಿರ್ದೇಶಕರು ಇತ್ತ ಗಮನಹರಿಸುತ್ತಿಲ್ಲ. ಕೇವಲ ಚೆಕ್‌ಗಳಿಗೆ ಸಹಿ ಹಾಕಲು ಆಗಮಿಸುತ್ತಾರೆ ರಸಗೊಬ್ಬರದ ವಿತರಣೆಯ ಬಗ್ಗೆ ವಿಚಾರಿಸಿದರೆ ಗೊಂದಲದ ಹೇಳಿಕೆ ನೀಡಿ ಬಚಾವ ಆಗುತ್ತಾರೆ ಕೂಡಲೇ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯನ್ನು ಭರ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ರಸಗೊಬ್ಬರದ ಅಂಗಡಿಯವರು ನಿಗದಿಪಡಿಸಿದ ಮುಖ ಬೆಲೆಗಿಂತ ದುಪ್ಪಟ್ಟುಗೆ ಡಿಎಪಿ ಹಾಗೂ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರಸೀದಿ ಕೆಳಿದರೆ ನಮ್ಮ ಬಳಿ ಗೊಬ್ಬರವಿಲ್ಲವೆಂದು ಹೇಳಿ ಕಳುಹಿಸುತ್ತಾರೆ.ಈಗಾಗಲೇ ಸಾಕಷ್ಟು ರಸಗೊಬ್ಬರವನ್ನು ಸಂಗ್ರಹಿಸಿ ದಲ್ಲಾಳಿಗಳು ಇಟ್ಟುಕೊಂಡಿದ್ದಾರೆ ಎಂದು ರೈತ ಮುಖಂಡ ಮಲ್ಲಯ್ಯ ಪೊಲ್ಲಂಪಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೋದಾಮುಗಳ ಮೇಲೆ ದಾಳಿ:

ಶಹಾಪುರ ಪಟ್ಟಣದ ಎಪಿಎಂಸಿ ಗೋದಾಮುಗಳಲ್ಲಿ ಸಂಗ್ರಹಿಸಿ ಇಡಲಾಗಿದೆ ಎನ್ನಲಾಗದ ರಸಗೊಬ್ಬರ ಅಂಗಡಿ ಮೇಲೆ ಸಹಾಯಕ ಕೃಷಿ ನಿರ್ದೇಶಕರು, ತಾಲ್ಲೂಕು ದಂಡಾಧಿಕಾರಿ ಎಂ.ರಾಚಪ್ಪ, ಪೊಲೀಸ್ ಅಧಿಕಾರಿಗಳಾದ ಸುಧೀರ ಹೆಗಡೆ, ಜಿ.ಎಸ್‌ನ್ಯಾಮಗೌಡ ನೇತೃತ್ವದಲ್ಲಿ ಶುಕ್ರವಾರ ಸಂಜೆ ಗೋದಾಮುಗಳ ಮೇಲೆ ದಾಳಿ ನಡೆಸಲಾಗಿದೆ.ಆದರೆ ಗೋದಾಮುಗಳನ್ನು ಬಾಡಿಗೆ ಪಡೆದ ಮಾಲಿಕರು ಸರಿಯಾಗಿ ಸ್ಪಂದಿಸದೆ ರಾಜಕೀಯ ಒತ್ತಡ ಹಾಕಲು ಕಸರತ್ತು ನಡೆಸಿದ್ದು ಒಂದಡೆಯಾದರೆ ಗೋದಾಮುಗಳನ್ನು ಬೀಗ ಹಾಕಲು ಹಾಗೂ ಸಂಗ್ರಹದ ಸ್ಟಾಕ್ ಪುಸ್ತಕವನ್ನು ಪಡೆಯಲು ಅಧಿಕಾರಿಗಳು ಪರದಾಡುತ್ತಿರುವುದು ಕಂಡು ಬಂದಿತು.ಒತ್ತಾಯ: ರಸಗೊಬ್ಬರದ ಕೆಲ ಅಂಗಡಿ ಮಾಲಿಕರು ಎಪಿಎಂಸಿ ಗೋದಾಮುಗಳಲ್ಲಿ ಅಕ್ರಮವಾಗಿ ರಸಗೊಬ್ಬರವನ್ನು ಸಂಗ್ರಹಿಸಿಡಲಾಗಿದೆ. ಸ್ವತಃ ಅಧಿಕಾರಿಗಳು ಭೇಟಿ ನೀಡಿ ಗೋದಾಮುಗಳ ಮುಂದೆ ನಿಂತರು ಸಹ ಸಮರ್ಪಕವಾದ ಮಾಹಿತಿ ನೀಡದೆ ವಂಚಿಸುತ್ತಿದ್ದಾರೆ.ತಕ್ಷಣ ಅಂತಹ ವ್ಯಕ್ತಿಗಳ ವಿರುದ್ದ ಅವಶ್ಯಕ ವಸ್ತುಗಳ ಕಾಯ್ದೆ ಅಡಿ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ತಾಲ್ಲೂಕು ಪ್ರಾಂತ ರೈತ ಸಂಘದ ಮುಖಂಡ ದಾವಲಸಾಬ ನದಾಫ್, ಹೈಯ್ಯಾಳಪ್ಪ ಹೈಯ್ಯಾಳಕರ್, ಜಯಲಾಲ ತೋಟದಮನೆ, ಹಣಮಂತರಾಯಗೌಡ, ನಿಜಲಿಂಗಪ್ಪ ಆಗ್ರಹಿಸಿದ್ದಾರೆ.ನಿರಾತಂಕ: ರಸಗೊಬ್ಬರಕ್ಕಾಗಿ ಪರದಾಡುವುದು ಒಂದೆಡೆಯಾದರೆ ಬತ್ತ ಬೆಳೆಗೆ ಆಂಧ್ರವಲಸಿಗರಿಗೆ ಹಾಗೂ ಸ್ಥಳೀಯ ಪ್ರಭಾವಿ ರೈತರಿಗೆ ರಸಗೊಬ್ಬರದ ತೊಂದರೆಯಿಲ್ಲ. ಹೆಚ್ಚಾಗಿ ತೊಂದರೆ ಅನುಭವಿಸುತ್ತಿರುವುದು ಸಣ್ಣ ಹಾಗೂ ಅತಿ ಸಣ್ಣ ರೈತರದ್ದಾಗಿದೆ ಎನ್ನುತ್ತಾರೆ ಸಣ್ಣ ರೈತರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.