ಮಂಗಳವಾರ, ಮೇ 18, 2021
31 °C

ಶಾಂತಿಗೊಡು ಪರಿಸರ- ನೀರಿಗೆ ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ತಾಲ್ಲೂಕಿನ ನರಿಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಖಂಡಿಗ , ಕೇಮಾರು, ಪುಡಿಂಕಿಲಡ್ಕ, ಕಾಯರುಮುಗೇರು ಪರಸರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ನಿಟ್ಟಿನಲ್ಲಿ ಆರಂಭಿಸಲಾದ ಕುಡಿಯುವ ನೀರಿನ ಯೋಜನೆ ಅರ್ಧದಲ್ಲೇ ಬಾಕಿಯಾಗಿದೆ. ಇದರಿಂದ ಈ ಪರಿಸರದಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ.ಪ್ರದೇಶದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷಾಂತರ ರೂ. ಮೊತ್ತದಲ್ಲಿ ಕುಡಿಯುವ ನೀರಿನ ಯೋಜನೆ ಆರಂಭಿಸಲಾಗಿತ್ತು. ಕಾಮಗಾರಿ ನಾಲ್ಕು ತಿಂಗಳ ಹಿಂದೆ  ಆರಂಭಗೊಂಡಿದ್ದರೂ ಈಗಲೂ ಅಪೂರ್ಣವಾಗಿದೆ. ಕೊಳವೆ ಬಾವಿಯನ್ನು ಕೊರೆದು ಪೈಪ್ ಲೈನ್ ಅಳವಡಿಸಲಾಗಿದ್ದರೂ ನೀರಿನ ಟಾಂಕಿ ನಿರ್ಮಾಣ ಕಾಮಗಾರಿ ಆರಂಭದ ಹಂತದಲ್ಲೇ ಬಾಕಿಯಾಗಿದೆ. ಟಾಂಕಿ ನಿರ್ಮಾಣಕ್ಕಾಗಿ ಸ್ವಲ್ಪ ಮಣ್ಣು ತೆಗೆದು ಹೊಂಡ ಮಾಡಿಡಲಾಗಿದ್ದು, ಕೆಲಸವನ್ನು ಅಲ್ಲಿಗೇ ಸ್ಥಗಿತಗೊಳಿಸಲಾಗಿದೆ. ಕೊಳವೆ ಬಾವಿಗೆ ಪಂಪ್ ಅಳವಡಿಸುವ ಕೆಲಸ ಇನ್ನೂ ನಡೆದಿಲ್ಲ. ಇದರಿಂದಾಗಿ ಈ ಯೋಜನೆ ಸ್ಥಳೀಯರಿಗೆ ಕೆಲಸಕ್ಕೆ ಬಾರದಂತಾಗಿದೆ.ಶಾಂತಿಗೋಡು ಗ್ರಾಮದ ಖಂಡಿಗ, ಕೇಮಾರು, ಪುಡಿಂಕಿಲಡ್ಕ, ಕಾಯರುಮುಗೇರು ಪರಿಸರದ ಜನತೆ ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದು, ಬಹುದೂರದ ನದಿ ನೀರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಪಂಚಾಯಿತಿ ಆಡಳಿತ ಮತ್ತು  ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕುರಿತು ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.ಪ್ರತಿಭಟನೆ ಎಚ್ಚರಿಕೆ

ನರಿಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸಲು ಆರಂಭಿಸಿರುವ ಯೋಜನೆ ಕೂಡಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ನರಿಮೊಗ್ರು ಗ್ರಾಮ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿ, ಪುತ್ತೂರಿನ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಸ್ಥಳೀಯರ ಹಿತದೃಷ್ಟಿಯಿಂದ ನರಿಮೊಗ್ರು ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು ಮತ್ತು ಆಡಳಿತಾರೂಢ ಪಕ್ಷದ ಮುಖಂಡರು ಸಂತ್ರಸ್ತ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದಿರುವುದು ವಿಷಾದನೀಯ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.