ಸೋಮವಾರ, ಜನವರಿ 20, 2020
18 °C

ಶಾಲಾ ಮಕ್ಕಳಿಗೆ ಹಾಲು ವಿತರಣೆ, ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲಾ ಮಕ್ಕಳಿಗೆ ಹಾಲು ವಿತರಣೆ, ಚಿಂತನೆ

ಬೆಂಗಳೂರು: `ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ವಿತರಣೆ ಯೋಜನೆಯನ್ನು ಆದ್ಯತಾ ಕಾರ್ಯಕ್ರಮವಾಗಿ ಅನುಷ್ಠಾನ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆಗೆ ಸಮಾಲೋಚನೆ ನಡೆಸಲಾಗಿದೆ' ಎಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಆಶ್ರಯದಲ್ಲಿ ನಗರದ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ `ವಿಶ್ವ ಹಾಲು ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯ ಸರ್ಕಾರ ಹೈನುಗಾರರಿಗೆ ಪ್ರತಿ ಲೀಟರ್‌ಗೆ ನೀಡುವ ಪ್ರೋತ್ಸಾಹಧನವನ್ನುರೂ 4ಗೆ ಹೆಚ್ಚಿಸಿದೆ. ಪ್ರೋತ್ಸಾಹಧನದಿಂದ ರಾಜ್ಯ ಬೊಕ್ಕಸಕ್ಕೆರೂ700 ಕೋಟಿ ಹೊರೆಯಾಗುತ್ತಿದೆ. ಹೀಗಾಗಿ ಕೂಡಲೇ ಹಾಲು ವಿತರಣೆ ಯೋಜನೆ ಅನುಷ್ಠಾನ ಕಷ್ಟಸಾಧ್ಯ. ಈ ಯೋಜನೆ ಅನುಷ್ಠಾನ ಮಾಡಿದರೆ ರೂ 500 ಕೋಟಿ ಹೊರೆ ಬೀಳಲಿದೆ. ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಶೀಘ್ರದಲ್ಲಿ ಹಾಲು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಭರವಸೆ ನೀಡಿದರು.`ರಾಜ್ಯದಲ್ಲಿ ಪ್ರತಿದಿನ 50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 35 ಲಕ್ಷ ಲೀಟರ್ ಹಾಲು ಖರ್ಚು ಆಗುತ್ತಿದೆ. ಉಳಿದ 15 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ಲಾಭದಾಯಕ ಚಟುವಟಿಕೆ ಅಲ್ಲ. ರಾಜ್ಯದ ಹಾಲು ನಮ್ಮಲ್ಲೇ ಉಪಯೋಗವಾದರೆ ಲಾಭವೂ ಹೆಚ್ಚು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು ಮುಂದಾಗಿದ್ದೇವೆ' ಎಂದು ಅವರು ಹೇಳಿದರು.`ಈ ಹಿಂದೆ ಕೃಷಿ ಸಚಿವನಾಗಿದ್ದಾಗ ಚೀನಾ ಪ್ರವಾಸ ಮಾಡಿದ್ದೆ. ಅಲ್ಲಿನ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಹಣ್ಣಿನ ರಸದ ಬಾಟಲಿ ಇರುವುದನ್ನು ಗಮನಿಸಿದ್ದೆ. ಅಲ್ಲಿನ ಸರ್ಕಾರ ಪ್ರತಿ ಮಗುವಿಗೆ ಪ್ರತಿನಿತ್ಯ 100 ಮಿ.ಗ್ರಾಂ. ಹಣ್ಣಿನ ರಸ ಪೂರೈಕೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ಯೋಜನೆ ಅನುಷ್ಠಾನ ಮಾಡಲಾಗುವುದು. ಈ ಮೂಲಕ ಪೌಷ್ಠಿಕ ಆಹಾರ ಪೂರೈಕೆ ಮಾಡಿದಂತೆಯೂ ಆಗುತ್ತದೆ' ಎಂದು ಅವರು ಪ್ರತಿಪಾದಿಸಿದರು.ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಜನ್ನು ಮಾತನಾಡಿ, `ವಿಶ್ವದಲ್ಲಿ ಪ್ರತಿದಿನ 700 ದಶಲಕ್ಷ ಟನ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಯುರೋಪಿನ 27 ರಾಷ್ಟ್ರಗಳ ಪಾಲು 154 ದಶಲಕ್ಷ ಟನ್. ಭಾರತದಲ್ಲಿ 121 ದಶಲಕ್ಷ ಟನ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಜಿಡಿಪಿಯಲ್ಲಿ ಹಾಲಿನ ಪಾಲು ಶೇ 6ರಷ್ಟು ಇದೆ' ಎಂದು ಮಾಹಿತಿ ನೀಡಿದರು.

`ಯುರೋಪಿನಲ್ಲಿ ಪ್ರತಿವ್ಯಕ್ತಿ ದಿನಕ್ಕೆ ಒಂದು ಕೆ.ಜಿ. ಹಾಲು ಬಳಕೆ ಮಾಡುತ್ತಾನೆ. ಪಾಕಿಸ್ತಾನದಲ್ಲಿ ಪ್ರತಿ ವ್ಯಕ್ತಿ ಅರ್ಧ ಕೆ.ಜಿ. ಹಾಲು ಬಳಕೆ ಮಾಡುತ್ತಾನೆ. ಭಾರತದಲ್ಲಿ ಬಳಕೆ ಪ್ರಮಾಣ 280 ಗ್ರಾಂ ಇದೆ. ರಾಜ್ಯದಲ್ಲಿ ಬಳಕೆ ಪ್ರಮಾಣ 190 ಗ್ರಾಂ ಇದೆ. ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಬಳಕೆ ತೀರಾ ಕಡಿಮೆ ಇದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ 579 ಅಂಕ ಗಳಿಸಿದ ನಗರದ ಜೀವನ್ ಡಿ.ಸಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈತ ಕೆಎಂಎಫ್ ಏಜೆಂಟ್ ಪುತ್ರನಾಗಿದ್ದು, ಪ್ರತಿದಿನ ಬೆಳಿಗ್ಗೆ 4ರಿಂದ 6 ಗಂಟೆವರೆಗೆ ಹಾಲು ಮಾರಾಟ ಮಾಡುತ್ತಿದ್ದ ಎಂದು ಸಂಘಟಕರು ತಿಳಿಸಿದರು.

ಪ್ರತಿಕ್ರಿಯಿಸಿ (+)