ಶನಿವಾರ, ಜೂನ್ 19, 2021
22 °C

ಶಾಲೆಗಳಲ್ಲಿ ಮೊಬೈಲ್‌ ಬಳಕೆಗೆ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯ ಮೊರಾರ್ಜಿ ದೇಸಾಯಿ ಸೇರಿದಂತೆ ವಸತಿ ಶಾಲೆ­ಗಳಲ್ಲಿ ಮಕ್ಕಳ ಕೈಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಇರಕೂಡದು. ಮಕ್ಕಳ ಅನುಕೂಲಕ್ಕೆಂದು ಪ್ರತಿ ವಸತಿ ಶಾಲೆಯಲ್ಲೂ ಕಾಯಿನ್‌ ಬೂತ್‌ ಇಲ್ಲವೆ ಹಾಸ್ಟೆಲ್‌­ಗೊಂದು ಮೊಬೈಲ್‌ ಮಾತ್ರ ಇರಬೇಕು ಎಂದು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.­ಧನಂಜಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.



ಜಿಲ್ಲಾ ಪಂಚಾಯಿತಿ ಸಭಾಂಗಣ­ದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆ­ಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಕೆಲವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ, ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳ  ಬಳಿ ಮೊಬೈಲ್‌ ಇರುವುದು ಒಳ್ಳೆಯದಲ್ಲ. ಇದ­ರಿಂದ ಅವರ ವ್ಯಾಸಂಗಕ್ಕೆ ತೊಡಕಾ­ಗ­ಬಹುದು. ಈ ಬಗ್ಗೆ ಪೋಷಕರಿಗೂ ತಿಳಿಹೇಳಿ, ಮಕ್ಕಳಿಗೆ ಮೊಬೈಲ್‌ ಕೊಡಿಸ­ದಂತೆ ಸೂಚನೆ ನೀಡಿ. ಒಂದು ವೇಳೆ ಮಕ್ಕಳು ಮೊಬೈಲ್‌ ಇಟ್ಟುಕೊಂಡಿದ್ದರೆ ಅದನ್ನು ವಶಕ್ಕೆ ತೆಗೆದುಕೊಳ್ಳಿ ಎಂದು  ತಿಳಿಸಿದರು.



ಜಿಲ್ಲೆಯ ಎಲ್ಲ ವಸತಿ ಶಾಲೆ­ಗಳಲ್ಲಿ­ಯೂ ಒಂದೇ ರೀತಿಯ ಊಟದ ಮೆನು ಇರಬೇಕು. ಆದರೆ ಒಂದೊಂದು ವಸತಿಶಾಲೆಯಲ್ಲಿ ಒಂದೊಂದು ಬಗೆ­ಯನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿ­­­ಗಳು ಶುಚಿ ಮತ್ತು ರುಚಿ­ಯಾದ ಆಹಾರ ನೀಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ ಎಂದು ಅಧ್ಯಕ್ಷರು ಕಿಡಿಕಾರಿದರು.



ಅಲ್ಲದೆ ಹಲವು ವಸತಿ ಶಾಲೆಗಳಲ್ಲಿ ಊಟದ ಪಟ್ಟಿಯನ್ನೇ ಹಾಕಿಲ್ಲ. ಸರಿ­ಯಾಗಿ ನಿರ್ವಹಣೆ ಮತ್ತು ಮೇಲುಸ್ತು­ವಾರಿ ಮಾಡದಿದ್ದರೆ ವಾರ್ಡನ್‌ಗಳು ಮನ ಬಂದಂತೆ ನಡೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ದಿಢೀರನೇ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.



ಕೆಲ ವಸತಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲ ಎಂಬ ಕೂಗು ಕೇಳಿ ಬಂದಿದೆ. ಸರ್ಕಾರದಿಂದ ಸಾಕಷ್ಟು ಅನು­ದಾನ ಪ್ರತಿ ವರ್ಷವೂ ಬರುತ್ತಿದ್ದರೂ ಮೂಲ ಸೌಕರ್ಯ ಕೊರತೆ ಇದೆ ಎಂಬ ಮಾತು ಕೇಳಿ ಬರುತ್ತಿರುವುದು ಸರಿ­ಯಲ್ಲ.  ಅನುದಾನವನ್ನು ಸರಿಯಾಗಿ ಬಳಸಿ­­­­­ಕೊಂಡು ಶಾಲೆಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸಬೇಕು.



ವಿದ್ಯಾರ್ಥಿ­ಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಸತಿ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿರಬೇಕು. ಈ ನಿಟ್ಟಿ­ನಲ್ಲಿ ಶಾಲೆಯ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹೆಚ್ಚು ಕಾಳಜಿ ತೋರಿ, ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.



ಅಧಿಕಾರಿಗಳಿಗೆ ಜವಾಬ್ದಾರಿ: ವಸತಿ ಶಾಲೆ­­ಗಳಲ್ಲಿ ನಿರ್ವಹಣೆಯ ಗುಣ­ಮಟ್ಟ­­­ವನ್ನು ಹೆಚ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜವಾ­ಬ್ದಾರಿ ನೀಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ತಿಳಿಸಿದರು. ಒಂದು ಅಥವಾ ಎರಡು ಹಾಸ್ಟೆಲ್‌­ಗಳಿಗೆ ಅನ್ವಯವಾಗುವಂತೆ ಒಬ್ಬೊಬ್ಬ ಅಧಿಕಾರಿಗೆ ಜವಾಬ್ದಾರಿ ನೀಡಿ, ಶಾಲೆ­ಯಲ್ಲಿ ಮೂಲ ಸೌಕರ್ಯ ಮತ್ತು ಗುಣಮಟ್ಟದ ನಿರ್ವಹಣೆಯ ಜವಾ­ಬ್ದಾರಿ ನೀಡುವಂತೆ ಸಿಇಒಗೆ ಸೂಚಿಸಿದರು.



ಜಿ.ಪಂ. ಸಿಇಓ ಡಾ.ಎಂ.ವಿ.­ವೆಂಕಟೇಶ್ ಮಾತನಾಡಿ, ಹಾಸ್ಟೆಲ್‌­ಗಳಲ್ಲಿ ಬಾಕಿ ಉಳಿದಿರುವ ದುರಸ್ತಿ  ಕೆಲಸ­­ಗಳನ್ನು ಮಾ.15ರೊಳಗೆ ಮುಗಿಸ­ಬೇಕು. ಕಾಮಗಾರಿ ನಡೆಯುವಾಗ ಪ್ರಾರಂಭ ಹಾಗೂ ಅಂತಿಮ ಹಂತದ ಛಾಯಾ­­­­­ಚಿತ್ರ­ಗಳನ್ನು ನೀಡಬೇಕು. ಊಟ­­ದಲ್ಲಿ ಶುಚಿ ಹಾಗೂ ರುಚಿಗೆ ಒತ್ತು ನೀಡಬೇಕು. ಜೊತೆಗೆ ಹಾಸ್ಟೆಲ್‌­ಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವ ಕಡೆ, ಆಯಾ ವ್ಯಾಪ್ತಿಯ ಗ್ರಾಮ ಪಂಚಾ­ಯಿತಿ ಸದಸ್ಯರನ್ನು ಸಂಪರ್ಕಿಸಿ ಲಭ್ಯ­­ವಿರುವ ಸರ್ಕಾರಿ ಹಾಗೂ ಗೋಮಾಳದ ಜಮೀನನ್ನು ಗುರುತಿಸಿ ಎಂದು ತಿಳಿಸಿದರು.



ಜಿಲ್ಲಾ ಸಮಾಜ ಕಲ್ಯಾಣಾಕಾರಿ ರಂಗೇಗೌಡ, ಜಿಲ್ಲಾ ಹಿಂದುಳಿದ ವರ್ಗ­ಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಸುಮಯ್ಯ ರೂಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.­ಚಂದ್ರ ಸೇರಿದಂತೆ ಹಲವು ಅಧಿಕಾರಿ­ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.