ಬುಧವಾರ, ಏಪ್ರಿಲ್ 21, 2021
31 °C

ಶಾಲೆಗಳಲ್ಲಿ ಶೌಚಾಲಯ ಕೊರತೆ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ಜಿಲ್ಲೆಯ ಎಷ್ಟು ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂಬ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ಇಲ್ಲದಿರುವುದು ಮಂಗಳವಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂತು.ಜಿಲ್ಲೆಯ ಬಹಳಷ್ಟು ಶಾಲೆಗಳಲ್ಲಿ ಶೌಚಾಲಯ ಮತ್ತು ನೀರಿನ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಗ್ರಾಮಾಂತರ ಪ್ರದೇಶಗಳ ಶಾಲೆಗಳಲ್ಲಂತೂ ನೀರು ಮತ್ತು ಶೌಚಾಲಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಿ.ವಿ.ಹರೀಶ್ ಮತ್ತು ಸದಸ್ಯ ಅ.ಮು.ಲಕ್ಷ್ಮಿನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.     ಮಾಹಿತಿಗೆ ಶಿಕ್ಷಣ ಇಲಾಖೆ  ಉಪನಿರ್ದೇಶಕ  ಎಸ್.ವಿ.ಪದ್ಮನಾಭ್ ಪ್ರಶ್ನಿಸಿದಾಗ, ಆ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ. ಆ.30ರ ಒಳಗೆ ಎಲ್ಲ ತಾಲ್ಲೂಕುಗಳಿಂದ ಮಾಹಿತಿ ಕ್ರೋಢೀಕರಿಸಿ ಸಲ್ಲಿಸಲಾಗುವುದು ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಹರೀಶ್, ಎಲ್ಲ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿದೆ. ಆದರೆ ನಿಮ್ಮಲ್ಲಿ, ಜಿಲ್ಲೆಯ ಶಾಲೆಗಳ ಬಗ್ಗೆ ಮಾಹಿತಿಯೇ ಇಲ್ಲವಲ್ಲ? ಸರ್ಕಾರದ ಭರವಸೆಯನ್ನು ಜಿಲ್ಲೆಯಲ್ಲಿ ಹೇಗೆ ಈಡೇರಿಸುತ್ತೀರಿ? ಎಂದು ಪ್ರಶ್ನಿಸಿದರು.ಅಸಮಾಧಾನ: ಜಲಮಣಿ ಯೋಜನೆ ಅಡಿ ಶಾಲೆಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸದಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವುದು ವಿಳಂಬವಾಗಿದೆ. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ಧರಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ಧರಿಲ್ಲ ಎಂದು ಪದ್ಮನಾಭ್ ದೂರಿದರು.ಆ.30ರೊಳಗೆ ಭೇಟಿ, ಪರಿಶೀಲನೆ ನಡೆಸಿ ವರದಿ ನೀಡಲಾಗುವುದು ಎಂದು ನುಡಿದರು. 

ಕಳೆದ ಸಭೆಯಲ್ಲಿ ಸೂಚಿಸಿದ ಕೆಲಸವನ್ನು ಮಾಡದೆ ಮತ್ತೆ ಸಬೂಬು ಹೇಳುವುದು ಸರಿಯಲ್ಲ ಎಂದು ಮಂಜುಳಾ, ಹರೀಶ್ ಆಕ್ಷೇಪಿಸಿದರು.350 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 232 ಪ್ರೌಢಶಾಲೆ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪದ್ಮನಾಭ್ ಮನವಿ ಮಾಡಿದರು.ಪಡಿತರ ಚೀಟಿ: ತಾತ್ಕಾಲಿಕ ಪಡಿತರ ಚೀಟಿದಾರರ ಭಾವಚಿತ್ರ ತೆಗೆಯುವ ಪ್ರಕ್ರಿಯೆಯು ಇಂಟರ್‌ನೆಟ್ ಸೌಲಭ್ಯದ ಕೊರತೆಯಿಂದ ವಿಳಂಬವಾಗುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.  ಹೆಚ್ಚುವರಿಯಾಗಿ 50 ಕ್ಯಾಮೆರಾ ಮತ್ತು 57 ಬೈಯೋ ಮೆಟ್ರಿಕಟ್ ಯಂತ್ರಗಳು ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ ತಿಳಿಸಿದರು.ತನಿಖೆ: ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಹೂಳೆತ್ತುವ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ. ಅಕ್ರಮ ಮರಳು ತೆಗೆದ ಕೆರೆಗಳ ಸ್ಥಳಗಳನ್ನೇ ತೋರಿಸಿ ಬಿಲ್ ಮಾಡಲಾಗುತ್ತಿದೆ ಎಂದು ಮುಳಬಾಗಲಿನ ಸದಸ್ಯ ಕಿಟ್ಟಪ್ಪ ಆರೋಪಿಸಿದರು.ನಂಗಲಿ ದೊಡ್ಡಕೆರೆಯಲ್ಲಿ ಹೂಳೆತ್ತಲಾಗಿದೆ ಎಂದು ರೂ 1.10 ಕೋಟಿ ಬಿಲ್ ಮಾಡಲಾಗಿದೆ. ಆದರೆ ಅಲ್ಲಿ ಆ ಕೆಲಸ ನಡೆದೇ ಇಲ್ಲ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಹಾಯಕ ಕಾರ್ಯಪಾಲಕ ಎಂಜಿ ನಿಯರ್‌ಗೆ ಸೂಚಿಸಿದರು.ಶಿಫಾರಸು: ತಾಲ್ಲೂಕು ಪಂಚಾಯಿತಿ ವತಿಯಿಂದ ಜನರಿಗೆ ಪೂರೈಸಲು ನೀಡಿರುವ ಟ್ಯಾಂಕರ್ ನೀರನ್ನು ತಾಲ್ಲೂಕಿನ ಹುತ್ತೂರು ಜಿ.ಪಂ. ಕ್ಷೇತ್ರದ ಶಾಪೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣರೆಡ್ಡಿ ಮತ್ತು ಪಂಚಾಯತಿ ಅಧ್ಯಕ್ಷೆಯ ಪತಿ ಹರಿನಾಥ್ ಅವರ ಮೇಷನರಿ ಚರಂಡಿಯ ಕ್ಯೂರಿಂಗ್‌ಗೆ ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಿಡಿಓ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಹುತ್ತೂರು ಕ್ಷೇತ್ರದ ಸದಸ್ಯರೂ ಆಗಿರುವ ಉಪಾಧ್ಯಕ್ಷ ಡಿ.ವಿ.ಹರೀಶ್ ಅಧ್ಯಕ್ಷರನ್ನು ಒತ್ತಾಯಿಸಿದರು.ಪಂಪ್-ಮೋಟರ್: ತಾಲ್ಲೂಕಿನ ವೇಮಗಲ್‌ನಲ್ಲಿ 10 ಕೊಳವೆಬಾವಿಗಳಿಗೆ ಪಂಪ್-ಮೋಟರ್ ಅಳವಡಿಸಿಲ್ಲ. ಹಣದ ಕೊರತೆ ಇಲ್ಲದಿದ್ದರೂ ಅಳವಡಿಸುವಲ್ಲಿ ವಿಳಂಬವಾಗಲು ಕಾರಣವೇನು ಎಂದು ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಪ್ರಶ್ನಿಸಿದರು. ಖುದ್ದು ಸ್ಥಳಪರಿಶೀಲನೆ ಮಾಡಿ ಅಳವಡಿಸಲಾಗುವುದು ಎಂದು ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ತಿಳಿಸಿದರು. ಸಿಆರ್‌ಪಿಗಳ  ನೇಮಕಾತಿಯಲ್ಲಿ ಮುಳಬಾಗಲು ಶಿಕ್ಷಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಹರೀಶ್ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.