ಗುರುವಾರ , ಏಪ್ರಿಲ್ 22, 2021
25 °C

ಶಾಸಕರಿಗೆ ಇನ್ನು ಇ-ಗ್ರಂಥಾಲಯ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂರು ಲಕ್ಷಕ್ಕೂ ಅಧಿಕ ಪುಸ್ತಕಗಳು ಮತ್ತು ವರದಿಗಳ ಸಂಗ್ರಹ ಇರುವ ವಿಧಾನ ಮಂಡಲದ ಇ-ಗ್ರಂಥಾಲಯವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಉದ್ಘಾಟಿಸಿದರು.1.30 ಲಕ್ಷ ಪುಸ್ತಕಗಳು, ವಿವಿಧ ಆಯೋಗಗಳ ವರದಿಗಳು, ಸರ್ಕಾರದ ಪ್ರಕಟಣೆಗಳು, ರಾಜ್ಯ ಪತ್ರಗಳು ಹಾಗೂ ಇತರ ದಾಖಲೆಗಳು ಗ್ರಂಥಾಲಯದಲ್ಲಿವೆ. 121 ನಿಯತಕಾಲಿಕೆಗಳು, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳ 47 ದಿನಪತ್ರಿಕೆಗಳೂ ಇಲ್ಲಿ ಲಭ್ಯ. ವಿಧಾನ ಮಂಡಲದ ಸದಸ್ಯರಿಗೆ ಮಾತ್ರವಲ್ಲದೆ ಸಂಶೋಧನಾ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆದುಕೊಳ್ಳಬಹುದು.ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಂಥಾಲಯ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, `ವಿವಿಧ ಗ್ರಂಥಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಇ-ಗ್ರಂಥಾಲಯವನ್ನು ರೂಪಿಸಲಾಗಿದೆ. ಇದರ ಪ್ರಯೋಜನವನ್ನು ವಿಧಾನ ಮಂಡಲದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಮಾಡಲು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು~ ಎಂದು ತಿಳಿಸಿದರು.`ಸುಸಜ್ಜಿತ ಇ-ಗ್ರಂಥಾಲಯದಲ್ಲಿ ವಿಧಾನ ಮಂಡಲದಲ್ಲಿ ನಡೆದ ಎಲ್ಲ ಚರ್ಚೆಗಳ ಮಾಹಿತಿ ಲಭ್ಯವಿದೆ. ಗ್ರಂಥಾಲಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ತರಲಾಗುವುದು. ಇಲ್ಲಿ ದೊರೆಯುವ ಮಾಹಿತಿಯನ್ನು ಪತ್ರಕರ್ತರೂ ಬಳಿಸಕೊಳ್ಳಲು ಅವಕಾಶ ಇದೆ~ ಎಂದು ಶೆಟ್ಟರ್ ಪ್ರಕಟಿಸಿದರು.ಮುಖ್ಯ ಗ್ರಂಥಾಲಯವನ್ನು ವಿಧಾನಸೌಧದ ನೆಲಮಹಡಿಯಲ್ಲಿ (ಕೊಠಡಿ ಸಂಖ್ಯೆ: 28), ವಾಚನಾಲಯವನ್ನು ಮೊದಲ ಮಹಡಿಯಲ್ಲಿ ವಿಧಾನಸಭೆಯ ಸಭಾಂಗಣಕ್ಕೆ ಹೊಂದಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ.

ಪರಿಷತ್ ಉಪಸಭಾಪತಿ ವಿಮಲಾ ಗೌಡ, ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಡಾ.ಎಸ್.ಆರ್. ಲೀಲಾ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಹಾತ್ಮ ಗಾಂಧಿ ಅವರ ಬರಹಗಳು ಹಾಗೂ ಅವರ ಕುರಿತು ಪ್ರಕಟವಾಗಿರುವ ಒಟ್ಟು 500 ಪುಸ್ತಕಗಳು ಗ್ರಂಥಾಲಯದಲ್ಲಿ ಪ್ರತ್ಯೇಕ ವಿಭಾಗದಲ್ಲಿ ದೊರೆಯಲಿವೆ. `ಇವೆಲ್ಲ ಸೌಲಭ್ಯಗಳನ್ನು ಸದಸ್ಯರು ಬಳಸಿಕೊಂಡು, ವಿಧಾನ ಮಂಡಲದ ಚರ್ಚೆಯನ್ನು ಹೆಚ್ಚು ಅರ್ಥಪೂರ್ಣವಾಗಿಸಬೇಕು~ ಎಂದು ಶಂಕರಮೂರ್ತಿ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.