ಭಾನುವಾರ, ಮೇ 22, 2022
21 °C

ಶಾಸಕರ ಗೈರು: ಜನರಿಲ್ಲದ ಜನಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲ್ದೂರು: ಇಲ್ಲಿಗೆ ಸಮೀಪದ ದೊಡ್ಡಮಾಗರವಳ್ಳಿ ಗ್ರಾಪಂ ವ್ಯಾಪ್ತಿಯ ಬನ್ನೂರು ಗ್ರಾಮದಲ್ಲಿ ಶನಿವಾರ ನಡೆದ ಆಲ್ದೂರು ಹೋಬಳಿ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮದಲ್ಲಿ  ಜನರಿಗಿಂತ ಅಧಿಕಾರಿಗಳೇ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಬನ್ನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐವತ್ತು ಜನರೂ ಕುಳಿತು ಕೊಳ್ಳಲೂ ಸಾಧ್ಯವಾಗದಂತಹ ಸಣ್ಣ ಕೊಠಡಿಯೊಂದರಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷೆ ಚಂಪಾ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವೀಣಾ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳೂ ಭಾಗವಹಿಸಿದ್ದರಾದರೂ ಗಂಟೆ ಹನ್ನೆರಡು ಕಳೆದಿದ್ದರೂ ಗ್ರಾಮಸ್ಥರ ಸುಳಿವಿರಲಿಲ್ಲ. 

ಕೊಠಡಿ ತುಂಬ ತುಂಬಿಕೊಂಡಿದ್ದ ಅಧಿಕಾರಿಗಳು ಮತ್ತು  ಕೇವಲ  ಬೆರಳೆಣಿಕೆ ಸಂಖ್ಯೆಯ ಜನರ ಸಮ್ಮುಖದಲ್ಲಿ ಆರಂಭವಾದ ಜನಸ್ಪಂದನ ಕಾರ್ಯಕ್ರಮದ ಆರಂಭದಲ್ಲಿ  ಅಧಿಕಾರಿಗಳು ಒಬ್ಬೊಬ್ಬರಾಗಿ ತಮ್ಮ ಪರಿಚಯ ಮತ್ತು ಇಲಾಖೆಯ ಸೌಲಭ್ಯಗಳ ಬಗ್ಗೆ ಮಾತನಾಡಲಾರಂಬಿಸಿದರು. ಈ ಸಂದರ್ಭ ಆಲ್ದೂರು ಗ್ರಾಪಂ ಉಪಾಧ್ಯಕ್ಷ ಕವೀಶ್ ಎದ್ದು ನಿಂತು ‘ನಿಮ್ಮ ಪರಿಚಯ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಇದೆ. ಕಾರ್ಯಕ್ರಮದಲ್ಲಿ ಜನರ್ಯಾರೂ ಇಲ್ಲ, ಅಂದ ಮೇಲೆ ಯೋಜನೆಗಳ ಬಗ್ಗೆ ಹೇಳಿ ಏನು ಪ್ರಯೋಜನ, ಎಂದು ಪ್ರಶ್ನಿಸಿದರು. ಇದಕ್ಕೆ ಗ್ರಾಮದ ಕೆಲ ಮುಖಂಡರು ಧ್ವನಿಗೂಡಿಸಿದ್ದರಿಂದ  ಅಧಿಕಾರಿಗಳು ಮುಜುಗರಕ್ಕೆ ಒಳಗಾಗುವಂತಾಯಿತು. 

ಈ ನಡುವೆ ಕಳೆದೊಂದು ವರ್ಷದಿಂದ ಹೋಬಳಿ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ದಲ್ಲಿ ಶಾಸಕರು ನೆಪ ಹೇಳಿಕೊಂಡು ಸಭೆ ತಪ್ಪಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ  ಬೆಟ್ಟದಷ್ಟು ಸಮಸ್ಯೆಗಳಿವೆ. ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಶಾಸಕರಿಗೆ ಹೇಳೋಣವೆಂದರೆ ಅವರು ಪತ್ತೆ ಇರುವುದಿಲ್ಲ. ಹಿಂದಿನ ಸಭೆಯಲ್ಲಿ ಹೇಳಿಕೊಂಡ ಸಮಸ್ಯೆಗಳನ್ನೇ ಬಗೆಹರಿದಿಲ್ಲ. ಶಾಸಕರಿಲ್ಲದೇ ಕಾಟಾಚಾರಕ್ಕಾಗಿ ನಡೆಸುವ  ಸಭೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಮುಖಂಡ ಅಶೋಕ್ ಸೇರಿದಂತೆ ನೆರೆದಿದ್ದ ಕೆಲ ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.ಮಧ್ಯೆ ಪ್ರವೇಶಿಸಿದ ತಹಸೀಲ್ದಾರ್ ವೀಣಾ ಶಾಸಕರ ಗೈರಿಗೆ ಕಾರಣ ಹೇಳಿದ್ದರಿಂದ ಪರಿಸ್ಥಿತಿ ಕೊಂಚ ಶಾಂತವಾಯಿತು. ನಂತರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳ್ಳುತ್ತಿರುವ ಇಂಗುಗುಂಡಿಗಳಿಗೆ ಜಲಾನಯನ ಇಲಾಖೆ ಅಧಿಕಾರಿಗಳು ಪರಿಶಿಷ್ಟ ಜಾತಿಯವರು ದಾಖಲಾತಿಗಳನ್ನು ನೀಡಿದ್ದರೂ  ಮಂಜೂರಾತಿ ನೀಡಲು ಸತಾಯಿಸುತ್ತಿರುವ ಬಗ್ಗೆ ಗ್ರಾಪಂ ಅಧ್ಯಕ್ಷೆ ಚಂಪಾ, ಉಪಾಧ್ಯಕ್ಷ ಗಣೇಶ್, ಸುದರ್ಶನ್ ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿದರು.  ಗ್ರಾಮಸ್ಥರಾದ ರುದ್ರೆಗೌಡ ಅಂಗನವಾಡಿ ಕೇಂದ್ರ ಕುಸಿದಿರುವ ಹಾಗೂ ಶಿಕ್ಷಕಿಯರು, ಕಾರ್ಯಕರ್ತರು ಸರಿಯಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ದೂರು ಹೇಳಿದರು. ಅಂಗನವಾಡಿ ಕೇಂದ್ರವನ್ನು ಬರುವ ಏಪ್ರಿಲ್ ಮೊದಲ ವಾರದೊಳಗೆ ದುರಸ್ಥಿಗೊಳಿಸುವ ಭರವಸೆ ಸಭೆಯಲ್ಲಿ ನೀಡಲಾಯಿತು.ನಂತರ ಸರ್ಕಾರಿ ಶಾಲೆಯ ಶಿಕ್ಷಕರನ್ನು ಸದರಿ ವರ್ಷ ಜನಗಣತಿ ಮೊದಲಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳು ಪಾಠ, ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಈ ಬಾರಿ ಹೋಬಳಿಯಾದ್ಯಂತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿಯಾಗಿ ಗಣಿತ, ವಿಜ್ಞಾನದ ಪಾಠ ನಡೆದಿಲ್ಲ ಎಂದು ಆಲ್ದೂರು ಗ್ರಾಪಂ ಉಪಾಧ್ಯಕ್ಷ ಕವೀಶ್ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದಾಗಿ ತಹಸೀಲ್ದಾರ್ ವೀಣಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.