ಭಾನುವಾರ, ಮೇ 16, 2021
21 °C
ಅಸಮಾಧಾನ ನಿವಾರಿಸಿ: ಸಿ.ಎಂಗೆ ಹಿರಿಯ ಶಾಸಕರ ಸಲಹೆ

ಶಾಸಕಾಂಗ ಸಭೆಗೆ ಪರಮೇಶ್ವರ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರ ಮತ್ತು ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು ಎಂದು ಹಿರಿಯ ಶಾಸಕರು ಮುಖ್ಯಮಂತ್ರಿ ಅವರಿಗೆ ಸಲಹೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (ಸಿಎಲ್‌ಪಿ) ಮಾತನಾಡಿದ ಹಿರಿಯ ಶಾಸಕರು `ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು.ಪರಮೇಶ್ವರ ಅವರು ಈ ಹಿಂದೆ ನಡೆದ ಶಾಸಕಾಂಗ ಸಭೆಗೂ ಹಾಜರಾಗಿರಲಿಲ್ಲ. ಮಂಗಳವಾರ ನಡೆದ ಸಭೆಗೂ ಗೈರು ಹಾಜರಾಗಿದ್ದರು. `ಚುನಾವಣೆ ಸಂದರ್ಭದಲ್ಲಿ ನೀವು ಮತ್ತು ಪರಮೇಶ್ವರ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೀರಿ. ಈಗಲೂ ಕೂಡ ಒಟ್ಟಿಗೆ ಕೆಲಸ ಮಾಡಬೇಕು. ಸಚಿವ ಸ್ಥಾನ ಸಿಗದೇ ಇರುವ ಕೆಲವು ಹಿರಿಯ ಶಾಸಕರಿದ್ದಾರೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ' ಎಂದು ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.ಪಕ್ಷದ ಗೆಲುವಿನಲ್ಲಿ ಪರಮೇಶ್ವರ ಪಾತ್ರವೂ ಇದೆ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯ ನಿರ್ವಹಿಸುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ ಎಂದು ವಿಧಾನ ಪರಿಷತ್‌ನ ಹಿರಿಯ ಸದಸ್ಯರೊಬ್ಬರು ಸಲಹೆ ಮಾಡಿದರು ಎಂದು ಗೊತ್ತಾಗಿದೆ.ಕೆಲವು ಸಚಿವರ ಕಾರ್ಯವೈಖರಿ ಹಾಗೂ ನಡವಳಿಕೆಯ ಬಗ್ಗೆ ಕೂಡ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. `ಕೆಲವು ಸಚಿವರು ಶಾಸಕರ ಕೈಗೇ ಸಿಗುವುದಿಲ್ಲ. ಏನಾದರೂ ಕೆಲಸ ಹೇಳಿದರೆ ನೋಡೋಣ, ಮಾಡೋಣ ಎಂದು ಸಾಗ ಹಾಕುತ್ತಾರೆ. ಸಚಿವರು ಶಾಸಕರ ಮಾತಿಗೆ ಬೆಲೆ ಕೊಡಬೇಕು' ಎಂದು ಒತ್ತಾಯಿಸಿದರು ಎಂದು ಈ ಮೂಲಗಳು ಹೇಳಿವೆ.ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಎಲ್ಲ ಕಡೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕುಡಿಯುವ ನೀರಿಗಾಗಿಯೇ ಒಂದು ಕೋಟಿ ರೂಪಾಯಿ ನೀಡಬೇಕು. ವಿದ್ಯುತ್ ಸಮಸ್ಯೆ ಬಗೆಹರಿಸಲೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.