ಬುಧವಾರ, ಮೇ 12, 2021
24 °C

ಶಾಸಕ ಒತ್ತೆ ಪ್ರಕರಣ: ಸಂಧಾನ ನಿರಾಕರಿಸಿದ ನಕ್ಸಲರು:ನಾಳೆವರೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿರುವ ನಕ್ಸಲರು ಒಡಿಶಾ ಸರ್ಕಾರ ನೀಡಿರುವ ಸಂಧಾನ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಏಪ್ರಿಲ್ 5ರವರೆಗೆ ಗಡುವು ನೀಡಿದ್ದಾರೆ.ಶಾಸಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕಾದರೆ ಇತ್ತೀಚೆಗೆ  ಜೈಲಿಗೆ ಕಳುಹಿಸಿರುವ ಮಾವೊವಾದಿಗಳ ಬಿಡುಗಡೆ ಸೇರಿದಂತೆ ಇತರ ಎಲ್ಲಾ ಬೇಡಿಕೆಗಳನ್ನು ಒಡಿಶಾ ಸರ್ಕಾರ ಏಪ್ರಿಲ್ 5 ಒಳಗಾಗಿ ಈಡೇರಿಸಬೇಕು ಎಂದು ಮಾವೊವಾದಿಗಳ ಆಂಧ್ರ-ಒಡಿಶಾ ವಿಶೇಷ ವಲಯ ಸಮಿತಿಯು ಕೆಲವು ಮಾಧ್ಯಮಗಳಿಗೆ ಕಳುಹಿಸಿರುವ ಧ್ವನಿಮುದ್ರಿತ ಸಂದೇಶದಲ್ಲಿ ಹೇಳಿದೆ.ಸಂಧಾನ ಮಾತುಕತೆಗೆ ಸರ್ಕಾರ  ನೀಡಿರುವ ಆಹ್ವಾನ ಮತ್ತು ಸಂಧಾನಕಾರರ ಹೆಸರು ಸೂಚಿಸುವಂತೆ ಮಾಡಿರುವ ಮನವಿಯನ್ನು ಮಾವೊವಾದಿಗಳು ತಿರಸ್ಕರಿಸಿದ್ದು, ಯಾವುದೇ `ವಿಳಂಬ ತಂತ್ರ~ ಅನುಸರಿಸದೇ  ವಿಧಿಸಿರುವ ಗಡುವಿನ ಒಳಗಾಗಿ ಸರ್ಕಾರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂದೇಶದಲ್ಲಿ ಹೇಳಿದ್ದಾರೆ.ಇಟಲಿ ಪ್ರಜೆ ಪೌಲೊ ಬೊಸುಸ್ಕೊ ಅವರನ್ನು ಅಪಹರಿಸಿರುವ ನಕ್ಸಲರು ಕೂಡ ಸೋಮವಾರ ಧ್ವನಿ ಮುದ್ರಿತ ಸಂದೇಶವನ್ನು ರವಾನಿಸಿ, ಒಂದು ವೇಳೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ವಿಳಂಬ ಮಾಡಿದರೆ ಒತ್ತೆ ಇಟ್ಟಿರುವ ಇಟಲಿ ಪ್ರಜೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚಿಸಿದ್ದರು.ಮಾವೊವಾದಿಗಳ ಎರಡು ಗುಂಪುಗಳು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು ಮಾತ್ರವಲ್ಲದೇ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.ವಿದೇಶಿಯರ ಭೇಟಿ ನಿಷೇಧಕೋರಾಪುಟ್ ವರದಿ: ಒಡಿಶಾದಲ್ಲಿ ನಕ್ಸಲರು ಎರಡು ಅಪಹರಣ ಕೃತ್ಯ ನಡೆಸಿರುವ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಕೋರಾಪುಟ್ ಜಿಲ್ಲೆಗೆ ವಿದೇಶಿಯರು ಭೇಟಿ ನೀಡುವುದಕ್ಕೆ ಸರ್ಕಾರ ಸಂಪೂರ್ಣವಾಗಿ ನಿಷೇಧ ಹೇರಿದೆ.

ಜಿಲ್ಲಾಧಿಕಾರಿ ಸಚಿನ್ ಜಾಧವ್ ಈ ಸಂಬಂಧ  ಎಲ್ಲಾ ಪ್ರವಾಸ ನಿರ್ವಹಣಾ ಸಂಸ್ಥೆಗಳಿಗೆ ಪತ್ರಗಳನ್ನು ಕಳುಹಿಸಿದ್ದಾರೆ.ಹಿಕಾಕ ಆರೋಗ್ಯ ಸ್ಥಿತಿ: ಸಹೋದ್ಯೋಗಿಗಳಲ್ಲಿ ಆತಂಕಭುವನೇಶ್ವರ: ನಕ್ಸಲರಿಂದ ಅಪಹರಣಕ್ಕೊಳಗಾಗಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದ್ದು, ಸಹೋದ್ಯೋಗಿ ಶಾಸಕರು ಹಿಕಾಕ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.ಕೋರಟ್‌ಪುಟ್ ದಟ್ಟ ಅರಣ್ಯಭಾಗದಲ್ಲಿ ನಕ್ಸಲರ ಶಿಬಿರದಲ್ಲಿರುವ ಹಿಕಾಕ ಅವರು ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾವೊವಾದಿಗಳಿಗೆ ತುಂಬಾ ಆಪ್ತವಾಗಿರುವ ಮೂಲಗಳು ತಿಳಿಸಿವೆ. ಸೋಮವಾರ ಒಡಿಶಾ ವಿಧಾನಸಭೆಯಲ್ಲಿ ಇತರೆ ಶಾಸಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಸಾಮಾನ್ಯವಾಗಿ ನಕ್ಸಲರು ಒತ್ತೆಯಾಳುಗಳನ್ನು ಶಿಬಿರದಿಂದ ಶಿಬಿರದಿಂದ ಬದಲಾಯಿಸುದರಿಂದ ಹಾಗೂ ಸಾಕಷ್ಟು ದೂರ ನಡಿಗೆ ಮೂಲಕವೇ ಕರೆದೊಯ್ಯುವುದರಿಂದ ಆರೋಗ್ಯದಲ್ಲಿ ಏರು ಪೇರು ಉಂಟಾಗಿರಬಹುದು ಎಂದು ಹೇಳಲಾಗಿದೆ.ನಕ್ಸಲರು ಹಿಕಾಕ ಅವರನ್ನು ಅಪಹರಿಸಿ ಒಂದು ವಾರ ಕಳೆದಿರುವುದರಿಂದ ಈ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಮಾರ್ಚ್ 24ರಂದು ಅವರು ಅಪಹರಣಕ್ಕೊಳಗಾಗಿದ್ದರು. ಎರಡು ದಿನಗಳ ಹಿಂದೆ ಹಿಕಾಕ ಅವರಲ್ಲಿ ಜ್ವರ ಹಾಗೂ ವಾಂತಿ ಕಾಣಿಸಿಕೊಂಡಿದೆ ಎಂದು ಮಾವೊವಾದಿಗಳ ಆಪ್ತ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.