ಭಾನುವಾರ, ಜೂನ್ 20, 2021
25 °C

ಶಿಕ್ಷಕರು, ಪೋಷಕರ ಅಸಮಾಧಾನ

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ವಿದ್ಯಾರ್ಥಿಗಳಿಗೆ ಈಗ ಪರೀಕ್ಷಾ ಕಾಲ. ಪರೀಕ್ಷಾ ಜ್ವರ ಈಗಾಗಲೇ ವಿದ್ಯಾರ್ಥಿಗಳ ಜತೆಗೆ ಅವರ ಶಿಕ್ಷಕರು, ಪೋಷಕರಿಗೂ ಏರಿದೆ. ಶಾಲೆ–ಮನೆ ಎರಡೂ ಕಡೆ ಮಕ್ಕಳ ಗಮನವೆಲ್ಲ ಈಗ ಓದಿನ ಕಡೆ ಕೇಂದ್ರೀಕೃತವಾಗಿದೆ. ಇಂಥ ಸಮಯದಲ್ಲೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕರುಣಿಸಿದೆ!ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಐದು ದಿನಗಳ ‘ಕರ್ನಾಟಕ ದರ್ಶನ’ ಪ್ರವಾಸ ಹಮ್ಮಿಕೊಂಡಿದೆ. ಎಸ್ಸೆಸ್ಸೆಲ್ಸಿ ಹಾಗೂ ಒಂಬತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಬೇಕಾದ ವಿದ್ಯಾರ್ಥಿಗಳು ಈಗ ಕರ್ನಾಟಕ ಪ್ರವಾಸ ಕೈಗೊಳ್ಳಬೇಕಾಗಿದೆ.ಈ ಪ್ರವಾಸಕ್ಕೆ ಜಿಲ್ಲೆಯಿಂದ 600 ವಿದ್ಯಾರ್ಥಿಗಳು, 403 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1,003 ವಿದ್ಯಾರ್ಥಿಗಳನ್ನು ಇಲಾಖೆ ಆಯ್ಕೆ ಮಾಡಿದ್ದು, ಇದರಲ್ಲಿ ಕೆಲವು ತಾಲ್ಲೂಕಿನ ವಿದ್ಯಾರ್ಥಿಗಳು ಸೋಮವಾರವೇ ಪ್ರವಾಸ ಆರಂಭಿಸಿದ್ದರೆ, ಇನ್ನು ಕೆಲವು ತಾಲ್ಲೂಕಿನ ವಿದ್ಯಾರ್ಥಿಗಳು ಮಂಗಳವಾರ ಮತ್ತು ಬುಧವಾರ ಹೊರಡಲಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ ಮಾರ್ಚ್‌ 28ರಿಂದ ಆರಂಭಗೊಳ್ಳುತ್ತದೆ. ಒಂಬತ್ತನೇ ತರಗತಿ ಪರೀಕ್ಷೆ ಕೆಲವು ಶಾಲೆಗಳಲ್ಲಿ ಮಾರ್ಚ್‌ 20ರಿಂದ ಪ್ರಾರಂಭ ವಾಗುತ್ತದೆ. ಪರೀಕ್ಷಾ ಸಿದ್ಧತೆಗೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಕನಿಷ್ಠ 15 ದಿವಸ ಸಿಗುತ್ತದೆ. ಇನ್ನೂ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಐದು ದಿವಸ ಸಿಗುತ್ತದೆ. ಎಸ್ಸೆಸ್ಸೆಲ್ಸಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮೈಲಿಗಲ್ಲು. ಒಂಬತ್ತನೇ ತರಗತಿ ವಿದ್ಯಾರ್ಥಿ ಮುಂದೆ ಎಸ್ಸೆಸ್ಸೆಲ್ಸಿಗೆ ಕಾಲಿಡುವುದರಿಂದ ಅದು ಕೂಡ ಬಹಳ ಮುಖ್ಯ ಹಂತ. ಈಗ ಪ್ರವಾಸ ಹೊರಟವರೆಲ್ಲರೂ ಎಸ್ಸೆಸ್ಸೆಲ್ಸಿ ಮತ್ತು ಒಂಬತ್ತನೇ ತರಗತಿ ಮಕ್ಕಳು.ಸರ್ಕಾರ, ಪರೀಕ್ಷಾ ಸಮಯದಲ್ಲಿ ಪ್ರವಾಸ ಏರ್ಪಡಿಸಿದ್ದಕ್ಕಾಗಿ ಕೆಲ ಪೋಷಕರು, ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮಕ್ಕಳಿಗೆ ಶಾಲೆಯಲ್ಲಿ ಎಷ್ಟೇ ಓದಿಸಿದ್ದರೂ ಮನೆಯಲ್ಲಿ ಒಮ್ಮೆ ಓದಿಸಲೇಬೇಕು. ನಮ್ಮ ಮಗನೂ ಪ್ರವಾಸಕ್ಕೆ ಆಯ್ಕೆಯಾಗಿದ್ದ. ಆದರೆ, ಪರೀಕ್ಷೆ ಹತ್ತಿರ ಬಂದಿದ್ದರಿಂದ ಕಳುಹಿಸಲಿಲ್ಲ. ಪ್ರವಾಸದ ಸುಸ್ತು ಮತ್ತಿತರ ಕಾರಣಗಳಿಗೆ ಅವನು ಅನಾರೋಗ್ಯದಿಂದ ಮಲಗಿದರೆ ಗತಿ ಏನು? ಸರ್ಕಾರ ಪರೀಕ್ಷೆ ಸಮಯದಲ್ಲೇ ಪ್ರವಾಸ ಹಮ್ಮಿಕೊಂಡಿರುವುದೇ ತಪ್ಪು’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪೋಷಕ ರಾದ ತೀರ್ಥಹಳ್ಳಿಯ ಮಂಜುಳಾ ಹೆಗಡೆ.‘ಪ್ರವಾಸ ಕಲಿಕೆಗೆ ಪೂರಕ ನಿಜ. ಈ ವರ್ಷವಂತೂ ಮಕ್ಕಳಿಗೆ ಶೈಕ್ಷಣಿಕ ದೃಷ್ಟಿಯಿಂದ ಅನುಕೂಲವಾಗುವ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ, ಪ್ರವಾಸ ಹೋಗುವ ಸಮಯ ಇದಲ್ಲ. ಪರೀಕ್ಷೆ ಹತ್ತಿರ ಬಂದಿರುವುದರಿಂದ ನಮಗೆಲ್ಲಾ ಒಂದು ಸಿ.ಎಲ್. ಹಾಕುವುದಕ್ಕೂ ಅಧಿಕಾರಿಗಳು ಬಿಡುತ್ತಿಲ್ಲ. ಶಿಕ್ಷಣ ಸಚಿವರ ಕ್ಷೇತ್ರವಾಗಿದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಅಧಿಕಾರಿಗಳೆಲ್ಲ ತಾಕೀತು ನಮಗೆ ಮಾಡಿದ್ದಾರೆ. ಅದರಂತೆ ನಾವೆಲ್ಲರೂ ಶ್ರಮ ಹಾಕುತ್ತಿದ್ದೇವೆ. ಈ ನಡುವೆ ಇಂತಹ ಪ್ರವಾಸ ಏರ್ಪಡಿಸಿದ್ದು, ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸದಿರುವ ಸಾಧ್ಯತೆಗಳಿವೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾಗರದ ಸರ್ಕಾರಿ ಪ್ರೌಢಶಾಲೆಯೊಂದರ ಶಿಕ್ಷಕ ಗುರುಮೂರ್ತಿ.ಎಲ್ಲಿಗೆ ಪ್ರವಾಸ?: ಹಳೇಬೀಡು, ಬೇಲೂರು, ಮುರುಡೇಶ್ವರ ಜತೆಗೆ ಇಸ್ರೋ ಮಾಹಿತಿ ಕೇಂದ್ರ, ಮಂಗಳೂರಿನ ಪಿಲಿಕೊಳ, ಇನ್ಫೋಸಿಸ್, ಪೆರಂಬೂರು ಬೀಚ್, ಮಂಗಳೂರು ಬಂದರು, ಮಲ್ಪೆ ಬೀಚ್, ಮಣಿಪಾಲ್ ಆಸ್ಪತ್ರೆಯ ಮ್ಯೂಸಿಯಂ ಹಾಗೂ ಪ್ಲಾನಿಟೋರಿಯಂ, ವರಾಹಿ ಪ್ರಾಜೆಕ್ಟ್, ಕಾರವಾರದ ಸೀಬರ್ಡ್, ಕೈಗಾ ಅಣುಸ್ಥಾವರ ಘಟಕ ಮತ್ತಿತರ ಪ್ರಮುಖ ಸ್ಥಳಗಳಿಗೆ ಈ ವಿದ್ಯಾರ್ಥಿಗಳು ಐದು ದಿನದ ಪ್ರವಾಸದಲ್ಲಿ ಭೇಟಿ ನೀಡುತ್ತಿದ್ದಾರೆ.ಆಯ್ಕೆ ಹೇಗೆ?: ಪ್ರತಿಭಾವಂತ ಮಕ್ಕಳಿಗೆ ಮಾತ್ರ ಈ ಅವಕಾಶ ಸಿಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದ 150, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ 300, ಸಮಾಜ ಕಲ್ಯಾಣ ಇಲಾಖೆಯಿಂದ 384ವಿದ್ಯಾರ್ಥಿಗಳು, ಉಳಿದಂತೆ ಇನ್ನಿತರ ವರ್ಗದ  ಸೇರಿದಂತೆ ಒಟ್ಟು 1,003 ವಿದ್ಯಾರ್ಥಿಗಳಿಗೆ ಪ್ರವಾಸದ ಅವಕಾಶ ದೊರೆತಿದೆ.ಪ್ರತಿಯೊಬ್ಬರಿಗೆ ₨ 3,500 ವೆಚ್ಚ: ‘ಪ್ರತಿ ಶಾಲೆಯಿಂದ ಕನಿಷ್ಠ ಒಂದು ಮಗುವಾದರೂ ಪ್ರವಾಸ ಹೋಗ ಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಮಗುವಿಗೆ ಪ್ರವಾಸಕ್ಕೆ ಕನಿಷ್ಠ ₨3,500 ವೆಚ್ಚವಾಗುತ್ತದೆ. ಪ್ರತಿ ಬಸ್‌ನಲ್ಲಿ ಇಬ್ಬರು ಶಿಕ್ಷಕರು, ಒಬ್ಬ ಸಿಆರ್‌ಪಿ ಹಾಗೂ ಒಬ್ಬ ಆಯಾ ಇರುತ್ತಾರೆ. ಪ್ರವಾಸದ ಅವಧಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಿದ್ದು, ವಿಜೇತರಿಗೆ ಪುಸ್ತಕ ಬಹುಮಾನ ನೀಡಲಾಗುತ್ತದೆ. ಪ್ರವಾಸಕ್ಕೆ ಹೋಗುವ ಮಕ್ಕಳಿಗೆ ಪುಸ್ತಕ, ಪೆನ್ನು, ಆಟಿಕೆಗಳು, ಚಾಟ್, ಕಿಟ್, ಟೀ ಶರ್ಟ್, ಕ್ಯಾಪ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಶಿಕ್ಷಣಾಧಿಕಾರಿ ಜಿ.ಲೋಹಿತ್.‘ಪ್ರವಾಸ ಕೈಗೊಳ್ಳುವಂತೆ ಇಲಾಖೆಯಿಂದ ಸುತ್ತೋಲೆ ಬಂದಿರುವುದೇ ಈ ಬಾರಿ ತಡವಾಗಿದೆ. ಹಾಗಾಗಿ, ಇನ್ನೂ ತಡಮಾಡಬಾರದೆಂಬ ದೃಷ್ಟಿಯಿಂದ ಶೀಘ್ರವಾಗಿ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.