ಮಂಗಳವಾರ, ಮೇ 11, 2021
21 °C
ಮೊಳಕಾಲ್ಮುರು: ಸಮಸ್ಯೆಗಳ ಸುಳಿಯಲ್ಲಿ ಆದರ್ಶ ವಿದ್ಯಾಲಯ

ಶಿಕ್ಷಕರ ಕೊರತೆ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಪ್ರಜಾವಾಣಿ ವಾರ್ತೆ / ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ತರ ಯೋಜನೆ ಅಡಿಯಲ್ಲಿ ಇಲ್ಲಿ ಆರಂಭವಾಗಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಈ ವರ್ಷ ಶಿಕ್ಷಕರ ಕೊರತೆಯಿಂದಾಗಿ ತೊಂದರೆಗೆ ಒಳಗಾಗಿದ್ದಾರೆ.ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆರಂಭವಾದ ಈ ಶಾಲೆ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದೆ. 6ರಿಂದ9ನೇ ತರಗತಿವರೆಗೆ ಇಲ್ಲಿ ವಿಧ್ಯಾರ್ಥಿಗಳು ಅಭ್ಯಾಸ ಮಾಡುತಿದ್ದು, ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಪರೋಕ್ಷವಾಗಿ ನವೋದಯ ಶಾಲೆ ಎಂದು ಸಹ ಈ ಶಾಲೆಯನ್ನು ಬಿಂಬಿಸಲಾಗಿದೆ.ಶಾಲೆ ಮೂಲಗಳ ಪ್ರಕಾರ 6-9ನೇ ತರಗತಿವರೆಗೆ ಎಲ್ಲಾ ಹಂತಗಳು ಎರಡು ತರಗತಿಗಳನ್ನು ಹೊಂದಿವೆ. ಒಟ್ಟು 275 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು 8 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ . ಆದರೆ, ಪ್ರಸ್ತುತ ಹಿಂದಿ ಹಾಗೂ ದೈಹಿಕ ಶಿಕ್ಷಣದ ಇಬ್ಬರು ಶಿಕ್ಷಕ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಆರು ಶಿಕ್ಷಕ ಹುದ್ದೆಗಳು ಖಾಲಿ ಇದೆ ಎಂದು ವರದಿಯಾಗಿದೆ.ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಸಮನ್ವಯ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳು, `ಶಿಕ್ಷಕರಿಲ್ಲದ ಪರಿಣಾಮ ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ನಯೀಮುರ್ ರೆಹಮಾನ್ ಹಾಗೂ ಬಿಆರ್‌ಪಿ ವೆಂಕಟೇಶ್ ಅವರನ್ನು ನಿಯೋಜನೆ ಮಾಡಲಾಗಿದೆ, ಮೂರು ದಿನಕ್ಕೆ ಒಬ್ಬರಂತೆ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು. ಆದರೆ ಆಂಗ್ಲ ಮಾದ್ಯಮ ಬೋಧನೆಗೆ ಸಂಬಂಧಪಟ್ಟ ಶಿಕ್ಷಕರನ್ನು ನಿಯೋಜನೆ ಮಾಡುತ್ತಿಲ್ಲ ಎಂಬುದು ಪೋಷಕರ ಅಳಲು.ರಾಜ್ಯಸರ್ಕಾರ ಈ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಕ ಮಾಡಿದ್ದು ಸಿಂಧುತ್ವ ಮತ್ತಿತರ ತಾಂತ್ರಿಕ ಕಾರಣಗಳಿಂದ ಅವರು ಇನ್ನೂ ಬಂದಿಲ್ಲ. ಪಕ್ಕದ ಚಳ್ಳಕೆರೆ ಆದರ್ಶ ಶಾಲೆಯಲ್ಲಿ ಹೊಸ ಶಿಕ್ಷಕರು ಬರುವ ತನಕ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಮುಂದುವರಿಸಲಾಗಿದೆ ಎಂದು ಪೋಷಕರು ಹೇಳುತ್ತಾರೆ.

ಆದರೆ ಇಲ್ಲಿ ಮಾತ್ರ ಹಿಂದಿನ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಹೊಸ ಶಿಕ್ಷಕರು ಬರುವ ತನಕ ಹಳೆ ಸಿಬ್ಬಂದಿಯನ್ನು ಮುಂದುವರಿಸುವ ಮೂಲಕ ಮಕ್ಕಳ ನೆರವಿಗೆ ಬರಬೇಕು ಎಂದು ಪೋಷಕರು ಮನವಿ ಮಾಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.