ಸೋಮವಾರ, ಜನವರಿ 20, 2020
20 °C

ಶಿಕ್ಷಣದಿಂದ ಮಾತ್ರ ಸ್ವಾವಲಂಬನೆ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ದೊರೆತಾಗ ಮಾತ್ರವೇ ಎಲ್ಲ ಕುಟುಂಬಗಳು ಸ್ವಾವಲಂಬಿ ಬದುಕು ನಡೆಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಲ್ಲಿ ಕರೆ ನೀಡಿದರು.ಬಿಬಿಎಂಪಿ ವತಿಯಿಂದ ಎ.ನಾರಾಯಣಪುರ ಬಂಡೆ ಪ್ರದೇಶದಲ್ಲಿ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಕೆ.ಆರ್.ಪುರ ಕ್ಷೇತ್ರದ ಶಾಸಕರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ~ ಎಂದು ಪ್ರಶಂಸಿಸಿದರು.ಫಲಾನುಭವಿಗಳಿಗೆ ನೂತನ ಕಾರುಗಳ ಕೀಲಿ ಕೈ ವಿತರಿಸಿದ ಸಚಿವ ಆರ್.ಅಶೋಕ, `ಕೆ.ಆರ್.ಪುರದಲ್ಲಿ ಸುಸಜ್ಜಿತ ಬಿಎಂಟಿಸಿ ನಿಲ್ದಾಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಅಗತ್ಯ ನಿವೇಶನ ಬೇಕಾಗಿದೆ. ಅಲ್ಲದೆ, ಕೇಂದ್ರ ಸ್ಥಳಗಳಿಂದ ಇಲ್ಲಿಗೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಸಣ್ಣ ಕೈಗಾರಿಕಾ ಸಚಿವ ನರಸಿಂಹ ನಾಯಕ (ರಾಜು ಗೌಡ) ಅವರು ಫಲಾನುಭವಿಗಳಿಗೆ ನೂತನ ಮನೆ ನಿರ್ಮಾಣ ಸಹಾಯಧನದ ಚೆಕ್ ಮತ್ತು ಆದೇಶ ಪತ್ರ ವಿತರಿಸಿದರು.ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಶಾಸಕ ಎನ್. ಎಸ್.ನಂದೀಶರೆಡ್ಡಿ, 2,173 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಲು ಬಿಬಿಎಂಪಿ 30 ಕೋಟಿ ರೂಪಾಯಿ ಖರ್ಚು ಮಾಡಿದೆ. ಸೌಲಭ್ಯ ಪಡೆದ ಫಲಾನುಭವಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.ಆರ್ಥಿಕ ಸ್ವಾವಲಂಬನೆ ಯೋಜನೆಯಡಿ ಒಟ್ಟು 154 ಮಂದಿಗೆ ಕಾರು, 54 ಮಂದಿ ಮಡಿವಾಳ ಹಾಗೂ ಸವಿತಾ ಸಮಾಜದವರಿಗೆ ಸಹಾಯಧನ, 50 ಮಂದಿ ಸಣ್ಣ ವ್ಯಾಪಾರಿಗಳಿಗೆ ತಳ್ಳುವ ಗಾಡಿ, 54 ಮಂದಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, 432 ಮಹಿಳಾ ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್, 600 ಮಂದಿಗೆ `ಆರೋಗ್ಯ ಶ್ರೀ~ ಯೋಜನೆಯಡಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.

 

ಪ್ರತಿಕ್ರಿಯಿಸಿ (+)