ಗುರುವಾರ , ಮೇ 19, 2022
22 °C

ಶಿಕ್ಷಣ ಕ್ಷೇತ್ರ ಜೀವನದ ಧನ್ಯತೆಯ ತಾಣವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ಶಿಕ್ಷಣ ಕ್ಷೇತ್ರವು ಕೇವಲ ಸರ್ಟಿಫಿಕೇಟ್ ಕೊಡುವ ತಾಣವಾಗದೆ ಜೀವನದ ಧನ್ಯತೆ ಕಾಣುವ ಮಾಧ್ಯಮವಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಸಮೀಪದ ಎಲಿಮುನ್ನೋಳಿ ಗ್ರಾಮದಲ್ಲಿ 25 ವರ್ಷದ ಹಿಂದೆ (1984) ಸ್ಥಾಪನೆಗೊಂಡ ರಾಜಾ ಲಖಮಗೌಡ ಬಸವಪ್ರಭು ಸರದೇಸಾಯಿ ಸರಕಾರಿ ಪ್ರೌಢಶಾಲೆಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಆಂಗ್ಲರ ಆಳ್ವಿಕೆಯಲ್ಲಿ ಜಾರಿಗೊಂಡ ಶಿಕ್ಷಣ ಪದ್ಧತಿ ಇನ್ನೂ ಮುಂದುವರಿದಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ನ್ಯೂನತೆ ಕಂಡು ಬರುತ್ತಿರುವದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಶಿಕ್ಷಣವು ಉದ್ಯೋಗ ಕೊಡಿಸುವ ಸಾಧನವಾಗದೆ ಜೀವನ ರೂಪಿಸುವ ಅಸ್ತ್ರವಾಗಬೇಕೆಂದರು.ಗ್ರಾಮದಲ್ಲಿನ ಸರಕಾರಿ ಶಾಲೆಗಳು ಹೊರಗಿನದೆಂದು ಭಾವಿಸದೆ, ಅದು ಕೂಡಾ ಹೇಗೆ ಗುಡಿಯು ಗ್ರಾಮದ ಅವಿಭಾಜ್ಯ ಅಂಗವೋ ಹಾಗೆ ಶಾಲೆಯು ಎಂದು ಗ್ರಾಮಸ್ಥರು ತಿಳಿದು ಸಹಕರಿಸಲು ವಿನಂತಿಸಿದರು.ರಜತ ಮಹೋತ್ಸವದ ಸವಿ ನೆನಪಿಗಾಗಿ ಈ ವರ್ಷದ ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ತಂದು ಶಾಲೆಯ ಕೀರ್ತಿ ಹೆಚ್ಚಿಸಲು ಸೂಚಿಸಿದರು.ಸಂತಸ: ಸತತವಾಗಿ ಚಿಕ್ಕೋಡಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ರಾಜಾ ಲಖಮಗೌಡರಂಥ ದಾನಿಗಳು ಶಿಕ್ಷಣ ಪ್ರಸಾರಕ್ಕೆ ದೇಣಿಗೆ ನೀಡಿದ್ದು ಅವಿಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಂಜೂರಿ: ಗ್ರಾಮಸ್ಥರು ಸಲ್ಲಿಸಿದ ಬೇಡಿಕೆಗೆ ಅನುಗುಣವಾಗಿ ಶಾಲೆಗೆ ಬೇಕಾದ 4 ಹೆಚ್ಚುವರಿ ಕೊಠಡಿಗಳ ಪೈಕಿ ತಕ್ಷಣವಾಗಿ 2 ಕೊಠಡಿಗೆ ಮಂಜೂರಿ ಮಾಡಿ ಗುರುವಾರ ಬೆಂಗಳೂರಲ್ಲಿ ರೂ. 10 ಲಕ್ಷ ಬಿಡುಗಡೆ ಮಾಡುವದಾಗಿ ಘೋಷಿಸಿ, ಪಿಯು ಕಾಲೇಜು ಮಂಜೂರಾತಿಗೆ ಭರವಸೆ ನೀಡಿದರು.ಸ್ಪಂದನೆ:
ವಿವಿಧ ಕಾರಣಗಳಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವದಾಗಿ ತಿಳಿಸಿದರು.

ವಿರಕ್ತಮಠದ ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು. ಎಂ.ಎಲ್.ಸಿ. ಮಹಾಂತೇಶ ಕವಟಗಿಮಠ ಸರದೇಸಾಯಿ ಅವರು ಸಲ್ಲಿಸಿದ ಸೇವೆ ಸ್ಮರಿಸಿದರು. ಕೃಷಿ ಹಾಗೂ ಉಸ್ತುವಾರಿ ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸಿ ಶಾಲೆ ಸ್ಥಾಪನೆಗೆ ತಾವು 25 ವರ್ಷದ ಹಿಂದೆ ಮಾಡಿದ ಶ್ರಮ ನೆನಪಿಸಿಕೊಂಡು ಗ್ರಾಮಸ್ಥರ ಸಹಕಾರ ಕೋರಿದರು.ಬಿಡುಗಡೆ: ಶಾಲೆಯ ಮಕ್ಕಳು ರಚಿಸಿದ ‘ಜ್ಞಾನ ಸ್ಪಂದನ’ ಕಿರುಹೊತ್ತಿಗೆ ಮತ್ತು ಚಿತ್ರಕಲಾ ಶಿಕ್ಷಕ ರಫೀಕ ಮಕಾನದಾರ ಅವರ ವರ್ಣರಂಜಿತ ‘ಚಿತ್ರಕಲಾ’ ಪುಸ್ತಕವನ್ನು ಸಚಿವ ಕಾಗೇರಿ ಬಿಡುಗಡೆ ಮಾಡಿದರು.ಡಿ.ಡಿ.ಪಿ.ಐ. ಕೆ.ಸಿ. ಕೃಷ್ಣಶೆಟ್ಟಿ, ದಾನಿ ಶಂಕರಗೌಡ ಸರದೇಸಾಯಿ, ಬಿ.ಇ.ಓ. ಬಿ.ವೈ.ನಾಯ್ಕ, ಹುಕ್ಕೇರಿ ಪ.ಪಂ. ಅಧ್ಯಕ್ಷ ಜಯಗೌಡ ಪಾಟೀಲ, ಹಿರಾ ಶುಗರ್ ನಿರ್ದೇಶಕ ಎಸ್.ಎಸ್. ಶಿರಕೋಳಿ, ಗ್ರಾ.ಪಂ. ಅಧ್ಯಕ್ಷ ಮಹಾದೇವ ಜೋಡಟ್ಟಿ, ಜಿ.ಪಂ. ಸದಸ್ಯ ಮಕಬೂಲ್ ಮುಲ್ಲಾ, ತಾ.ಪಂ. ಸದಸ್ಯ ಶಿವಾಜಿ ಥಿಲಾರಿ, ಸುರೇಂದ್ರ ದೊಡಲಿಂಗನವರ, ಬಸಗೌಡ ಮಗೆನ್ನವರ, ಶಿವಾನಂದ ಹಿರೇಮಠ, ವಕೀಲರಾದ ಆರ್.ವಿ. ಜೋಶಿ, ಪಿ.ಎಸ್. ಮುತಾಲಿಕ, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಬಲರಾಮ ಬೋನಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಎಸ್.ಜಿ. ಜಮಕೋಳಿ ಸ್ವಾಗತಿಸಿದರು. ಶಿಕ್ಷಕ ಎಂ.ಡಿ. ಬಡಿಗೇರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.