ಬುಧವಾರ, ಮೇ 19, 2021
22 °C
ತೀರ್ಥಹಳ್ಳಿ; ಸಮ್ಮೇಳನಾಧ್ಯಕ್ಷರ ಬಿಚ್ಚುನುಡಿ

ಶಿಕ್ಷಣ ಕ್ಷೇತ್ರ ರಾಷ್ಟ್ರೀಕರಣಗೊಳಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: `ಶಿಕ್ಷಣ ಕ್ಷೇತ್ರವನ್ನು  ಸಂಪೂರ್ಣವಾಗಿ ರಾಷ್ಟ್ರೀಕರಣ ಮಾಡಿದರೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತದೆ' ಎಂದು ತಾಲ್ಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋಣಂದೂರು ಲಿಂಗಪ್ಪ ಅಭಿಪ್ರಾಯಪಟ್ಟರು.ಸೋಮವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.`ತೀರ್ಥಹಳ್ಳಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರಿದೂಗುವಂಥದ್ದು. ನನಗೆ ಸಾಹಿತ್ಯದ ಬಗ್ಗೆ ಅಭಿರುಚಿ ಹುಟ್ಟಲು ಕಾರಣವಾಗಿದ್ದು ನಾನು ಕಲಿಯುತ್ತಿದ್ದ ಶಾಲೆಗಳಿಂದ. ಆಗ ಪಾಠ ಹೇಳುವ ಶಿಕ್ಷಕರು ಹಿರಿಯ ಸಾಹಿತಿಗಳ ಹಾಡುಗಳನ್ನು ಎರಡು, ಮೂರು ದಿನಗಳ ಕಾಲ ಮನಮುಟ್ಟುವಂತೆ ಹೇಳಿಕೊಡುತ್ತಿದ್ದರು. ಪದ್ಯಗಳನ್ನು ಹಾಡಿಸಿ ಅವರು ತಾವೂ ಕುಣಿಯುತ್ತಿದ್ದರು. ಇಂದು ಶಿಕ್ಷಣದಲ್ಲಿ ಒಳ್ಳೆಯ ಪದ್ಯಗಳನ್ನು ಅಳವಡಿಸಬೇಕು. ನಾನು ಕಲಿತ ಪದ್ಯಗಳು ನನ್ನ ಜತೆಗೆಯೇ ಬೆಳೆದು ಬಂದವು' ಎಂದರು.ಕೋಣಂದೂರಿನಲ್ಲಿ ಶಿಕ್ಷಣ ಮುಗಿಸಿ, ತೀರ್ಥಹಳ್ಳಿ ಪ್ರೌಢಶಾಲೆಗೆ ಬಂದಾಗ ಕಮಕೋಡು ನರಸಿಂಹಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಗೋಡೆ ಪತ್ರಿಕೆ `ಪ್ರಭಾತ ಭಾರತ'ದ ಸಂಪಾದಕನಾಗುವ ಜವಾಬ್ದಾರಿ ನನ್ನ ಮೇಲೆ ಬಂತು.ಆಗ ಅನಿವಾರ್ಯವಾಗಿ ಬರೆದದ್ದು ನನ್ನನ್ನು ಸಾಹಿತ್ಯ ಆಸಕ್ತನನ್ನಾಗಿಸಿತು ಎಂದರು.

ವಿದ್ಯಾರ್ಥಿಗಳಿಗೆ ಕೈಬರಹದ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡಬೇಕು.ಚಿತ್ರಕಲೆ, ಕಥೆ, ಕವನಗಳನ್ನು ಬರೆಸಬೇಕು. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಗೋಡೆ ಪತ್ರಿಕೆಗಳು ಶಾಲೆಗಳಲ್ಲಿ ಬಿತ್ತರಗೊಳ್ಳುವಂತಾಗಬೇಕು.ಇದರಿಂದ ಸಾಹಿತ್ಯ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿಗಳು ದೊಡ್ಡವರಾದ ನಂತರವೂ ಅವರು ಬರೆದ ಹಸ್ತಪ್ರತಿಯನ್ನು ನೋಡಿ ಆನಂದ ಪಡುವ ಸಂದರ್ಭ ಸಿಗುವಂತಾಗಬೇಕು ಎಂದರು.ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಕನಿಷ್ಠ 25 ಎಕರೆ ಪ್ರದೇಶದ ಒಳಗೆ ಯಾರು ಸಾಗುವಳಿ ಮಾಡಿದ್ದಾರೋ ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬಾರದು. ಅದಕ್ಕಿಂತ ಹೆಚ್ಚು ಭೂಮಿ ಹೊಂದಿದವರ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿ.ಗುಟ್ಕಾ ನಿಷೇಧ ಬೇಕೋ, ಬೇಡವೋ ಗೊತ್ತಿಲ್ಲ. ಆದರೆ, ಗೋರಕ್ ಸಿಂಗ್ ವರದಿ ಜಾರಿಯಾಗಬೇಕು. ಅರಣ್ಯ ಪ್ರದೇಶದ ಉಳಿವಿನ ಜೊತಗೆ ಇಲ್ಲಿನ ಜನರೂ ಉಳಿಯುವಂತಾಗಬೇಕು. ಕನ್ನಡವನ್ನು ತಂತ್ರಾಂಶದಲ್ಲಿ ಸೇರಿಸಬೇಕು. ಇದಕ್ಕೆ ಸರ್ಕಾರ ನೆರವು ನೀಡಬೇಕು ಎಂದರು.`ನನ್ನ ಬದುಕನ್ನು ಅನಂತಮೂರ್ತಿ ಉದ್ಘಾಟಿಸಿದರು. ಶಾಂತವೇರಿ ಗೋಪಾಲಗೌಡ ಮನುಷ್ಯನನ್ನಾಗಿಸಿದರು. ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದ ನನ್ನಂಥವನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಕ್ಕೆ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಕೋಣಂ ದೂರು ಲಿಂಗಪ್ಪ ನುಡಿದರು.ಸಮಾರಂಭದಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಸಾಹಿತಿ ಡಾ.ಕಾಳೇಗೌಡ ನಾಗವಾರ, ಕೋಣಂದೂರು ಲಿಂಗಪ್ಪ ಅವರ ಪತ್ನಿ ಗಿರಿಜಮ್ಮ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್, ತಹಶೀಲ್ದಾರ್ ಗಣೇಶಮೂರ್ತಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಜೆ.ಕೆ.ರಮೇಶ್, ನಿಕಟಪೂರ್ವ ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ರಾಜೇಂದ್ರ ಬುರುಡಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.