ಶನಿವಾರ, ಜನವರಿ 18, 2020
21 °C

ಶಿರಾಡಿ ಘಾಟ್‌ ರಸ್ತೆ ದೂಳುಮಯ

ವಿಶೇಷ ವರದಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನ ಸುಮಾರು 50 ಕಿ.ಮೀ. ರಸ್ತೆ ಸಂಪೂರ್ಣ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ.ತಾಲ್ಲೂಕಿನ ದೋಣಿಗಾಲ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿವರೆಗೆ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳು ಬಾಯ್ತೆರೆದುಕೊಂಡಿವೆ. ಪ್ರತಿ ವರ್ಷವೂ ಈ ರಸ್ತೆ ಗುಂಡಿ ಬೀಳುವುದು, ಮಳೆಗಾಲ ಆರಂಭಗೊಳ್ಳುವ ಸಮಯದಲ್ಲಿ ಗುಂಡಿಗಳನ್ನು ಮುಚ್ಚುವುದು, ಮಳೆ ಸುರಿದ ತಿಂಗಳಲ್ಲಿ ರಸ್ತೆಯಲ್ಲಿ ಅದೇ ಗುಂಡಿಗಳು ಪುನಃ ಪ್ರತ್ಯಕ್ಷವಾಗುವುದು ರೂಢಿಯಾಗಿದೆ.ಕಳೆದ ಜನವರಿಯಿಂದ ಇದುವರೆಗೂ ಈ ರಸ್ತೆಯಲ್ಲಿ ವಾಹನಗಳನ್ನು ಚಾಲನೆ ಮಾಡುವುದಕ್ಕೆ ಸಾಧ್ಯವೇ ಇಲ್ಲದಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ. ಕೇರಳ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು ಸೇರಿದಂತೆ ಕರಾವಳಿಯತ್ತ ಹಾಗೂ ಅಲ್ಲಿಂದ ಬೆಂಗಳೂರು ಕಡೆಗೆ ಹೋಗಬೇಕಾದವರು ಶಿರಾಡಿ ಘಾಟ್‌ನ ಇದೇ ಮಾರ್ಗದಲ್ಲಿ ಹೋಗಬೇಕು.ವಿಧಿ ಇಲ್ಲದೆ ಹದಗೆಟ್ಟ ರಸ್ತೆಯಲ್ಲಿ ಹರಸಾಹಸಪಟ್ಟು ಹೋಗಲೇಬೇಕಾಗಿದೆ. ಗುಂಡಿಗಳಲ್ಲಿಯೇ ವಾಹನಗಳನ್ನು ಇಳಿಸಿಕೊಂಡು ಹೋಗುವುದು ಒಂದೆಡೆಯಾದರೆ, ಮಣ್ಣು, ಜಲ್ಲಿ ಕಲ್ಲುಗಳೇ ತುಂಬಿಕೊಂಡಿರುವ ರಸ್ತೆಯಲ್ಲಿ 10 ಅಡಿಗಳ ದೂರದಲ್ಲಿ ಇರುವ ವಾಹನ ಕಾಣದಷ್ಟು ದೂಳು ಆವರಿಸಿಕೊಂಡು ಬಿಡುತ್ತದೆ.ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ಉಪ ವಲಯ ವ್ಯಾಪ್ತಿಯ 35 ಕಿ.ಮೀ. (232ಕಿ.ಮೀ.ನಿಂದ 367ಕಿ.ಮೀ.ವರೆಗೆ) ವಾಹನಗಳನ್ನು ಓಡಿಸುವುಕ್ಕೆ ಕನಿಷ್ಠ ಎರಡೂವರೆ ಗಂಟೆ ಬೇಕಾಗುತ್ತದೆ. ‘ತೀರಾ ಹದಗೆಟ್ಟಿರುವ ರಸ್ತೆಯಲ್ಲಿ ಹೋಗುವಾಗ ನಿತ್ಯ ಹತ್ತಾರು ವಾಹನಗಳು ಕೆಟ್ಟು ನಿಲ್ಲುತ್ತವೆ. ಅಲ್ಲಿಂದ ಸಕಲೇಶಪುರಕ್ಕೆ ಬಂದು ಮೆಕಾನಿಕ್‌ ಕರೆದುಕೊಂಡು ಹೋಗಿ ರಿಪೇರಿ ಮಾಡಿಸುವಷ್ಟರಲ್ಲಿ ಮರು ಜನ್ಮ ಬಂದಂತಾಯಿತು’ ಎಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಉಪನ್ಯಾಸಕ ಜಯರಾಂರೆಡ್ಡಿ ‘ಪ್ರಜಾವಾಣಿ’ಗೆ ಹೇಳಿದರು.ಮರಳು ಲಾರಿಗಳ ಸಂಚಾರವೂ ಕಾರಣ: ‘ಈ ರಸ್ತೆಯಲ್ಲಿ  ಮಂಗಳೂರಿನಿಂದ ಬೆಂಗಳೂರಿನತ್ತ ಸುಮಾರು 70 ಟನ್‌ ತೂಕದ ಹಸಿ ಮರಳು ಹೊತ್ತು ಲಾರಿಗಳು ಕಾನೂನು ಬಾಹಿರವಾಗಿ ಸಂಚಾರ ಮಾಡುತ್ತಿವೆ. ಇದೇ ರೀತಿ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಲಾರಿಗಳು ಮರಳು ತುಂಬಿಕೊಂಡು ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿವೆ. ಹರಿಯುವ ನೀರಿನಿಂದ ಮರಳು ತುಂಬಿಕೊಂಡು ತರುವುದರಿಂದ ಮಾರ್ಗದ ಉದ್ದಕ್ಕೂ ನೀರು ಸುರಿಯುತ್ತದೆ. ಇದರಿಂದ ರಸ್ತೆ ಮತ್ತಷ್ಟು ಗುಂಡಿ ಬಿದ್ದು ಹಾಳಾಗುತ್ತಿದೆ’ ಎನ್ನುತ್ತಾರೆ ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ.ಗುಂಡಿ ಮುಚ್ಚುವ ಕಾಮಗಾರಿ ಸ್ಥಗಿತ: ₨ 4.40 ಕೋಟಿ ಅನುದಾನದಲ್ಲಿ ಮಾರನಹಳ್ಳಿ, ಗುಂಡ್ಯಾ ಕಡೆಯಿಂದ ರಸ್ತೆಯ ಗುಂಡಿಗಳಿಗೆ ಡಾಂಬರ್‌ ಹಾಕುವ ಕಾಮಗಾರಿ ವಾರದ ಹಿಂದೆ ಆರಂಭಗೊಂಡಿತ್ತು. ರಸ್ತೆ ಉದ್ದಕ್ಕೂ ನೀರು ಇಳಿಯುತ್ತಿರುವ ಮರಳು ಲಾರಿಗಳು ಓಡಾಡುವುದರಿಂದ ಮುಚ್ಚಿದ ಗುಂಡಿಗಳು ಎರಡೇ ದಿನಗಳಲ್ಲಿ ಪುನಃ ಹಾಳಾಗುತ್ತವೆ.ಇದರಿಂದ ಕಾಮಗಾರಿಗೆ ಖರ್ಚು ಮಾಡಿದ ಹಣವನ್ನು ಇಲಾಖೆ ಅಧಿಕಾರಿಗಳು ನೀಡುವುದಿಲ್ಲ. ಸುಮ್ಮನೆ ನಾಮಕಾವಸ್ಥೆಗೆ ಗುಂಡಿ ಮುಚ್ಚಬೇಕಾಗುತ್ತದೆ ಅಂತಹ ಕೆಲಸವನ್ನು ತಾವು ಮಾಡುವುದಿಲ್ಲ ಎಂದು ಕೆಲಸ ಆರಂಭಿಸಿದ ಒಂದೇ ದಿನಕ್ಕೆ ಗುತ್ತಿಗೆದಾರರಾದ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ಮಹಮ್ಮದ್‌ ಹಾಗೂ ಇಕ್ಬಾಲ್‌ ಷರೀಫ್‌ ಕೆಲಸವನ್ನು ನಿಲ್ಲಿಸಿದ್ದಾರೆ.ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮರಳು ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಿ, ಗುಂಡಿ ಮುಚ್ಚುವ ಕಾಮಗಾರಿಯನ್ನು ಮುಂದುವರೆಸುವುದಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಜಾನೇಕೆರೆ ಆರ್‌. ಪರಮೇಶ್‌

ಪ್ರತಿಕ್ರಿಯಿಸಿ (+)