ಸೋಮವಾರ, ಏಪ್ರಿಲ್ 19, 2021
25 °C

ಶಿರಾದಲ್ಲಿ ನಾಲ್ವರು ರೈತರ ಆತ್ಮಹತ್ಯೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾದಲ್ಲಿ ನಾಲ್ವರು ರೈತರ ಆತ್ಮಹತ್ಯೆ ಯತ್ನ

ಶಿರಾ: ಭೀಕರ ಬರದಿಂದ ತತ್ತರಿಸಿರುವ ಜಿಲ್ಲೆಯ ಜನತೆಗೆ ಧೈರ್ಯ ತುಂಬಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವಾಗಲೇ ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ರೈತರು ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆಯಿತು.ಅಧಿಕಾರಿಗಳಿಂದ ಸಕರಾತ್ಮಕ ಪ್ರತಿಕ್ರಿಯೆ ದೊರೆಯದೆ ಹತಾಶರಾದ ಧರಣಿ ನಿರತರಲ್ಲಿ ಮೂವರು ತಹಶೀಲ್ದಾರ್ ಎದುರೆ ತಾಲ್ಲೂಕಿನ ಮೇಕೆರಹಳ್ಳಿ ಶ್ರೀನಿವಾಸ್, ತಿಮ್ಮರಾಜು, ನರಸಿಂಹಮೂರ್ತಿ ಕೀಟನಾಶಕ ಸೇವಿಸಿದರು. ಹೊನ್ನೇನಹಳ್ಳಿ ವೆಂಕಟೇಶ್ ತಹಶೀಲ್ದಾರ್ ಕಚೇರಿ ಎದುರಿನ ಮರ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದರು. ವೆಂಕಟೇಶ್ ಮನವೊಲಿಸಿ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾಗಲೇ ಇತ್ತ ಮೂವರು ಕೀಟನಾಶಕ ಸೇವಿಸಿದರು. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.ವಿಷ ಸೇವಿಸಿದ ಮೂವರನ್ನು ತಕ್ಷಣವೇ ತಾಲ್ಲೂಕು ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನೂರಾರು ಜನರು ಆಸ್ಪತ್ರೆ ಎದುರು ಜಮಾಯಿಸಿದ್ದರು. ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.ಮುದಿಗೆರೆ ಕಾವಲ್‌ನ 12ನೇ ಸರ್ವೆ ನಂಬರ್‌ನಲ್ಲಿ 4600 ಎಕರೆ ಜಮೀನು ಇದ್ದು, 1991ರಿಂದ ಹಲವಾರು ರೈತರು ಸಾಗುವಳಿ ಮಾಡುತ್ತಿದ್ದಾರೆ. ರೈತರು ಅಂದಿನಿಂದಲೂ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ತಹಶೀಲ್ದಾರ್, ಶಾಸಕರಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮಂಗಳವಾರ ಧರಣಿ ಕುಳಿತಿದ್ದರು.ರೈತರ ಆತ್ಮಹತ್ಯೆ ಯತ್ನ ಘಟನೆ ತಿಳಿಯುತ್ತಿದ್ದಂತೆ ಮಾಜಿ ಸಚಿವ ಬಿ.ಸತ್ಯನಾರಾಯಣ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಆಸ್ಪತ್ರೆಗೆ ಆಗಮಿಸಿದರು. ನಂತರ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ರೈತರ ಆತ್ಮಹತ್ಯೆ ಯತ್ನಕ್ಕೆ ತಾಲ್ಲೂಕು ಆಡಳಿತ ಹಾಗೂ ಶಾಸಕರೇ ನೇರ ಹೊಣೆ ಎಂದು ಆರೋಪಿಸಿದರು.ಭೇಟಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೂವರು ರೈತರನ್ನು ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್. ಸುರೇಶ್ ಭೇಟಿ ನೀಡಿ ವಿಚಾರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.