ಶಿಲಾಯುಗದ ಸಾಕ್ಷಿ ಕಲ್ಲು

7

ಶಿಲಾಯುಗದ ಸಾಕ್ಷಿ ಕಲ್ಲು

Published:
Updated:
ಶಿಲಾಯುಗದ ಸಾಕ್ಷಿ ಕಲ್ಲು

ಬಿಳಿಗಿರಿರಂಗನ ಬೆಟ್ಟ ಪಶ್ಚಿಮ ಹಾಗೂ ಪೂರ್ವ ಘಟ್ಟ ಶ್ರೇಣಿಗಳನ್ನು ಜೋಡಿಸುವ ತಾಣ. ಕರ್ನಾಟಕದ ದಕ್ಷಿಣದ ತುದಿಯಲ್ಲಿ ಈ ಬೆಟ್ಟ ಶ್ರೇಣಿಯಿದೆ. ಜೇನು-ಜೀರುಂಡೆಯಿಂದ ಹಿಡಿದು ಕಾಡೆಮ್ಮೆ, ಹುಲಿ, ಚಿರತೆ, ಜಿಂಕೆ, ಮದ್ದಾನೆಗಳವರೆಗೆ  ಅಸಂಖ್ಯಾತ ಜೀವಕೋಟಿಗಳಿಗೆ ಆಶ್ರಯ ನೀಡಿದೆ.ಬಿಳಿಗಿರಿರಂಗನ ಬೆಟ್ಟದ ಹಸಿರು ಕಾನನ ಪರಿಸರಕ್ಕೆ ಹೋದವರು ಅಲ್ಲಿ ಸಂಚರಿಸುವಾಗ ಸೂರ್ಯನ ಕಿರಣ ನೆತ್ತಿ ಸುಟ್ಟರೂ ಕಾಲಡಿಯಲ್ಲಿ ತಂಪಿನ ಅನುಭವವಾಗುತ್ತದೆ. ಅಲ್ಲಿರುವ ಗಿರಿ- ಶಿಖರಗಳು ಗತಕಾಲದ ಕೌತುಕವನ್ನು ತನ್ನ ಒಡಲಲ್ಲಿಟ್ಟುಕೊಂಡಿವೆ. ಆದಿ ಮಾನವರ ಹೆಜ್ಜೆ ಗುರುತುಗಳ ಮೇಲೆ ಬೆಳಕು ಚೆಲ್ಲುವ ಶಿಲಾ ಸಮಾಧಿಗಳು ಶಿಲಾಯುಗದ ಸಾಕ್ಷಿ ಕಲ್ಲುಗಳಾಗಿ ಇಂದಿಗೂ ಉಳಿದಿವೆ. ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಹಲವು ಪ್ರದೇಶ ಆದಿ ಮಾನವರ ನೆಲೆ ಎನ್ನಲಾಗಿತ್ತು.ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಮಾನವರು ನೆಲೆಸಿದ್ದರು. ಕ್ರಿ.ಶ.1867 ಮತ್ತು 1917ರ ನಡುವೆ ನಡೆದ ಉತ್ಖನನದಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಯಳಂದೂರು ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಹಾದಿಯ ಸುತ್ತಲಿನ ಅರಣ್ಯದಲ್ಲಿ ಚಾರಿತ್ರಿಕ ಕುರುಹು ಕಾಣ ಸಿಗುತ್ತವೆ. ಆದಿ ಮಾನವರು ಬಳಸಿ ಬಿಟ್ಟಿರುವ ಕಲ್ಲುಗಳು ಮಾನವನ ಉಗಮ, ವಿಕಾಸದ ಕಥೆ ಹೇಳುತ್ತವೆ.ದಕ್ಷಿಣ ಭಾರತದ ಸಂಸ್ಕೃತಿಯನ್ನು ಶಿಲಾಯುಗ ಇತಿಹಾಸ ತಜ್ಞರು ಎರಡು ಭಾಗವಾಗಿ ವರ್ಗೀಕರಿಸಿದ್ದಾರೆ. ಮೊದಲನೆಯದು ಬೃಹತ್ ಶಿಲಾಯುಗ. ಆ ಕಾಲದ ಜನರಿಗೆ ಮಣ್ಣಿನ ಪಾತ್ರೆ (ಮಡಕೆ) ಹಾಗೂ ಲೋಹಗಳಿಂದ ಆಯುಧಗಳನ್ನು ಮಾಡುವ ತಿಳಿವಳಿಕೆ ಇರಲಿಲ್ಲ. ಸತ್ತವರನ್ನು ಒಂದೆಡೆ ಇಟ್ಟು ಅದರ ಮೇಲೆ ಕಲ್ಲು ಚಪ್ಪಡಿಗಳನ್ನು ಜೋಡಿಸಿಡುವ ಪದ್ಧತಿಯಿತ್ತು.  ಹೊಸ ಶಿಲಾಯುಗದ ಕಾಲದ ಮಾನವರು ಚೂಪಾದ ಕಲ್ಲುಗಳಿಗೆ ಕೊಡಲಿ, ಸುತ್ತಿಗೆ ರೂಪ ಕೊಟ್ಟು ಆಯುಧಗಳಂತೆ ಬಳಸುವುದನ್ನು ರೂಢಿ ಮಾಡಿಕೊಂಡರು. ಹಸಿ ಮಣ್ಣಿಗೆ ಪಾತ್ರೆ ಆಕಾರ ಕೊಟ್ಟು ಅವನ್ನು ಸುಟ್ಟು ಬಳಸುವ ಪದ್ಧತಿ ಬಳಕೆಗೆ ತಂದರು. ಆದರೆ ಕುಂಬಾರಿಕೆ ಬಗ್ಗೆ ಖಚಿತ ತಿಳುವಳಿಕೆ ಇರಲಿಲ್ಲ ಎಂದು ಇತಿಹಾಸಜ್ಞರು ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ.ಆದಿ ಮಾನವರು ಶವ ಸಂಸ್ಕಾರ ಮಾಡುತ್ತಿದ್ದ ಪ್ರದೇಶದಲ್ಲಿ ಈಗ ನೋಡಲು ಸಿಗುವ ಅವಶೇಷಗಳು ಅಂದಿನ ಜನಜೀವನದ ಮೇಲೆ ಕನ್ನಡಿ ಹಿಡಿಯುತ್ತವೆ. ಪ್ರಾಚ್ಯ ಹಾಗೂ ಪುರಾತತ್ವ ಶಾಸ್ತ್ರಜ್ಞರು ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಎರಡು ಬಗೆಯ ಶವ ಸಂಸ್ಕಾರ ಮಾಡುವ ಪದ್ಧತಿಗಳನ್ನು ಪತ್ತೆ ಹಚ್ಚಿದ್ದಾರೆ. ಮೊದಲನೆಯದು ದೊಡ್ಡ ಬಂಡೆಗಳನ್ನು ಒಂದೆಡೆ ಸೇರಿಸಿ ಕಲ್ಲು ಗುಪ್ಪೆ ಆಕಾರದ ಸಮಾಧಿ ಮಾಡುವುದು.ಎರಡನೆಯದು ಕಲ್ಲು ಚಪ್ಪಡಿಗಳ ಸಮಾಧಿ. ಈ ವಿಧಾನದಲ್ಲಿ ಚೌಕಾಕಾರವಾಗಿ ಸಮತಟ್ಟಾದ ಕಲ್ಲು ಚಪ್ಪಡಿಗಳನ್ನು ಇಟ್ಟು ಅದರ ಮೇಲೆ ಇನ್ನೊಂದು ಚಪ್ಪಡಿ ಇಟ್ಟಂತೆ ಕಾಣುವ ಗೂಡುಗಳ ಮಾದರಿಯ ಸಮಾಧಿಗಳು. ಸಮಾಧಿ ಅಕ್ಕಪಕ್ಕ ಮಡಕೆ ಚೂರು, ಕಲ್ಲಿನ ಅಥವಾ ದೊರಗು ಕಬ್ಬಿಣದ ಆಯುಧ ಬಳಸಿದ್ದ ಕುರುಹುಗಳು ಕೆಲವೆಡೆ ಪತ್ತೆಯಾಗಿವೆ. 2005-06ರಲ್ಲಿ ಬಿಳಿಗಿರಿರಂಗನ ಬೆಟ್ಟದ ಗಾನಳ್ಳಿಮಟ್ಟ ಅರಣ್ಯ ಪ್ರದೇಶದಲ್ಲಿ ನಡೆದ ಉತ್ಖನನದ ವೇಳೆ ಈ ಮಾದರಿಯ ಶಿಲಾ ಸಮಾಧಿ ಬೆಳಕಿಗೆ ಬಂದಿವೆ. ಮಡಕೆ ಚೂರು, ದೊರಗು ಕಬ್ಬಿಣದ ಆಯುಧಗಳು ಅಲ್ಲಿ ಸಿಕ್ಕಿವೆ.ಸೋಲಿಗರು ವಾಸಿಸುವ ಪುರಾಣಿ ಪೋಡು, ಮುತ್ತುಗದ ಗದ್ದೆ ಪೋಡು, ಕೆ. ಗುಡಿ, ಕನ್ನೇರಿ ಕಾಲೊನಿಯ ಆಸುಪಾಸಿನಲ್ಲಿ ಇಂದಿಗೂ ಶಿಲಾ ಸಮಾಧಿಗಳನ್ನು ನೋಡಬಹುದು. ಈ ಸಾಕ್ಷಿ ಕಲ್ಲುಗಳು ಗಿರಿಜನರಿಗೆ ಅವರ ಪೂರ್ವಜರ ನೆನಪು ತರುತ್ತವೆ. ಗಿರಿಜನರಲ್ಲಿ ಧಾರ್ಮಿಕ ನೆಲೆಗಟ್ಟಿನ ಆಧಾರದ ಮೇಲೆ ಕಾಡಿನ ಸೀಮೆ ಗುರುತಿಸುವ ಸಂಪ್ರದಾಯವಿದೆ. ಜತೆಗೆ ಸಮಾಧಿಗಳನ್ನು ‘ಸಗ್ಗ’ವೆಂದು ಕರೆದು ಪೂಜಿಸುತ್ತಾರೆ. ಹುಲಿಯನ ತುಂಡ, ಕೊಂಬಾರನ ಕೊಳ, ಹೆಣಕೆರೆ, ಕುಂದಾಣಿಮಟ್ಟ, ಗಂಟೆದಿಬ್ಬ, ಗೊತ್ತಿಗೆರೆ ಕಾಡುಗಳಲ್ಲಿ ಶಿಲಾ ಸಮಾಧಿಗಳಿವೆ.ಮುತ್ತುಗದ ಗದ್ದೆ ಪೋಡಿನ ಬಳಿ ಸುಮಾರು 200 ಶಿಲಾ ಸಮಾಧಿಗಳಿವೆ. ಗಾನಳ್ಳಿಮಟ್ಟದ ಬಳಿ ಇವುಗಳ ಸಂಖ್ಯೆ ಒಂದು ಸಾವಿರದಷ್ಟಿದೆ. ಇಲ್ಲಿ ನಡೆಸಿದ ಉತ್ಖನನದ ವೇಳೆ ಪತ್ತೆಯಾದ ಶಿಲಾ ಸಮಾಧಿಯ ಕಲ್ಲುಗಳನ್ನು ಒಯ್ದು ಬಿಳಿಗಿರಿ ರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಆವರಣದಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಕಲ್ಲುಗಳು ಕ್ರಿಸ್ತ ಪೂರ್ವ 1,500 ವರ್ಷಗಳ ಹಿಂದಿನ ಚರಿತ್ರೆಯನ್ನು ಹೇಳುತ್ತವೆ. ಅಂದರೆ ಇವು 3,500 ವರ್ಷಗಳ ಹಿಂದಿನ ಜನಜೀವನದ ದಾಖಲೆಗಳಾಗಿವೆ.ಪ್ರಸ್ತುತ ಬಿಆರ್‌ಟಿಗೆ ಹುಲಿ ರಕ್ಷಿತಾರಣ್ಯದ ಮಾನ್ಯತೆ ಸಿಕ್ಕಿದೆ. ದಟ್ಟ ಹಸಿರು ಕಾಡಿನ ನಡುವೆ ಇರುವ ಶಿಲಾ ಸಮಾಧಿಗಳು ಮಣ್ಣಿನಲ್ಲಿ ಹೂತು ಹೋಗುತ್ತಿವೆ. ಪ್ರಾಚ್ಯ ಇತಿಹಾಸ ಮತ್ತು ಪ್ರವಾಸೋದ್ಯಮದ ಭಾಗವಾಗಿ ಅವುಗಳನ್ನು ಸಂರಕ್ಷಿಸುವ ಕಾರ್ಯ ಆರಂಭವಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry