ಗುರುವಾರ , ಆಗಸ್ಟ್ 13, 2020
25 °C
ತುಮರಿ ಸೇತುವೆಗೆ ಹಣ ಇಲ್ಲ; ಮರೆತು ಹೋದ ಕೃಷಿ ಮತ್ತು ತೋಟಗಾರಿಕಾ ವಿವಿ

ಶಿವಮೊಗ್ಗ ನಗರಸಭೆಗೆ ನಗರಪಾಲಿಕೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ ನಗರಸಭೆಗೆ ನಗರಪಾಲಿಕೆ ಭಾಗ್ಯ

ಶಿವಮೊಗ್ಗ: ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಆದ್ಯತೆಗಳೇನೂ ಸಿಕ್ಕಿಲ್ಲ. ಜಿಲ್ಲೆಗೆ ಪ್ರಮುಖವಾಗಿ ಹೊಸ ಯೋಜನೆ, ವಿಶೇಷ ಅನುದಾನ ನೀಡಿಲ್ಲ. ಈ ಮೊದಲೇ ನಿಗದಿಯಾಗಿದ್ದ ನಗರಪಾಲಿಕೆ ಘೋಷಣೆ, ವಿಮಾನ ನಿಲ್ದಾಣ ಕಾಮಗಾರಿ ಪೂರೈಸುವ ವಾಗ್ದಾನ, ಪಶುವೈದ್ಯಕೀಯ ಕಾಲೇಜಿಗೆ ಅನುದಾನ ಹಾಗೂ ಬಿಲ್ಲವ ನಾರಾಯಣಗುರು, ಮೊಗವೀರ ಸಮುದಾಯ ಭವನಗಳಿಗೆ ಹಣ ನೀಡಿಕೆ. ಇವು ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿರುವ ಕೊಡುಗೆಗಳು.ಶಿವಮೊಗ್ಗ ನಗರಪಾಲಿಕೆ ಘೋಷಣೆಯಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನೂ ಕೈಗೊಂಡಿತ್ತು. ಆದರೆ, 2011ರ ಜನಗಣತಿಯ ಅಂತಿಮ ವರದಿಗೆ ಎದುರು ನೋಡಿತ್ತು. ಈಗ ಅಂತಿಮ ವರದಿ ಬಂದಿರುವುದರಿಂದ ಹೊಸ ಸರ್ಕಾರಕ್ಕೆ ನಗರಪಾಲಿಕೆ ಘೋಷಣೆ ಮಾಡಲು ಅವಕಾಶ ಸಿಕ್ಕಿತ್ತು. ಅದರಂತೆ ಈಗ ಶಿವಮೊಗ್ಗ ನಗರಪಾಲಿಕೆಯಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ವಿಶೇಷ ಅನುದಾನಗಳು ಸೇರಿದಂತೆ ಸೌಲಭ್ಯಗಳು ನಗರಕ್ಕೆ ಹರಿದು ಬರಲಿವೆ. ಹಾಗೆಯೇ, ನಗರದ ಜೀವನಮಟ್ಟವೂ ತುಟ್ಟಿಯಾಗಲಿದೆ ಎಂದು ಸಾರ್ವಜನಿಕರು ಆತಂಕಪಡುತ್ತಿದ್ದಾರೆ.ಕುಂಟುತ್ತಲೇ ಸಾಗಿರುವ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಈ ವರ್ಷದ ಒಳಗೆ ಪೂರೈಸುವ ವಾಗ್ದಾನವನ್ನು ಸಿದ್ದರಾಮಯ್ಯ ಬಜೆಟ್‌ನಲ್ಲಿ ನೀಡಿದ್ದಾರೆ. ನಗರದ ಹೊರವಲಯದಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಲಾಗಿದೆ. ಬಿಲ್ಲವ ನಾರಾಯಣಗುರು ಸಮುದಾಯ ಭವನಕ್ಕೆ ರೂ 1.60 ಕೋಟಿ ನೀಡುವ ಆಶ್ವಾಸನೆ ಸಿಕ್ಕಿದೆ. ಹಾಗೆಯೇ, ಜಿಲ್ಲೆಯ ತೀರ್ಥಹಳ್ಳಿ, ಸಾಗರದಲ್ಲಿ ಮೊಗವೀರ ಭವನ ನಿರ್ಮಾಣಕ್ಕೆ ರೂ 2 ಕೋಟಿ ನೀಡಲಾಗಿದೆ. ಹಾಗೆಯೇ, ಮಲೆನಾಡು, ಕರಾವಳಿಯ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಬೆಳೆಗಾರರಿಗೆ ಮನವರಿಕೆ ಮಾಡಿಕೊಡಲು ಪ್ರಾತ್ಯಕ್ಷಿಕೆಗಾಗಿ ರೂ 2ಕೋಟಿ ಅನುದಾನ ನೀಡಲಾಗಿದೆ. ಅಲ್ಲದೇ, ಜಿಲ್ಲಾ ವ್ಯಾಪ್ತಿಯ ಅಣೆಕಟ್ಟೆ, ಜಲಾಶಯಗಳಿಗೆ ವಿಶೇಷ ಭದ್ರತೆ ವ್ಯವಸ್ಥೆ ಕಲ್ಪಿಸಿಕೊಡಲು ಯೋಜಿಸಲಾಗಿದೆ. ಈ ಯೋಜನೆಗಳು, ಅನುದಾನಗಳು ಜಿಲ್ಲೆಗೆ ನೇರವಾಗಿ ಅನುಕೂಲವಾಗಲಿವೆ.ಹಾಗೆಯೇ, ಹೊಸದಾಗಿ ರಚನೆಗೊಂಡ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಅಡಿಕೆ ಸಂಶೋಧನಾ ಕೇಂದ್ರಕ್ಕೂ ಸರ್ಕಾರ ನೆರವು ನೀಡಿಲ್ಲ. ಬಹುನಿರೀಕ್ಷೆಯ ಸಾಗರದ ತುಮರಿ ಸೇತುವೆ ಕುರಿತಂತೆ ಬಜೆಟ್‌ನಲ್ಲಿ ಯಾವುದೇ ಚಕಾರ ಎತ್ತದಿರುವುದು ಆ ಭಾಗದ ಜನರಲ್ಲಿ ನಿರಾಶೆ ಮೂಡಿಸಿದೆ.ಮುಂದುವರಿದ ಗೊಂದಲ

ಶಿವಮೊಗ್ಗ ನಗರಸಭೆಗೆ ನೂತನವಾಗಿ 35 ಸದಸ್ಯರು ಆಯ್ಕೆಯಾಗಿದ್ದಾರೆ. ಸರ್ಕಾರ ನಗರಪಾಲಿಕೆ ಮಾಡಿದಾಗ ಇವರ ಸದಸ್ಯತ್ವ ಮುಂದುವರಿಯಲಿದೆಯೇ? ಅಥವಾ ಹೊಸದಾಗಿ ಚುನಾವಣೆ ನಡೆಯಲಿದೆಯೇ ಎಂಬ ಗೊಂದಲ ಏರ್ಪಟ್ಟಿದೆ. ಇದನ್ನು ಪರಿಹರಿಸುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂಬ ಕೂಗು ಎದ್ದಿದೆ.ಬಜೆಟ್‌ನಲ್ಲಿ ಸಿಕ್ಕಿದ್ದು...

ವಿಮಾನ ನಿಲ್ದಾಣ ಇದೇ ವರ್ಷ ಪೂರ್ಣ ಸಮುದಾಯ ಭವನಗಳಿಗೆ ನೆರವು ಅಣೆಕಟ್ಟೆಗಳಿಗೆ ವಿಶೇಷ ಭದ್ರತೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.