ಭಾನುವಾರ, ಸೆಪ್ಟೆಂಬರ್ 22, 2019
22 °C

ಶಿಸ್ತುಬದ್ಧವಾಗಿ ಕೆಲಸ ಮಾಡಲು ಸಲಹೆ

Published:
Updated:

ವಿಜಾಪುರ: ವಿಶ್ವವಿದ್ಯಾಲಯದ ಕಾರ್ಯಕ್ರಮ ಮತ್ತು ಯೋಜನೆಗಳು ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾಗಿರಬೇಕು ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿ.ಟಿ. ಪಾಟೀಲ ಸಲಹೆ ನೀಡಿದರು. ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಈಚೆಗೆ ನಡೆದ ಕಾಲೇಜುಗಳ ಪ್ರಾಚಾರ್ಯರು ಮತ್ತು ನ್ಯಾಕ್ ಸಂಯೋಜಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಯು.ಜಿ.ಸಿ ಮಾರ್ಗದರ್ಶಿ ಹಾಗೂ ನ್ಯಾಕ್ ರಿಅಕ್ರೆಡಿಯೇಸನ್ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಸ್ವಾಯತ್ತತೆಯಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಆಯಾ ಕಾಲೇಜುಗಳ ಪ್ರಾಚಾರ್ಯರು ಗಂಭೀರ ಚಿಂತನೆಗಳನ್ನು ಮಾಡಬೇಕು ಎಂದು ಹೇಳಿದರು.ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಮತ್ತು ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಅದರ ಪ್ರಕಾರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದರು. ಪ್ರತಿಯೊಬ್ಬರು ಸಮರ್ಪಣಾಭಾವದಿಂದ ಮತ್ತು ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ಕುಲಪತಿ ಪ್ರೊ.ಗೀತಾ ಬಾಲಿಮ, ಪದವಿ ಕೋರ್ಸ್‌ಗಳಲ್ಲಿ ಕ್ರೆಡಿಟ್ ವ್ಯವಸ್ಥೆ ಜಾರಿಗೊಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸಂಸ್ಥೆಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಜ್ಞಾನ ಮತ್ತು ಸಾಮರ್ಥ್ಯ ಬಳಕೆಯಾಗಬೇಕು. ವಿಶ್ವವಿದ್ಯಾಲಯದೊಂದಿಗೆ, ವಿದ್ಯಾರ್ಥಿಗಳು ಮತ್ತು ಸಹದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಂವಹನ ಏರ್ಪಡಿಸಿಕೊಳ್ಳಬೇಕು. ಇದರಿಂದ ಸಂಸ್ಥೆಯ ಕಾರ್ಯನಿರ್ವಹಣೆ ಸುಲಭವಾಗುತ್ತದೆ ಎಂದು ವಿವರಿಸಿದರು.ಕುಲಸಚಿವ ಪ್ರೊ.ಜಿ.ಆರ್.ನಾಯಕ್, ಪ್ರತಿಯೊಂದು ಕಾಲೇಜಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಕೊಳ್ಳಬೇಕು. ಗುಣಮಟ್ಟ ಕಾಪಾಡುವುದು ಒಂದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪಿ.ಜಿ. ತಡಸದ ಮತ್ತು ಜೈವಿಕ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಬಿ. ಮಾಡಗಿ ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವೆ (ಮೌಲ್ಯಮಾಪನ) ಡಾ. ಡಿ.ಎಚ್. ತೇಜಾವತಿ ಉಪಸ್ಥಿತರಿದ್ದರು.ಡಾ. ವಿಜಯಾ ಕೋರಿಶೆಟ್ಟಿ ಸ್ವಾಗತಿಸಿದರು. ಡಾ. ಎಂ.ಬಿ. ದಿಲ್‌ಷಾದ್ ನಿರೂಪಿಸಿ, ವಂದಿಸಿದರು.

Post Comments (+)