ಭಾನುವಾರ, ಮೇ 9, 2021
27 °C

ಶೀಘ್ರ ಹೊಸ ಗಣಿ ನೀತಿ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲಿ ಹೊಸ ಗಣಿ ನೀತಿ ಜಾರಿಗೆ ತರಲಿದೆ. ಇದರ ಅನುಷ್ಠಾನಕ್ಕೆ ನಿಯಂತ್ರಣ ಪ್ರಾಧಿಕಾರ ರಚಿಸಲಾಗುವುದು ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಭಾನುವಾರ ಇಲ್ಲಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಬ್ಬಿಣದ ಅದಿರು ನಿಷೇಧ ಉಕ್ಕು ಉದ್ಯಮ ಮೇಲೆ ಪರಿಣಾಮ ಬೀರುತ್ತಿದೆ. ಬಹುಕಾಲ ನಿಷೇಧ ಹೇರುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದರು.ನವೆಂಬರ್‌ನಲ್ಲಿ ರಾಷ್ಟ್ರೀಯ ಮಟ್ಟದ ರಫ್ತುದಾರರ ಸಭೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಇದಕ್ಕೆ ವಿದೇಶಾಂಗ ವ್ಯವಹಾರದ ಡೈರೆಕ್ಟರ್ ಜನರಲ್ ಒಪ್ಪಿಗೆ ಸೂಚಿಸಿದ್ದಾರೆ. ರಫ್ತುದಾರರ ಸಮಸ್ಯೆ, ಅವಕಾಶಗಳು ಹಾಗೂ ಅಗತ್ಯಗಳ ಬಗ್ಗೆ ಈ ಸಭೆ ಬೆಳಕು ಚೆಲ್ಲಲಿದೆ ಎಂದು ಅವರು ಮಾಹಿತಿ ನೀಡಿದರು.ಮಸೂದೆ-ಚರ್ಚೆ: ಕೇಂದ್ರ ಸರ್ಕಾರದ ಉದ್ದೇಶಿತ ಸಂಘಟಿತ ಕೋಮು ಹಿಂಸೆ ಹಾಗೂ ಯೋಜಿತ ತಡೆ ಮಸೂದೆ ಬಗ್ಗೆ ಇನ್ನಷ್ಟು ಚರ್ಚೆ ನಡೆಸಬಹುದು. ಅದಕ್ಕೆ ಅವಕಾಶವೂ ಇದೆ. ಏಳು ವರ್ಷಗಳಲ್ಲಿ ನಿರಂತರ ಸಂವಾದ, ಸಮಗ್ರ ಚರ್ಚೆ ನಡೆಸಿ ಮಸೂದೆ ಸಿದ್ಧಪಡಿಸಲಾಗಿದೆ. ಕೊಮು ಗಲಭೆ ನಡೆದಾಗ ಕೆಲವು ರಾಜ್ಯ ಸರ್ಕಾರಗಳು ಒಂದು ವರ್ಗದ ಪರವಾಗಿ ಕ್ರಮ ಕೈಗೊಂಡಾಗ ಈ ಮಸೂದೆ ಅನುಷ್ಠಾನಕ್ಕೆ ಮುಂದಾಗುವುದು ಅನಿವಾರ್ಯ. ನರಮೇಧ ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರೆಡ್ಡಿ ಬಂಧನ: ಕಾಂಗ್ರೆಸ್ ಕೈವಾಡವಿಲ್ಲ

ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದಲ್ಲಿ ಕಾಂಗ್ರೆಸ್ ಕೈವಾಡ ಇಲ್ಲ. ಸಿಬಿಐ ಸ್ವಾಯತ್ತ ಸಂಸ್ಥೆ. ಸುರೇಶ್ ಕಲ್ಮಾಡಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಸಿಬಿಐ ಬಂಧಿಸಿದೆ. ಜನಾರ್ದನ ರೆಡ್ಡಿ ನಡೆಸಿದ ಗಣಿ ಅಕ್ರಮ ಅಪಾರ. ಅವರನ್ನು ರಕ್ಷಿಸಲು ಕಾಂಗ್ರೆಸ್‌ನಿಂದಲೂ ಸಾಧ್ಯವಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.