ಶುಕ್ರವಾರ, ಏಪ್ರಿಲ್ 23, 2021
31 °C

ಶೆಟ್ಟರ್ ಆಡಳಿತ: ಕಾಣದ ಗಡಸುತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮರ್ಥ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರ ಆಡಳಿತದ ಕಾರ್ಯವೈಖರಿಯಲ್ಲಿ ಉತ್ತರ ಕರ್ನಾಟಕದ ಗಡಸುತನ ಕಾಣಿಸುತ್ತಿಲ್ಲ~ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಬುಧವಾರ ಇಲ್ಲಿ ಟೀಕಿಸಿದರು.`ಆಡಳಿತದ ಮೇಲೆ ಹಿಡಿತ ಇಲ್ಲದ ಶೆಟ್ಟರ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಕುಬ್ಜರಾಗಿದ್ದಾರೆ. ಆ ಕುರ್ಜಿಯಿಂದ ವ್ಯಕ್ತಿಯ ಗೌರವ ಹೆಚ್ಚಾಗುವುದಿಲ್ಲ. ಬದಲಿಗೆ, ಕುರ್ಚಿಗೆ ಗೌರವ ತಂದು ಕೊಡುವ ಕೆಲಸ ಆ ಕುರ್ಚಿಯಲ್ಲಿ ಕುಳಿತವರಿಂದ ಆಗಬೇಕು ಎನ್ನುವುದನ್ನು ಶೆಟ್ಟರ್ ಮರೆತಿದ್ದಾರೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.ಬೆಂಗಳೂರಿನ ಕಸ ಸಮಸ್ಯೆಯಿಂದ ಬರ ನಿರ್ವಹಣೆವರೆಗೆ ಎಲ್ಲ ಹಂತಗಳಲ್ಲೂ ಶೆಟ್ಟರ್ ವಿಫಲರಾಗಿದ್ದಾರೆ. ಅವರ ಸಚಿವ ಸಂಪುಟದ ಸಹೋದ್ಯೋಗಿಗಳಲ್ಲಿ ಹೊಂದಾಣಿಕೆ ಇಲ್ಲ. ಪ್ರತಿನಿತ್ಯ ಸಚಿವರ ನಡುವೆಯೇ ವಾಗ್ವಾದ ನಡೆಯುತ್ತಿದೆ. ಇವರ ಮೇಲೆ ನಿಯಂತ್ರಣ ಸಾಧಿಸಲಾಗದೆ ಶೆಟ್ಟರ್ ಅಸಹಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಬಾರಿಗೆ ವಿಧಾನಮಂಡಲದ ಅಧಿವೇಶನ (ಡಿ. 5ರಿಂದ) ನಡೆಯುತ್ತಿದೆ. ಕನಿಷ್ಠ 15 ದಿನವಾದರೂ ಅಧಿವೇಶನ ನಡೆಸಿ, ಆ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ, ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇಲ್ಲ. ಬರಿ ಏಳು ದಿನ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಟೀಕಿಸಿದರು.ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಬಿಜೆಪಿ- ಕೆಜೆಪಿ ಎಂಬ ಗೊಂದಲದಲ್ಲಿ ಆಡಳಿತಾರೂಢ ಶಾಸಕರಿದ್ದಾರೆ. ಬಿಜೆಪಿ ಶಾಸಕರೆಲ್ಲ ಕೆಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಒಂದು ರೀತಿ ಬಹುಮತ ಕಳೆದುಕೊಂಡಿದೆ. ಮುಂದಿನ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಂಬಂಧ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಆದರೆ, ರಾಜ್ಯ ಸರ್ಕಾರ, ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಒದಗಿಸದೆ ತಡ ಮಾಡುತ್ತಿದೆ. ಚುನಾವಣೆ ನಡೆಸುವುದು ಸರ್ಕಾರಕ್ಕೆ ಇಷ್ಟ ಇದ್ದಂತಿಲ್ಲ ಎಂದು ಅವರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.